ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂಘೈನಲ್ಲಿ ಕೋವಿಡ್‌ ನಿರ್ಬಂಧಗಳು ಬಿಗಿ, ಹೊರಗೆ ಬರದಂತೆ ಜನರಿಗೆ ಸೂಚನೆ

ಚೀನಾ: ಕೋವಿಡ್‌ ಪ್ರಕರಣಗಳ ಹೆಚ್ಚಳ
Last Updated 29 ಮಾರ್ಚ್ 2022, 13:33 IST
ಅಕ್ಷರ ಗಾತ್ರ

ಶಾಂಘೈ (ರಾಯಿಟರ್ಸ್‌/ಎಎಫ್‌ಪಿ): ಹೆಚ್ಚು ಜನಸಂಖ್ಯೆಯಿರುವಚೀನಾದ ಶಾಂಘೈ ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದು ಮೊದಲ ಹಂತದ ಕೋವಿಡ್‌ ಲಾಕ್‌ಡೌನ್‌ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ನಿವಾಸಿಗಳಿಗೆ ನಾಲ್ಕು ದಿನಗಳ ಕಾಲ ಮನೆಯ ಹೊರಗೆ ಕಾಲಿಡದಂತೆ ಸೂಚಿಸಲಾಗಿದೆ. ಜೊತೆಗೆ ಜನರು ತಮ್ಮ ಸಾಕು ಪ್ರಾಣಿಗಳನ್ನೂ ಹೊರಗೆ ಕಳುಹಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಚೀನಾದಲ್ಲಿ ಮಂಗಳವಾರ 6,886 ಕೋವಿಡ್‌ ಹೊಸ ಪ್ರಕರಣಗಳು ಪತ್ತೆಯಾಗಿವೆ. ಶಾಂಘೈ ನಗರದಲ್ಲೇ 4,400ಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿವೆ. 2.6 ಕೋಟಿ ಜನರಿಗೆ ಆಶ್ರಯ ನೀಡಿರುವ ಆರ್ಥಿಕ ಕೇಂದ್ರವಾಗಿರುವ ಶಾಂಘೈನಲ್ಲಿ ವಿಧಿಸಿರುವ ಲಾಕ್‌ಡೌನ್‌ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸ್ಥಳೀಯ ಅಧಿಕಾರಿಗಳು ನಗರದಲ್ಲಿ ಕೋವಿಡ್‌ ಪರೀಕ್ಷೆ ಕೈಗೊಳ್ಳಲು ತಿಳಿಸಿದ್ದಾರೆ.

ಶಾಂಘೈನಲ್ಲಿ ಮಾರ್ಚ್‌ 28 ರಂದು 4,381 ಲಕ್ಷಣ ರಹಿತ ಮತ್ತು 96 ಲಕ್ಷಣ ಸಹಿತ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ‘ಶೂನ್ಯ ಕೋವಿಡ್‌’ ತಂತ್ರವನ್ನು ಸಾಧಿಸಲು ಶಾಂಘೈ ಒಂದು ಪರೀಕ್ಷಾ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿ ಹೆಚ್ಚು ಸಾಂಕ್ರಾಮಿಕವಾಗಿದ್ದ ಕೋವಿಡ್‌ ರೂಪಾಂತರ ತಳಿ ಓಮೈಕ್ರಾನ್‌ ನಿಯಂತ್ರಣದಲ್ಲಿದೆ.

ಸೋಮವಾರ ವಿಧಿಸಿದ ಲಾಕ್‌ಡೌನ್‌ನಲ್ಲಿ ಪೂರ್ವದ ಹುವಾಂಗ್‌ಪು ನಿವಾಸಿಗಳನ್ನು ಮನೆಗಳಲ್ಲಿ ಇರುವಂತೆ ಸೂಚಿಸಲಾಗಿದೆ. ಆದರೆ ಮಂಗಳವಾರ ಇಬ್ಬರು ವ್ಯಕ್ತಿಗಳು ಹೊರಗೆ ಸಂಚರಿಸಿದ್ದಾರೆ. ಇನ್ನು ಮುಂದೆ ನಿವಾಸಿಗಳಿಗೆ ಮನೆಯ ಹೊರಗೆ ಬಾಗಿಲು ದಾಟಲು ಅನುಮತಿಸುವುದಿಲ್ಲ ಎಂದು ಸ್ಥಳೀಯ ಆಡಳಿತ ಹೇಳಿದೆ.

‘ನಗರದ ಮಕ್ಕಳು ಚಾರಣ ಹೋಗಿದ್ದರು. ಅವರು ಇನ್ನೂ ಮೋಜು ಮಾಡುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳಿದರು.

ಲಾಕ್‌ಡೌನ್‌ನಿಂದ ಪುಡಾಂಗ್‌ನಲ್ಲಿಯ ಲುಜಿಯಾಜುಯಿ ನಗರದಲ್ಲಿರುವ ಗಗನಚುಂಬಿ ಕಟ್ಟಡದ ಬೀದಿಗಳು ಭಣಗುಡುತ್ತಿರುವುದನ್ನು ಚೀನಾ ಸರ್ಕಾರಿ ಮಾಧ್ಯಮದ ಡ್ರೋಣ್‌ ದೃಶ್ಯವಾವಳಿಗಳು ತೋರಿಸಿವೆ. ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ರದ್ದುಗೊಳಿಸಲಾಗಿದೆ. ವಾಹನಗಳು ರಸ್ತೆಗಿಳಿಯದಂತೆ ಸೂಚಿಸಲಾಗಿದೆ.

ದಿನಸಿ ಮತ್ತು ಆಹಾರ ಪದಾರ್ಥಗಳ ಸಂಗ್ರಹಣೆಗೆ ನಿವಾಸಿಗಳು ಕಿರಾಣಿ ಅಂಗಡಿಗಳು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು.

‘ದಿನಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸುವ ವ್ಯವಸ್ಥೆಯಿಲ್ಲ. ಮಾರುಕಟ್ಟೆ, ಹೋಟೆಲ್‌ಗಳು ಈಗಾಗಲೇ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿವೆ. ಜನರು ಅಗತ್ಯ ವಸ್ತುಗಳನ್ನು ಪಡೆಯಲು ಪರದಾಡುತ್ತಿದ್ದಾರೆ’ ಎಂದು ಶಾಂಘೈ ನಿವಾಸಿ ಅಡ್ರಿಯನ್‌ ಸಿಮ್‌ ಎಎಫ್‌ಪಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT