ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಹತ್ತಿರ ಅದೊಂದೇ ಉಳಿದಿಹುದು ಕಂದ!

Last Updated 7 ಫೆಬ್ರುವರಿ 2021, 1:46 IST
ಅಕ್ಷರ ಗಾತ್ರ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಇತ್ತೀಚೆಗೆ ನೀಡಿರುವ ಎರಡು ತೀರ್ಪುಗಳು ವಿವಾದ ಎಬ್ಬಿಸಿವೆ. ಇಷ್ಟೊಂದು ಅಸೂಕ್ಷ್ಮವಾಗಿ ತೀರ್ಪುಗಳು ಹೊರಬಿದ್ದರೆ ಪೋಕ್ಸೊ ಕಾಯ್ದೆಯೇ ನಿರರ್ಥಕವಾಗಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಆ ತೀರ್ಪುಗಳ ಕುರಿತು ಇಬ್ಬರು ತಜ್ಞರ ವಿಶ್ಲೇಷಣೆಗಳು ಇಲ್ಲಿವೆ...

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ನೀಡಿದ ಎರಡು ತೀರ್ಪುಗಳು ತುಂಬಾ ಆಘಾತವನ್ನು ಉಂಟುಮಾಡಿವೆ. ‘ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ’ಯ (ಪೋಕ್ಸೊ) ಆಶಯವನ್ನೇ ನಿರರ್ಥಕಗೊಳಿಸುವಂತಹ ತೀರ್ಪುಗಳು ಇವಾಗಿವೆ. ಕಾಯ್ದೆಯ ನಿಯಮಗಳನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಈ ತೀರ್ಪುಗಳು ಹಲವು ಹಂತಗಳಲ್ಲಿ ಸಮಸ್ಯೆಯನ್ನು ಸೃಷ್ಟಿಸಿವೆ. ಮಕ್ಕಳ ವಿಷಯದಲ್ಲಿ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಸೂಕ್ಷ್ಮವಾಗಿ ಯೋಚಿಸುವ ಅಗತ್ಯವನ್ನೂ ಅವುಗಳು ಒತ್ತಿಹೇಳುತ್ತಿವೆ.

12 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ ಅಪರಾಧವನ್ನು ಪೋಕ್ಸೊ ಕಾಯ್ದೆಯ ಸೆಕ್ಷನ್‌ 8ರ ವ್ಯಾಪ್ತಿಯಲ್ಲಿ ಶಿಕ್ಷೆಗೆ ಪರಿಗಣಿಸಲು ಸಂತ್ರಸ್ತೆಯ ಚರ್ಮದ ಜೊತೆ ಆರೋಪಿಯ ಚರ್ಮದ (ಸ್ಕಿನ್‌ ಟು ಸ್ಕಿನ್‌) ಸಂಪರ್ಕವಾಗಿರಬೇಕು ಎನ್ನುವ ವಾದ ಅರ್ಥಹೀನವಾದುದು. ಮಾತ್ರವಲ್ಲ, ಕಾಯ್ದೆಯ ಧ್ಯೇಯವನ್ನೇ ಮಣ್ಣುಪಾಲು ಮಾಡುವಂಥದ್ದು.

ಸಂತ್ರಸ್ತೆಯ ಮೇಲೆ 39 ವರ್ಷದ ವ್ಯಕ್ತಿಯೊಬ್ಬ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯವು, ಪೋಕ್ಸೊ ಕಾಯ್ದೆಯ ಸೆಕ್ಷನ್‌ 8ರ ಅಡಿಯಲ್ಲಿ ಅಪರಾಧಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ, ಈ ಆದೇಶವನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಮಾರ್ಪಾಡುಗೊಳಿಸಿದರು. ‘ಚರ್ಮಕ್ಕೆ ಚರ್ಮದ ಸಂಪರ್ಕವಿಲ್ಲದೆ, ಬಟ್ಟೆಯ ಮೇಲಿಂದ ಬಾಲಕಿಯ ಸ್ತನ ಮುಟ್ಟುವುದನ್ನು ಲೈಂಗಿಕ ದೌರ್ಜನ್ಯ ಎಂದು ಹೇಳಲು ಸಾಧ್ಯವಿಲ್ಲ’ ಎಂದೂ ತೀರ್ಪಿನಲ್ಲಿ ಉಲ್ಲೇಖಿಸಿದರು. ಈ ವಿಶ್ಲೇಷಣೆಯೇ ಈಗ ವಿವಾದಕ್ಕೆ ಮೂಲವಾಗಿರುವುದು. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನಿರತರಾದವರಿಗೆ ಆಘಾತವನ್ನು ಉಂಟು ಮಾಡಿರುವುದು.

ಪೋಕ್ಸೊ ಕಾಯ್ದೆಯ ಸೆಕ್ಷನ್‌ 7ರಲ್ಲಿ (ಅಪರಾಧದ ಸ್ವರೂಪ) ‘ಚರ್ಮಕ್ಕೆ ಚರ್ಮದ ಸಂಪರ್ಕ’ದ ಪ್ರಸ್ತಾಪವೇ ಇಲ್ಲ. ಲೈಂಗಿಕ ಉದ್ದೇಶದಿಂದ ಮಗುವಿನ ಸ್ತನ ಅಥವಾ ಗುಪ್ತಾಂಗಗಳನ್ನು ಮುಟ್ಟಿದರೆ ಇಲ್ಲವೇ ಮಗುವಿನ ಕೈಯಲ್ಲಿ ತನ್ನ ಅಥವಾ ಇತರರ ಗುಪ್ತಾಂಗಗಳನ್ನು ಮುಟ್ಟಿಸಿದರೆ, ಅಥವಾ ದೈಹಿಕ ಸಂಪರ್ಕ ಸೇರಿದಂತೆ ಲೈಂಗಿಕ ಉದ್ದೇಶದ ಇತರ ಯಾವುದೇ ವರ್ತನೆ ತೋರಿದರೆ ಅದು ‘ಲೈಂಗಿಕ ದೌರ್ಜನ್ಯ’ ಎಂದು ತಿಳಿಸಲಾಗಿದೆ.

‘ಬಾಲಕಿಯ ಮೈಮೇಲಿದ್ದ ಬಟ್ಟೆ ಬಿಚ್ಚಲಾಗಿತ್ತೇ ಅಥವಾ ಬಟ್ಟೆಯ ಒಳಗೆ ಕೈಹಾಕಿ ಸ್ತನವನ್ನು ಒತ್ತಿದನೇ ಎನ್ನುವ ನಿಖರ ಮಾಹಿತಿ ಇಲ್ಲದೆ, ಕೇವಲ ಸ್ತನವನ್ನು ಒತ್ತುವುದು ಪೋಕ್ಸೊ ಕಾಯ್ದೆ ವ್ಯಾಖ್ಯಾನಿಸಿದಂತೆ ಲೈಂಗಿಕ ದೌರ್ಜನ್ಯದ ಲಕ್ಷಣದಡಿ ಬರುವುದಿಲ್ಲ. ಬದಲಾಗಿ ಇದು, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 354ರಡಿ ಬರುತ್ತದೆ’ ಎನ್ನುವ ಪೀಠದ ಅಭಿಪ್ರಾಯ ತುಂಬಾ ಅಸೂಕ್ಷ್ಮವಾದುದು.

ಪೋಕ್ಸೊ ಕಾಯ್ದೆ ಜಾರಿಗೆ ಮೊದಲೇ ಬಾಂಬೆ ನಗರ, ಬಾಂಬೆ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ನ್ಯಾಯಾಲಯದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ವಿಚಾರಣಾ ನ್ಯಾಯಾಧೀಶೆಯಾಗಿ ಗನೇಡಿವಾಲಾ ತುಂಬಾ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಿದವರು. ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಪ್ರಕರಣವೊಂದರಲ್ಲಿ ಅವರು ಅಪರಾಧಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದ್ದರು. ಇದರಲ್ಲಿ ಆರೋಪಿ ಪರವಾಗಿ ಖ್ಯಾತ ವಕೀಲ ಮಜೀದ್‌ ಮೆಮೊನ್‌ ವಾದಿಸಿದ್ದರು. ಶಾಲೆಯ ಟ್ರಸ್ಟ್‌ ಸದಸ್ಯರೂ ಇವರಿಗೆ ಬೆಂಬಲವಾಗಿದ್ದರು. ಸಂತ್ರಸ್ತೆ ಪರ ಅನನುಭವಿ ವಕೀಲರಿದ್ದರು. ಹೀಗಿದ್ದರೂ, ನ್ಯಾಯಾಧೀಶರ ಸೂಕ್ಷ್ಮ ಮನೋಭಾವ ಪಕ್ಷಾತೀತ ವಿಚಾರಣೆಗೆ ಸಹಕಾರಿಯಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ಮಗಳ ಮೇಲೆ ತಂದೆಯೇ ಅತ್ಯಾಚಾರ ನಡೆಸಿದ್ದ. 18 ತಿಂಗಳ ಬಳಿಕ ಎಫ್‌ಐಆರ್‌ ದಾಖಲಾಗಿತ್ತು. ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ ಸಂದರ್ಭದಲ್ಲಿ, ಎಫ್‌ಐಆರ್‌ ದಾಖಲಿಸಲು ವಿಳಂಬವಾಗಿರುವುದಕ್ಕೆಅನಕ್ಷರಸ್ಥೆಯಾದ ತಾಯಿಯನ್ನು ದೂಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದ ನ್ಯಾಯಾಧೀಶರು, ಅಪರಾಧಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದರು.ಆದರೆ, ಈಗಿನ ಪ್ರಕರಣದಲ್ಲಿ ಏನಾಯಿತು? ಯಾಕೆ ಈ ರೀತಿಯ ಬೆಚ್ಚಿ ಬೀಳಿಸುವ ತೀರ್ಪು ನೀಡಿದರು ಎಂಬ ಪ್ರಶ್ನೆ ಕಾಡುತ್ತಿದೆ.

ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಪೋಕ್ಸೊ ಕಾಯ್ದೆ ಅಡಿ ಪರಿಗಣಿಸದ ಪೀಠ, ಐಪಿಸಿ ಸೆಕ್ಷನ್‌ 354ರ ಅಡಿಯಲ್ಲಿ ಅಪರಾಧ ಎಂದು ತೀರ್ಪು ನೀಡಿರುವುದನ್ನು ಒಪ್ಪುವುದು ಕಷ್ಟ. ಈ ಸೆಕ್ಷನ್‌, ‘ಯಾವುದೇ ಮಹಿಳೆಯ ಮೇಲೆ ಬಲ ಪ್ರಯೋಗ ಮಾಡುವುದು, ಅವಳ ಗೌರವಕ್ಕೆ ಧಕ್ಕೆ ತರುವುದು ಅಪರಾಧ’ ಎನ್ನುತ್ತದೆ. ಪೋಕ್ಸೊ ಕಾಯ್ದೆ ಅಡಿಯ ಶಿಕ್ಷೆಗೂ ಐಪಿಸಿ ಸೆಕ್ಷನ್‌ 354ರ ಅಡಿ ಶಿಕ್ಷೆಗೂ ತುಂಬಾ ವ್ಯತ್ಯಾಸವಿದೆ.

ಪೋಕ್ಸೊ ಕಾಯ್ದೆಯಡಿ ಅಪರಾಧ ಸಾಬೀತಾದರೆ ಕನಿಷ್ಠ ಶಿಕ್ಷೆಯ ಪ್ರಮಾಣ ಮೂರು ವರ್ಷ. ಅದೇ ಐಪಿಸಿ ಸೆಕ್ಷನ್‌ 354ರ ಅಡಿಯಲ್ಲಿ ಆರೋಪ ಸಾಬೀತಾದರೆ ಕನಿಷ್ಠ ಶಿಕ್ಷೆಯ ಪ್ರಮಾಣ ಒಂದು ವರ್ಷ. ಅಪರಾಧದ ಸ್ವರೂಪವನ್ನು ವಿಶ್ಲೇಷಿಸಿ, ಕಾಯ್ದೆಯನ್ನು ಅನ್ವಯಿಸುವಾಗ ತುಸು ವ್ಯತ್ಯಾಸವಾದರೂ ಅಪರಾಧಿಯು ಕಠಿಣ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಲ್ಲಿ ಸಂಶಯವಿಲ್ಲ. ಹಾಗೆಯೇ ಸದರಿ ಪ್ರಕರಣದ ವಿಚಾರಣೆ ನಾಲ್ಕು ವರ್ಷಗಳಷ್ಟು ವಿಳಂಬವಾಗಿದೆ ಎನ್ನುವುದನ್ನೂ ಮರೆಯುವಂತಿಲ್ಲ.

ಹೈಕೋರ್ಟ್‌ನ ವಿಲಕ್ಷಣ ವ್ಯಾಖ್ಯಾನವು ಪೋಕ್ಸೊ ಕಾಯ್ದೆಯ ಇತರ ನಿಬಂಧನೆಗಳ ಮೇಲೆ ಇನ್ನಷ್ಟು ಅಸಂಬದ್ಧ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ, ಮಗುವಿನ ಗುಪ್ತಾಂಗ ಅಥವಾ ಬಾಯಿಗೆ, ಆರೋಪಿಯು ಗುಪ್ತಾಂಗ ಅಥವಾ ದೇಹದ ಯಾವುದೇ ಭಾಗ ತೂರಿಸಿದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಸೆಕ್ಷನ್ 3ರಲ್ಲಿ ವ್ಯಾಖ್ಯಾನಿಸಲಾಗಿದೆ. ಇಲ್ಲಿ ‘ನೇರ ಸಂಪರ್ಕ’ದ ಕುರಿತು ಏನೂ ಹೇಳುವುದಿಲ್ಲ. ಈಗ ಹೈಕೋರ್ಟ್‌ ತೀರ್ಪಿನ ‘ತರ್ಕ’ ಹೇಗಿದೆ ಎಂದರೆ, ಒಂದುವೇಳೆ ಅಪರಾಧಿ ಕಾಂಡೋಮ್ ಬಳಸಿದರೆ, ಅದು ‘ನೇರ ಸಂಪರ್ಕ’ವಲ್ಲದ ಕಾರಣ ಪೋಕ್ಸೊ ಕಾಯ್ದೆ ಅಡಿಯಲ್ಲಿ ಅಪರಾಧವಲ್ಲ!

ಮತ್ತೊಂದು ಪ್ರಕರಣದಲ್ಲಿ 50 ವರ್ಷದ ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿಯನ್ನು ಕೈಹಿಡಿದು ನಿಲ್ಲಿಸಿಕೊಂಡು ತನ್ನ ಪ್ಯಾಂಟ್‌ನ ಜಿಪ್‌ ತೆಗೆದಿದ್ದ. ಆ ಮಗುವಿಗೆ ತನ್ನ ಜತೆ ಮಲಗುವಂತೆ ಒತ್ತಾಯಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ್ದ ಪೋಕ್ಸೊ ನ್ಯಾಯಾಲಯವು ಪೋಕ್ಸೊ ಕಾಯ್ದೆಯ ಸೆಕ್ಷನ್‌ 10 ಹಾಗೂ 12ರ ಅಡಿಯಲ್ಲಿ ಶಿಕ್ಷೆ ವಿಧಿಸಿತ್ತು (ಈ ಸೆಕ್ಷನ್‌ಗಳ ಅನ್ವಯ ಕನಿಷ್ಠ ಶಿಕ್ಷೆ ಐದು ವರ್ಷ). ಆದರೆ, ಐಪಿಸಿ ಸೆಕ್ಷನ್‌ 354ಎ (3)ರ ಅಡಿ ಪ್ರಕರಣವನ್ನು ನೋಡಿದ ಹೈಕೋರ್ಟ್‌ನ ಅದೇ ನಾಗ್ಪುರ ಪೀಠ, ಐದು ತಿಂಗಳ ಶಿಕ್ಷೆ ಅನುಭವಿಸಿದ್ದ ಅಪರಾಧಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು. ಈ ತೀರ್ಪೂ ನಮಗೆಲ್ಲ ಬಲು ಸೋಜಿಗ ಉಂಟುಮಾಡಿದೆ.

ನ್ಯಾಯಮೂರ್ತಿಗಳಿಗೆ, ನ್ಯಾಯಾಧೀಶರಿಗೆ ಇಂತಹ ಸೂಕ್ಷ್ಮ ವಿಷಯಗಳಲ್ಲಿ ನಿಯಮಿತ ಅಂತರದಲ್ಲಿ ತರಬೇತಿಯ ಅಗತ್ಯವಿದೆ. ನ್ಯಾಯಾಂಗ ಅಕಾಡೆಮಿ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾಗಬೇಕಿದೆ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಮಕ್ಕಳ ವಿಷಯದಲ್ಲಿ ಇನ್ನಷ್ಟು ಸೂಕ್ಷ್ಮವಾಗಿ ಯೋಚಿಸಿ, ವಿಶ್ಲೇಷಿಸುವಂತೆ ಪ್ರೇರೇಪಿಸಬೇಕಿದೆ. ಮನೋವಿಜ್ಞಾನಿಗಳು, ಮಕ್ಕಳ ವಿಷಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳ ಜತೆಗೂ ಅದು ಕೆಲಸ ಮಾಡಬೇಕಿದೆ. ನಾನು ಮಕ್ಕಳ ಹಕ್ಕುಗಳ ಆಯೋಗದಲ್ಲಿ ಕೆಲಸ ಮಾಡುತ್ತಿದ್ದಾಗ ಬರುತ್ತಿದ್ದ ಪ್ರಕರಣಗಳ ಮೇಲೆ ತೀರ್ಪನ್ನು ತೆಗೆದುಕೊಳ್ಳುವಾಗ ಮಾನಸಿಕ ತಜ್ಞರ ನೆರವನ್ನು ತಪ್ಪದೇ ಪಡೆಯುತ್ತಿದ್ದೆ. ವಿಷಯದ ಕುರಿತು ಹೆಚ್ಚಿನ ಸ್ಪಷ್ಟತೆಗೆ ಇಂತಹ ದಾರಿಗಳು ಇರುವಾಗ ಬಳಕೆಗೆ ಹಿಂಜರಿಕೆಯಾದರೂ ಏಕೆ?

ಮಕ್ಕಳ ಮೇಲೆ ಲೈಂಗಿಕ ಅಪರಾಧ ಪ್ರಕರಣಗಳು ನಡೆದಾಗ ಬಹುತೇಕ ಪಾಲಕರು ಮರ್ಯಾದೆಗೆ ಅಂಜಿ, ಪೊಲೀಸ್‌ ಠಾಣೆಯ ಮೆಟ್ಟಿಲೇರುವುದಿಲ್ಲ. ಅಂತಹ ಪ್ರಕರಣಗಳನ್ನು ಸಮಾಜ ಸಾಧ್ಯವಾದಷ್ಟು ಮುಚ್ಚಿ ಹಾಕಲು ಯತ್ನಿಸುತ್ತದೆ. ಅದರಲ್ಲೂ ಗ್ರಾಮಾಂತರ ಭಾಗದಲ್ಲಿ ಕಾಯ್ದೆಗಳ ಅರಿವೂ ಇರದೆ ಮಕ್ಕಳ ಮೇಲಿನ ಅಪರಾಧವನ್ನು ಮೌನವಾಗಿ ಸಹಿಸಿಕೊಳ್ಳುವುದೇ ಹೆಚ್ಚು. ಯಾರಾದರೂ ಧೈರ್ಯತೋರಿ ದೂರು ನೀಡಲು ಮುಂದೆಬಂದರೂ ವಿಳಂಬ ನ್ಯಾಯದಾನ ಅವರನ್ನು ಇನ್ನಷ್ಟು ಅಧೀರರನ್ನಾಗಿ ಮಾಡುತ್ತದೆ. ಬೇಗ ಪರಿಹಾರ ಸಿಗದೆ ಸಂತ್ರಸ್ತರು ಒದ್ದಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಕಾಯ್ದೆಯ ವಿಶ್ಲೇಷಣೆಯಲ್ಲಿ ಆಗುವ ಇಂತಹ ವ್ಯತ್ಯಾಸಗಳು ಸಮಾಜದ ಮೇಲೆ ಇನ್ನಷ್ಟು ಕೆಟ್ಟ ಪರಿಣಾಮವನ್ನು ಬೀರುತ್ತವೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ, ದೂರು ಬರುವವರೆಗೆ ಕಾಯದೆ ಪೊಲೀಸರೇ ಸಂತ್ರಸ್ತರ ಮನೆಗೆ ತೆರಳಿ ಪ್ರಕರಣ ದಾಖಲಿಸಿಕೊಳ್ಳಬೇಕು ಎನ್ನುತ್ತದೆ ಕಾಯ್ದೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಅಂತಹ ಕ್ರಮ ಕೈಗೊಳ್ಳದಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ನಿಟ್ಟಿನಲ್ಲಿ ಕಾಯ್ದೆ ಕುರಿತು ಎಲ್ಲರಲ್ಲೂ ಅರಿವು ಮೂಡಿಸುವ ಅಗತ್ಯವಿದೆ. ಪೋಕ್ಸೊ ಕಾಯ್ದೆ ಸಂಬಂಧಿ ಪ್ರಕರಣಗಳು ಬಂದಾಗ ತೀರ್ಪು ಕೈಗೊಳ್ಳುವ ಮುನ್ನ ನ್ಯಾಯಮೂರ್ತಿಗಳಿಗೆ ಮನೋವಿಜ್ಞಾನಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳ ತಂಡ ನೆರವು ನೀಡುವ ವ್ಯವಸ್ಥೆಯನ್ನೂ ಕಲ್ಪಿಸಬೇಕಿದೆ.

ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿರುವುದು ಮಕ್ಕಳ ರಕ್ಷಣೆಯಲ್ಲಿ ಕೆಲಸ ಮಾಡುವಂತಹ ಎಲ್ಲರಿಗೂ ಸಮಾಧಾನ ತಂದಿದೆ. ಪೋಕ್ಸೊ ಕಾಯ್ದೆಯಡಿಯಲ್ಲಿ ಬರುವ ಪ್ರಕರಣಗಳ ಕುರಿತು ಇನ್ನಷ್ಟು ಸೂಕ್ಷ್ಮವಾಗಿ ನಿರ್ಧಾರಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್‌ನ ತೀರ್ಪು ಹೊರಬೀಳಲಿ ಎಂದು ಆಶಿಸೋಣ. ಹೌದು, ದೌರ್ಜನ್ಯ ಅನುಭವಿಸಿದ ಕಂದನ ಮುಖ ಕಣ್ಣಮುಂದೆ ಬಂದಾಗಲೆಲ್ಲ, ‘ನನ್ನ ಹತ್ತಿರದೊಂದೇ (ಹಾರೈಕೆ) ಉಳಿದಿಹುದು ಕಂದ’ ಎಂಬ ಬೇಂದ್ರೆ ಅವರ ಕಾವ್ಯದ ಸಾಲು ನೆನಪಾಗುತ್ತದೆ. ಕಣ್ಣು ಹನಿಗೂಡುತ್ತದೆ.

ಲೇಖಕಿ: ಮಕ್ಕಳ ಹಕ್ಕುಗಳ ಹೋರಾಟಗಾರ್ತಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT