ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

Published 9 ಮೇ 2024, 13:32 IST
Last Updated 9 ಮೇ 2024, 13:32 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಗುರುವಾರ ಕರಡಿ ಕುಣಿತ ಜೋರಾಗಿತ್ತು. ಲೋಕಸಭಾ ಚುನಾವಣಾ ಫಲಿತಾಂಶದ ಬಗೆಗಿನ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಸೂಚ್ಯಂಕಗಳು ಕುಸಿತ ಕಂಡಿವೆ.

ಅಲ್ಲದೆ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದ್ದು, ಕೂಡ ಷೇರುಪೇಟೆಯ ಮೇಲೆ ಪರಿಣಾಮ ಬೀರಿತು. ಎಚ್‌ಡಿಎಫ್‌ಸಿ ಬ್ಯಾಂಕ್‌, ಎಲ್‌ ಆ್ಯಂಡ್‌ ಟಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಹೂಡಿಕೆದಾರರು ಭಾರಿ ಸಂಖ್ಯೆಯಲ್ಲಿ ಈ ಕಂಪನಿಗಳ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಸೂಚ್ಯಂಕಗಳು ಕುಸಿತದ ಹಾದಿ ಹಿಡಿದವು. 

ಹೂಡಿಕೆದಾರರಿಗೆ ಒಂದೇ ದಿನ ₹7.34 ಲಕ್ಷ ಕೋಟಿ ಸಂಪತ್ತು ಕರಗಿದೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,062 ಅಂಶ (ಶೇ 1.45ರಷ್ಟು) ಕುಸಿತ ಕಂಡು, 72,404 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ದಿನದ ವಹಿವಾಟಿನಲ್ಲಿ 1,132 ಅಂಶ ಕುಸಿತ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 345 ಅಂಶ (ಶೇ 1.55ರಷ್ಟು) ಇಳಿಕೆ ಕಂಡು 21,957 ಅಂಶಗಳಲ್ಲಿ ವಹಿವಾಟನ್ನು ಅಂತ್ಯಗೊಳಿಸಿತು.

‘ಮಾರ್ಚ್‌ ತ್ರೈಮಾಸಿಕದಲ್ಲಿ ಲಾರ್ಜ್‌ ಕ್ಯಾಪ್‌ ಕಂಪನಿಗಳು ನಿರೀಕ್ಷಿತ ಮಟ್ಟದಲ್ಲಿ ಲಾಭಗಳಿಸಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬುದು ಅನಿಶ್ಚಿತತೆಯಿಂದ ಕೂಡಿದೆ. ಇದು ಹೂಡಿಕೆದಾರರ ಮೇಲೂ ಪರಿಣಾಮ ಬೀರಿದೆ. ಹಾಗಾಗಿ, ಸೂಚ್ಯಂಕಗಳು ಕುಸಿತದ ಹಾದಿ ಹಿಡಿಯಲು ಕಾರಣವಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಮುಂದಿನ ವಾರ ಅಮೆರಿಕದ ಹಣದುಬ್ಬರದ ವರದಿ ಬಿಡುಗಡೆಯಾಗಲಿದೆ. ಹಾಗಾಗಿ, ಕೆಲವು ನಿರ್ದಿಷ್ಟ ಅವಧಿವರೆಗೆ ಮಾರುಕಟ್ಟೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿಯಬಹುದು’ ಎಂದು ಹೇಳಿದ್ದಾರೆ.

ಏಷ್ಯನ್‌ ‍ಪೇಂಟ್ಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಐಟಿಸಿ, ಬಜಾಜ್‌ ಫೈನಾನ್ಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಸ್ಟೀಲ್‌, ಬಜಾಜ್‌ ಫಿನ್‌ಸರ್ವ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್, ಪವರ್‌ ಗ್ರಿಡ್‌ ಷೇರಿನ ಮೌಲ್ಯ ಕುಸಿತ ಕಂಡಿದೆ. 

ಟಾಟಾ ಮೋಟರ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಇನ್ಫೊಸಿಸ್‌, ಎಚ್‌ಸಿಎಲ್‌ ಟೆಕ್‌ ಕಂಪನಿನ ಷೇರುಗಳು ಏರಿಕೆ ಕಂಡಿವೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 2.41ರಷ್ಟು ಹಾಗೂ ಮಿಡ್‌ಕ್ಯಾಪ್‌ ಸೂಚ್ಯಂಕವು ಶೇ 2.01ರಷ್ಟು ಇಳಿಕೆ ಕಂಡಿವೆ.

ತೈಲ ಮತ್ತು ಅನಿಲ (ಶೇ 3.41), ಬಂಡವಾಳ ಸರಕು (ಶೇ 3.37), ಲೋಹ (ಶೇ 3.13), ಕೈಗಾರಿಕೆ (ಶೇ 2.92), ಯುಟಿಲಿಟಿ (ಶೇ 2.59) ಹಾಗೂ ಸರಕು (ಶೇ 2.39) ವಲಯದ ಷೇರುಗಳು ಕುಸಿತ ಕಂಡಿವೆ. ಆಟೊ ವಲಯದ ಷೇರುಗಳು ಏರಿಕೆ ಕಂಡಿವೆ.

ಬುಧವಾರದಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹6,669 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.48ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 83.89 ಡಾಲರ್‌ ಆಗಿದೆ.

ಏನಿದು ಚಂಚಲತೆ ಮಾಪಕ? 

ಲೋಕಸಭಾ ಚುನಾವಣಾ ಫಲಿತಾಂಶ ಕುರಿತ ಅನಿಶ್ಚಿತತೆಯು ಭಾರತದ ಚಂಚಲತೆಯ ಮಾಪಕವಾದ ಇಂಡಿಯಾ ವಿಐಎಕ್ಸ್ ಅನ್ನು ಹೆಚ್ಚಿಸಿದೆ. ಇದರಿಂದ ಷೇರು ಮಾರುಕಟ್ಟೆಗಳಲ್ಲಿ ಆತಂಕ ಸೃಷ್ಟಿಸುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಷೇರುಪೇಟೆಯ ಕಳೆದ ಎಂಟು ವಹಿವಾಟುಗಳಲ್ಲಿ ಇಂಡಿಯಾ ವಿಐಎಕ್ಸ್ ಶೇ 70ರಷ್ಟು ಏರಿಕೆಯಾಗಿದ್ದು, 52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಷೇರುದಾರರು ಮತ್ತು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ’ ಎಂದು ಸ್ವಸ್ತಿಕ ಇನ್‌ವೆಸ್ಟ್‌ಮೆಂಟ್‌ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್‌ ಮೀನಾ ಹೇಳಿದ್ದಾರೆ.

ಟಿವಿಎಸ್‌ ಮೋಟರ್‌ ಷೇರು ಏರಿಕೆ ನವದೆಹಲಿ: ಮಾರ್ಚ್‌ ತ್ರೈಮಾಸಿಕದಲ್ಲಿ ಟಿವಿಎಸ್‌ ಮೋಟರ್ ಕಂಪನಿಯ ನಿವ್ವಳ ಲಾಭದಲ್ಲಿ ಏರಿಕೆ ಆಗಿರುವುದರಿಂದ ಕಂಪನಿಯ ಷೇರಿನ ಮೌಲ್ಯವು ಶೇ 3ರಷ್ಟು ಏರಿಕೆಯಾಗಿದೆ. ಬಿಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 2.74ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆಯು ₹2061.15 ಆಗಿದೆ. ವಹಿವಾಟಿನ ಒಂದು ಸಂದರ್ಭದಲ್ಲಿ ಶೇ 5.73ರಷ್ಟು ಹೆಚ್ಚಳವಾಗಿತ್ತು. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 3.25ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆಯು ₹2,061.60 ಆಗಿದೆ. ವಹಿವಾಟಿನ ಒಂದು ಹಂತದಲ್ಲಿ ಶೇ 6.32ರಷ್ಟು ಏರಿಕೆಯಾಗಿತ್ತು. 

ಎಲ್‌ ಆ್ಯಂಡ್‌ ಟಿಗೆ ₹28,737 ಕೋಟಿ ನಷ್ಟ ಎಲ್‌ ಆ್ಯಂಡ್‌ ಟಿ ಕಂಪನಿಯ ಷೇರಿನ ಮೌಲ್ಯವು ಶೇ 6ರಷ್ಟು ಕುಸಿತ ಕಂಡಿದ್ದು ಕಂಪನಿಯ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ಒಂದೇ ದಿನ ₹28,737 ಕೋಟಿ ಕರಗಿದೆ.  ಕಂಪನಿಯು ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತೆ ಲಾಭಗಳಿಸದಿರುವ ಪರಿಣಾಮ ಷೇರುಗಳ ಮೌಲ್ಯದಲ್ಲಿ ಇಳಿಕೆಯಾಗಿದೆ. ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 6ರಷ್ಟು ಕುಸಿತ ಕಂಡಿದ್ದು ಪ್ರತಿ ಷೇರಿನ ಬೆಲೆಯು ₹3,276.15 ಆಗಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 6ರಷ್ಟು ಕುಸಿದಿದ್ದು ಪ್ರತಿ ಷೇರಿನ ಬೆಲೆಯು ₹3,275.45 ಆಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್‌ ₹4.50 ಲಕ್ಷ ಕೋಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT