ಶುಕ್ರವಾರ, ಆಗಸ್ಟ್ 19, 2022
21 °C

ಉಕ್ರೇನ್‌ ಮೇಲೆ ರಷ್ಯಾದ ಕಾರ್ಯಾಚರಣೆ: ರಂಗಮಂದಿರಕ್ಕೆ ದಾಳಿ, ಸತ್ತವರ ಸಂಖ್ಯೆ 300

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೀವ್‌/ಹಾರ್ಕಿವ್‌/ಮಾಸ್ಕೊ (ಎಪಿ/ಎಎಫ್‌ಪಿ/ಪಿಟಿಐ): ಉಕ್ರೇನಿನ ಪ್ರಮುಖ ಕಾರ್ಯತಂತ್ರದ ಬಂದರು ನಗರ ಮರಿಯುಪೊಲ್‌ನಲ್ಲಿರುವ ರಂಗ ಮಂದಿರದ ಮೇಲೆ ಕಳೆದ ವಾರ ರಷ್ಯಾ ವಾಯು ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 300 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ಸರ್ಕಾರ ಶುಕ್ರವಾರ ತಿಳಿಸಿದೆ.

‘ಪ್ರತ್ಯಕ್ಷದರ್ಶಿಗಳಿಂದ ಈ ಮಾಹಿತಿ ಸಿಕ್ಕಿದೆ’ ಎಂದು ಮರಿಯುಪೊಲ್‌ ಸಿಟಿ ಹಾಲ್ ಟೆಲಿಗ್ರಾಮ್‌ನಲ್ಲಿ ಹೇಳಿದೆ. ಇದನ್ನು ಉಕ್ರೇನ್‌ ಸರ್ಕಾರ ದೃಢಪಡಿಸಿದೆ. ಯುದ್ಧಪೀಡಿತ ನೆಲದಲ್ಲಿ ನಿರಂತರ ವಾಯು ದಾಳಿ, ಶೆಲ್‌ ದಾಳಿ ನಡೆಯುತ್ತಿದ್ದರಿಂದಾಗಿ ಮಹಿಳೆಯರು, ಮಕ್ಕಳು ಸೇರಿ ಒಂದು ಸಾವಿರಕ್ಕೂ ಹೆಚ್ಚು ನಾಗರಿಕರು ಈ ರಂಗಮಂದಿರದಲ್ಲಿ ಆಶ್ರಯ ಪಡೆದಿದ್ದರು. ‘ಮಾನವೀಯ ಕಾರಿಡಾರ್‌’ ಮೂಲಕ ಸುರಕ್ಷಿತ ಸ್ಥಳಗಳಿಗೆ ತೆರಳುವ ನಿರೀಕ್ಷೆಯಲ್ಲಿ ಇವರೆಲ್ಲರೂ ದಿನದೂಡುತ್ತಿದ್ದರು.

ಮಾ.16ರಂದು ರಾತ್ರಿ ರಷ್ಯಾ ಪಡೆಗಳು ರಂಗಮಂದಿರ ಗುರಿಯಾಗಿಸಿ ಬಾಂಬ್‌ ದಾಳಿ ನಡೆಸಿದ್ದವು. ಕಟ್ಟಡದ ಮಧ್ಯಭಾಗ ಸ‍ಂ‍ಪೂರ್ಣ ಧ್ವಂಸವಾಗಿತ್ತು. ‘ಕಟ್ಟಡದಲ್ಲಿ 1,000ದಿಂದ 1,200 ಜನರು ಆಶ್ರಯ ಪಡೆದಿದ್ದರು’ ಎಂದು ಮರಿಯುಪೊಲ್‌ನ ಉಪ ಮೇಯರ್‌ ಹೇಳಿದ್ದಾಗಿ ‘ಬಿಬಿಸಿ’ ವರದಿ ಮಾಡಿತ್ತು. ಆಗ ಸಾವು–ನೋವಿನ ಬಗ್ಗೆ ಯಾವುದೇ ಮಾಹಿತಿ ಉಕ್ರೇನ್‌ ಕಡೆಯಿಂದ ಹೊರಬಿದ್ದಿರಲಿಲ್ಲ.

ರಂಗಮಂದಿರದಲ್ಲಿ ಮಕ್ಕಳಿದ್ದಾರೆ ಎನ್ನುವ ಸಂದೇಶವನ್ನು ನೀಡಲು, ಆಕಾಶದಿಂದಲೂ ನೋಡಿದರೆ ಕಾಣಿಸುವಂತೆ ‘ಮಕ್ಕಳು’ ಎಂಬ ದೊಡ್ಡ ಫಲಕವನ್ನು ರಷ್ಯಾದ ಭಾಷೆಯಲ್ಲೇ ರಂಗಮಂದಿರದ ಕಟ್ಟಡಕ್ಕೆ ಅಂಟಿಸಲಾಗಿತ್ತು. 

‘ರಷ್ಯಾ ಪಡೆಯು ದೊಡ್ಡ ಬಾಂಬನ್ನು ಉದ್ದೇಶಪೂರ್ವಕವಾಗಿ ರಂಗಮಂದಿರದ ಮೇಲೆ ಹಾಕಿದೆ. ನಮ್ಮ ಜನರ ಮೇಲೆ ನಡೆಯುತ್ತಿರುವ ರಷ್ಯಾದ ಅನಾಚಾರ ನೋಡಿ ಹೃದಯ ಒಡೆದು ಹೋಗಿದೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡೊಮಿರ್‌ ಝೆಲೆನ್‌ಸ್ಕಿ ಮರುಕ ವ್ಯಕ್ತಪಡಿಸಿದ್ದರು.

ಇಂಧನ ಸಂಗ್ರಹಾಗಾರ ನಾಶ: ಕೀವ್ ನಗರದ ಸಮೀಪದ ಕಲಿನಿವ್ಕಾ ಗ್ರಾಮದಲ್ಲಿರುವ ಉಕ್ರೇನಿನ ಅತಿದೊಡ್ಡ ಸೇನಾ ಇಂಧನ ಸಂಗ್ರಹಗಾರವನ್ನು ಕ್ಷಿಪಣಿ ದಾಳಿ ಮೂಲಕ ನಾಶಪಡಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಇಂಧನ ತಾಣವನ್ನು ಗುರಿಯಾಗಿಸಿಕೊಂಡು ಗುರುವಾರ ಸಂಜೆ ಸಮುದ್ರದಿಂದ ಹಾರಿಸಿದ ಕಲಿಬ್‌ ಕ್ರೂಸ್ ಕ್ಷಿಪಣಿಗಳು ನಿಖರವಾಗಿ ಗುರಿ ಭೇದಿಸಿವೆ. ಈ ನೆಲೆ ಉಕ್ರೇನಿನ ಸೇನೆಗೆ ಇಂಧನ ಪೂರೈಸುವ ದೊಡ್ಡ ಸಂಗ್ರಹಗಾರವಾಗಿತ್ತು ಎಂದು ಹೇಳಿದೆ.

ನಾಲ್ವರ ಸಾವು: ಹಾರ್ಕಿವ್‌ ನಗರದಲ್ಲಿ ಶುಕ್ರವಾರ ರಷ್ಯಾ ಪಡೆಗಳು ನಡೆಸಿದ ಫಿರಂಗಿ ಮತ್ತು ಶೆಲ್‌ ದಾಳಿಗೆ ಕನಿಷ್ಠ ನಾಲ್ವರು ನಾಗರಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡರು ಎಂದು ಉಕ್ರೇನ್‌ ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧ ಎದುರಿಸಲಿದೆ ರಷ್ಯಾ: ಪಶ್ಚಿಮದ ರಾಷ್ಟ್ರಗಳು ಸಾರಿರುವ ಸಂಪೂರ್ಣ ‘ಹೈಬ್ರಿಡ್ ಯುದ್ಧ’ವನ್ನು ರಷ್ಯಾ ಸಮರ್ಥವಾಗಿ ಎದುರಿಸಲಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಶುಕ್ರವಾರ ಹೇಳಿದ್ದಾರೆ.

‌ದಾಳಿಗೆ ಉಕ್ರೇನ್‌ ಕೃತಕ ಬುದ್ಧಿಮತ್ತೆ ಬಳಕೆ
ಉಕ್ರೇನ್‌ (ಎಎಫ್‌ಪಿ): ಬಲಿಷ್ಠ ರಷ್ಯಾ ಸೇನೆಗೆ ಉಕ್ರೇನ್‌ ನೆಲದಲ್ಲಿ ಕಾರ್ಯಾಚರಣೆಯಲ್ಲಿ 30 ದಿನಗಳ ಹಾದಿ ಸವೆಸಿದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ಪುಟ್ಟ ರಾಷ್ಟ್ರ ಉಕ್ರೇನ್‌ ತೋರುತ್ತಿರುವ ಪ್ರತಿರೋಧ ಜಗತ್ತಿನ ಹಲವು ರಾಷ್ಟ್ರಗಳನ್ನು ಚಕಿತಗೊಳಿಸಿದೆ. ಉಕ್ರೇನ್‌ನ ಯುದ್ಧತಂತ್ರ ಏನಿರಬಹುದೆಂಬ ಕುತೂಹಲ ರಕ್ಷಣಾ ವಿಶ್ಲೇಷಕರಲ್ಲೂ ಮೂಡಿದೆ.

ಇದಕ್ಕೆ ಕಾರಣವೆಂದರೆ, ಶತ್ರು ಸೈನಿಕರನ್ನು ಹುಡುಕಿ ಕೊಲ್ಲಲು ‘ಕೃತಕ ಬುದ್ಧಿಮತ್ತೆ’ ತಂತ್ರಜ್ಞಾನವನ್ನು ಉಕ್ರೇನ್‌ ಬಳಸುತ್ತಿದೆ. ಶತ್ರುಗಳ ಮುಖಚಹರೆಯನ್ನು ಕೃತಕ ಬುದ್ಧಿಮತ್ತೆಯಿಂದ ಗುರುತಿಸುವಂತಹ ತಂತ್ರಜ್ಞಾನವನ್ನು ಉಕ್ರೇನ್‌ ಸೇನೆಗೆ ಉಚಿತವಾಗಿ ಒದಗಿಸಿರುವುದಾಗಿ ಎಂದು ಅಮೆರಿಕ ಮೂಲದ ‘ಕ್ಲಿಯರ್‌ವ್ಯೂ ಎ.ಐ’ ಹೇಳಿದೆ.

ಮೇ 9ರೊಳಗೆ ಯುದ್ಧ ಅಂತ್ಯ: ರಷ್ಯಾ ಬಯಕೆ
ಕೀವ್ (ಎಪಿ): ರಷ್ಯಾ ಪಡೆಗಳು ಉಕ್ರೇನ್‌ ಮೇಲೆ ನಡೆಸುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆಯನ್ನು ಗಮನಿಸಿದೆರೆ ಯುದ್ಧ ಸದ್ಯಕ್ಕೆ ಮುಗಿಯುವ ಸೂಚನೆ ಇಲ್ಲ. ಆದರೆ, ಮೇ 9ರೊಳಗೆ ಯುದ್ಧವನ್ನು  ಕೊನೆಗೊಳಿಸಲು ಬಯಸುತ್ತಿದೆ ಎಂದು ಉಕ್ರೇನ್ ಸೇನೆ ಹೇಳಿದೆ.

‘ಯುದ್ಧವನ್ನು ಮೇ 9ರೊಳಗೆ ಕೊನೆಗೊಳಿಸಲು ರಷ್ಯಾದ ಪಡೆಗಳಿಗೆ ಕ್ರೆಮ್ಲಿನ್‌ ಸೂಚನೆ ಕೊಟ್ಟಿರುವುದಾಗಿ ಉಕ್ರೇನ್‌ ಸೇನಾ ಪಡೆಯ ಗೂಢಚರ್ಯೆ ಮೂಲಗಳು ತಿಳಿಸಿರುವುದಾಗಿ ಉಕ್ರೇನಿನ ಸರ್ಕಾರಿ ನಿಯಂತ್ರಣದ ‘ದಿ ಕೀವ್ ಇಂಡಿಪೆಂಡೆಂಟ್’ ಮಾಧ್ಯಮ ವರದಿ ಮಾಡಿದೆ.

‘ಆ ದಿನವನ್ನು ನಾಜಿ ಜರ್ಮನಿಯ ವಿಜಯ ದಿವಸ ಎಂದು ಆಚರಿಸಲು ರಷ್ಯಾದಾದ್ಯಂತ ಸಿದ್ಧತೆ ನಡೆದಿದೆ’ ಎಂದೂ ಅದು ಹೇಳಿದೆ.

‘ಉಕ್ರೇನಿಗರನ್ನು ಬಲವಂತವಾಗಿ ಹೊತ್ತೊಯ್ದ ರಷ್ಯಾ’
ತಮ್ಮ ದೇಶದ ಸಾವಿರಾರು ನಾಗರಿಕರನ್ನು ಅದರಲ್ಲೂ ಮಹಿಳೆಯರು ಮತ್ತು ಮಕ್ಕಳನ್ನು ರಷ್ಯಾ ಬಲವಂತವಾಗಿ ಹೊತ್ತೊಯ್ದಿದೆ ಎಂದು ಉಕ್ರೇನ್ ಆರೋಪಿಸಿದೆ.

ಯುದ್ಧ ನಿಲ್ಲಿಸಲು ಉಕ್ರೇನ್‌ ಮೇಲೆ ಒತ್ತಡ ಹೇರಲು ರಷ್ಯಾ ಸೇನೆ ಅವರನ್ನು ‘ಒತ್ತೆಯಾಳು’ಗಳನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದೂ ದೂರಿದೆ.

84,000 ಮಕ್ಕಳು ಸೇರಿ 4,02,000 ನಾಗರಿಕರನ್ನು ರಷ್ಯಾಗೆ ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಉಕ್ರೇನ್‌ನ ಸಾರ್ವಜನಿಕ ತನಿಖಾಧಿಕಾರಿ ಲಿಯುಡ್ಮಿಲಾ ಡೆನಿಸೊವಾ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್‌ ಕೂಡ ಇಷ್ಟೇ ಸಂಖ್ಯೆಯ ಉಕ್ರೇನಿಗರು ತಮ್ಮ ದೇಶ ತೊರೆದು ರಷ್ಯಾದ ಆಶ್ರಯ ಬಯಸಿ ಬಂದಿದ್ದಾರೆ ಎಂದು ಹೇಳಿದೆ.

30ನೇ ದಿನದ ಬೆಳವಣಿಗೆಗಳು

*ರಷ್ಯಾ ರಂಜಕದ ಬಾಂಬ್‌ ಬಳಸುತ್ತಿದೆ ಎಂಬ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿಯವರ ಆರೋಪ ನಿರಾಕರಿಸಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್‌, ರಷ್ಯಾ ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿಲ್ಲ ಎಂದಿದ್ದಾರೆ

*ನ್ಯಾಟೊ ರಾಷ್ಟ್ರಗಳ ರಕ್ಷಣೆಗೆ ಅಮೆರಿಕದ ಬದ್ಧತೆ ತೋರಿಸಲು ಮತ್ತು ಉಕ್ರೇನ್‌ ನಿರಾಶ್ರಿತರಿಗೆ ಆಶ್ರಯ ನೀಡಿದ ರಾಷ್ಟ್ರಗಳಿಗೆ ಧನ್ಯವಾದ ಹೇಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪೊಲೇಂಡ್‌ಗೆ ಭೇಟಿ ನೀಡಿದರು

*ತಮ್ಮ ಸೇನಾಪಡೆಗಳ ಕಾರ್ಯಕ್ಷಮತೆ ರಷ್ಯಾ ಅಧ್ಯಕ್ಷ ಪುಟಿನ್‌ ಅವರನ್ನು ಭಾರೀ ನಿರಾಸೆಗೊಳಿಸಿದೆ. ಪುಟಿನ್‌ ಕಾರ್ಯಾಚರಣೆ ಹೆಚ್ಚು ಅಪಾಯಕಾರಿ ಹಂತ ಮತ್ತು ಹೊಸ ರೂಪದ ದಾಳಿಯತ್ತ ಹೊರಳುತ್ತಿದೆ– ಅಮೆರಿಕದ ಸಿಐಎ ಮಾಜಿ ನಿರ್ದೇಶಕ ಮತ್ತು ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್

*ರಷ್ಯಾದ ನಿಖರ ಗುರಿಯ ಕ್ಷಿಪಣಿಗಳು ಉಕ್ರೇನ್‌ನಲ್ಲಿ ಶೇ 60ರಷ್ಟು ವಿಫಲಗೊಳ್ಳುತ್ತಿವೆ– ಅಮೆರಿಕದ ಗುಪ್ತಚರ ಅಧಿಕಾರಿಗಳ ಅಂದಾಜು

*ಹಾರ್ಕಿವ್‌ನ ಅರ್ಧ ಜನತೆ ನಗರ ತೊರೆದಿದೆ. ಸದ್ಯ ನಗರದಲ್ಲೇ ಉಳಿದಿರುವವರಿಗೂ ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ ಎದುರಾಗಿದೆ.

*ರಷ್ಯಾದ ಆಕ್ರಮಣದ ನಡುವೆಯೂ ಉಕ್ರೇನ್ 1,50,000 ಹೆಕ್ಟೇರ್ ಪ್ರದೇಶದಲ್ಲಿ ಧಾನ್ಯಗಳ ಬಿತ್ತನೆ ಮಾಡಿದೆ. ಹಿಂದಿನ ವರ್ಷ 7 ದಶಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿತ್ತು. ಈ ವರ್ಷ 15 ದಶಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಹೊಂದಿತ್ತು – ಕೃಷಿ ಉಪ ಸಚಿವ ಟಾರಸ್ ವಿಸೋತ್‌ಸ್ಕಿ  

*ರಷ್ಯಾದ ಕಲ್ಲಿದ್ದಲು, ಅನಿಲ ಮತ್ತು ತೈಲದ ಅವಲಂಬನೆ ತಗ್ಗಿಸಲು ಹೊಸ ಪೂರೈಕೆದಾರರೊಂದಿಗೆ ಜರ್ಮನಿ ತ್ವರಿತ ಒಪ್ಪಂದ ಮಾಡಿಕೊಂಡಿದೆ

*ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸಲು ಮತ್ತು ರಷ್ಯಾದ ಇಂಧನ ವಲಯದ ಮೇಲಿನ ನಿರ್ಬಂಧ ಬೆಂಬಲಿಸುವಂತೆ ಝೆಲೆನ್‌ಸ್ಕಿ ಮಾಡಿರುವ ಭಾವನಾತ್ಮಕ ಮನವಿಯನ್ನು ಹಂಗೆರಿ ಪ್ರಧಾನಿ ವಿಕ್ಟರ್‌ ಓರ್ಬನ್‌ ತಿರಸ್ಕರಿಸಿದ್ದಾರೆ

*ರಷ್ಯಾದ ಮೇಲಿನ ನಿರ್ಬಂಧಗಳಲ್ಲಿ ಯುರೋಪ್‌ಒಕ್ಕೂಟ ಅಭೂತಪೂರ್ವ ಒಗ್ಗಟ್ಟು ತೋರಿತ್ತು. ಆದರೆ, 27 ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ರಷ್ಯಾದ ಇಂಧನ ಅವಲಂಬನೆ ವಿಚಾರದಲ್ಲಿ ಒಡಕು ಕಾಣಿಸಿತು

*ಯುರೋಪ್‌ ಒಕ್ಕೂಟದ ಸದಸ್ಯತ್ವ ತಕ್ಷಣವೇ ಉಕ್ರೇನ್‌ಗೆ ನೀಡುವಂತೆ 27 ದೇಶಗಳ ನಾಯಕರ ಶೃಂಗಸಭೆಗೆ ಝೆಲೆನ್‌ಸ್ಕಿ ಮನವಿ ಮಾಡಿದರು

*ಉಕ್ರೇನ್‌ ಮಾರ್ಗವಾಗಿ ಯುರೋಪ್‌ಗೆ ನೈಸರ್ಗಿಕ ಅನಿಲವನ್ನು ಪೈಪ್‌ಲೈನ್‌ ಮೂಲಕ ಪೂರೈಸುವ ರಷ್ಯಾದ ಹೊಸ ನಾರ್ಡ್ ಸ್ಟ್ರೀಮ್ 2 ಯೋಜನೆ ನಿರ್ಬಂಧಿಸಲು ಜರ್ಮನಿ ನಿರ್ಧರಿಸಿದೆ. ನಿರ್ಣಾಯಕ ಕ್ಷಣದಲ್ಲಿ, ಜರ್ಮನಿ ಕೂಡ ನಮ್ಮೊಂದಿಗೆ ನಿಲ್ಲುವುದು  ಖಚಿತಪಟ್ಟಿದೆ– ಝೆಲೆನ್‌ಸ್ಕಿ

*ರಷ್ಯಾ ಆಕ್ರಮಣ ವಿರೋಧಿಸಿ, ಉಕ್ರೇನಿಗರನ್ನು ಬೆಂಬಲಿಸಲು ಬಲ್ಗೇರಿಯಾ ರಾಜಧಾನಿ ಸೋಫಿಯಾದಲ್ಲಿ ಸಾವಿರಾರು ಜನರು ಒಗ್ಗಟ್ಟು ಪ್ರದರ್ಶಿಸಿದರು

*ಸೇನಾ ಕಾರ್ಯಾಚರಣೆಯಲ್ಲಿ ರಷ್ಯಾದ 1,351 ಸೈನಿಕರು ಮೃತಪಟ್ಟಿದ್ದು, 3,825 ಸೈನಿಕರು ಗಾಯಗೊಂಡಿದ್ದಾರೆ– ರಷ್ಯಾ ಸೇನೆ ಹೇಳಿಕೆ

*ಉಕ್ರೇನಿನ 260ಕ್ಕೂ ಹೆಚ್ಚು ಡ್ರೋನ್‌ಗಳು, 1,580ಕ್ಕೂ ಹೆಚ್ಚು ಟ್ಯಾಂಕ್‌ಗಳು, ವಿಮಾನ ಹೊಡೆದುರುಳಿಸುವ 204 ಶಸ್ತ್ರಾಸ್ತ್ರ, ಇತರ ಶಸ್ತ್ರಸಜ್ಜಿತ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಹೇಳಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು