ಶುಕ್ರವಾರ, ಆಗಸ್ಟ್ 19, 2022
22 °C

ಶ್ರೀಲಂಕಾದಲ್ಲಿ ಕಾಗದಕ್ಕೂ ಬರ: ಮುದ್ರಣ ನಿಲ್ಲಿಸಿದ ಪ್ರಮುಖ ಪತ್ರಿಕೆಗಳು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ತೀವ್ರವಾಗಿರುವ ಕಾಗದದ ಕೊರತೆಯಿಂದ ಎರಡು ಪ್ರಮುಖ ದಿನ ಪತ್ರಿಕೆಗಳು ತಮ್ಮ ಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. 

‘ನ್ಯೂಸ್‌ಪ್ರಿಂಟ್’ ಕೊರತೆಯ ಕಾರಣ ತನ್ನ ಇಂಗ್ಲಿಷ್‌ ಆವೃತ್ತಿಯಾದ ‘ದಿ ಐಲ್ಯಾಂಡ್‌’ ಮತ್ತು ಅದರ ಸಿಂಹಳೀಯ ಆವೃತ್ತಿಯಾದ ‘ದಿವೈನಾ’ ಪತ್ರಿಕೆಗಳ ಮುಂದ್ರಣ ಆವೃತ್ತಿ ಸ್ಥಗಿತಗೊಳ್ಳಲಿದ್ದು, ‘ಆನ್‌ಲೈನ್‌’ನಲ್ಲಿ ಮಾತ್ರ ಲಭ್ಯವಿರಲಿವೆ ಎಂದು ಪತ್ರಿಕೆಗಳ ಮಾತೃ ಸಂಸ್ಥೆಯಾದ ‘ಉಪಾಲಿ ನ್ಯೂವ್ಸ್‌ಪೇಪರ್ಸ್‌’ ತಿಳಿಸಿದೆ.

ವಿದೇಶಗಳಿಂದ ಸಮರ್ಪಕವಾಗಿ ಕಾಗದ ತರಿಸಲು ಆಗದಿರುವ ಮತ್ತು ವೆಚ್ಚದಲ್ಲಿ ಭಾರಿ ಏರಿಕೆ ಆಗಿರುವ ಕಾರಣ ದೇಶದ ಇತರ ರಾಷ್ಟ್ರೀಯ ದಿನ ಪತ್ರಿಕಗಳು ಪುಟಗಳ ಸಂಖ್ಯೆಯನ್ನು ಕಡಿಮೆಗೊಳಿಸಿವೆ. ಕಾಗದ ಮತ್ತು ಇಂಕ್‌ ಕೊರತೆಯ ಕಾರಣ ಕಳೆದ ವಾರ ಶ್ರೀಲಂಕಾದಲ್ಲಿ ಶಾಲಾ ಪರೀಕ್ಷೆಗಳನ್ನೇ ಮುಂದೂಡಲಾಗಿತ್ತು.

ದೇಶದ ವಿದೇಶಿ ವಿನಿಮಯದ ಕೊರತೆಯು ಎಲ್ಲಾ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಬೀರಿದ್ದು, ಫೆಬ್ರುವರಿಯಲ್ಲಿ ಹಣದುಬ್ಬರದ ಪ್ರಮಾಣ ಶೇ 17.5ಕ್ಕೆ ತಲುಪಿತ್ತು. ಇದರಿಂದ ದೇಶದಲ್ಲಿ ಅಗತ್ಯ ವಸ್ತುಗಳೂ ಸೇರಿದಂತೆ ಬಹುತೇಕ ಪದಾರ್ಥಗಳ ಬೆಲೆ ಗಗನಕ್ಕೇರಿದೆ.  

ಪೆಟ್ರೋಲ್‌, ಡೀಸೆಲ್‌ ಜತೆಗೆ ಅಡುಗೆ ಅನಿಲ, ಸೀಮೆ ಎಣ್ಣೆಗೂ ತೀವ್ರ ಅಭಾವ ಉಂಟಾಗಿದೆ. ವಾಹನ ಚಾಲಕರು ‘ಗ್ಯಾಸೋಲಿನ್ ಪಂಪ್‌’ಗಳಲ್ಲಿ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಕಳೆದ ವಾರ ಬಿಸಿಲಿನ ಝಳದ ನಡುವೆಯೂ ಪೆಟ್ರೋಲ್‌ ಪಂಪ್‌ಗಳ ಬಳಿ ಗಂಟೆ ಗಟ್ಟಲೆ ಸರದಿಯಲ್ಲಿ ನಿಂತಿದ್ದ ನಾಲ್ವರು ಅಸುನೀಗಿದ್ದರು.

ಡೀಸೆಲ್ ಮತ್ತು ವೈಮಾನಿಕ ಇಂಧನ ತುಂಬಿದ್ದ ಹಡಗು ಎರಡು ವಾರಗಳ ಹಿಂದೆಯೇ ಕೊಲಂಬೊ ಬಂದರಿಗೆ ಬಂದಿದ್ದರೂ, ಅವಕ್ಕೆ ಪಾವತಿಸಲು ಡಾಲರ್‌ ಕೊರತೆಯ ಎದುರಾಗಿತ್ತು. ಇದೀಗ ಸರ್ಕಾರ 42 ಮಿಲಿಯನ್‌ ಡಾಲರ್‌ ಪಾವತಿಸುವಲ್ಲಿ ಯಶಸ್ವಿಯಾಗಿದೆ ಎಂದು ಶ್ರೀಲಂಕಾದ ಇಂಧನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ದ್ವೀಪ ರಾಷ್ಟ್ರವು ತನ್ನ ಕರೆನ್ಸಿ ಬಿಕ್ಕಟ್ಟನ್ನು ನಿವಾರಿಸಲು ಭಾರತ, ಚೀನಾ ಮತ್ತು ಇತರ ದೇಶಗಳಿಂದ ಹೆಚ್ಚಿನ ಸಾಲವನ್ನು ಪಡೆಯುತ್ತಿದೆ. 

2.2 ಕೋಟಿ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ಏಳು ದಶಕಗಳಲ್ಲಿಯೇ ಕಂಡರಿಯದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 1948ರಲ್ಲಿ ಬ್ರಿಟನ್‌ನಿಂದ ಶ್ರೀಲಂಕಾ ಸ್ವಾತಂತ್ರ್ಯ ಪಡೆದಿತ್ತು. ಕೋವಿಡ್‌ ಸಾಂಕ್ರಾಮಿಕವು ಶ್ರೀಲಂಕಾದ ಈ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. 

ಪ್ರವಾಸೋದ್ಯಮವೇ ಇಲ್ಲಿನ ಪ್ರಮುಖ ಆದಾಯದ ಮೂಲ. ಆದರೆ ಕೋವಿಡ್‌ನಿಂದಾಗಿ ಈ ಕ್ಷೇತ್ರ ಸಂಪೂರ್ಣ ನೆಲಕಚ್ಚಿದೆ. ವಿದೇಶಗಳಲ್ಲಿ ಕೆಲಸ ಮಾಡುವ ಲಂಕಾ ಪ್ರಜೆಗಳ ಪ್ರಮಾಣವೂ ಕಡಿಮೆಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು