ಬ್ರಿಟನ್ ಪ್ರಧಾನಿ ಹುದ್ದೆ: ಮುನ್ನಡೆ ಕಾಯ್ದುಕೊಂಡ ರಿಷಿ ಸುನಕ್

ಲಂಡನ್: ಬ್ರಿಟನ್ ಪ್ರಧಾನಿ ಸ್ಪರ್ಧೆಯಲ್ಲಿ ಭಾನುವಾರ ಒಂಬತ್ತು ಅಭ್ಯರ್ಥಿಗಳ ಹೆಸರು ಕೇಳಿಬಂದಿದ್ದು, ಮಾಜಿ ಸಚಿವ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನದ ಜೊತೆಗೆ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಪ್ರಧಾನಿ ಸ್ಥಾನಕ್ಕೆ ಈ ಹಿಂದೆ ಕೇಳಿಬಂದಿದ್ದ ಪ್ರಮುಖ ಅಭ್ಯರ್ಥಿಗಳ ಪಟ್ಟಿಗೆ ಭಾನುವಾರ ವಾಣಿಜ್ಯ ಸಚಿವ ಪೆನ್ನಿ ಮೊರ್ಡಾಂಟ್ ಅವರ ಹೆಸರು ಸೇರ್ಪಡೆಗೊಂಡಿದೆ. ರಿಷಿ ಅವರ ಬಳಿಕ ಪ್ರಧಾನಿ ಸ್ಥಾನಕ್ಕೆ ಪೆನ್ನಿ ಅವರು ಎರಡನೇ ಸಂಭಾವ್ಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಬ್ರಿಟನ್‌ನ ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಮತ್ತು ಪಾಕಿಸ್ತಾನಿ ಮೂಲದ ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರ ಉಮೇದುವಾರಿಕೆಯ ಬಳಿಕ ಪೆನ್ನಿ ಅವರು ‘ಪಿಎಂ4ಪಿಎಂ’ ಎನ್ನುವ ಹ್ಯಾಷ್‌ಟ್ಯಾಗ್‌ವುಳ್ಳ ವಿಡಿಯೊ ಹಂಚಿಕೊಂಡು ತಮ್ಮ ಉಮೇದುವಾರಿಕೆ ಘೋಷಿಸಿದ್ದಾರೆ.
‘ನಾನು ಪ್ರಧಾನಿಯಾದರೆ, ಮಹಿಳೆಯರ ಹಕ್ಕುಗಳ ರಕ್ಷಿಸುತ್ತೇನೆ. ಆಕ್ರಮಣ ಮತ್ತು ನಿಂದನೆರಹಿತ ಪರಿಸರದಲ್ಲಿ ಪುರುಷರು ಅನುಭವಿಸುತ್ತಿರುವ ಸಂತಸದ ವಾತಾವರಣವನ್ನು ಹೆಣ್ಣುಮಕ್ಕಳಿಗೂ ಕಲ್ಪಿಸುತ್ತೇನೆ’ ಎಂದು ಪೆನ್ನಿ ಭಾನುವಾರ ಹಂಚಿಕೊಂಡಿರುವ ವಿಡಿಯೊದಲ್ಲಿ ಭರವಸೆ ನೀಡಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಶೀಘ್ರದಲ್ಲೇ ತನ್ನ ಉಮೇದುವಾರಿಕೆಯನ್ನು ಘೋಷಿಸುವ ನಿರೀಕ್ಷೆಯಿದೆ. ಪ್ರಧಾನಿ ಸ್ಥಾನದ ಇತರ ಆಕಾಂಕ್ಷಿಗಳಲ್ಲಿ ಗೋವಾ ಮೂಲದ ಅಟಾರ್ನಿ ಜನರಲ್ ಸುಯೆಲ್ಲಾ ಬ್ರೆವರ್‌ಮನ್, ಇರಾಕ್ ಮೂಲದ ನಾಧಿಮ್ ಜಹಾವಿ, ನೈಜೀರಿಯಾ ಮೂಲದ ಕೆಮಿ ಬೆಡಾನೋಚ್ ಮತ್ತು ಟಾಮ್ ತುಗೆಂಧತ್ ಸೇರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.