ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಜಖಸ್ತಾನ | ರಸ್ತೆಗಿಳಿದು ಜನರ ಪ್ರತಿಭಟನೆ; ತೈಲ ಶ್ರೀಮಂತ ರಾಷ್ಟ್ರದಲ್ಲೇನಾಗಿದೆ?

Last Updated 6 ಜನವರಿ 2022, 14:56 IST
ಅಕ್ಷರ ಗಾತ್ರ

ಮಾಸ್ಕೊ: ಕಜಖಸ್ತಾನದಲ್ಲಿ ನಾಗರಿಕರು ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶ ಸ್ವತಂತ್ರವಾಗಿ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ ಹಾಗೂ ಕನಿಷ್ಠ ಎಂಟು ಮಂದಿ ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ.

'ತೈಲ ಶ್ರೀಮಂತ' ರಾಷ್ಟ್ರ ಕಜಖಸ್ತಾನದಲ್ಲಿ ತಲೆದೋರಿರುವ ಅತಂತ್ರ ಪರಿಸ್ಥಿತಿಯು ನೆರೆಯ ಬಲಾಢ್ಯ ರಾಷ್ಟ್ರಗಳಾದ ರಷ್ಯಾ ಮತ್ತು ಚೀನಾ ಪಾಲಿಗೆ ತಲೆ ನೋವಾಗಿ ಪರಿಣಮಿಸಿದೆ. ತನ್ನ ರಾಷ್ಟ್ರದಲ್ಲಿ ಉತ್ಪಾದನೆಯಾಗುವ ಬಹುತೇಕ ತೈಲವನ್ನು ಚೀನಾಗೆ ಮಾರಾಟ ಮಾಡುತ್ತದೆ ಹಾಗೂ ರಷ್ಯಾದೊಂದಿಗೆ ಪ್ರಮುಖ ಯುದ್ಧತಂತ್ರ ಪಾಲುದಾರಿಕೆಯನ್ನು ಹೊಂದಿದೆ.

ಮೋಟಾರು ವಾಹನಗಳಿಗೆ ಬಳಕೆಯಾಗುವ ಇಂಧನದ ಬೆಲೆಯಲ್ಲಿ ದಿಢೀರ್‌ ಹೆಚ್ಚಳವಾದ ಬೆನ್ನಲ್ಲೇ ಹೊಸ ವರ್ಷದ ಆರಂಭದಿಂದಲೂ ನಾಗರಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯು ದಿನದಿಂದ ದಿನಕ್ಕೆ ಹತ್ತಾರು ನಗರ ಮತ್ತು ಪಟ್ಟಣಗಳಿಗೂ ವ್ಯಾಪಿಸಿ ಸಾವಿರಾರು ಮಂದಿ ರಸ್ತೆಗಿಳಿದಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜನರ ಆಕ್ರೋಶವನ್ನು ತಣಿಸುವ ಉದ್ದೇಶದಿಂದ ಕಜಖಸ್ತಾನದ ಅಧ್ಯಕ್ಷ ಕಾಸ್ಯಮ್‌–ಜೊಮಾರ್ಟ್‌ ಟೊಕಾಯೆವ್‌ ಅವರು ಬುಧವಾರ ಇಡೀ ಸರ್ಕಾರವನ್ನು ವಿಸರ್ಜಿಸಿದರು. ಆದರೆ, ಅವರು ಮತ್ತೆ ತಮ್ಮ ನಡೆ ಬದಲಿಸಿದರು.

ಪ್ರತಿಭಟನಾಕಾರರನ್ನು ಮೊದಲಿಗೆ ಅವರು ಭಯೋತ್ಪಾದಕರು ಎಂದು ಕರೆದರು. ಅನಂತರ ಪ್ರತಿಭಟನೆ ಶಮನಗೊಳಿಸಲು ರಷ್ಯಾ ನೇತೃತ್ವದ ಮಿಲಿಟರಿ ಮೈತ್ರಿಕೂಟ ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ(ಸಿಎಸ್‌ಟಿಒ) ಸಹಕಾರ ಯಾಚಿಸಿದರು ಹಾಗೂ ಶಾಂತಿ ಪಾಲನ ಸೇನೆಯನ್ನು ಕಳುಹಿಸಲು ಸಿಎಸ್‌ಟಿಒ ಸಮ್ಮತಿಸಿತು.

ಜನರ ಆಕ್ರೋಶಕ್ಕೆ ಏನು ಕಾರಣ?

ಸೋವಿಯತ್‌ ಒಕ್ಕೂಟದ ವಿಭಜನೆಯ ಬಳಿಕ ಸ್ವತಂತ್ರ ಪಡೆದ ಐದು ರಾಷ್ಟ್ರಗಳ ಪೈಕಿ ಕಜಖಸ್ತಾನ ಹೆಚ್ಚು ವಿಶಾಲವಾದ ಹಾಗೂ ಶ್ರೀಮಂತ ರಾಷ್ಟ್ರವಾಗಿದೆ. ಪಶ್ಚಿಮ ಯುರೋಪ್‌ನಷ್ಟು ವಿಸ್ತಾರವಾಗಿದ್ದು, ಹೇರಳವಾದ ತೈಲ, ನೈಸರ್ಗಿಕ ಅನಿಲ, ಯುರೇನಿಯಂ ಹಾಗೂ ಅಮೂಲ್ಯವಾದ ಲೋಹಗಳ ಸಂಗ್ರಹವನ್ನು ಒಳಗೊಂಡಿದೆ. ನೈಸರ್ಗಿಕ ಸಂಪನ್ಮೂಲಗಳ ಕಾರಣದಿಂದಾಗಿ ಕಜಖಸ್ತಾನದಲ್ಲಿ ಬಹುಪಾಲು ಮಧ್ಯಮ ವರ್ಗ ಹಾಗೂ ಸಿರಿವಂತ ಉದ್ಯಮಿಗಳ ವಲಯವು ಸೃಷ್ಟಿಯಾಗಿದೆ. ಹಾಗೆಯೇ ಆರ್ಥಿಕ ಬಿಕ್ಕಟ್ಟು ಸಹ ವ್ಯಾಪಿಸಿದೆ.

ದೇಶದಲ್ಲಿ ರಾಷ್ಟ್ರೀಯ ಮಾಸಿಕ ವೇತನ ಸರಾಸರಿ 600 ಡಾಲರ್‌ಗೂ (ಸುಮಾರು ₹45 ಸಾವಿರ) ಕಡಿಮೆ ಇದೆ. ಮರು ಪಾವತಿಯಾಗದ ಸಾಲದ ಪ್ರಮಾಣದ ಹೆಚ್ಚಳದಿಂದಾಗಿ ಬ್ಯಾಂಕಿಂಗ್‌ ವಲಯದಲ್ಲೂ ಬಿಕ್ಕಟ್ಟು ಸೃಷ್ಟಿಯಾಗಿದೆ ಹಾಗೂ ಹಲವು ಭಾಗಗಳಲ್ಲಿ ಅತಿಯಾದ ಭ್ರಷ್ಟಾಚಾರವಿದೆ.

ಈಗ ಇಂಧನ ಬೆಲೆಯ ದಿಢೀರ್‌ ಏರಿಕೆಯಿಂದ ಝಾನೊಜೆನ್‌ನಲ್ಲಿ ಮೊದಲು ಪ್ರತಿಭಟನೆ ಕಾವೇರಿತು. ಈ ವಲಯದಲ್ಲಿ ಕಾರುಗಳಿಗೆ ಇಂಧನವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ದ್ರವೀಕೃತ ಪೆಟ್ರೋಲಿಯಂ ಅನಿಲದ ದರವನ್ನು ರಾತ್ರೋರಾತ್ರಿ (ಜ.1, ಶನಿವಾರ) ದುಪ್ಪಟ್ಟು ಮಾಡಲಾಗಿತ್ತು. ಅನಂತರದಲ್ಲಿ ಜನರು ತಾಳ್ಮೆ ಕಳೆದುಕೊಂಡು ಪ್ರತಿಭಟನೆಗೆ ಮುಂದಾದರು. ಅಕ್ಕಪಕ್ಕದ ನಗರಗಳ ಜನರೂ ಸಹ ಪ್ರತಿಭಟನೆಯಲ್ಲಿ ಕೈ ಜೋಡಿಸಿದರು ಹಾಗೂ ಕೆಲವೇ ದಿನಗಳಲ್ಲಿ ಪ್ರತಿಭಟನೆಯ ಕಿಚ್ಚು ದೇಶವ್ಯಾಪಿ ಹರಡಿತು.

2011ರಲ್ಲಿ ಝಾನೊಜೆನ್‌ನಲ್ಲಿ ತೈಲ ಕಾರ್ಮಿಕರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಘಟನೆಯಲ್ಲಿ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದರು.

ಪ್ರತಿಭಟನೆಯ ನೇತೃತ್ವ ಯಾರದು?

ಕಜಖಸ್ತಾನದ ಅಧ್ಯಕ್ಷ ಕಾಸ್ಯಮ್‌–ಜೊಮಾರ್ಟ್‌ ಟೊಕಾಯೆವ್‌
ಕಜಖಸ್ತಾನದ ಅಧ್ಯಕ್ಷ ಕಾಸ್ಯಮ್‌–ಜೊಮಾರ್ಟ್‌ ಟೊಕಾಯೆವ್‌

2019ರ ವರೆಗೂ ನುರ್ಸುಲ್ತಾನ್ ನಝರ್‌ಬಾಯೆವ್‌ (81) ಕೈಯಲ್ಲಿದ್ದ ಅಧಿಕಾರವನ್ನು ಟೊಕಾಯೆವ್‌ಗೆ ಹಸ್ತಾಂತರಿಸಲಾಯಿತು. ಸರ್ಕಾರದ ವಿರುದ್ಧ ಮಾತನಾಡುವವರ ದನಿಯನ್ನು ಕುಗ್ಗಿಸುವುದು, ಕಡೆಗಣಿಸುವುದು ಹಿಂದಿನಿಂದಲೂ ನಡೆದಿದ್ದು, ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಒಬ್ಬರ ನಾಯಕತ್ವದ ನೇತೃತ್ವ ಕಂಡು ಬಂದಿಲ್ಲ.

ನಝರ್‌ಬಾಯೆವ್‌ ಅವರು ಇಂದಿಗೂ ದೇಶದಲ್ಲಿ ಪರಮಾಧಿಕಾರಿಯಾಗಿರುವುದನ್ನು ಜನರು ವಿರೋಧಿಸುತ್ತಿದ್ದು, 'ಶಾಲ್‌ ಕೆಟ್‌' (ಹೊರ ಹೋಗು ಮುದಿಯಾ) ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ.

2016 ಮತ್ತು 2019ರಲ್ಲೂ ದೇಶದಲ್ಲಿ ಪ್ರತಿಭಟನೆಗಳು ನಡೆದಿತ್ತಾದರೂ, ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಬೀದಿಗಿಳಿದಿರುವುದು ಇದೇ ಮೊದಲು ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT