ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ವಿಮರ್ಶೆ–ವಿವೇಕದ ‘ಮಹಿಳೆಯರ ಕಾನೂನು’ ಕನ್ನಡಿ

Last Updated 5 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ
ಲೇ: ಸಿ.ಎನ್. ರಾಮಚಂದ್ರನ್
ಪು: 160; ಬೆ: ರೂ. 150
ಪ್ರ: ಅಂಕಿತ ಪುಸ್ತಕ, ಬೆಂಗಳೂರು. ಫೋನ್: 080 – 2661 7100

ಸಿ.ಎನ್‌. ರಾಮಚಂದ್ರನ್‌ ಅವರ ‘ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ’ ಕೃತಿ ಎರಡು ಕಾರಣಗಳಿಂದ ಗಮನಾರ್ಹ. ‘ಮಹಿಳೆಯರಿಂದ ಮಹಿಳೆಯರಿಗಾಗಿ’ ಮಾದರಿಯ ಪರಿಕಲ್ಪನೆಯೊಂದು ಸಾಹಿತ್ಯ ಸೇರಿದಂತೆ ಬಹುತೇಕ ವಲಯಗಳಲ್ಲಿ ಚಾಲ್ತಿಯಲ್ಲಿರುವಾಗ, ಪುರುಷರೊಬ್ಬರು ಮಹಿಳಾ ಕಾನೂನುಗಳ ಬಗ್ಗೆ ಯೋಚಿಸಿರುವುದು ಮೊದಲ ವಿಶೇಷ ಸಂಗತಿ. ಮತ್ತೊಂದು ಕಾರಣ, ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ವಿಮರ್ಶಕರೊಬ್ಬರ ಸಾಮಾಜಿಕ ಎಚ್ಚರ ಮತ್ತು ವಿವೇಕದ ರೂಪದಲ್ಲಿ ಈ ಪುಸ್ತಕ ರೂಪುಗೊಂಡಿರುವುದು.

ಸಿಎನ್ನಾರ್‌ ಅವರು ಕಾನೂನು ಪದವೀಧರರೂ ಹೌದೆನ್ನುವುದಕ್ಕೆ ಸಾಕ್ಷಿರೂಪದಲ್ಲಿರುವ ಈ ಕೃತಿಯನ್ನು, ಅವರ ಒಟ್ಟಾರೆ ಸಾಮಾಜಿಕ ದೃಷ್ಟಿಕೋನದ ಭಾಗವಾಗಿ ಗಮನಿಸಬೇಕು. ವಿಮರ್ಶಾ ಕೃತಿಗಳ ಮೂಲಕ ಸಿಎನ್ನಾರ್‌ ಅವರು ಸಾಹಿತ್ಯಕ್ಷೇತ್ರದಲ್ಲಿ ಪ್ರಸಿದ್ಧರು. ಸಾಹಿತ್ಯ–ಸಾಂಸ್ಕೃತಿಕ ವಿಮರ್ಶೆಯ ಬರಹಗಳ ಬಹುದೊಡ್ಡ ಹರಹಿನಲ್ಲಿ ಅವರ ಅಂಕಣ ಬರಹಗಳು ಹಾಗೂ ಪತ್ರಿಕಾ ಬರಹಗಳು ಹೆಚ್ಚು ಜನರ ಗಮನಸೆಳೆದಂತಿಲ್ಲ. ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿರುವ ಅವರ ಅಂಕಣ–ಪತ್ರಿಕಾ ಬರಹಗಳು ಕೂಡ ಸಾಹಿತ್ಯಿಕ ಬರವಣಿಗೆಯಷ್ಟೇ ಮುಖ್ಯವಾಗಿವೆ. ಆ ಬರಹಗಳನ್ನು ಲೇಖಕನೊಬ್ಬ ಹೊಂದಿರಬೇಕಾದ ಸಾಮಾಜಿಕ ಎಚ್ಚರ ಮತ್ತು ಜವಾಬ್ದಾರಿಯ ರೂಪದಲ್ಲಿ ನೋಡಬಹುದು. ಆ ಕಾಳಜಿ ಮತ್ತು ಎಚ್ಚರದ ಭಾಗವಾಗಿಯೇ ಮಹಿಳಾ ಕಾನೂನು ಪುಸ್ತಕವನ್ನು ಗಮನಿಸಬೇಕಾಗಿದೆ.

ಸಿನ್ನಾರ್‌ ಅವರ ಬರವಣಿಗೆ ಮತ್ತು ಭಾಷಣದ ಬಹು ಮುಖ್ಯ ಲಕ್ಷಣಗಳಲ್ಲೊಂದು ಶಿಸ್ತು. ಅವರ ಮಾತು–ಬರವಣಿಗೆ ಪಠ್ಯದ ಕೇಂದ್ರವನ್ನು ಅನಗತ್ಯವಾಗಿ ಮೀರುವುದಿಲ್ಲ ಹಾಗೂ ಸಮರ್ಪಕ ಟಿಪ್ಪಣಿ–ಉಲ್ಲೇಖಗಳಿಲ್ಲದ ಬಿಡುಬೀಸು ಬರವಣಿಗೆ ಅವರದಲ್ಲ. ಈ ಶಿಸ್ತು ಪ್ರಸಕ್ತ ಕೃತಿಯಲ್ಲಿಯೂ ಇದೆ. ಭಾರತೀಯ ಕಾನೂನು ಸಂಪುಟದಲ್ಲಿ ಮಹಿಳೆಗಿರುವ ಪಾತ್ರದ ಕುರಿತಂತೆ ಸಾಕಷ್ಟು ಮಾಹಿತಿ ಇಲ್ಲಿದೆ. ಕಾನೂನುಗಳನ್ನು ಉಲ್ಲೇಖಿಸುವಾಗ, ಅದಕ್ಕೆ ಸಂಬಂಧಿಸಿದ ಪ್ರಸಿದ್ಧ ಪ್ರಕರಣಗಳ ಉದಾಹರಣೆಗಳನ್ನು ಲೇಖಕರು ನೀಡಿದ್ದಾರೆ. ಸಮರ್‌ ಘೋಷ್‌ ವರ್ಸಸ್‌ ಜಯಾ ಘೋಷ್‌ ಪ್ರಕರಣ, ಮಥುರಾ ಮೊಕದ್ದಮೆ, ಭಂವರಿ ದೇವಿ ಪ್ರಕರಣ, ನಿರ್ಭಯಾ ಪ್ರಕರಣ, ರೂಪನ್‌ ಬಜಾಜ್‌ ಪ್ರಕರಣ – ಇಂಥ ಪ್ರಕರಣಗಳ ಮೂಲಕ ಭಾರತೀಯ ಸಮಾಜದ ಒಳಸುಳಿಗಳ ಅವಲೋಕನ ಸಾಧ್ಯವಿದೆ. ಕಾನೂನಿನ ಸಾಧ್ಯತೆಗಳನ್ನು ಮನದಟ್ಟು ಮಾಡಲಿಕ್ಕೆ, ನಿರ್ದಿಷ್ಟ ಕಾನೂನಿಗೆ ಸಂಬಂಧಿಸಿದ ಮಹತ್ವದ ಪ್ರಕರಣಗಳನ್ನು ಉದಾಹರಣೆ ರೂಪದಲ್ಲಿ ಬಳಸಿರುವುದರಿಂದಾಗಿ ಸಿಎನ್ನಾರ್ ಅವರ ಕೃತಿ, ಪೀನಲ್‌ ಕೋಡ್‌ಗಳ ಡೈರೆಕ್ಟರಿ ಆಗುವ ಅಪಾಯ ತಪ್ಪಿಸಿಕೊಂಡಿದೆ; ಕುತೂಹಲಕರ ಓದಿನ ಸ್ವರೂಪ ಪಡೆದುಕೊಂಡಿದೆ.

ಮಹಿಳಾ ಕಾನೂನುಗಳ ಬಗ್ಗೆ ಬರೆಯುವಾಗ, ಆ ಕಾನೂನುಗಳ ದುರುಪಯೋಗದ ಸಾಧ್ಯತೆ ಇರುವುದನ್ನು ಲೇಖಕರು ಮರೆತಿಲ್ಲ. ನಿಶಾ ಶರ್ಮ ಪ್ರಕರಣದಲ್ಲಿ, ನ್ಯಾಯಾಲಯ ಮತ್ತು ಸಮಾಜ ಯಾಮಾರಿದ್ದು ಹೇಗೆ ಎನ್ನುವುದರ ವಿವರಗಳು ಕೃತಿಯಲ್ಲಿವೆ.

ಮಹಿಳಾ ಕಾನೂನಿನ ಕುರಿತ ಮಾತುಗಳೆಂದರೆ, ಅವು ಮಹಿಳಾ ಸಮಸ್ಯೆಗಳ ಪ್ರಸ್ತಾಪವೇ ಆಗಿವೆ. ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವುಗಳು, ವಿಚ್ಛೇದನ, ಮರ್ಯಾದಾ ಹತ್ಯೆ, ಕೌಟುಂಬಿಕ ದೌರ್ಜನ್ಯ, ಹೆಣ್ಣು ಭ್ರೂಣಹತ್ಯೆ, ಅತ್ಯಾಚಾರ – ಇವುಗಳಿಗೆ ಸಂಬಂಧಿಸಿದ ಕಾನೂನುಗಳ ಸ್ವರೂಪವೇ ಈ ಸಮಸ್ಯೆಗಳು ಸಮಾಜವನ್ನು ಆವರಿಸಿಕೊಂಡಿರುವ ಬಗೆಯನ್ನು ಹೇಳುವಂತಿದೆ. ಮಹಿಳಾ ಕಾನೂನುಗಳು ಕಾಲದಿಂದ ಕಾಲಕ್ಕೆ ಪರಿಷ್ಕಾರಗೊಳ್ಳುತ್ತಿರುವುದು ಅಪರಾಧ ಪ್ರಕರಣಗಳು ಸಂಕೀರ್ಣವಾಗುತ್ತಿರುವುದನ್ನು ಸೂಚಿಸುವಂತಿದೆ. ಇಂಥ ಕಾನೂನುಗಳ ಬಗ್ಗೆ ಪ್ರಸ್ತಾಪಿಸುವಾಗ, ನಮ್ಮ ನಡುವೆ ವಿವಿಧ ರೂಪಗಳಲ್ಲಿ ಚಾಲ್ತಿಯಲ್ಲಿರುವ ‘ಮಹಿಳಾ ದೌರ್ಜನ್ಯ’ ಅಯಾಚಿತವಾಗಿ ನೆನಪಾಗುವುದರಿಂದ ಮಾತು–ಬರವಣಿಗೆ ಭಾವುಕವಾಗುವ ಸಾಧ್ಯತೆಯಿದೆ. ಆದರೆ, ಸಿಎನ್ನಾರ್‌‌ ಅವರು ಕೃತಿಯಲ್ಲೆಲ್ಲೂ ಸಂಯಮಗೆಡುವುದಿಲ್ಲ; ವಿಷಯವನ್ನು ಲಂಬಿಸದೆ, ಯಾವುದನ್ನು ಎಷ್ಟು ಬೇಕೊ ಅಷ್ಟು ಹೇಳಿ ಮುಂದಿನ ವಿಷಯಕ್ಕೆ ಸಾಗುವ ಶೈಲಿ ಕೂಡ ಲೇಖಕರ ಬರವಣಿಗೆಯ ಶಿಸ್ತಿನ ಮಾದರಿಯಂತಿದೆ.

ಕಾನೂನುಗಳ ಪರಿಚಯ–ವಿಶ್ಲೇಷಣೆಯ ಸಂದರ್ಭದಲ್ಲಿ ಸಾಮಾಜಿಕ ಸಂರಚನೆಯ ಬಗೆಗೂ ಸಿಎನ್ನಾರ್‌ ಸೂಚ್ಯವಾಗಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಾರೆ. ಮರ್ಯಾದಾಹತ್ಯೆಯ ಬಗ್ಗೆ ಬರೆಯುತ್ತಾ, ‘ಅದನ್ನು ಮರ್ಯಾದೆಗೇಡು ಹತ್ಯೆ ಎನ್ನುವುದೇ ಅರ್ಥಪೂರ್ಣ’ ಎನ್ನುತ್ತಾರೆ. ಸ್ತ್ರೀಯರ ಹಕ್ಕು ಮತ್ತು ಸ್ಥಾನಮಾನದ ಬಗ್ಗೆ ಭಾರತೀಯ ಸಮಾಜಕ್ಕಿರುವ ಗೊಂದಲದ ಬಗ್ಗೆ ಮಾತನಾಡುತ್ತ, ‘ತಾಯಿಯಾಗಿ ಕೊಡುವ ಗೌರವ ಮತ್ತು ಪತ್ನಿಯಾಗಿ ಕಾಣುವ ಪ್ರೀತಿ ಇವೆರಡರ ನಡುವೆ ಒಂದು ಆರೋಗ್ಯಕರ ಸಮತೋಲನವನ್ನು ಕಂಡುಕೊಳ್ಳಲು ಭಾರತೀಯ ಸಮಾಜಕ್ಕೆ ಇನ್ನೂ ಸಾಧ್ಯವಾಗಿಲ್ಲವೆನ್ನುವುದು ಸ್ಪಷ್ಟ’ ಎನ್ನುವ ನಿಲುವಿಗೆ ಬರುತ್ತಾರೆ. ಇಂಥ ವಿಶ್ಲೇಷಣೆಗಳಿಂದಾಗಿಯೇ ಈ ಕೃತಿ ಈಗಾಗಲೇ ಬಂದಿರುವ ಮಹಿಳಾ ಕಾನೂನು ಕೃತಿಗಳಿಗಿಂತ ಭಿನ್ನವಾಗಿದೆ.

ವಿವಿಧ ಕ್ಷೇತ್ರಗಳು ಹಾಗೂ ಧರ್ಮಗಳ ನೆಲೆಗಟ್ಟಿನಲ್ಲಿ ಮಹಿಳಾ ಕಾನೂನುಗಳನ್ನು ವಿಶ್ಲೇಷಿಸುವ ಈ ಕೃತಿ, ಮಹಿಳೆಯರ ಹಕ್ಕುಗಳ ಬಗ್ಗೆಯೂ ಗಮನಸೆಳೆಯುತ್ತದೆ. ರಾಷ್ಟ್ರೀಯ ಮತ್ತು ಪ್ರಾಂತೀಯ ಮಹಿಳಾ ಸಂಸ್ಥೆಗಳ ಬಗ್ಗೆ ನೀಡಿರುವ ಮಾಹಿತಿ ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಿದೆ.

‘ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ’ ಎಲ್ಲ ಹೆಣ್ಣುಮಕ್ಕಳೂ ಓದಬೇಕಾದ ಕೃತಿ. ಸಮಸ್ಯೆ ತಲೆದೋರುವವರೆಗೂ ಕಾನೂನಿನ ಸಾಧ್ಯತೆಗಳ ಬಗ್ಗೆ ಯೋಚಿಸಲು ಹೋಗುವವರು ನಮ್ಮಲ್ಲಿ ಕಡಿಮೆ. ಆದರೆ, ಸಮಸ್ಯೆಗಳ ಕಾರಣದಿಂದಾಗಿ ಕಾನೂನನ್ನು ತಿಳಿದುಕೊಳ್ಳುವುದಕ್ಕಿಂತಲೂ, ಅರಿವಿನ ರೂಪದಲ್ಲಿ ತಿಳಿಯುವುದು ಬಹುಮುಖ್ಯವಾಗಿದೆ. ಆ ಅರಿವು ಮಹಿಳೆಯರ ಬದುಕಿನಲ್ಲಿನ ಅನೇಕ ಗೊಂದಲಗಳನ್ನು ಬಗೆಹರಿಸಬಲ್ಲದು ಹಾಗೂ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬಲ್ಲದು.

ಮಹಿಳಾ ಕಾನೂನು ಎಂದಮಾತ್ರಕ್ಕೆ ಇದರ ಓದುಗರೂ ಮಹಿಳೆಯರೇ ಆಗಿರಬೇಕೆಂದಿಲ್ಲ. ಇಂಥ ಪುಸ್ತಕಗಳ ಓದು ಗಂಡಸರಿಗೂ ಅಗತ್ಯ; ಕಾನೂನಿನ ಅರಿವಿನೊಂದಿಗೆ, ಮಹಿಳಾ ದೌರ್ಜನ್ಯದ ಸಂಕೀರ್ಣ ಸ್ವರೂಪವನ್ನು ತಿಳಿದುಕೊಳ್ಳಲಿಕ್ಕೆ ಉಪಯುಕ್ತ. ಎಲ್ಲ ಗಂಡಸರೂ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಒಂದಲ್ಲಾ ಒಂದು ಬಗೆಯಲ್ಲಿ ಮಹಿಳಾ ದೌರ್ಜನ್ಯದ ಭಾಗವಾಗಿರುತ್ತಾರೆ ಇಲ್ಲವೇ ಬೆಂಬಲಿಸಿರುತ್ತಾರೆ ಎನ್ನುವುದು ಮನವರಿಕೆಯಾಗಲು ಕೂಡ ಇಂಥ ಕೃತಿಗಳು ಪ್ರೇರಣೆಯಾಗಬಲ್ಲವು. ಮಹಿಳಾ ಓದುಗರಲ್ಲಿ ಅರಿವು ಮೂಡಿಸುವುದಕ್ಕಿಂತಲೂ ಮುಖ್ಯವಾಗಿ, ಪುರುಷ ಓದುಗರಲ್ಲಿ ತಳಮಳ ಹಾಗೂ ಪಾಪಪ್ರಜ್ಞೆಯನ್ನು ಹುಟ್ಟಿಸಬಲ್ಲ ಶಕ್ತಿ ಸಿಎನ್ನಾರ್‌ ಅವರ ಕೃತಿಗಿದೆ. ಅದು ಈ ಕೃತಿಯ ಯಶಸ್ಸೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT