ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ–2021: ಆಘಾತದಲ್ಲೇ ಏಗಿದ ವರ್ಷ

Last Updated 31 ಡಿಸೆಂಬರ್ 2021, 4:14 IST
ಅಕ್ಷರ ಗಾತ್ರ

ಕೋವಿಡ್‌ ಮೊದಲ ಅಲೆಯ ಬರಸಿಡಿಲಿನಿಂದ ಉಡುಗಿಹೋಗಿ ಉಳಿದ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಬದುಕು ಕಟ್ಟಿಕೊಳ್ಳಲು ಕೊಸರಾಡುತ್ತಿದ್ದ ಮಂದಿಗೆ 2021 ಸುಖವನ್ನೇನೂ ತರಲಿಲ್ಲ. ಕನಸುಗಳೇ ಇಲ್ಲದ ದಾರಿಯಲ್ಲಿ ನಡೆಯುತ್ತಿದ್ದವರಿಗೆ ಒಂದೆಡೆ ಕೋವಿಡ್‌ ಎರಡನೇ ಅಲೆ, ಮತ್ತೊಂದೆಡೆ ಮಹಾಮಳೆ ತಂದಿತ್ತ ಸರಣಿ ಆಘಾತ ಮೇಲಿಂದ ಮೇಲೆ ಅಪ್ಪಳಿಸಿದವು. ಮಣ್ಣುಟ್ಟ ಪುಟ್ಟಬಿತ್ತದಿಂದ ಆಗಷ್ಟೇ ಚಿಗುರೊಡೆದು ಪುಟಿಯುತ್ತಿದ್ದ ಎಳೆ ಸುಳಿಯಂತಹ ಬದುಕಿನ ಮೇಲೆ ಹೆಮ್ಮರ, ರಾಕ್ಷಸ ಬಂಡೆಗಳು ಉರುಳಿಬಿದ್ದಂತಾಗಿ ಕೊನರು ಕಮರಿಹೋಯಿತು. ಆಘಾತಗಳಲ್ಲೇ ಏಗಿ, ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಮ್ಮೆ ಓಮೈಕ್ರಾನ್‌ ಎಂಬ ಪೆಡಂಭೂತ ಹೊಸವರ್ಷಾಚರಣೆಯನ್ನು ಎದುರುಗೊಳ್ಳಲು ಮನೆಬಾಗಿಲಿಗೆ ಬಂದು ನಿಂತಿದೆ. ಹೊಸವರ್ಷದ ಹೊಸ್ತಿಲಿನಲ್ಲಿ ನಿಂತು ಹಿಂದಿನ ದಿನಗಳ ಕಹಿಘಾತ, ಮಗುಚಿಬಿದ್ದ ಜೀವನ, ಭವಿಷ್ಯದ ಭರವಸೆಗಳೇ ಇಲ್ಲದಂತೆ ಕಳೆದುಹೋದ ಕಾಲದ ಹೆಜ್ಜೆಗುರುತುಗಳನ್ನು ದಾಖಲಿಸುವ ಹೊತ್ತಿದು...

ಸಜ್ಜನರ ಅಕಾಲಿಕ ದುರ್ಮರಣ ಕಂಡು ಕನ್ನಡ ನಾಡು ಶೋಕಸಾಗರದಲ್ಲಿ ಮುಳುಗಿ ಪರಿತಪಿಸಿದರೆ, ರಾಜಕೀಯ ಏಳು ಬೀಳುಗಳು ನಾಡಿನ ಅಭಿವೃದ್ಧಿಯ ದಿಕ್ಕನ್ನೇ ಹಿಮ್ಮುಖವಾಗಿ ಚಲಿಸುವಂತೆ ಮಾಡಿದವು. ಡಿಜಿಟಲ್ ಕಾಲದ ಹಣವೆಂದೇ ಪರಿಚಿತವಾಗಿರುವ ಬಿಟ್ ಕಾಯಿನ್‌ ರಾಜ್ಯ ರಾಜಕಾರಣದ ಮೇಲೆ ಕರಾಳ ಛಾಯೆಯನ್ನು ಚಾಚಿ ಆಳುವವರನ್ನು ದಂಗುಬಡಿಸಿತು. ಜತೆಗೆ ಭ್ರಷ್ಟಾಚಾರದ ನವರೂಪವನ್ನು ಜನರಿಗೆ ಪರಿಚಯಿಸಿತು. ಆಡಳಿತ ವ್ಯವಸ್ಥೆಯೊಳಗೆ ತನ್ನ ಬೇರನ್ನು ಮತ್ತಷ್ಟು ಆಳ–ಅಗಲವಾಗಿ ವಿಸ್ತರಿಸಿರುವ ಭ್ರಷ್ಟಾಚಾರದ ಬ್ರಹ್ಮಾಂಡವನ್ನು ಆದಾಯ ತೆರಿಗೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ದಾಳಿಗಳು ತೆರೆದು ತೋರಿಸಿದವು.

ಸಾವಿನ ಮನೆಯ ಬಾಗಿಲು

ಕೋವಿಡ್ ಮೊದಲ ಅಲೆ ಅನಿರೀಕ್ಷಿತ ಆಘಾತವನ್ನು ಆಳುವ ಸರ್ಕಾರಕ್ಕೂ, ಜನರಿಗೂ ತಂದಿತು. ಇಡೀ ವ್ಯವಸ್ಥೆಯನ್ನೇ ಮರ್ಮರ ಮಾಡಿದ ಕೋವಿಡ್‌ ಅನ್ನು ಎದುರಿಸಲು ಯಾರೂ ಸಜ್ಜಾಗಿರಲಿಲ್ಲ. ಅಂತಹ ಹೊತ್ತಿನಲ್ಲಿ ಘಟಿಸಿದ ಜೀವಹಾನಿ ಅಪಾರ.

ಮೊದಲ ಅಲೆ ಮುಗಿಯುತ್ತಿದ್ದಂತೆ ಎರಡನೇ ಅಲೆ ವಕ್ಕರಿಸುತ್ತದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಸುತ್ತಲೇ ಇದ್ದರು. ಮೊದಲ ಅಲೆಯಲ್ಲಿ ಸಿದ್ಧತೆ ಇಲ್ಲದೇ ಎಡವಿ, ಜನರ ಜೀವವನ್ನು ಬಲಿಗೊಟ್ಟ ಬಗ್ಗೆ ಸರ್ಕಾರಕ್ಕೆ ಅರಿವಿತ್ತು. ಔಷಧ– ಚಿಕಿತ್ಸೆಗೆ ಬೇಕಾದ ಪರಿಕರ, ಪರೀಕ್ಷೆಗೆ ಬೇಕಾದ ಸಾಧನಗಳ ಖರೀದಿಯಲ್ಲಾಗುವ ‘ಲಾಭದ ವಹಿವಾಟಿ’ನ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದ ಆಳುವವರು, ಅಧಿಕಾರಿಗಳು ಎರಡನೇ ಅಲೆಯನ್ನು ಎದುರಿಸಲು ಅಣಿಗೊಳ್ಳಲೇ ಇಲ್ಲ. ಕೋವಿಡ್‌ಗೆ ತುತ್ತಾದವರು ಚಿಕಿತ್ಸೆ, ವೆಂಟಿಲೇಟರ್‌, ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ದೀಪಕ್ಕೆ ಸಿಕ್ಕ ಚಿಟ್ಟೆಗಳಂತೆ ನರಳುತ್ತಲೇ ಪ್ರಾಣಬಿಟ್ಟರು. ಸರ್ಕಾರ ಕೊಟ್ಟ ಲೆಕ್ಕದಂತೆ ಮೊದಲ ಅಲೆಯಲ್ಲಿ 12,090 ಜನ ತಮ್ಮ ಪ್ರಾಣ ಕಳೆದುಕೊಂಡರೆ, ಎರಡನೇ ಅಲೆಯಲ್ಲಿ 26,205 ಜೀವತೆತ್ತರು. ಈವರೆಗೆ ಕೋವಿಡ್‌ನಿಂದ 38,295 ಜನ ಅಸುನೀಗಿದ್ದಾರೆ. ಆದರೆ, ಲೆಕ್ಕಕ್ಕೇ ಸಿಗದವರು ಇದರು ಮೂರು ಪಟ್ಟು ಇದ್ದಿರಬಹುದು. ಸರ್ಕಾರ ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ ಇವರಲ್ಲಿ ಅರ್ಧದಷ್ಟು ಜನರ ಜೀವವಾದರೂ ಉಳಿಯುತ್ತಿತ್ತು.

ಇವೆಲ್ಲವೂ ಮುಗಿದು ಜೀವನ ಸರಿದಾರಿಗೆ ಮರಳುತ್ತಿರುವ ಸಮಯದಲ್ಲೇ ಓಮೈಕ್ರಾನ್ ಎಂಬ ರೂಪಾಂತರಿ ವೈರಾಣು ದಾಂಗುಡಿ ಇಟ್ಟಿದೆ. ದೇಶದಲ್ಲೇ ಮೊದಲ ಎರಡು ಪ್ರಕರಣ ಬೆಂಗಳೂರಿನಲ್ಲಿ ಪತ್ತೆಯಾಗಿವೆ.

ಬದುಕು ಮುಳುಗಿಸಿದ ಮಳೆ

ಕೋವಿಡ್‌ ಆಘಾತದ ಕರಿನೆರಳಿನಲ್ಲೇ ಶುರುವಾದ ಮಹಾಮಳೆಯ ಆರ್ಭಟ ರೈತ ಸಂಕುಲವನ್ನೇ ಹಿಪ್ಪೆ ಮಾಡಿತು. ಎರಡು ತಿಂಗಳಲ್ಲಿ ವಾಡಿಕೆ ಪ್ರಕಾರ 166 ಮಿ.ಮೀ ಮಳೆ ಆಗಬೇಕಿತ್ತು. ಆದರೆ, 307 ಮಿ.ಮೀ ಮಳೆ ಆಗಿಬಿಟ್ಟಿತು. ಮಳೆಯನ್ನೇ ಕಾಣದ ಬಯಲುಸೀಮೆಯಲ್ಲಿ ಸುರಿದ ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿದ ಸಂತಸ ಒಂದೆಡೆಗೆ ಇದ್ದರೆ, 14.42 ಲಕ್ಷ ರೈತರು ಉತ್ತಿಬಿತ್ತಿ ಬೆಳೆದಿದ್ದ ಅಂದಾಜು 4 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಫಸಲು ನೀರು ಪಾಲಾಯಿತು. ಭತ್ತ, ತೊಗರಿ, ರಾಗಿ, ಮೆಕ್ಕೆಜೋಳ, ಶೇಂಗಾ, ದ್ರಾಕ್ಷಿ ಹೀಗೆ ಎಲ್ಲವೂ ಕರಗಿಹೋದವು.

ರಾಜಕೀಯ ಚದುರಂಗ

2021ರ ವರ್ಷಾರಂಭದಲ್ಲೇ ನಾಯಕತ್ವ ಬದಲಾವಣೆಯ ಬಿರುಗಾಳಿ ರಾಜ್ಯ ಆಡಳಿತದ ಮೇಲೆ ಅಪ್ಪಳಿಸಿತು. ಅಧಿಕಾರ ಬಿಟ್ಟು ಕೆಳಗಿಳಿಯಲಾರೆ ಎಂದು ಹಟಕ್ಕೆ ಕುಳಿತಿದ್ದ ಬಿ.ಎಸ್‌. ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣ ಕೊಟ್ಟು ರಾಜೀನಾಮೆ ಕೊಡುವಂತಹ ಅನಿವಾರ್ಯವನ್ನು ಸೃಷ್ಟಿಸಲಾಯಿತು. ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟವರು ಕಣ್ಣರಳಿಸುವಂತೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಗಾದಿಗೆ ತಂದಿದ್ದು ಈ ವರ್ಷದ ವಿದ್ಯಮಾನ.

ಜನವರಿಯಿಂದ ಶುರುವಾದ ಆಟ ಜುಲೈನಲ್ಲಿ ತಾರ್ಕಿಕ ಅಂತ್ಯ ಕಂಡಿದ್ದು, ಮತ್ತೆ ಹೊಸ ಸಚಿವ ಸಂಪುಟ ರಚನೆ, ಹೊಸತರದ ಆಡಳಿತದಿಂದಾಗಿ ಅಭಿವೃದ್ಧಿಯ ಚಟುವಟಿಕೆಗೆ ಆರೇಳು ತಿಂಗಳು ಪಾರ್ಶ್ವವಾಯು ಬಡಿಯಿತು. ಉತ್ಸಾಹದಿಂದಲೇ ಆಡಳಿತಕ್ಕೆ ಚುರುಕುಕೊಟ್ಟ ಬೊಮ್ಮಾಯಿ, ಬಿಜೆಪಿ ಸರ್ಕಾರದ ಭವಿಷ್ಯದ ಆಸರೆಯಂತೆ ಕಂಡರು. ಹೊಸ ಯೋಜನೆಗಳು, ಸರಳ ಶೈಲಿ ಜನರ ಮೆಚ್ಚುಗೆ ಗಳಿಸಿದವು. ಆದರೆ, ಜಡ್ಡುಗಟ್ಟಿದ ಆಡಳಿತ, ಬಿಜೆಪಿ ಒಳಗಿನ ಜಗಳ, ಕೆಲವೇ ಸಚಿವರ ಗುಂಪನ್ನು ಕಟ್ಟಿಕೊಂಡು ಆಡಳಿತ ನಡೆಸುವ ಮುಖ್ಯಮಂತ್ರಿ ವೈಖರಿಗೆ ಪಕ್ಷದೊಳಗೆ ಆಕ್ಷೇಪ ಶುರುವಾಗಿದೆ. ಜತೆಗೆ ಬಿಟ್‌ ಕಾಯಿನ್ ಹಗರಣದ ವಾಸನೆ, ಶೇ 40ರ ಲಂಚದ ಆರೋಪವು ಸರ್ಕಾರವನ್ನು ತುಸು ನಡುಗಿಸಿದೆ. ನಾಯಕತ್ವ ಬದಲಾವಣೆಯ ಸದ್ದು ಮತ್ತೆ ಜೋರಾಗಿದೆ.

ವರ್ಷಾರಂಭದಲ್ಲೇ ಬಿಜೆಪಿ ಸರ್ಕಾರ ಮುಜುಗರ ಅನುಭವಿಸಲು ಆರಂಭಿಸಿತು. ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ, ಯುವತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದರೆನ್ನಲಾದ ವಿಡಿಯೊ ಬಿಡುಗಡೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಮಾರ್ಚ್‌ನಲ್ಲಿ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ವರ್ಷಾಂತ್ಯದಲ್ಲಿ ಬೈರತಿ ಬಸವರಾಜ ವಿರುದ್ಧದ ಭೂಕಬಳಿಕೆ ಆರೋಪ ಸರ್ಕಾರವನ್ನು ಕಷ್ಟಕ್ಕೆ ಸಿಲುಕಿಸಿತು.

ಈ ವರ್ಷ ನಡೆದ ಉಪಚುನಾವಣೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆ ಆಳುವ ಬಿಜೆಪಿಗೆ ಹಿತಕಾರಿಯಾಗಲೇ ಇಲ್ಲ. ಬಸವ ಕಲ್ಯಾಣವನ್ನು ಕಾಂಗ್ರೆಸ್‌ನಿಂದ ಬಿಜೆಪಿ ಕಿತ್ತುಕೊಂಡರೆ, ಮಸ್ಕಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು. ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ನಡೆದ ಚುನಾವಣೆಯಲ್ಲಿ ಅವರ ತವರು ಜಿಲ್ಲೆಯ ಹಾನಗಲ್‌ನಲ್ಲಿ ಕಾಂಗ್ರೆಸ್‌ ವಿಜಯ ಸಾಧಿಸಿದರೆ, ಜೆಡಿಎಸ್ ಗೆದ್ದಿದ್ದ ಸಿಂಧಗಿಯನ್ನು ಬಿಜೆಪಿ ದಕ್ಕಿಸಿಕೊಂಡಿತು. ಮೇಲ್ಮನೆ ಚುನಾವಣೆಯಲ್ಲಿ 6ರಿಂದ 11ಕ್ಕೆ ಬಿಜೆಪಿ ಜಿಗಿದರೂ ಭದ್ರಕೋಟೆಯಲ್ಲಿ ನೆಲ ಅದುರುತ್ತಿರುವ ಅನುಭವ ಕಮಲ ಪಕ್ಷದ ನಾಯಕರಿಗೆ ಆಯಿತು.

ಚುನಾವಣೆಗೆ ವರ್ಷ ಹತ್ತಿರವಾಗುವ ಹೊತ್ತಿಗೆ ಜೆಡಿಎಸ್‌ನ ಪ್ರಮುಖರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದು, ದಳದ ನೆಲವೂ ಅಲುಗಾಡ ತೊಡಗಿರುವುದರ ಸ್ಪಷ್ಟ ಸೂಚನೆ.

ಸಜ್ಜನರ ಮರಣ

ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್

ಈ ವರ್ಷ ಬಹುವಾಗಿ ಕಾಡಿದ್ದು ಪ್ರತಿಭಾವಂತರು, ಸಜ್ಜನರ ದುರ್ಮರಣ. ತನ್ನದೇ ಆದ ವಿಶಿಷ್ಟ ಪ್ರಯೋಗಗಳಿಂದ ಜನಮೆಚ್ಚುಗೆ ಗಳಿಸಿದ್ದ ಸಂಚಾರಿ ವಿಜಯ್ ಅಪಘಾತದಲ್ಲಿ ತೀರಿಹೋದರು.

ಜನಪ್ರಿಯ ನಟ, ಕನ್ನಡಿಗರ ಮೆಚ್ಚಿನ ಅಪ್ಪು ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣ ಕನ್ನಡ ನಾಡನ್ನೇ ವಾರಗಟ್ಟಲೇ ದುಃಖದ ಮಡುವಿನಲ್ಲಿ ಅದ್ದಿಟ್ಟಿತು. ತಮ್ಮ ಮಗನನ್ನೋ ಅಣ್ಣ–ತಮ್ಮನನ್ನೋ ಕಳೆದುಕೊಂಡ ರೀತಿಯಲ್ಲಿ ರಾಜ್ಯದ ಜನ ಕಣ್ಣೀರನಲ್ಲಿ ತೋಯ್ದುಹೋದರು. ಜನಪರ ಕಾರ್ಯಕ್ರಮ, ಸಜ್ಜನಿಕೆ, ಉತ್ತಮ ಆದರ್ಶಗಳನ್ನು ಬಿತ್ತುವ ಸಿನಿಮಾ ಕೊಟ್ಟಿದ್ದ ಅಪ್ಪು ಅಗಲಿಕೆ ಇಡೀ ವರ್ಷದ ಕ್ಯಾಲೆಂಡರ್‌ಅನ್ನೇ ನೋವಿನ ಕಡಲೊಳಗೆ ಹುದುಗಿಸಿಬಿಟ್ಟಿತು. ಆದರ್ಶಗಳನ್ನೇ ಮೈವೆತ್ತುಕೊಂಡಿದ್ದ ಪೋಷಕ ನಟ ಶಿವರಾಂ ನಿಧನವೂ ಇದೇ ವರ್ಷ ಘಟಿಸಿದ್ದು ಮತ್ತೊಂದು ದುರಂತ.

ಹಿಂದುಳಿದ ಸಮುದಾಯವರ ಪಾಲಿಗೆ ತಮ್ಮ ಸಂಘಟನಾ ಶಕ್ತಿಯಿಂದ ಚೈತನ್ಯವನ್ನೇ ತಂದುಕೊಟ್ಟು, ಶಿಕ್ಷಣ–ಆರೋಗ್ಯ ಸೇವೆಗೆ ತಮ್ಮದೇ ಕೊಡುಗೆ ನೀಡಿದ ಆರ್.ಎಲ್. ಜಾಲಪ್ಪ ನಿಧನ ರಾಜ್ಯದ ಜನರಿಗೆ, ಸಹಕಾರಿ ಕ್ಷೇತ್ರಕ್ಕೆ ಆಗಿರುವ ನಷ್ಟ ಎಂದರೆ ತಪ್ಪಾಗಲಿಕ್ಕಿಲ್ಲ.

ಭ್ರಷ್ಟಾಚಾರದ ಹೊಸಾವತಾರ

ಭ್ರಷ್ಟಾಚಾರದ ಹಲವು ಮುಖಗಳನ್ನು ಕಂಡು ರೋಸಿ ಹೋಗಿದ್ದ ಜನ ಈ ವರ್ಷ ಮತ್ತೊಂದು ಬಗೆಯ ಭ್ರಷ್ಟಾಚಾರವನ್ನು ಕಂಡು, ದಿಗ್ಭ್ರಮೆಗೊಂಡರು.

ಗುತ್ತಿಗೆದಾರರು, ಅಧಿಕಾರಿಗಳು, ರಾಜಕಾರಣಿಗಳ ಕೂಟ ಕಾಮಗಾರಿಗಳ ಹೆಸರಿನಲ್ಲಿ ದುಡ್ಡು ತಿನ್ನುವುದು ಹೊಸದೇನಲ್ಲ. ಬಿಜೆಪಿ ಸರ್ಕಾರ ಅಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಕಾಮಗಾರಿಗಳ ಗುತ್ತಿಗೆಯಲ್ಲಿನ ಲಂಚದ ಪ್ರಮಾಣ ಶೇ 40ಕ್ಕೆ ಏರಿದೆ ಎಂಬ ಆರೋಪವನ್ನು ಮಾಡಿದ ಗುತ್ತಿಗೆದಾರರು, ‘ನಾನು ತಿನ್ನುವುದಿಲ್ಲ; ತಿನ್ನುವವರಿಗೆ ಬಿಡುವುದಿಲ್ಲ’ ಎಂಬ ಘೋಷಣೆ ಕೊಡುವ ಸ್ವಯಂಘೋಷಿತ ಚೌಕಿದಾರರಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ಕೊಟ್ಟರು.

ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಡ್ರಗ್ಸ್‌ ಪ್ರಕರಣದಲ್ಲಿ ವಶಕ್ಕೆ ಪಡೆದ ಪೊಲೀಸರು ಬಿಟ್‌ ಕಾಯಿನ್‌ ‘ವ್ಯವಹಾರ’ ನಡೆಸಿದ್ದು ಸರ್ಕಾರದ ಮರ್ಯಾದೆಯನ್ನು ತೆಗೆದ ಮತ್ತೊಂದು ಪ್ರಕರಣ. ಪೊಲೀಸರ ವಶದಲ್ಲಿದ್ದ ಶ್ರೀಕಿ, ಆ ಅವಧಿಯಲ್ಲೇ ರಾಜ್ಯ ಸರ್ಕಾರದ ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌, ಕೇಂದ್ರದ ಜನ್‌ಧನ್ ಖಾತೆ ಹ್ಯಾಕ್‌ ಮಾಡಿದ್ದಾನೆ ಎಂಬ ಆರೋಪವಿದೆ. ಅದರ ಜತೆಗೆ, ಬಿಟ್ ಕಾಯಿನ್‌ ವೆಬ್ ಸೈಟ್ ಹ್ಯಾಕ್ ಮಾಡಿ ಭಾರತದ ರೂಪಾಯಿಯ ಇಂದಿನ ಮೌಲ್ಯದಲ್ಲಿ ₹56 ಸಾವಿರಕೋಟಿ ಮೊತ್ತದ ಬಿಟ್ ಕಾಯಿನ್ ಎಗರಿಸಿದ್ದಾನೆ ಎಂಬ ದೂರು ಇದೆ. ಸರ್ಕಾರದ ಪ್ರಭಾವಿ ಸಚಿವರು, ಹಿರಿಯ ಐಎಎಸ್‌, ಐಪಿಎಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದ ಬಗ್ಗೆ ಪ್ರಧಾನಿಗೆ ಸಲ್ಲಿಕೆಯಾದ ದೂರಿನಲ್ಲಿ ವಿವರಗಳಿವೆ.

ಇನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿ.ಎಸ್‌. ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿಯಾಗಿದ್ದ, ಅವರ ಮಗ ಬಿ.ವೈ. ವಿಜಯೇಂದ್ರರವರ ಆಪ್ತನೆಂದೇ ಗುರುತಿಸಿಕೊಂಡಿದ್ದ ಆಯನೂರು ಉಮೇಶ್ ಮನೆ ಮೇಲೆ ದಾಳಿ ನಡೆಸಿದರು. ಜತೆಗೆ ವಿಜಯೇಂದ್ರ ಆಪ್ತ ಅರವಿಂದ್ ಎಂಬಾತನ ಮನೆ–ಕಚೇರಿಯಲ್ಲೂ ಶೋಧ ನಡೆಸಿದರು. ಈ ವೇಳೆ ವಿವಿಧ ನೀರಾವರಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆಯ ಟೆಂಡರ್‌ ದಾಖಲೆಗಳು ಮೂಟೆಗಟ್ಟಲೇ ವಶವಾಗಿವೆ. ಭ್ರಷ್ಟಾಚಾರದ ಮೂಲ ಎಲ್ಲಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದರೂ ಈವರೆಗೂ ಕ್ರಮವನ್ನು ಮಾತ್ರ ಕೈಗೊಂಡಿಲ್ಲ.

ಕೋಮು ಧ್ರುವೀಕರಣದ ದಾರಿ

ಇವೆಲ್ಲವೂ ಅನೂಚಾನವಾಗಿ ನಡೆಯುತ್ತಿರುವ ಹೊತ್ತಿನಲ್ಲೇ ಸರ್ಕಾರ ಮಾತ್ರ ಅಭಿವೃದ್ಧಿ, ಜನ ಕಲ್ಯಾಣಕ್ಕೆ ತೋರಿಸಬೇಕಾದ ಆಸಕ್ತಿಯನ್ನು ಬದಿಗೊತ್ತಿದೆ. ಅದರ ಬದಲು 2023ರ ಚುನಾವಣೆಗೆ ತನ್ನ ಮತ ಬ್ಯಾಂಕ್ ಭದ್ರಗೊಳಿಸಲು ಹಿಂದೂ ಮತಗಳ ಧ್ರುವೀಕರಣಕ್ಕೆ ತನ್ನ ಶ್ರಮವನ್ನು ಮೀಸಲಾಗಿಟ್ಟಂತೆ ವರ್ತಿಸುತ್ತಿದೆ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಗಳು ಇದಕ್ಕೆ ಪುರಾವೆಯಂತಿವೆ. ಪಠ್ಯಪುಸ್ತಕದಲ್ಲಿರುವ ಸಾಮರಸ್ಯದ ಕುರುಹುಗಳನ್ನು ಅಳಿಸಿ, ಕೋಮುಪಿತ್ತ ತುಂಬುವ ಯತ್ನವನ್ನೂ ಆರಂಭಿಸಿದೆ. ಜನರಿಗೆ ನೆಟ್ಟಗೆ ಕುಡಿಯುವ ನೀರೇ ಸಿಗದಿರುವಾಗ ತುಂಗಾರತಿಯಂತಹ ಕಾರ್ಯಕ್ರಮಕ್ಕೆ ₹30 ಕೋಟಿ ಕೊಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದಾರೆ. ಮತ ಕ್ರೋಡೀಕರಣದ ಈ ಹುನ್ನಾರಗಳು ಅಪಾಯಕಾರಿ ಹತಾರಗಳನ್ನು ಒಳಮನೆಗೆ ಬಿಟ್ಟುಕೊಳ್ಳಲು ದಾರಿ ಮಾಡಿಕೊಡುತ್ತಿರುವುದು ಆತಂಕಕಾರಿ.

ಪದ್ಮ ಪ್ರಶಸ್ತಿಗೇ ಇವರಿಂದ ಸಡಗರ

ಪದ್ಮ ಪ್ರಶಸ್ತಿ ಈ ಬಾರಿ ನಮ್ಮ ನಾಡಿಗೆ ವಿಶೇಷ ಸಡಗರ ತಂದುಕೊಟ್ಟಿದೆ. ಪದ್ಮ ಪುರಸ್ಕೃತರಾದ 119 ಸಾಧಕರ ಪೈಕಿ ಮಿಂಚಿದ್ದು ಕರ್ನಾಟಕದ ಹರೇಕಳ ಹಾಜಬ್ಬ, ಮಂಜಮ್ಮ ಜೋಗತಿ ಮತ್ತು ತುಳಸಿಗೌಡ.

ಹಾಜಬ್ಬ ಮತ್ತು ತುಳಸೀಗೌಡ
ಹಾಜಬ್ಬ ಮತ್ತು ತುಳಸೀಗೌಡ

ಯಾವ ಪ್ರಶಸ್ತಿ, ಪುರಸ್ಕಾರದ ನಿರೀಕ್ಷೆಯೂ ಇಲ್ಲದೆ ಹಳ್ಳಿ ಮೂಲೆಯಲ್ಲಿ ತಮ್ಮಷ್ಟಕ್ಕೆ ತಾವಿದ್ದ ಈ ಮೂವರನ್ನು ಪದ್ಮ ಪ್ರಶಸ್ತಿ ಹುಡುಕಿಕೊಂಡು ಬಂದಿತು.

ಮಂಜಮ್ಮ ಜೋಗತಿ
ಮಂಜಮ್ಮ ಜೋಗತಿ

ಕಿತ್ತಳೆ ಮಾರುತ್ತಲೇ ತನ್ನೂರು ಹರೇಕಳದಲ್ಲಿ ಶಾಲೆ ಸ್ಥಾಪನೆಗೆ ಹೋರಾಡಿ ಕೊನೆಗೂ ಗುರಿಮುಟ್ಟಿದ ಹಾಜಬ್ಬ, ಮರಗಿಡಗಳ ಪೋಷಣೆ, ಬೆಳವಣಿಗೆಯಲ್ಲೇ ಜೀವನ ಸಾರ್ಥಕತೆ ಕಂಡ ತುಳಸಿಗೌಡ, ಎಲ್ಲ ಸಂಕಷ್ಟಗಳನ್ನು ಎದುರಿಸಿ ಗೆದ್ದು, ಅವರು ಪ್ರತಿನಿಧಿಸುವ ಸಮುದಾಯಕ್ಕೆ ಗೌರವ ತಂದು, ಜಾನಪದ ಅಕಾಡೆಮಿ ಅಧ್ಯಕ್ಷರಾದ ಜೋಗತಿ ಮಂಜಮ್ಮ ಅವರು ಪ್ರಶಸ್ತಿ ಪುರಸ್ಕೃತರಾಗಿದ್ದು, ಇದು ಆ ಪ್ರಶಸ್ತಿಗೇ ಸಂದ ಗೌರವ ಎಂಬ ಅಭಿಮಾನದ ಮಾತುಗಳು ಕೇಳಿಬಂದವು. ‘ಅಕ್ಷರ ಸಂತ’ ಹಾಜಬ್ಬ ಅವರದ್ದು ಈಗ ಪಿಯುಸಿ ಕಾಲೇಜು ಸ್ಥಾಪನೆಗೆ ಹೋರಾಟ ಮುಂದುವರಿದಿದೆ. ಈ ಕಾಯಕಕ್ಕೆ ‘ವೃಕ್ಷಮಾತೆ’ ತುಳಸಿಗೌಡ ಹಾಜಬ್ಬರ ಜೊತೆ ಕೈಜೋಡಿಸುವ ಭರವಸೆಯನ್ನೂ ಕೊಟ್ಟಿದ್ದಾರೆ. ಜಾನಪದ ಕ್ಷೇತ್ರದ ಉಳಿವು, ಬೆಳವಣಿಗೆಗೆ ಸಂಬಂಧಿಸಿ ಮಂಜಮ್ಮ ಅವರ ಬದ್ಧತೆಯ ಕಾಯಕ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT