ಹೆಸರು ಕಾಳು: ಬೆಳಗಾವಿ ಜಿಲ್ಲೆಯಲ್ಲಿ 2,985 ಮೆಟ್ರಿಕ್ ಟನ್‌ ಖರೀದಿ ಗುರಿ

ಬೆಳಗಾವಿ: ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ಹೆಸರುಕಾಳು ಖರೀದಿಗೆ ಪ್ರಕ್ರಿಯೆ ಆರಂಭಿಸಲಾಗಿದೆ.

2018–19ನೇ ಸಾಲಿನಲ್ಲಿ ಕ್ವಿಂಟಲ್‌ ಹೆಸರುಬೇಳೆಗೆ ಕೇಂದ್ರ ಸರ್ಕಾರವು ₹ 6,975 ಬೆಂಬಲ ಬೆಲೆ ನಿಗದಿಪಡಿಸಿದೆ. ಈ ಪ್ರಕಾರ ಖರೀದಿಗಾಗಿ ಅಲ್ಲಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಗುಣಮಟ್ಟದ ಹೆಸರು ಬೇಳೆಯನ್ನು ಇಲ್ಲಿಗೆ ತಂದು ಮಾರುವುದಕ್ಕಾಗಿ ರೈತರು, ಅಗತ್ಯ ದಾಖಲೆಗಳನ್ನು ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು.

ಜಿಲ್ಲೆಯಲ್ಲಿ 10 ಕಡೆ ಕೇಂದ್ರಗಳನ್ನು ಆರಂಭಿಸಲು ಕಾರ್ಯಪಡೆಯಿಂದ ಶಿಫಾರಸು ಮಾಡಲಾಗಿತ್ತು. ಮೊದಲ ಹಂತದಲ್ಲಿ ಎಂಟಕ್ಕೆ ಅನುಮತಿ ದೊರೆತಿದೆ. ಸವದತ್ತಿ, ಮುರಗೋಡ, ಬೈಲಹೊಂಗಲ, ದೊಡವಾಡ, ರಾಮದುರ್ಗ, ಹುಲಕುಂದ, ಸಂಕೇಶ್ವರ, ಕುಡಚಿಯಲ್ಲಿ ನೋಂದಣಿ ಕೈಗೊಳ್ಳಲಾಗಿದೆ. ಯರಗಟ್ಟಿ ಹಾಗೂ ರಾಮದುರ್ಗ ತಾಲ್ಲೂಕಿನ ಕಟಕೋಳದಲ್ಲಿ ಕೇಂದ್ರ ಸ್ಥಾಪನೆ ಪ್ರಸ್ತಾವವನ್ನು ಸದ್ಯಕ್ಕೆ ಕೈಬಿಡಲಾಗಿದೆ.

ಸವದತ್ತಿ ತಾಲ್ಲೂಕಿನಲ್ಲಿ ಹೆಚ್ಚು

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ, ಒಳ್ಳೆಯ ಇಳುವರಿ ಬಂದಿದೆ. ಇಲ್ಲಿ 43,847 ಹೆಕ್ಟೇರ್‌ನಲ್ಲಿ ಹೆಸರು ಬೆಳೆಯಲಾಗಿದ್ದು, ಈ ಪೈಕಿ ಸವದತ್ತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 18,929 ಹೆಕ್ಟೇರ್‌ ಪ್ರದೇಶದಲ್ಲಿದೆ. ನಂತರದ ಸ್ಥಾನಗಳಲ್ಲಿ ರಾಮದುರ್ಗ (16,840 ಹೆ.) ಹಾಗೂ ಬೈಲಹೊಂಗಲ (5,221 ಹೆ.) ತಾಲ್ಲೂಕುಗಳಿವೆ. ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ಹೆಸರು ಬೆಳೆದಿರುವ ಪ್ರದೇಶ ಸಾವಿರ ಹೆಕ್ಟೇರ್‌ ಒಳಗೇ ಇದೆ. ಕಡಿಮೆ ಇರುವೆಡೆ ಮೂರು ತಾಲ್ಲೂಕುಗಳಿಗೆ ಒಂದರಂತೆ ಕೇಂದ್ರವನ್ನು ತೆರೆಯಲಾಗಿದೆ.

ರಾಜ್ಯಕ್ಕೆ 23,250 ಮೆಟ್ರಿಕ್‌ ಟನ್ ಖರೀದಿಗೆ ಅನುಮತಿ ದೊರೆತಿದೆ. ಈ ಪೈಕಿ, ಜಿಲ್ಲೆಗೆ 2,985 ಕ್ವಿಂಟಲ್‌ ಗುರಿ ನಿಗದಿಪಡಿಸಲಾಗಿದೆ.

‘ಸರ್ಕಾರದ ಸೂಚನೆಯಂತೆ ಹೆಸರುಕಾಳು ಖರೀದಿ ಪ್ರಕ್ರಿಯೆಗೆ ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗಿದೆ. ನೋಂದಣಿ ಆರಂಭಗೊಂಡಿದೆ. ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ ಪ್ರತಿ ರೈತರಿಂದ 10 ಕ್ವಿಂಟಲ್‌ ಮಾತ್ರ ಖರೀದಿಸಲಾಗುವುದು. ರೈತರು ಪಹಣಿ ಪತ್ರ, ಆಧಾರ್‌ ಸಂಖ್ಯೆ ಜೋಡಣೆಯಾದ ಬ್ಯಾಂಕ್‌ ಖಾತೆಯ ವಿವರ ಕೊಡಬೇಕು’ ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ತಿಳಿಸಿದರು.

ಸರ್ವರ್‌ ಸಮಸ್ಯೆಯಿಂದ ನೋಂದಣಿ ಪ್ರಕ್ರಿಯೆಯನ್ನು ನಿಗದಿತ ತಂತ್ರಾಂಶದಲ್ಲಿ ಮಾಡಬೇಕು ಎಂದು ಸೂಚಿಸಲಾಗಿತ್ತು. ಆದರೆ, ಸರ್ವರ್‌ ಸಮಸ್ಯೆಯಿಂದಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸೆ. 1ರಿಂದ 8ರವರೆಗೆ ಬಂದ ರೈತರ ಹೆಸರುಗಳನ್ನು ರಿಜಿಸ್ಟರ್‌ನಲ್ಲಿ ಬರೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

‘ಸರ್ವರ್‌ನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ಸಮಸ್ಯೆ ಬಗೆಹರಿದಿದೆ. ರೈತರ ಹೆಸರನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಲಾಗುತ್ತಿದೆ. ಸೋಮವಾರದ (ಸೆ.17) ನಂತರ ಖರೀದಿ ಆರಂಭಿಸಲಾಗುವುದು. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೋಂದಣಿ ಅವಧಿಯನ್ನು ಸೆ. 15ರವರೆಗೆ ವಿಸ್ತರಿಸಲಾಗಿದೆ’ ಎಂದು ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಕೆ.ಎಚ್. ಗುರುಪ್ರಸಾದ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹೆಸರು ಕಾಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ರೈತರಿಗೆ ಅನುಕೂಲವಾಗಲೆಂದು ನಮ್ಮ ಸರ್ಕಾರವು ಬೆಂಬಲ ಬೆಲೆ ನಿಗದಿಪಡಿಸಿದೆ. ಬೆಲೆ ಕುಸಿತದಿಂದ ಬೇಸತ್ತಿದ್ದ ರೈತರಿಗೆ ಇದರಿಂದ ನೆರವಾಗಲಿದೆ. ಖರೀದಿ ಪ್ರಕ್ರಿಯೆ ನಡೆಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಬಾರದು. ತಾಂತ್ರಿಕ ಕಾರಣಗಳ ನೆಪಗಳನ್ನು ಹೇಳಿ, ವಿಳಂಬ ಮಾಡಬಾರದು. ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳ ಮೂಲಕ ಕಡಿಮೆ ಬೆಲೆಗೆ ಮಾರಿ, ನಷ್ಟ ಅನುಭವಿಸುವುದಕ್ಕೆ ಅವಕಾಶ ಕೊಡಬಾರದು’ ಎಂದು ಸಂಸದ ಸುರೇಶ ಅಂಗಡಿ ಒತ್ತಾಯಿಸಿದರು.

ಪ್ರಮುಖ ಸುದ್ದಿಗಳು