ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ನನ್ನ ಪ್ರೀತಿಯ ಭೀಮ...

Last Updated 3 ಜುಲೈ 2021, 19:30 IST
ಅಕ್ಷರ ಗಾತ್ರ

ನಿನ್ನ ಪ್ರೀತಿಯ ಮಗ ಸುತಸೋಮನನ್ನು ಕಳೆದುಕೊಂಡು ಬಹಳ ದುಃಖದಲ್ಲಿರುವೆಯೆಂದು ತಿಳಿಯಿತು. ಛೆ… ಹೀಗಾಗಬಾರದಿತ್ತು. ನಿನಗೆ ಮತ್ತು ಪಾಂಚಾಲಿಗೆ, ನನ್ನ ತೀವ್ರ ಸಂತಾಪಗಳು. ಬಹುಶಃ… ಪುತ್ರಶೋಕ ನಿನಗೆ ಹೊಸ ಅನುಭವ. ಆದರೆ, ನನಗೆ ಅದರ ಅನುಭವ ಇನ್ನೂ ಹಸಿರಾಗಿದೆ. ನನ್ನ ಮುದ್ದು ಮಗನ ರಕ್ತದಲ್ಲಿ ತೋಯ್ದ ದೇಹದ ದೃಶ್ಯ ಇನ್ನೂ ಕಣ್ಣಲ್ಲಿ ಉಳಿದುಕೊಂಡಿದೆ.

ಅಂದು, ಯುದ್ಧದ ಮೂರನೇ ದಿನ ಸಂಜೆ. ಘಟೋತ್ಕಚನ ಹೆಣ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಅನಾಥವಾಗಿ ಬಿದ್ದಿದ್ದಾಗ, ಗಮನಿಸುವವರೂ ಇರಲಿಲ್ಲ. ನಿನಗೆ ತಮ್ಮ ಅರ್ಜುನನ ಪ್ರಾಣ ಉಳಿಯಿತು ಎನ್ನುವ ಸಮಾಧಾನವಷ್ಟೇ ಸಾಕಿತ್ತು. ಮಗನ ಕಳೇಬರಕ್ಕೆ ಗೌರವ ಸಲ್ಲಿಸಬೇಕೆನ್ನುವ ಸೌಜನ್ಯವೂ ಇರಲಿಲ್ಲ. ಅಭಿಮನ್ಯು ಸತ್ತಾಗ ಅವನಪ್ಪ ಅರ್ಜುನ ಆಕ್ರೋಶದಿಂದ ಸೇಡಿನ ಮಾತಾಡಿದ. ಸುಭದ್ರೆಯ ಬಿಗಿದಪ್ಪಿ ಸಂತೈಸಿದ. ಮನೆಯವರೆಲ್ಲಾ ಕೂಡಿ ಶೋಕ ವ್ಯಕ್ತಪಡಿಸಿದಿರಿ. ಆದರೆ, ನನ್ನ ಮಗ… ನೀವೇನೂ ಮಾಡದಿದ್ದರೂ, ನಿಮಗಾಗಿ ಸತ್ತ. ನಿನ್ನ ತಮ್ಮನ ಜೀವ ಉಳಿಸಲು ಸತ್ತ. ನೀನು ಒಂದು ಹನಿ ಕಣ್ಣೀರೂ ಹಾಕಲಿಲ್ಲ. ಕುರು ವಂಶದ ಹಿರಿಮೊಮ್ಮಗ, ಯಾವುದೇ ರಾಜಮರ್ಯಾದೆ ಸಿಗದೇ, ಅನಾಥ ಹೆಣವಾದ.

ದೂತನೊಬ್ಬ ಏದುಸಿರು ಬಿಡುತ್ತಾ ಬಂದು ವಿಷಯ ಮುಟ್ಟಿಸಿದ್ದ.

‘ಅಮ್ಮ, ಘಟೋತ್ಕಚ ವೀರ ಮರಣವನ್ನಪ್ಪಿದ’

‍‘ಅವನಪ್ಪನೆಲ್ಲಿ?’

‘ಅವರಾರು ಇಲ್ಲಮ್ಮ. ನಮ್ಮ ಕಡೆಯ ಇಬ್ಬರನ್ನು ನಿಲ್ಲಿಸಿ ಬಂದಿದ್ದೇನಮ್ಮಾ’

ಕಾಲು ನಿಲ್ಲದೆ, ಓಡೋಡಿ ಹೋಗಿ ನೋಡಿದೆ. ಕರ್ಣ ಬಿಟ್ಟ ಶಕ್ತಿ ಅಸ್ತ್ರ ಇನ್ನೂ ಎದೆಯಲ್ಲಿ ಸಿಕ್ಕಿಕೊಂಡಿತ್ತು. ಸುತ್ತಲೂ ರಕ್ತ ಚಿಮ್ಮಿ, ತೊಟ್ಟಿದ್ದ ಹಸಿರು ನಿಲುವಂಗಿಯೆಲ್ಲಾ ಕೆಂಪಾಗಿತ್ತು. ಮುಖದಲ್ಲಿ ಮಾತ್ರ ಅದೇ ಕಳೆ, ಶಾಂತಿ, ತೃಪ್ತಿ ಹೆಪ್ಪುಕಟ್ಟಿತ್ತು. ‘ಮಗನೆ, ನನ್ನ ಕ್ಷಮಿಸು. ನಾನೇ ನಿನ್ನ ಬಲಿಕೊಟ್ಟೆ.’ ಗಟ್ಟಿಯಾಗಿ ಅವನನ್ನು ಹಿಡಿದುಕೊಂಡು ಅತ್ತುಬಿಟ್ಟೆ. ತುಂಬಾ ವರುಷಗಳಿಂದ ಒಳಗೆ ಒತ್ತಿಹಿಡಿದಿದ್ದ ಮೌನ, ಕಣ್ಣೀರಿನ ಕಟ್ಟೆಯಾಗಿ ಹೊರ ಚಿಮ್ಮಿತು. ಸ್ವಲ್ಪ ಸಮಾಧಾನದ ನಂತರ ನಮ್ಮವರಲ್ಲಿ ವಿಚಾರಿಸಿದೆ.

‘ಅಮ್ಮ, ನಿನ್ನೆ ರಾತ್ರಿ ಕೃಷ್ಣ ಮತ್ತು ಭೀಮ ನಮ್ಮ ಡೇರೆಗೆ ಬಂದಿದ್ದರು. ಕೃಷ್ಣ ಹೇಳಿದ- ‘ನಾಳೆ ಅರ್ಜುನನ ರಥದ ಹಿಂದೆ ನೀನು ಬೆಂಗಾವಲಿಗೆ ನಿಂತಿರು. ಎದುರಾಳಿ ಕರ್ಣ. ಅದಕ್ಕಾಗಿ, ನಿನ್ನ ಸಹಾಯ ಬೇಕು ಅರ್ಜುನನಿಗೆ.’ ಭೀಮಾ ಬೆನ್ನು ತಟ್ಟಿ ಹೋದ.’

‘ಇವರ ಮಾತು ಕೇಳಿ ಘಟೋತ್ಕಚನಿಗೆ ರೋಮಾಂಚನವಾಯಿತು. ಕೃಷ್ಣ ಬಿನ್ನವಿಸುದೆಂದರೇನು... ಅದೂ, ಚಿಕ್ಕಪ್ಪ ಅರ್ಜುನನಿಗೆ ಬೆಂಗಾವಲು... ಎಂತಹ ಮಹತ್ವದ ಜವಾಬ್ದಾರಿ... ಕಲಿಯುವುದಕ್ಕೆ ಒಳ್ಳೆಯ ಅವಕಾಶ… ಅಂತೂ ನಾನು ಈ ಮನೆಯ ಒಬ್ಬ ಸದಸ್ಯನಾದೆ... ಅಮ್ಮನಿಗೆ ಹೆಮ್ಮೆಯೆನಿಸಬಹುದು… ಯುದ್ಧ ಮುಗಿದ ಮೇಲೆ ಹೇಳಬೇಕು…’

‘ಘಟೋತ್ಕಚ ಹಾಗೆಯೇ ನಿದ್ರೆ ಹೋದ. ಆದರೆ, ಇದೆಲ್ಲಾ ಅವರು ಹೆಣೆದ ಜಾಲವಾಗಿತ್ತು. ಅರ್ಜುನನನ್ನು ಉಳಿಸಲು, ಘಟೋತ್ಕಚ ಬಲಿಯಾಗಬೇಕಿತ್ತು. ಅವರಂದುಕೊಂಡಂತೆ, ಕರ್ಣ, ಇಂದ್ರ ದಯಪಾಲಿಸಿದ್ದ ಪ್ರಬಲ ಶಕ್ತಿ ಅಸ್ತ್ರವನ್ನು ಅರ್ಜುನನ ಮೇಲೆ ಪ್ರಯೋಗಿಸಿದ. ಯೋಜಿಸಿದ್ದಂತೆ, ರಥದ ಧ್ವಜದ ಮೇಲಿದ್ದ ಹನುಮಂತ, ಕೃಷ್ಣನ ಆಜ್ಞೆಯಂತೆ ತಕ್ಷಣ ರಥವನ್ನು ಕೆಳಗೆ ಬಲವಾಗಿ ಅದುಮಿದ. ರಥ, ನೆಲದಲ್ಲಿ ಹುದುಗಿ ಹೋಯಿತು. ಶಕ್ತಿಅಸ್ತ್ರ, ರಥದ ಹಿಂದಿದ್ದ ಘಟೋತ್ಕಚನ ಎದೆಗೆ ನೇರವಾಗಿ ನಾಟಿ, ಅವನಲ್ಲಿಯೇ ಕುಸಿದು ಬಿದ್ದ. ಕರ್ಣ ತನ್ನ ಕೊನೆಯ ಅಸ್ತ್ರ ಪ್ರಯೋಗಿಸಿಯಾಗಿತ್ತು. ಅರ್ಜುನ ಬದುಕಿ ಉಳಿದ. ಎಲ್ಲರೂ ಬಂದು ಅರ್ಜುನನ ಅಭಿನಂದಿಸಿದರು, ಭೀಮನೂ ಸೇರಿ. ಘಟೋತ್ಕಚ ನರಳುತ್ತಾ ಅಪ್ಪನತ್ತ ಕೈಚಾಚಿದ. ಭೀಮ ಮಾತ್ರ ಅವನತ್ತ ಕಣ್ಣಾಡಿಸದೆ ಅರ್ಜುನನೊಂದಿಗೆ ನಡೆದ. ನೋಡುವ ಧೈರ್ಯವಿರಲಿಲ್ಲವೆನಿಸುತ್ತದೆ, ಪಾಪ ಪ್ರಜ್ಞೆಯಿಂದ. ದಿನದ ಯುದ್ಧ ಮುಗಿದು, ಎಲ್ಲಾ ಡೇರೆಯತ್ತ ಹೊರಟರು, ನಮ್ಮನ್ನು ಬಿಟ್ಟು. ಒಟ್ಟಿನಲ್ಲಿ, ಈ ಪಾಂಡವರು ಮಹಾ ಕ್ರೂರ್ರಿಗಳಮ್ಮ.’

ಅಂತೂ, ಇಷ್ಟು ವರ್ಷಗಳ ನಂತರ ನಾನಿಂದು ಒಪ್ಪಿಕೊಳ್ಳಬೇಕಾದ ಕಟು ಸತ್ಯವೆಂದರೆ, ನಿನಗೆ ನನ್ನ ಮೇಲೆ ಎಳ್ಳಷ್ಟೂ ಪ್ರೀತಿ ಹುಟ್ಟಲಿಲ್ಲ… ಆದರೆ, ಘಟೋತ್ಕಚ ನಿನ್ನ ರಕ್ತ ಹಂಚಿಕೊಂಡವನು. ಅವನು ಸಾಯುವವರೆಗೂ ನಾನೊಬ್ಬಳೇ ಸಲಹಿದೆ. ಆದರವನು ನಿನ್ನ ಪ್ರೀತಿಗಾಗಿ ಸದಾ ಹಂಬಲಿಸಿದ. ನೀನೆಂದೂ ತೋರಿಸದ ಪ್ರೀತಿ, ಅವನ ಕೊನೆಯ ಕ್ಷಣದಲ್ಲಾದರೂ ತೋರಿಸಿದ್ದರೆ, ನೆಮ್ಮದಿಯಿಂದ ಪ್ರಾಣಬಿಡುತ್ತಿದ್ದ, ನನ್ನ ಕಂದ...

ಹೀಗೆ ಹೇಳುತ್ತಾ ಹೋದರೆ, ಮಹಾ ಕಾವ್ಯವೇ ಆದೀತು. ಕುಳಿತು ಕೇಳಲೂ, ಸ್ವಲ್ಪ ಮನಃಸಾಕ್ಷಿ ಬೇಕು. ಆದರೆ, ನಿನ್ನಲ್ಲಿ ನಾನದನ್ನು ಕಾಣಲೇ ಇಲ್ಲ. ನಿನ್ನ ನೋಡಿದ ಆ ದಿನದಿಂದ, ಇಂದಿನವರೆಗೆ ಅದರ ಹುಡುಕಾಟದಲ್ಲಿದ್ದೆ. ಒಮ್ಮೆಯಾದರೂ ನಿನ್ನ ಅಂತಃಕರಣ ಕಾಡಿ, ಬಂದು ಮಾತನಾಡಿಸುವೆನೆಂದು...

ಆ ರಾತ್ರಿ ಇನ್ನೂ ಸ್ಪಷ್ಟವಾಗಿ ನೆನಪಿದೆ ನನಗೆ...ಹುಣ್ಣಿಮೆಯ ಬೆಳದಿಂಗಳು, ದಟ್ಟ ಹಸಿರು ಚಪ್ಪರದ ನಡುವೆ ತೂರಿ ತೂರಿ ಬೆಳಕು ಭೂಮಿಯ ಸ್ಪರ್ಶಿಸಿತ್ತು. ನಾನು ಮತ್ತು ಅಣ್ಣ ಹಿಡಂಬ, ಹೊರಗಿನ ಪ್ರಕೃತಿಯ ಮೌನದ ಸೌಂದರ್ಯ ಆಸ್ವಾದಿಸುತ್ತಾ, ಗುಹೆಯ ಅಂಚಿನಲ್ಲಿ ನಿದ್ರೆಗೆ ಜಾರುತ್ತಿದ್ದೆವು. ನನಗೇಕೋ ಬಾಯಾರಿಕೆಯೆನಿಸಿತು. ಗಂಟಲು ಒಣಗಿದಂತೆ ಬಾಸವಾಯಿತು. ಕುಡಿಯಲು ನೀರು ಇರಲಿಲ್ಲ. ಪಕ್ಕದಲ್ಲಿ ಹರಿಯುವ ತೊರೆಯಲ್ಲಿ ಒಂದಿಷ್ಟು ಬೊಗಸೆ ನೀರು ಕುಡಿದು ಬರುತ್ತೇನೆ ಎಂದು ಹೊರಟೆ. ತಿರುಗಿ ನೋಡಿದರೆ, ಅಣ್ಣ ಆಗಲೇ ನಿದ್ರೆಗೆ ಜಾರಿದಂತೆ ಕಂಡುಬಂತು. ಎಚ್ಚರಿಸುವುದು ಬೇಡವೆಂದುಕೊಂಡೆ. ನಿದ್ರೆ ಕಣ್ಣಲ್ಲೂ ನಿರಾಳವಾಗಿ ನಡೆದಾಡುವ ದಾರಿಯದು. ಮನುಷ್ಯ ಲೋಕದಂತಲ್ಲ, ಇಲ್ಲಿ ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡಬಹುದು. ನಾವು ಕೆಣಕದಿದ್ದರೆ, ಪ್ರಾಣಿಗಳು ನಮ್ಮ ತಂಟೆಗೆ ಬರುವುದಿಲ್ಲ. ಕೇವಲ ಹೊಟ್ಟೆ ತುಂಬಿದರೆ ನಿರಾಳವಾಗಿರುತ್ತವೆ. ನಡೆಯುತ್ತಾ, ತೊರೆಯ ಹತ್ತಿರ ಬಂದೆ. ಅಲ್ಲಿದ್ದ ದೊಡ್ಡ ಆಲದ ಮರದ ಕೆಳಗೆ, ಒಂದಷ್ಟು ಮನುಷ್ಯರು ಮಲಗಿದ್ದಂತೆ ಕಂಡಿತು.

ಯಾರಿರಬಹುದು ... ಈ ಕಾಡಿನಲ್ಲಿ, ಅದೂ ರಾತ್ರಿ ಹೊತ್ತಿನಲ್ಲಿ... ನಮ್ಮ ಗುಂಪಿನವರೆಲ್ಲಾ ಗುಹೆಯ ಒಳಗೆ ಮಲಗಿದ್ದಾರೆ. ಸಾಮಾನ್ಯವಾಗಿ, ನಾಡಿನ ಮನುಷ್ಯರು ಹಗಲು ಹೊತ್ತಿನಲ್ಲಿ ಕಟ್ಟಿಗೆ ಆರಿಸಲು ಕಾಡಿನ ಅಂಚಿನಲ್ಲಿ ಕಾಣಿಸಿಕೊಳ್ಳುವುದು ಇದೆ. ಆದರೆ, ದಟ್ಟ ಕಾಡಿನಲ್ಲಿ ಇದೆ ಮೊದಲು. ಹತ್ತಿರ ಹೋದಂತೆ... ಅವರಲ್ಲಿ ಒಬ್ಬ ಮಾತ್ರ ಕುಳಿತಂತೆ ಕಾಣಿಸಿತು. ಬಹುಶಃ, ಉಳಿದವರ ಕಾವಲು ಕಾಯುತ್ತಿರಬೇಕು. ಹೆಜ್ಜೆ ಮುಂದಿಟ್ಟಂತೆ, ಅವನ ಚಹರೆ ಸ್ಪಷ್ಟವಾಗಿ ಕಾಣಿಸತೊಡಗಿತು. ಯುವಕ... ಅಜಾನುಬಾಹು…

ಇಷ್ಟೊಂದು ಸುಂದರ ಬೆಳ್ಳಗಿನ ಗಂಡಸನ್ನು ನೋಡಿದ್ದೇ ಮೊದಲ ಸಲ. ಆ ಕ್ಷಣದಲ್ಲಿಯೇ ನಿನ್ನ ಸೆಳೆತ ಆರಂಭವಾಯಿತು. ನಮ್ಮ ಕಾಡಿನ ಗಂಡಸರು ಕಟ್ಟು ಮಸ್ತಾಗಿರುತ್ತಾರೆ, ನಿಜ. ಆದರೆ, ಇಷ್ಟೊಂದು ಬೆಳ್ಳಗಿರುವುದಿಲ್ಲ. ಆ ರಾತ್ರಿ ನನಗೆ ನಿನ್ನಲ್ಲಿ ಯಾಕೆ ಪ್ರೇಮಾಂಕುರವಾಯಿತೋ, ಇನ್ನೂ ಉತ್ತರ ಸಿಕ್ಕಿಲ್ಲ. ನಿನ್ನ ಬಣ್ಣವೋ? ಬಲಾಢ್ಯ ದೇಹವೋ? ಅಥವಾ, ಮಲಗಿದ್ದ ನಿನ್ನ ಸಹೋದರರು ಕಾಣಿಸದೆ, ನೀನೊಬ್ಬನೇ ಕಂಡಿದ್ದೋ? ಅಂತೂ, ನಿನ್ನ ನೋಡಿದಾಗ ಆಗ ತಾನೇ ನನ್ನಲ್ಲಿ ಅರಳುತ್ತಿರುವ ಹೆಣ್ತನಕ್ಕೆ ಸ್ಪಂದನೆ ಸಿಕ್ಕಂತಾಯಿತು. ಇದೊಂದು ಹೊಸ ಅನುಭವ. ನೀರು ಕುಡಿಯುವುದೂ ಮರೆತು ಹೋಯಿತು. ನಿನ್ನೆ ನೋಡುತ್ತಾ ಹಾಗೆಯೇ ನಿಂತೆ ... ನನ್ನ ಕಡುಕಪ್ಪು ದೇಹ ನೋಡಿ ನಿನಗೆ ದಿಗಿಲು ಹುಟ್ಟಿತೆಂದು ಕಾಣಿಸುತ್ತೆ. ಅಲ್ಲಿಂದಲೇ ನನ್ನತ್ತ ಧಾವಿಸಿ ಬಂದೆ, ಮೃಗವನ್ನು ಅಟ್ಟಿಸಿಕೊಂಡು ಬಂದಂತೆ. ಯಾವುದಕ್ಕೂ ಅಂಜದ ನಾನು, ಜೀವನದ ಮೊದಲ ಬಾರಿ ಬೆಚ್ಚಿದೆ. ಮುಖಕ್ಕೆ ಕೈ ಅಡ್ಡಹಿಡಿದು ಕಿರುಚಿದೆ.

‘ನಿಲ್ಲು... ನನ್ನಿಂದ ನಿನಗೆ ಅಪಾಯವಿಲ್ಲ. ನೀನು ನನಗೆ ಬಹಳ ಇಷ್ಟವಾಗಿ ಬಿಟ್ಟೆ. ಅದಕ್ಕೆ ನೋಡುತ್ತಾ ನಿಂತೆಯಷ್ಟೇ. ದಯವಿಟ್ಟು, ನಿನ್ನ ಗುಂಪಿನೊಳಗೆ ನನ್ನ ಸೇರಿಸಿಕೋ. ನಿನ್ನ ಜೊತೆ ಬೇಕು ನನಗೆ.’

ನಾನು ಜೋರಾಗಿ ಅಳತೊಡಗಿದೆ. ಕೈಯಲ್ಲಿ ಹಿಡಿದಿದ್ದ ಈಟಿ ಕೆಳಗೆ ಹಾಕಿ, ನೀನು ನನ್ನೇ ದಿಟ್ಟಿಸಿ ನೋಡಿದೆ. ಆ ನಿಷ್ಟುರ ಮುಖದಲ್ಲಿ ಯಾವ ಭಾವನೆಯೂ ಕಾಣಲಿಲ್ಲ. ಆದರೆ, ನಿನ್ನ ಆ ಸಿಡುಕಿನ ನೋಟವೇ ನನ್ನ ಹುಚ್ಚು ಹಿಡಿಸಿತು. ನೀನು ನನಗೆ ಬೇಕೇ ಬೇಕೆನಿಸಿತು. ಇದಕ್ಕೆ ತೆಲೆಕೆಡಿಸಿಕೊಳ್ಳದೆ ನೀನು ಬೆನ್ನು ತಿರುಗಿಸಿ, ಸಂಗಡಿಗರಲ್ಲಿಗೆ ಹೋದೆ. ನಾನು ಮಾತ್ರ ಅಲ್ಲಿಂದ ಕದಲಲಿಲ್ಲ. ನಿನ್ನ ಎದುರಾಗಿ ಕೂತೆ. ನೀನು ಮಾತ್ರ ಸಂಬಂಧವೇ ಇಲ್ಲವೆಂಬಂತೆ, ಸುತ್ತ ಮಲಗಿದ್ದ ಸಂಗಡಿಗರ ಕಾವಲು ಮುಂದುವರಿಸಿದೆ.

ಬಹುಶಃ ಅಣ್ಣನಿಗೆ ಎಚ್ಚರವಾಗಿ, ಪಕ್ಕದಲ್ಲಿ ನಾನಿಲ್ಲದ್ದು ನೋಡಿ ಗಾಬರಿಯಾಗಿರಬೇಕು. ಹುಡುಕುತ್ತಾ ಬಂದ. ದೂರದಲ್ಲಿ ನಿನ್ನ ನೋಡಿದವನು, ನಾನು ಏನೋ ತೊಂದರೆಯಲ್ಲಿದ್ದೇನೆ ಅಂದುಕೊಂಡಿರಬೇಕು... ನಾನು ಬಾಯಿ ತೆರೆಯುವುದರ ಮೊದಲೇ ನಿನ್ನತ್ತ ಧಾವಿಸಿದ. ಅವನಿಗೆ ಈ ಕಾಡಿನ ಮೇಲೆ ಬಹಳ ಪ್ರೀತಿ. ಅದರೊಳಗೆ ನಾಡಿನ ಮನುಷ್ಯರ ಸುಳಿವು ಇಷ್ಟಪಡುವುದಿಲ್ಲ. ಅವನ ಉಸ್ತುವಾರಿಯಿಂದಾಗಿಯೇ, ಮನುಷ್ಯರ ವಾಸನೆ ಇಲ್ಲದೆ, ಪ್ರಾಣಿಗಳೆಲ್ಲಾ ನಿರಾಳವಾಗಿದ್ದವು. ಈಗ, ನಾಡಿನ ಜನರನ್ನು, ಅದೂ… ರಾತ್ರಿ ಹೊತ್ತಿನಲ್ಲಿ ನೋಡಿ ಕೋಪ ಬಂದಿರಬೇಕು. ಆದರೆ, ಎದುರಿಗಿರುವವನು ಬಲಶಾಲಿ ಎಂಬುದ ಮರೆತು ಮುನ್ನುಗ್ಗಿದ. ನಿನ್ನ ಬಲಿಷ್ಠ ಕೈಗಳ ನಡುವೆ ಉಸಿರುಕಟ್ಟಿ ಸತ್ತು ಬಿದ್ದ. ಎಲ್ಲಾ ಒಂದು ಕ್ಷಣದಲ್ಲಿ ನಡೆದು ಹೋಯಿತು. ನನಗೆ ಏನು ತೋಚದೆ ಜೋರಾಗಿ ಅಳತೊಡಗಿದೆ. ಆ ಶಬ್ದಕ್ಕೆ ನಿನ್ನವರಿಗೆಲ್ಲಾ ಎಚ್ಚರವಾಯಿತು.

ತಲೆ ಎತ್ತಿ ನೋಡಿದರೆ, ಒಂದು ಇಳಿವಯಸ್ಸಿನ ಹೆಂಗಸು ಮುಂದೆ ನಿಂತಿದ್ದಳು. ನನ್ನ ಹತ್ತಿರ ಬಂದು, ಭುಜ ತಟ್ಟಿ, ಏನಾಯಿತು ಎಂದು ಕೇಳಿದಳು.

‘ನನ್ನ ಅಣ್ಣನನ್ನು, ಇವನು ಸಾಯಿಸಿಬಿಟ್ಟ. ನಾನೀಗ ಅನಾಥೆ. ನೀವೇ ಹೇಳಿ ನಾನೇನು ಮಾಡಬೇಕು?’

‘ಅಯ್ಯೋ. ಪಾಪ. ಈ ಭೀಮನಿಗೆ ಯಾವಾಗಲೂ ಆತುರ ಜಾಸ್ತಿ. ಈಗ ನಾವೇನು ಮಾಡಬೇಕು ಹೇಳು?’

‘ಅವನಲ್ಲಿ ನನ್ನ ಮದುವೆಯಾಗಲು ಹೇಳಿ. ನನಗೆ ನ್ಯಾಯ ಕೊಡಿಸಿ.’

‘ಏನೋ ಭೀಮ... ಬಾ ಇಲ್ಲಿ. ಇವಳು ಏನೇನೋ ಹೇಳುತ್ತಿದ್ದಾಳೆ...

‘ಅಮ್ಮ, ಅವಳಿಗೆ ನನಗೆ ಏನೂ ಸಂಬಂಧವಿಲ್ಲ. ಅವಳೇ ಬಂದು ನನ್ನಲ್ಲಿ ಪ್ರೀತಿ ಹುಟ್ಟಿದೆ ಎಂದಳು. ನಾನು ಸೊಪ್ಪು ಹಾಕಲಿಲ್ಲ. ಅವಳ ಅಣ್ಣನನ್ನು, ನಾನು ಆತ್ಮರಕ್ಷಣೆಗಾಗಿ ಕೊಂದಿದ್ದು. ಇದರಲ್ಲಿ ನನ್ನ ತಪ್ಪಿಲ್ಲ.’

‘ನೀವೇ ಹೇಳಿ ಅಮ್ಮ... ನನಗೆ ಯಾರಿದ್ದಾರೆ? ನೀವು ಒಂದು ಹೆಣ್ಣಾಗಿ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ.’

‘ಯುಧಿಷ್ಠಿರ, ಏನೋ ಮಾಡುವುದು ಈಗ, ನೀನೇ ಹೇಳು?’

ಯುಧಿಷ್ಠಿರ ಮುಂದೆ ಬಂದ. ಅಮ್ಮ ಮಗ ಸೇರಿ ಏನೋ ಪಿಸುಗುಟ್ಟಿದರು. ಯುಧಿಷ್ಠಿರನೆಂದ.

‘ಭೀಮ, ನೀನು ಅವಳನ್ನು ವರಿಸು.’

‘ಅಣ್ಣ. ಹಿರಿಯವನಾದ ನಿನಗಿನ್ನೂ ಮದುವೆಯಾಗಿಲ್ಲ. ನಾನು ಹೇಗೆ ... ಅದೂ ಈ ಕಾಡಿನ ಕಪ್ಪುಹೆಣ್ಣಿನೊಂದಿಗೆ... ನಮ್ಮ ಕುರುವಂಶಕ್ಕೆ ಅವಮಾನ... ಇದು ನಮ್ಮ ದಾಯಾದಿಗಳಿಗೆ ಗೊತ್ತಾದರೆ, ಅಪಹಾಸ್ಯ ಮಾಡಿಯಾರು. ನಂಗೆ ಇದು ಸುತಾರಾಂ ಇಷ್ಟವಿಲ್ಲ. ಮದುವೆಯ ಬಗ್ಗೆ ನನ್ನದೇ ಕನಸುಗಳಿವೆ.’

ನನ್ನ ಜೀವನದ ಅತ್ಯಂತ ಅವಮಾನದ ಕ್ಷಣ ಅದು. ಹೌದು. ಅರಿವಾಗಲಿಲ್ಲ ನನಗೆ, ಆ ಹುಚ್ಚು ಪ್ರೀತಿಯ ಭರದಲ್ಲಿ, ಪ್ರೀತಿ ಹುಟ್ಟಲು, ಬಣ್ಣ, ಅಂತಸ್ತು ಮುಖ್ಯವೆಂದು. ಹುಟ್ಟಿದ ಪ್ರೀತಿಯನ್ನು ಹೇಗೆ ಅಳಿಸಿಹಾಕಲಿ? ಅಭಿವ್ಯಕ್ತಗೊಳಿಸಿದ ಪ್ರೀತಿಗೆ ಪೂರಕ ಪ್ರತಿಕ್ರಿಯೆ ಬಾರದಿದ್ದಾಗ, ದ್ವೇಷಕ್ಕೆ ಕಾರಣವಾಗಬಹುದು. ಆದರೆ, ನನ್ನದು ಕಾಮವಾಗಿರಲಿಲ್ಲ, ಬದಲಾಗಿ ಯಾವುದೇ ಫಲಾಪೇಕ್ಷೆ ಇಲ್ಲದ ನಿರ್ಮಲ ಪ್ರೇಮವಾಗಿತ್ತು. ತಿರಸ್ಕ್ರತವಾದರೂ ಕ್ರೋಧವಾಗಲಿಲ್ಲ, ಭ್ರಮನಿರಸನವಾಗಲಿಲ್ಲ. ಮೌನವಾಗಿ ಸಹಿಸಿಕೊಂಡೆ.

‘ಭೀಮ... ಕುರು ವಂಶದ ನ್ಯಾಯ ಪಾರಣತೆಗೆ ಸವಾಲಿದು. ಈ ಹುಡುಗಿಗೆ ಅನ್ಯಾಯವಾಗಿದೆ. ಅವಳ ವರಿಸಿ, ಅವಳಿಗೊಂದು ಸಂತಾನ ಭಾಗ್ಯ ಕೊಡು. ಅವಳ ಭವಿಷ್ಯಕ್ಕಾಗಿ ಅಷ್ಟೇ. ಅವಳನ್ನೇನೂ ನಮ್ಮ ಜೊತೆ ನಾಡಿಗೆ ಕರೆದುಕೊಂಡು ಹೋಗುವುದಿಲ್ಲ. ಇಲ್ಲಿಯೇ ಮುಗಿದು ಹೋಗುವ ಅಧ್ಯಾಯ. ಮುಂದೆ ನೀನು ಶಾಸ್ತ್ರೋಕ್ತವಾಗಿ ಬೇರೆ ವಿವಾಹವಾಗಬಹುದು. ಈಗ ನಾನು ಹೇಳಿದಂತೆ ಹೇಳು’

ಯುಧಿಷ್ಠಿರ ನನಗೊಂದು ಎಚ್ಚರಿಕೆಯೂ ನೀಡಿದ.

‘ನೋಡು. ಇದು ವೈದಿಕ ಪದ್ದತಿಯ ವಿವಾಹವಲ್ಲ. ಹಾಗಾಗಿ, ಭೀಮನನ್ನು ಮದುವೆಯಾಗಿದ್ದಿಯೆನ್ನುವ ಭ್ರಮೆಯಲ್ಲಿರಬೇಡ. ನಮ್ಮದು ಕುರುವಂಶ. ನಮ್ಮಲ್ಲಿ ವಿವಾಹವೆನ್ನುವುದು ಗುರು ಹಿರಿಯರ ಒಪ್ಪಿಗೆಯೊಂದಿಗೆ, ಸಮಾನ ಮನೆತನದ ಹುಡುಗಿಯೊಂದಿಗೆ, ನಡೆಯುತ್ತದೆ. ಹಾಗಾಗಿ, ನೀನು ಏನು ನಿರೀಕ್ಷೆ ಇಟ್ಟುಕೊಳ್ಳಬೇಡ. ನಿನಗೆ ಒಂದು ಮಗುವಾಗುವವೆರೆಗೆ ಮಾತ್ರ, ಈ ಬಂಧ. ಆಮೇಲೆ ನಾವು ನಾಡಿಗೆ ಹೋಗುತ್ತೇವೆ. ಮುಂದೆ ನಮ್ಮ ಅರಮನೆಯತ್ತ ಸುಳಿಯಬೇಡ. ನಾವು ಇದನ್ನು ಇಲ್ಲಿಯೇ ಮರೆಯುತ್ತೇವೆ. ಒಪ್ಪಿಗೆಯಿದೆ ತಾನೇ.'

ಪ್ರೀತಿಯ ಅಮಲಲ್ಲಿ, ಸಿಕ್ಕಿದ್ದೇ ಭಾಗ್ಯವೆಂದು ತಲೆಯಾಡಿಸಿದೆ. ಪ್ರೀತಿಯ ಹುಚ್ಚು ಏನೆಲ್ಲಾ ಸಮಜಾಯಿಸಿ ಮಾಡಿಸುತ್ತದೆ ನಮ್ಮಿಂದ… ಸುಮಾರು ಒಂದು ವರ್ಷ ನೀವೆಲ್ಲಾ ನನ್ನ ಅತಿಥಿಯಾಗಿದ್ದಿರಿ. ನೀನೆಂದೂ ನನ್ನ ಪ್ರೀತಿಯಿಂದ ಮಾತನಾಡಿಸಲಿಲ್ಲ. ಅಂತೂ ಬಸಿರಾದೆ. ಹೆರಿಗೆಯಾಯ್ತು. ನೀವೆಲ್ಲಾ ಇದನ್ನೇ ಕಾಯುತ್ತಿದ್ದರೆಂದು ಕಾಣಿಸುತ್ತದೆ. ನನಗಾಗಿ ನೀನು ಇಲ್ಲಿ ನೆಲೆಯಾಗುವುದಿಲ್ಲವೆಂದು ಖಾತ್ರಿಯಿದ್ದರೂ, ಮಗುವಿನ ಮುಖನೋಡಿ ಎಲ್ಲಿ ಮನಸ್ಸು ಬದಲಾಯಿಸುತ್ತಿಯೋ, ಎನ್ನುವ ಭಯ ನಿನ್ನ ಅಮ್ಮನಿಗಿತ್ತು ಅನ್ನಿಸಿತು. ಕುರುವಂಶಕ್ಕೆ, ಕಾಡಿನ ಕಪ್ಪು ಮಗು ವಾರಸುದಾರನೇ? ಎಂತಹ ಅವಮಾನ…

ಮಗು ಹುಟ್ಟುತ್ತಿದ್ದಂತೆಯೇ, ಗಡಿಬಿಡಿಯಿಂದ ಎಲ್ಲರನ್ನು ಹೊರಡಿಸಿ ಬಿಟ್ಟಳು, ನಿನ್ನ ಅಮ್ಮ.

‘ಮಗುವನ್ನು ಚೆನ್ನಾಗಿ ನೋಡಿಕೋ. ದೇವರು ಚೆನ್ನಾಗಿಟ್ಟಿರಲಿ. ಮಗುವನ್ನು ಕರೆದುಕೊಂಡು ನಮ್ಮಲ್ಲಿ ಬರಬೇಡ. ಮನೆತನದ ಪ್ರಶ್ನೆ.’

ಒಂದು ವರ್ಷ ನನ್ನೊಂದಿಗೆ ಕಳೆದ ಮೇಲೂ ನಿನಗೆ ನನ್ನ ಮೇಲೆ ಕಿಂಚಿತ್ತೂ ಪ್ರೀತಿ ಹುಟ್ಟದ್ದು ನೋವು ತಂದಿತು. ಮಗುವಿನ ಮುಖವೂ ನೋಡದೆ, ಬೆನ್ನು ತಿರುಗಿಸಿ ಹೋಗಿಬಿಟ್ಟೆ. ಅಲ್ಲಿಗೆ ನಮ್ಮ ದಾಂಪತ್ಯ ಮುಗಿಯಿತು.

ಹೀಗೆ, ನಾನು ಮಗುವನ್ನು ಒಬ್ಬಳೇ ಬೆಳೆಸಿ, ಬಹುಶಃ, ಪ್ರಪಂಚದ ಮೊದಲ ಒಂಟಿ ತಾಯಿಯೆನಿಸಿಕೊಂಡೆ. ನಿಜ… ಮಗು ಘಟೋತ್ಕಚ ಎಲ್ಲಾ ನೋವನ್ನು ಮರೆಸಿದ. ಕೆಲವೊಮ್ಮೆ ಕೇಳುತ್ತಿದ್ದ- ‘ಅಮ್ಮ ನನ್ನ ಬಣ್ಣವೇಕೆ ನಿಮ್ಮಂತೆ ಕಡು ಕಪ್ಪಿಲ್ಲ.’ ನನ್ನಲ್ಲಿ ಉತ್ತರವಿರಲಿಲ್ಲ. ಅವನಿಗೆ ಹೇಗೆ ಹೇಳಬೇಕಿತ್ತು- ನೀನು ಕುರುವಂಶದ ಮೊದಲ ಮೊಮ್ಮಗ, ನಾನು ಹಿರಿಯ ಸೊಸೆ.

ಆಮೇಲೆ ತಿಳಿದುಬಂತು. ನೀವೆಲ್ಲಾ ಸೇರಿ ಒಬ್ಬಳನ್ನೇ ವಿವಾಹವಾದಿರಿ ಎಂದು. ನಿಮ್ಮ ಅಮ್ಮ ಮಹಾ ಜಾಣೆ. ಐದು ಸೊಸೆಯರು ಎಲ್ಲಿ ಪಂಚಪಾಂಡವರನ್ನು ಬೇರೆ ಬೇರೆಯಾಗಿಸುತ್ತಾರೋ ಎಂಬ ಭಯವಿತ್ತು ಅನ್ನಿಸುತ್ತದೆ. ಅದಕ್ಕೆ ಚೆನ್ನಾಗಿ ನಾಟಕವಾಡಿದಳು. ಜೊತೆಗೆ, ನಿಮ್ಮೆಲ್ಲರಿಗೂ ಪಾಂಚಾಲಿ ಮೇಲೆ ಕಣ್ಣಿತ್ತು ಅಂದು ಕೇಳಿಪಟ್ಟೆ, ವಿಶೇಷವಾಗಿ ನಿನಗೆ.

ನನಗೆ ಒಂದು ಕಾಡು ಹೂವನ್ನೂ ತಂದು ಕೊಟ್ಟವನಲ್ಲ, ನೀನು. ಆದರೆ ಅವಳಿಗಾಗಿ ಏನೆಲ್ಲಾ ಮಾಡಿದೆ... ಕೀಟಲೆ ಕೊಟ್ಟ ಕೀಚಕನ ಕೊಂದೆ... ಸೌಗಂಧ ಪುಷ್ಪ ಕಿತ್ತು ತಂದೆ... ಸೀರೆ ಸೆಳೆದ ದುಶ್ಶಾಸನನ ಸಾಯಿಸಿ ಅವನ ರಕ್ತದಿಂದ ಅವಳ ಮುಡಿಗೆ ಅಭಿಷೇಕ ಮಾಡಿದೆ... ತೊಡೆ ತಟ್ಟಿ ಬಾ… ಎಂದು ಕರೆದು ಅಪಹಾಸ್ಯ ಮಾಡಿದ ದುರ್ಯೋಧನನ ತೊಡೆ ಮುರಿದು ಸಾಯಿಸಿದೆ... ಅವಳಿಂದ ಒಂದು ಪುತ್ರ ಭಾಗ್ಯವಾಗಲೆಂದು ಒಂದು ಸಾವಿರ ಪ್ರಾಣಿಗಳ ಬಲಿಕೊಟ್ಟು ಸುತಸೋಮನ ಪಡೆದೆ...

ನಾನಂದು ಕೊಂಡಿದ್ದೆ... ನೀನೊಂದು ಪ್ರೀತಿಯ ಗಂಧ ಗಾಳಿಯಿಲ್ಲದ ಒರಟು ಮನುಷ್ಯ. ಆದರೆ.... ಇಷ್ಟೆಲ್ಲಾ ಪ್ರೀತಿ ತೋರಿಸುವುದು ಸಾಧ್ಯವಿತ್ತು ನಿನಗೆ... ವಿಪರ್ಯಾಸ ನೋಡು... ಅವಳ ಪ್ರೀತಿಯೆಲ್ಲಾ ಪಾರ್ಥನಿಗೆ ಮೀಸಲಾಗಿತ್ತು... ನಾವು ಪ್ರೀತಿಸುವವರಿಗೆ ನಮ್ಮ ಪ್ರೀತಿ ಅರ್ಥವಾಗುವುದೇ ಇಲ್ಲ.

ಒಂದು ಪ್ರಶ್ನೆ ನನಗಿನ್ನೂ ಕೊರೆಯುತ್ತಿದೆ... ವನವಾಸದಲ್ಲಿ ಎಲ್ಲಾ ಕಾಡುಮೇಡು ಸುತ್ತಿದ ನಿಮಗೆ ನನ್ನಲ್ಲಿ ಬಂದಿರಲು ಸಂಕೋಚವಾಗಿತ್ತೇ? ಅಥವಾ... ಹೊಸ ಹೆಂಡತಿ ದ್ರೌಪದಿಗೆ ಇಷ್ಟವಾಗುವುದಿಲ್ಲವೆಂದೆ?

ಹಸ್ತಿನಾಪುರದಲ್ಲಿ ನೀವು ರಾಜಸೂಯ ಯಾಗ ಮಾಡಿದಾಗ, ವ್ಯಾಸರ ಮಂತ್ರಕ್ಕೆ ಅಗ್ನಿ ಹುಟ್ಟದಿದ್ದಾಗ, ನಾರದ ಯುಧಿಷ್ಠಿರನಿಗೆ, ‘ಮಕ್ಕಳ ಭಾಗ್ಯವಿಲ್ಲದೆ ಈ ಯಾಗ ವ್ಯರ್ಥ’ವೆಂದು ತಿಳಿಸಿದ. ಆಗ ಯುಧಿಷ್ಠಿರನಿಗೆ ಘಟೋತ್ಕಚನ ನೆನಪಾಗಿ ಕರೆತರಲು ಹೇಳಿದ. ಅಣ್ಣನ ಆಜ್ಞೆಯಂತೆ ನೀನು ಬಂದಿದ್ದೆ.

‘ನಿನ್ನ ಮಗನ ಕಳುಹಿಸಿ ಕೊಡು. ಅಣ್ಣ ಕರೆದುಕೊಂಡು ಬರಲು ಹೇಳಿದ್ದಾನೆ.’

ಘಟೋತ್ಕಚ ಪ್ರಥಮ ಬಾರಿ ನಿನ್ನ ನೋಡಿದ್ದು. ಪರಿಚಯಿಸಿದಾಗ, ನಿನ್ನ ಹಿಡಿದು ಗಟ್ಟಿಯಾಗಿ ಅತ್ತುಬಿಟ್ಟ. ತನಗಾಗಿ ಏನೂ ಮಾಡದ ಅಪ್ಪನಿಗೆ ಅಷ್ಟೊಂದು ಪ್ರೀತಿ ತೋರಿಸಿದ.... ಪಾಪದ ಮಗುವದು... ನೋಡಿ ನನಗೆ ಕಣ್ಣೀರು ತುಂಬಿ ಬಂತು. ಕರೆದ ತಕ್ಷಣ ನನ್ನ ಮಾತೂ ಕೇಳದೆ ನಿನ್ನ ಹಿಂದೆ ಹೊರಟೆ ಬಿಟ್ಟ... ನನಗೆ ಭಯವಾಯಿತು. ಸ್ವಲ್ಪವೂ ಪ್ರೀತಿ ತೋರಿಸದ ನೀವೆಲ್ಲಾ ಏನಾದರೂ ಹೆಚ್ಚು ಕಡಿಮೆ ಮಾಡುಬಿಡುತ್ತೀರೆಂದು. ನಾನು ಹಿಂದೆಯೇ ಓಡೋಡಿ ಬಂದೆ. ಆದರೆ, ಹೊಸ್ತಿಲ ಆಚೆಯೇ ನಿಂತಿದ್ದೆ.

ನಿನ್ನ ಹೆಂಡತಿಗೆ ಅವನು ಬಂದಿದ್ದು ಇಷ್ಟವಾಗಿಲ್ಲವೆಂದು ಅರಿವಾಯಿತು. ಪಾಪ, ಚಿಕ್ಕ ಮಗು. ಎಲ್ಲರನ್ನು ವಂದಿಸಿತು, ದುರಾದ್ರಷ್ಟಕ್ಕೆ ಅವಳನ್ನು ಹೊರತು ಪಡಿಸಿ. ಇದನ್ನೇ ನೆವವಾಗಿಟ್ಟುಕೊಂಡು, ಅವಳು ನನ್ನ ಮಗುವಿಗೆ ಶಾಪ ಹಾಕಿದಳು.

‘ದುರಹಂಕಾರಿ... ಎಲ್ಲರೆದುರು ನನ್ನ ಅಪಮಾನ ಮಾಡುತ್ತೀಯಾ... ನಿನ್ನ ಅಮ್ಮ ಹೇಳಿ ಕಳುಹಿಸಿದಳೇ? ನೀನು ಅಲ್ಪಾಯುವಾಗಿ ಸಾಯಿ…’

ನನಗೆ ದುಃಖ ಉಮ್ಮಳಿಸಿ ಬಂತು. ಒಳಗೆ ಧಾವಿಸಿ ಎಲ್ಲರೆದುರೇ, ವಿಶೇಷವಾಗಿ ನಿನ್ನೆದುರು ಹೇಳಿದೆ.

‘ನೀವೇ ಕರೆಸಿಕೊಂಡು ಹೀಗೆ ಶಾಪ ಹಾಕುತ್ತೀರಾ? ನಾನೇನಾದರೂ ಭಿಕ್ಷೆ ಕೇಳಲು ಬಂದಿದ್ದೇನೆಯೇ? ನನ್ನ ಮಗುವಿಗೆ ಶಾಪ ಹಾಕಲು ಯಾವ ಅಧಿಕಾರವಿದೆ ನಿಮಗೆ? ಥೂ... ನಾಚಿಕೆಯಾಗಬೇಕು, ನಿಮ್ಮ ಜನ್ಮಕ್ಕೆ… ನಾಗರಿಕರಂತೆ... ಕಾಡಿನ ಜನರಿಗೆ ಹೆಚ್ಚು ಸಂಸ್ಕಾರವಿದೆ.’

ಘಟೋತ್ಕಚನ ಕೈಹಿಡಿದು ಎಳೆದುಕೊಂಡು ಕಾಡಿಗೆ ವಾಪಸ್ಸಾದೆ. ಇನ್ನೊಂದೂ ನಿಮ್ಮ ಮುಖ ನೋಡಬಾರದೆಂದು ಕೊಂಡಿದ್ದೆ.

ಆದರೂ ನನ್ನ ಮಗನ ಉಳಿಸಿಕೊಳ್ಳಲಾಗಲಿಲ್ಲ. ಕುರುಕ್ಷೇತ್ರ ಯುದ್ಧ ಆರಂಭವಾದಾಗ, ನನ್ನ ಮಗನಿಗೆ ಚಡಪಡಿಕೆ ಆರಂಭವಾಯಿತು.

‘ಅಯ್ಯೋ, ನನ್ನ ಅಪ್ಪನಿಗೆ ಏನಾಯಿತು ಏನೋ? ಅಮ್ಮ, ನಾನು ಹೋಗಲೇ, ಸೈನ್ಯ ತೆಗೆದುಕೊಂಡು? ನನ್ನ ಪರಾಕ್ರಮ ಅಪ್ಪನಿಗೆ ತೋರಿಸಲು ಇದೊಂದು ಸುವರ್ಣ ಅವಕಾಶ. ದಯವಿಟ್ಟು, ಬೇಡವೆನ್ನಬೇಡ.’

‘ಅವರು ನಾಡಿನ ಜನ. ರಾಜಕೀಯ ಪರಿಣಿತರು. ಅಧಿಕಾರಕ್ಕಾಗಿ ಸಹೋದರರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಅದನ್ನು ಪಡೆಯಲು ಯಾರನ್ನೂ ಬಲಿಕೊಡಲು ಹಿಂದೆ ಮುಂದೆ ನೋಡಲಾರರು. ನೀನಂತೂ ಅವರಿಗೆ ಅಸ್ಪ್ರಶ್ಯ. ನಿನಗ್ಯಾಕೆ ಅವರ ಮೇಲೆ ಇಷ್ಟೊಂದು ಮೋಹ? ನಮಗೆ ಅವರೇ ಪ್ರಪಂಚ, ಆದರೆ ಅವರಿಗೆ ನಾವು ತೃಣಕ್ಕೆ ಸಮಾನ. ಇನ್ನು ನಿನ್ನಿಷ್ಟ. ನನ್ನ ಮಾತು ಎಲ್ಲಿ ಕೇಳುತ್ತಿ? ’

ಮುಖ ಸಪ್ಪಗೆ ಮಾಡಿಕೊಂಡಿದ್ದ ಘಟನ ಜಿದ್ದಿಗೆ ಶರಣಾಗಿ, ಯುದ್ಧಭೂಮಿಗೆ ಕಳುಹಿಸಿದೆ. ಆದರೆ, ಆಮೇಲೆ ತಿಳಿಯಿತು. ನಮ್ಮನ್ನು ಕಾಡುಮನುಷ್ಯರು, ಅನಾಗರಿಕರು ಎಂದು ಇಷ್ಟು ವರ್ಷ ದೂರವಿಟ್ಟಿದ್ದ ನಿಮಗೆ, ನಮ್ಮ ಸಹಾಯ ಪಡೆಯುವುದೇ ಪ್ರತಿಷ್ಠೆಗೆ ಕುಂದಾಗಿತ್ತು. ಹಾಗಾಗಿ, ಎಲ್ಲರೆದುರು, ಮರ್ಯಾದೆ ಉಳಿಸಿಕೊಳ್ಳಲು,‘ನಾವೇನು ಸಹಾಯ ಕೇಳಲಿಲ್ಲ, ಅವರೇ ಬಂದರು’ ಎಂದು ಸುದ್ದಿ ಮಾಡಿದಿರಿ. ಆದರೆ, ನಮ್ಮ ಕಾಡಿನ ಸೇನೆ, ನಿಮ್ಮ ವೈರಿಗಳ ಹುಟ್ಟಡಗಿಸಿತು ಎನ್ನುವ ಸುದ್ದಿಯೂ ಬಂತು.

ಅತ್ಯಂತ ನೋವು ತಂದ ವಿಷಯವೆಂದರೆ.. ಎಷ್ಟು ಪ್ರಯತ್ನಿಸಿದರೂ ಕೌರವರಿಗೆ ಅವನನ್ನು ಮಣಿಸಲಾಗಲಿಲ್ಲ. ಆದರೆ, ನಿನ್ನ ತಮ್ಮನನ್ನು ಕರ್ಣನ ಅಸ್ತ್ರದಿಂದ ಪಾರು ಮಾಡಲು, ನೀವೆಲ್ಲಾ ಸೇರಿ ನನ್ನ ಮಗನ ಬಲಿ ಕೊಟ್ಟಿರಿ. ಹೇಗೆ ಮನಸ್ಸು ಬಂತು ನಿನಗೆ, ಅಪ್ಪನಾಗಿ?....

ನಿನಗಿಂತ ಅರ್ಜುನನೇ ಎಷ್ಟೋ ವಾಸಿ. ಹೋದಕಡೆಯೆಲ್ಲಾ ವರಿಸಿದ. ಆದರೆ, ಅವರನ್ನು ತನ್ನ ಅರಮನೆಗೆ ಕರೆತಂದು ಇರಿಸಿಕೊಂಡು ರಾಜಮರ್ಯಾದೆ ಕೊಟ್ಟ, ಆ ಸಂಬಂಧಗಳಿಗೆ ಗೌರವ ಕೊಟ್ಟ. ಸುಭದ್ರಾ, ಉಲೂಪಿ, ಚಿತ್ರ್ಯಾಂಗದ... ಎಲ್ಲರಿಗೂ ನಿಮ್ಮ ಅರಮನೆಯಲ್ಲಿ ಸ್ವಾಗತವಿತ್ತು. ಆದರೆ, ನನಗೆ ಮಾತ್ರ ಹೆಬ್ಬಾಗಿಲು ಮುಚ್ಚಿತ್ತು.

ಒಂದು ವಿಷಯ... ನಾನೊಂದು ಮಾಯಾ ಕನ್ನಡಿ ನಿನಗೆ ಉಡುಗೊರೆಯಾಗಿ ಕೊಟ್ಟಿದ್ದೆ. ಅದರಲ್ಲಿ ನೋಡಿಕೊಂಡರೆ, ನಮ್ಮ ಹೃದಯದಲ್ಲಿರುವವರ ಚಿತ್ರ ಮೂಡುತ್ತದೆ. ನಾನು ನೋಡಿಕೊಂಡಾಗ ನಿನ್ನ ಚಿತ್ರ ಸ್ಪಷ್ಟವಾಗಿ ಮೂಡಿತ್ತು. ನೀನು ನೋಡಿದಾಗ, ಅಲ್ಲಿ ನಾನಿರಲಿಲ್ಲ. ಬೇಸರವೇನೂ ಆಗಿತ್ತು. ಆದರೆ… ಪಾಂಚಾಲಿ ನಿನ್ನ ಜೀವನ ಪ್ರವೇಶ ಮಾಡಿದಂದಿನಿಂದ, ಅವಳ ಬಿಂಬವೇ ಕನ್ನಡಿಯಲ್ಲಿ ಮೂಡುತ್ತಿತ್ತೆಂದು ಕೇಳಪಟ್ಟೆ. ವಿಸ್ಮಯವೆಂದರೆ... ಅವಳು ನೋಡಿದಾಗಲೆಲ್ಲಾ ಬರಿ ಅರ್ಜುನನ ಬಿಂಬ ಕಾಣಿಸುತ್ತಿತ್ತು, ನಿನ್ನದಲ್ಲವೆಂಬ ವಿಚಾರ ನಿನಗೆ ಗೊತ್ತಾಗಲೇ ಇಲ್ಲ.

ನನ್ನ ಜೀವನ, ನಿನ್ನ ನಿರೀಕ್ಷೆಯಲ್ಲಿಯೇ ಕಳೆದುಹೋಯಿತೆಂಬ ಬೇಸರವಿಲ್ಲ. ನಾನು ಮಾಡಿದ್ದೆಲ್ಲಾ ಪ್ರೀತಿಗಾಗಿ, ಆದರೆ, ಅದನ್ನು ಧಾರೆಯೆರೆದಿದ್ದು ಕಲ್ಲಿನ ಮೇಲೆಂದು ಅರಿವಾಗಲಿಲ್ಲ.

ಆದರೂ, ನನಗೆ ಹೆಮ್ಮೆಯಿದೆ… ಒಂಟಿ ತಾಯಿಯಾಗಿ ಮಗನನ್ನು ಚೆನ್ನಾಗಿಯೇ ಬೆಳೆಸಿದೆ. ಕಾಡಿನ ಅನಾಗರಿಕ ಹೆಂಗಸಾದರೂ, ಪ್ರೀತಿಯಲ್ಲಿ ಕೊನೆಯ ತನಕ ವಿದೇಯಳಾಗಿದ್ದೆ. ನಾಡಿನ ಮನುಷ್ಯರ ಮೋಸ, ದ್ವೇಷ, ಸೇಡುಗಳ ಸೋಂಕು ನಮಗೆ ತಗಲಲಿಲ್ಲ.

ಮಗನ ಮರೆಯಲು ಆಗುತ್ತಿಲ್ಲ... ಮನಶಾಂತಿಗಾಗಿ ಹಿಮಾಲಯಕ್ಕೆ ಹೋಗುತ್ತಿದ್ದೇನೆ. ಹೋಗುವ ಮೊದಲು, ನಿನ್ನಲ್ಲಿಷ್ಟು ಹೇಳಿ ಮನಸ್ಸು ಹಗುರ ಮಾಡಿಕೊಳ್ಳಬೇಕೆನಿಸಿತು. ಎಲ್ಲಾ ನೆನಪುಗಳನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದೇನೆ.

ನಿನ್ನ ದೇವರು ಚೆನ್ನಾಗಿಟ್ಟಿರಲಿ. ನಮಸ್ಕಾರಗಳು.

ನಿನ್ನ ಹೆಸರನ್ನೇ ಉಸಿರಾಗಿಸಿಕೊಂಡಿದ್ದ,

ಹಿಡಿಂಬೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT