ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಪಾವತಿಸಿದ ವೃತ್ತಿ ತೆರಿಗೆಯನ್ನು ಮರಳಿ ಪಡೆಯಬಹುದೇ?

Last Updated 8 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಜಗನ್ನಾಥ ಕಟ್ಟಿ, ಕುಸನೂರು, ಹಾವೇರಿ

ಪ್ರಶ್ನೆ: ನಾನು ಸ್ವಂತ ಉದ್ಯೋಗ ನಡೆಸುತ್ತಿದ್ದು, ಹಿರಿಯ ನಾಗರಿಕನೂ ಹೌದು. ನನ್ನ ವಯಸ್ಸು 64 ವರ್ಷ. ನನಗೆ ತೆರಿಗೆ ಇಲಾಖೆಯಿಂದ ಬಂದ ನೋಟಿಸ್ ಪ್ರಕಾರ ನಾಲ್ಕು ವರ್ಷಗಳಿಂದ ಬಾಕಿ ಇದ್ದ ₹ 20,000 ವೃತ್ತಿ ತೆರಿಗೆಯನ್ನು (ಅವಧಿ 2018-2022) ಪಾವತಿಸಿದ್ದೇನೆ. ಇದಾದ ನಂತರ, ಹಿರಿಯ ನಾಗರಿಕರಿಗೆ ವೃತ್ತಿ ತೆರಿಗೆ ವಿನಾಯಿತಿ ಇದೆ ಎಂದು ತಿಳಿಯಿತು. ಈಗ ನಾನು ಪಾವತಿಸಿದ ವೃತ್ತಿ ತೆರಿಗೆಯನ್ನು ಮರಳಿ ಪಡೆಯಬಹುದೇ?

ಉತ್ತರ: ನೀವು ಸ್ವಂತ ಉದ್ಯೋಗ ಕೈಗೊಂಡಿದ್ದೀರಿ ಹಾಗೂ ಹಿರಿಯ ನಾಗರಿಕರಾಗಿದ್ದೀರಿ. ನಮ್ಮ ರಾಜ್ಯದ 2018-19ನೇ ಸಾಲಿನ ಬಜೆಟ್ ಘೋಷಣೆಯ ಅನ್ವಯ ವೃತ್ತಿ ತೆರಿಗೆ ಕಾಯ್ದೆಯ ಸೆಕ್ಷನ್ 3ನ್ನು ಸೂಕ್ತ ತಿದ್ದುಪಡಿ ಮಾಡುವ ಮೂಲಕ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ನೀಡಲಾಯಿತು. ಹೀಗಾಗಿ ಆ ಸಂದರ್ಭದಿಂದ ಮುಂದಕ್ಕೆ, 2018-19ನೇ ಆರ್ಥಿಕ ವರ್ಷದಿಂದ ಅನ್ವಯ ಆಗುವಂತೆ ವಿನಾಯಿತಿ ನಿಯಮ ಜಾರಿಯಲ್ಲಿ ಇದೆ.

ಅದೇ ರೀತಿ ಕಾಯ್ದೆಯ ಸೆಕ್ಷನ್ 22, ವೃತ್ತಿ ತೆರಿಗೆಯ ಮರುಪಾವತಿಗೆ ಸಂಬಂಧಿಸಿದ್ದಾಗಿರುತ್ತದೆ. ಇದರ ಪ್ರಕಾರ, ಯಾವುದೇ ವ್ಯಕ್ತಿ ಲೆಕ್ಕಕ್ಕಿಂತ ಅಧಿಕ ತೆರಿಗೆ, ಬಡ್ಡಿ, ಶುಲ್ಕ ಇತ್ಯಾದಿ ಪಾವತಿಸಿದ್ದರೆ ಅಂತಹ ಮೊತ್ತವನ್ನು ತೆರಿಗೆದಾರರು ಸಂಬಂಧಪಟ್ಟ ಇಲಾಖೆಗೆ ಸೂಕ್ತ ಅರ್ಜಿ ಸಲ್ಲಿಸುವ ಮೂಲಕ ಮರಳಿ ಪಡೆಯುವ ಅವಕಾಶ ಇರುತ್ತದೆ. ಇದಕ್ಕೆ ಅಗತ್ಯವಾದ ದಾಖಲೆ, ಪೂರಕ ಮಾಹಿತಿ, ತೆರಿಗೆ ಸಲ್ಲಿಕೆ ವಿವರ ಇತ್ಯಾದಿಗಳನ್ನು ನೀವು ಕ್ರಮಬದ್ಧವಾಗಿ ಸಲ್ಲಿಸಿದ್ದು ಇಲಾಖೆಗೆ ಇನ್ಯಾವುದೇ ರೀತಿಯ ಹಳೆಯ ಬಾಕಿಗಳು ನಿಮ್ಮಿಂದ ಬರಬೇಕಾಗಿಲ್ಲ ಎನ್ನುವುದು ಖಚಿತವಾಗಬೇಕು.

ನೀವು ಈಗಾಗಲೇ ಬಂದಿರುವ ನೋಟಿಸ್ ಪ್ರಕಾರ ತೆರಿಗೆ ಕಟ್ಟಿರುತ್ತೀರಿ. ಹೀಗಾಗಿ ಕಾನೂನಿನ ಪ್ರಕಾರ ನಿಮ್ಮ ವಯೋಮಾನಕ್ಕೆ ಸಂಬಂದಿಸಿದಂತೆ ಇರುವ ವಿನಾಯಿತಿ ನಿಮಗೆ ಸಿಗಬೇಕು. ಇದಕ್ಕಾಗಿ ನೀವು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಮುಂದಿನ ಪರಿಹಾರೋಪಾಯ ಕಂಡುಕೊಳ್ಳುವುದು ಸೂಕ್ತ.

**
ಹೆಸರು ಬೇಡ, ಬೆಂಗಳೂರು

ಪ್ರಶ್ನೆ: ನಾನು ಕಳೆದ ಕೆಲವು ವರ್ಷಗಳಿಂದ ಹೂಡಿಕೆ ಮಾಡುತ್ತಿದ್ದೇನೆ. ಹೂಡಿಕೆಯ ವಿಚಾರ ಬಂದಾಗ ನಮಗೆ ಅನೇಕ ಉತ್ಪನ್ನಗಳನ್ನು ಹೇಳಲಾಗುತ್ತದೆ. ಉದಾಹರಣೆಗೆ ಇನ್ಶೂರೆನ್ಸ್, ಚಿನ್ನ ಹಾಗೂ ಸರ್ಕಾರಿ ಬಾಂಡ್, ಎನ್‌ಪಿಎಸ್, ಎಸ್‌ಐಪಿ, ಷೇರು, ಎಫ್‌ಡಿ, ಜಮೀನು ಇತ್ಯಾದಿ. ಯಾವ ಮಾನದಂಡ ಇಟ್ಟು ಹೂಡಿಕೆ ನಿರ್ಧಾರ ಕೈಗೊಳ್ಳಬೇಕೆಂಬ ಸರಿಯಾದ ಮಾಹಿತಿ ನನಗಿಲ್ಲ. ಈ ಹೂಡಿಕೆ ಉತ್ಪನ್ನಗಳು ಎಲ್ಲ ಕಾಲಗಳಿಗೂ ಸೂಕ್ತವೇ? ಇವುಗಳನ್ನು ಸರಿಯಾಗಿ ಹೇಗೆ ಆಯ್ಕೆ ಮಾಡಬೇಕು?

ಉತ್ತರ: ಯಾವುದೇ ಸಂದರ್ಭದಲ್ಲಿ ಹೂಡಿಕೆಯ ವಿಚಾರ ಬಂದಾಗ ನಾವು ಮೊದಲು ತಿಳಿದುಕೊಳ್ಳಬೇಕಾದ ವಿಚಾರಗಳು ಕೆಲವು ಇವೆ. ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಂಡು ಆಗಿದೆಯೇ, ನಮ್ಮ ದೈನಂದಿನ ಜೀವನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮೂಲಭೂತ ಆರ್ಥಿಕ ಅಗತ್ಯಗಳನ್ನು ಈಡೀರಿಸಿಕೊಂಡು ಆಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ನಂತರದಲ್ಲಿ, ಹೆಚ್ಚುವರಿ ಹೂಡಿಕೆಯ ಬಗ್ಗೆ ಆಲೋಚಿಸಬೇಕು. ಪ್ರತಿ ವ್ಯಕ್ತಿಯ ಹಣಕಾಸು ನಿರ್ವಹಣೆ ಭಿನ್ನವಾಗಿರುತ್ತದೆ. ಹಾಗೆಯೇ, ಪ್ರತಿ ವ್ಯಕ್ತಿಯ ಹೂಡಿಕೆ ವಿಧಾನ, ಹೂಡಿಕೆ ಉತ್ಪನ್ನ ಭಿನ್ನವಾಗಿಯೇ ಇರುತ್ತದೆ. ನಮಗೆ ಸಿಗುವ ಆದಾಯವನ್ನು ಪ್ರತಿನಿತ್ಯದ ಅಗತ್ಯಗಳ ಪೂರೈಕೆಗಾಗಿ ಒಂದಿಷ್ಟು, ಉಳಿತಾಯಕ್ಕಾಗಿ ಒಂದಿಷ್ಟು ಹಾಗೂ ಹೂಡಿಕೆಗಾಗಿ ಒಂದಿಷ್ಟು ಎಂದು ವಿಭಾಗ ಮಾಡಿಕೊಳ್ಳಬೇಕು.

ವೈಯಕ್ತಿಕ ಖರ್ಚುವೆಚ್ಚಗಳು, ಆಪತ್ತಿನ ಕಾಲಕ್ಕೆಂದು ವಿಮೆ, ವ್ಯಕ್ತಿಯ ಬಳಿ ಅದಾಗಲೇ ಇರುವ ಆಸ್ತಿ, ಆತ ಮೇಲಿರುವ ಸಾಲದ ಹೊರೆ, ನಿವೃತ್ತಿ ನಂತರದ ಬದುಕಿಗೆ ಅಗತ್ಯವಿರುವ ಮೊತ್ತ, ಮಕ್ಕಳ ಶಿಕ್ಷಣ, ಆರೋಗ್ಯ ಸ್ಥಿತಿ... ಇಂತಹ ಹತ್ತು ಹಲವು ಸಂಗತಿಗಳು ಹೂಡಿಕೆ ನಿರ್ಧಾರದ ಮೇಲೆ ಪ್ರಭಾವ ಬೀರುತ್ತವೆ.

ಎಲ್ಲ ಹೂಡಿಕೆಗಳು ಬೇರೆ ಬೇರೆ ರೀತಿಯ ಲಾಭವನ್ನು ಬೇರೆ ಬೇರೆ ಅವಧಿಯಲ್ಲಿ ಕೊಡುತ್ತವೆ ಎಂಬುದು ನಮಗೆ ತಿಳಿದಿರುವ ಸಾಮಾನ್ಯ ವಿಚಾರ. ಇದು ಆರ್ಥಿಕತೆಯ ಒಂದು ನಿಯಮವೂ ಹೌದು. ಒಂದೊಂದು ಅವಧಿಯಲ್ಲಿ ಒಂದೊಂದು ಉತ್ಪನ್ನ ಅಥವಾ ಸೇವೆಗೆ ಅತಿಯಾದ ಬೇಡಿಕೆ ಇರುತ್ತದೆ. ಇದರಿಂದಾಗಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಏರಿಳಿತಗಳು ಸಹಜ. ಇಂತಹ ಏರಿಳಿತಗಳೇ ಹೂಡಿಕೆಯಿಂದ ಬರುವ ಲಾಭದ ಮೇಲೆಯೂ ಪರಿಣಾಮ ಬೀರುತ್ತವೆ.

1. ಹೂಡಿಕೆ ಮಾಡುವ ಮುನ್ನ ಈ ಮೂರು ಅಂಶಗಳನ್ನು ಕ್ರಮಾಗತವಾಗಿ ಮೊದಲು ಸ್ಪಷ್ಟಪಡಿಸಿಕೊಳ್ಳಿ: ಸುರಕ್ಷತೆ, ಆದಾಯ ಮತ್ತು ಬಂಡವಾಳದ ಬೆಳವಣಿಗೆ. ಪ್ರತಿ ಹೂಡಿಕೆದಾರರು ಈ ಮೂರು ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು.

2. ಎರಡನೆಯ ಹಂತವಾಗಿ, ನಿಮ್ಮಲ್ಲಿರುವ ಹೆಚ್ಚುವರಿ ಹಣದ ಮೊತ್ತ ಎಷ್ಟು ಎಂಬುದನ್ನು ಕಂಡುಕೊಳ್ಳಿ. ಈ ಮೊತ್ತವನ್ನು ನಿಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಂಡು, ವರ್ಷಕ್ಕೊಮ್ಮೆ ನಿರ್ಧರಿಸಬಹುದು.

3. ಎಲ್ಲ ಹೂಡಿಕೆಗಳು ಸ್ವಲ್ಪ ಮಟ್ಟಿಗೆ ಅಪಾಯ ಒಳಗೊಂಡಿರುತ್ತವೆ. ಉದಾಹರಣೆಗೆ, ಚಿನ್ನ, ಷೇರುಗಳು, ಬಾಂಡ್‌ಗಳು ಅಥವಾ ಮ್ಯೂಚುವಲ್ ಫಂಡ್‌ ಇತ್ಯಾದಿಗಳನ್ನು ಖರೀದಿಸಲು ನೀವು ಉದ್ದೇಶಿಸಿದ್ದರೆ - ನಿಮ್ಮ ಒಂದಷ್ಟು ಮೊತ್ತ ನಷ್ಟಕ್ಕೆ ಗುರಿಯಾಗಬಹುದು ಎನ್ನುವ ಅರಿವು ಇರಲಿ.

4. ಹಠಾತ್ ನಿರುದ್ಯೋಗದಂತಹ ತುರ್ತು ಪರಿಸ್ಥಿತಿಯನ್ನು ಸರಿದೂಗಿಸಲು ಸಾಕಷ್ಟು ಹಣವನ್ನು ಉಳಿತಾಯದ ಉತ್ಪನ್ನಗಳಲ್ಲಿ ಇರಿಸಿಕೊಳ್ಳಿ. ನಿಮ್ಮ ತಿಂಗಳ ಆದಾಯದ ಮೂರು ಅಥವಾ ಆರು ಪಟ್ಟು ಮೊತ್ತವು ಈ ರೀತಿ ಉಳಿತಾಯದ ಉತ್ಪನ್ನಗಳಲ್ಲಿ ಇರಬೇಕು.

5. ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಸಮಯೋಚಿತ ರೀತಿಯಲ್ಲಿ ವಿಮರ್ಶಿಸಿ, ಮರುಹೊಂದಾಣಿಕೆ ಮಾಡುತ್ತ ಇರಬೇಕು. ಇದು ಹಳೆಯ ತಪ್ಪು ನಿರ್ಧಾರಗಳನ್ನು ಪರಿಹರಿಸುವಲ್ಲಿ ನೆರವಾಗುತ್ತದೆ.

ಯಾವುದೇ ಹೂಡಿಕೆಯ ನಿರ್ಧಾರ ಕೈಗೊಳ್ಳುವ ಮುನ್ನ ಈ ಅಂಶಗಳನ್ನು ಪರಿಗಣಿಸಿ. ಅಗತ್ಯಬಿದ್ದ ಸಂದರ್ಭದಲ್ಲಿ ನಿಮ್ಮ ಹೂಡಿಕೆ ಸಲಹೆಗಾರರನ್ನು ಸಂಪರ್ಕಿಸಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001 ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT