ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನಿಗಳು ಸಾಮಾನ್ಯ ನಾಗರಿಕರು: ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆ

ಅಕ್ಷರ ಗಾತ್ರ

ವಾಷಿಂಗ್ಟನ್: ತಾಲಿಬಾನಿಗಳು ಸಾಮಾನ್ಯ ನಾಗರಿಕರು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಅಮೆರಿಕದ ಸುದ್ದಿ ಮಾಧ್ಯಮ 'ಪಿಬಿಎಸ್ ನ್ಯೂಸ್‌ಹೌರ್‌'ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್‌ ಖಾನ್‌ ಈ ಹೇಳಿಕೆ ನೀಡಿದ್ದಾರೆ.

'ತಾಲಿಬಾನ್‌ ಎನ್ನುವುದು ಕೇವಲ ಮಿಲಿಟರಿ ಸಂಘಟನೆಯಲ್ಲ. ತಾಲಿಬಾನಿಗಳು ಸಾಮಾನ್ಯ ನಾಗರಿಕರು. ಪಾಕ್ ಗಡಿಯ ಒಂದು ಕಡೆ ಅಫ್ಗಾನಿಸ್ತಾನದ ಐದು ಲಕ್ಷ ನಿರಾಶ್ರಿತರಿದ್ದಾರೆ. ಇನ್ನೊಂದು ಜಾಗದಲ್ಲಿ ಒಂದು ಲಕ್ಷ ಮಂದಿಯನ್ನು ಹೊಂದಿರುವ ನಿರಾಶ್ರಿತರ ಶಿಬಿರವಿದೆ. ಅದರಲ್ಲಿ ತಾಲಿಬಾನಿಗಳೂ ಸೇರಿಕೊಂಡಿರಬಹುದು. ಅವರನ್ನು ಗುರುತಿಸಿ ನಿರ್ದಿಷ್ಟವಾಗಿ ದಾಳಿ ಮಾಡುವುದು ಹೇಗೆ ಸಾಧ್ಯ' ಎಂದು ಇಮ್ರಾನ್‌ ಖಾನ್‌ ವಾದಿಸಿದ್ದಾರೆ.

ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದಲ್ಲಿ ಸುರಕ್ಷಿತ ತಾಣಗಳಿವೆ ಎಂಬ ಆರೋಪದ ಕುರಿತು ಪಾಕ್‌ ಪ್ರಧಾನಿಗೆ ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, 'ಈ ಸುರಕ್ಷಿತ ತಾಣಗಳು ಎಲ್ಲಿವೆ? ಪಾಕಿಸ್ತಾನದಲ್ಲಿ ಮೂರು ದಶಲಕ್ಷ ನಿರಾಶ್ರಿತರು ಇದ್ದಾರೆ. ಆ ನಿರಾಶ್ರಿತರು ಮತ್ತು ತಾಲಿಬಾನಿಗಳು ಒಂದೇ ಜನಾಂಗೀಯ ಗುಂಪಿಗೆ ಸೇರಿದವರಾಗಿದ್ದಾರೆ' ಎಂದು ಹೇಳಿದ್ದಾರೆ.

ತಾಲಿಬಾನಿಗಳಿಗೆ ಪಾಕಿಸ್ತಾನ ಸಹಾಯ ಮಾಡುತ್ತಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಇಮ್ರಾನ್‌ ಖಾನ್‌, 'ಇದು ಅತ್ಯಂತ ದುರದೃಷ್ಟಕರ' ಎಂದು ಹೇಳಿದ್ದಾರೆ.

1996ರಿಂದ 2001ರವರೆಗೆ ಅಫ್ಗಾನಿಸ್ತಾನವನ್ನು ಆಳಿದ್ದ ಮೂಲಭೂತವಾದಿ ತಾಲಿಬಾನ್‌, ಜನರ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಮತ್ತೆ, ಅದೇ ಆಳ್ವಿಕೆ ಬೇರೊಂದು ರೀತಿಯಲ್ಲಿ ಅಫ್ಗಾನಿಸ್ತಾನದಲ್ಲಿ ಸ್ಥಾಪನೆಯಾಗುವ ಲಕ್ಷಣಗಳು ಕಾಣಿಸುತ್ತಿವೆ.

ಒಂದರ ನಂತರ ಒಂದರಂತೆ ಜಿಲ್ಲೆಗಳನ್ನು ತಾಲಿಬಾನ್‌ ವಶಕ್ಕೆ ಪಡೆಯುತ್ತಿದೆ. ಅಫ್ಗಾನಿಸ್ತಾನ ಸರ್ಕಾರದ ಸೇನೆಯು ಅಲ್ಲಲ್ಲಿ ನಡೆದ ಯುದ್ಧದಲ್ಲಿ ಸೋಲು ಒಪ್ಪಿಕೊಳ್ಳುತ್ತಿದೆ ಅಥವಾ ಪರಾರಿಯಾಗುತ್ತಿದೆ. ದೇಶದ ಶೇ 85ರಷ್ಟು ಭಾಗ ತನ್ನ ನಿಯಂತ್ರಣದಲ್ಲಿ ಇದೆ ಎಂದು ತಾಲಿಬಾನ್‌ ಹೇಳಿಕೊಳ್ಳುತ್ತಿದೆ. ಇದನ್ನು ಸ್ವತಂತ್ರವಾಗಿ ದೃಢಪಡಿಸಿಕೊಳ್ಳಲು ಸಾಧ್ಯವೇನೂ ಇಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT