ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ ಸ್ಪೆಷಲ್ | ಷೇರುಪೇಟೆ ವಿಸ್ಮಯ: ಸೂಚ್ಯಂಕ ಇಳಿಕೆಯಾದರೆ ಹೂಡಿಕೆದಾರರಿಗೆ ಹಬ್ಬ

ಗಳಿಸಿ, ಉಳಿಸಿ, ಬೆಳೆಸಿ
Last Updated 7 ಆಗಸ್ಟ್ 2019, 19:23 IST
ಅಕ್ಷರ ಗಾತ್ರ

ಎಲ್ಲವೂ ಸರಿಯಿದ್ದರೆ ಗೂಳಿ ಜಿಗಿತ, ಇಲ್ಲವಾದರೆ ಕರಡಿ ಕುಣಿತ. ಇದರ ಪರಿಣಾಮ ಷೇರುಪೇಟೆಯಲ್ಲಿ ಕರಗಿದ ಹೂಡಿಕೆ!

'ಗೂಳಿ ಓಟದ ಬಗ್ಗೆಯೂ ತಿಳಿದಿಲ್ಲ, ಕುಣಿಯುವ ಕರಡಿಯನ್ನು ನಿಯಂತ್ರಿಸುವ ಬಗೆಯೂ ಗೊತ್ತಿಲ್ಲ...' ಎಂದು ಚಕಿತರಾಗಿಯೇ ದೂರದಿಂದಲೇ ಷೇರುಪೇಟೆ ವಿಶ್ಲೇಷಿಸುವವರ ಸಂಖ್ಯೆ ದೊಡ್ಡದು. ಹೂಡಿಕೆಯಲ್ಲಿ ತೊಡಗಿದವರೂ ಸಹ ಸೂಚ್ಯಂಕ ಇಳಿಯುತ್ತಿದ್ದಂತೆ ಷೇರುಪೇಟೆಯಿಂದ ಕಳಚಿಕೊಂಡು ಓಡುವವರೇ ಹೆಚ್ಚು. ಆದರೆ, ’ಷೇರುಪೇಟೆ ಸೂಚ್ಯಂಕ ಇಳಿಕೆ ಎಂದರೆ, ಹೂಡಿಕೆದಾರರಿಗೆ ಭರ್ಜರಿ ರಿಯಾಯಿತಿ’ ಎನ್ನುತ್ತಾರೆ ಹೂಡಿಕೆ ತಜ್ಞ ಶರಣ್‌ ಪಾಟೀಲ್‌.

2019ರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ದಾಖಲೆ ಮಟ್ಟಕ್ಕೆ ಏರಿದ ಸೂಚ್ಯಂಕ, ಕೇಂದ್ರ ಬಜೆಟ್‌ ಮಂಡನೆಯಾಗುತ್ತಿದ್ದಂತೆ ಏರಿ ಕುಸಿದು ಇಳಿಕೆ ಹಾದಿ ಹಿಡಿಯಿತು. ಕಾಶ್ಮೀರದಲ್ಲಿ ಸೇನೆ ಜಮಾವಣೆ, ರಾಜಕಾರಣಿಗಳ ಗೃಹಬಂಧನ, ವಿಶೇಷ ಸ್ಥಾನಮಾನದ ಚರ್ಚೆಯಿಂದಾಗಿ ಷೇರುಪೇಟೆಯಲ್ಲಿ ಕೆಲಕಾಲ ತಲ್ಲಣ ಉಂಟಾಗಿತ್ತು.

ಜೂನ್‌ 3ರಂದು 40,267 ಅಂಶಗಳಿದ್ದ ಷೇರುಪೇಟೆ ಸೂಚ್ಯಂಕ ಜುಲೈ ಮಧ್ಯಭಾಗದಲ್ಲಿ 39,000 ಅಂಶಗಳಿಗೆ ಇಳಿಯಿತು. ಆಗಸ್ಟ್‌ 2ರಂದು ಲೋಹ, ಬ್ಯಾಂಕಿಂಗ್‌ ಮತ್ತು ತಂತ್ರಜ್ಞಾನ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗಿ, ಐದು ತಿಂಗಳ ಕನಿಷ್ಠ ಮಟ್ಟ 37,018 ಅಂಶಗಳಲ್ಲಿಗೆ ವಹಿವಾಟ ಅಂತ್ಯ ಕಂಡಿತು. ಆಗಸ್ಟ್‌ 5ರಂದು ವಹಿವಾಟು ಆರಂಭವಾಗಿದ್ದೇ 36,526 ಅಂಶಗಳಿಂದ.

ಬಜೆಟ್‌ ನಂತರ ಈವರೆಗೆ ಹೂಡಿಕೆದಾರರ ಸಂಪತ್ತಿನಲ್ಲಿ ₹11.48 ಲಕ್ಷ ಕೋಟಿಗೂ ಹೆಚ್ಚು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹139.87 ಲಕ್ಷ ಕೋಟಿಗೆ(ಆ.2ರವರೆಗೆ) ಇಳಿಕೆಯಾಗಿದೆ. ವಿದೇಶಿ ಸಾಂಸ್ಥಿಕ ಬಂಡವಾಳ (ಎಫ್‌ಪಿಐ) ಹೊರಹರಿವು ಮುಂದುವರಿದಿದೆ. ಜುಲೈನಲ್ಲಿ ₹3,700 ಕೋಟಿಗೂ ಆಧಿಕ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ನೆನಪಿಡಿ...

'ಮಾಡಿದ ಹೂಡಿಕೆಯ ಕುರಿತು ಯಾರು ಸದಾ ಸುದ್ದಿ ಪಡೆಯುತ್ತಿರುವರೋ ಅವರು, ತನ್ನ ಹೂಡಿಕೆ ಬಗ್ಗೆ ಯಾವುದೇ ಸುದ್ದಿಗಳನ್ನು ಪಡೆಯದ ವ್ಯಕ್ತಿಗಿಂತಲೂ ಕಡಿಮೆ ಗಳಿಕೆ ಪಡೆಯುವರು’ ಎನ್ನುತ್ತಾರೆ ಅಮೆರಿಕದ ಹೂಡಿಕೆ ತಜ್ಞ ಜೇಸನ್‌ ಜ್ವೇಗ್‌.

ಸೂಚ್ಯಂಕ ಕುಸಿದರೆ ರಿಯಾಯಿತಿ!

ಷೇರುಪೇಟೆ ಕುಸಿತ ಹೊಸ ಹೂಡಿಕೆದಾರರನ್ನು ಗೊಂದಲ ಮತ್ತು ಆತಂಕಕ್ಕೆ ದೂಡಿದೆ. ಮಾರುಕಟ್ಟೆ ಇಳಿಮುಖವಾದಾಗ ಹೂಡಿಕೆದಾರರು ಏನು ಮಾಡಬೇಕು? ಆತಂಕದಿಂದಾಗಿ ಇದು ಎಲ್ಲರಲ್ಲೂ ಏಳುವ ಸಹಜ ಪ್ರಶ್ನೆ.

ಇಂಥ ಸಂದರ್ಭವನ್ನು ಅರ್ಥೈಸಿಕೊಳ್ಳಬೇಕಾದ ಹಾಗೂ ಪ್ರತಿಕ್ರಿಯಿಸಬೇಕಾದ ರೀತಿಯಲ್ಲಿ ಬದಲಾವಣೆ ಕಂಡುಕೊಳ್ಳುವುದೇ ಇದಕ್ಕೆ ಉತ್ತರ ಎನ್ನುತ್ತಾರೆ ಇನ್‌ಸ್ಪೈರ್‌ ಇಂಡಿಯಾ ಹಣಕಾಸು ನಿರ್ವಹಣೆ ಸಂಸ್ಥೆಯ ಶರಣ್‌ ಪಾಟೀಲ್‌.

'ಷೇರುಪೇಟೆ ಇಳಿಕೆ ಅಂದರೆ, ಷೇರುಗಳು ರಿಯಾಯಿತಿ ದರದಲ್ಲಿ ಸಿಗುತ್ತಿವೆ ಎಂದೇ ತಿಳಿಯಬೇಕು. ಹಬ್ಬಗಳ ಸಂದರ್ಭದಲ್ಲಿ ಇ–ಮಾರುಕಟ್ಟೆ ಹಾಗೂ ಅಂಗಡಿಗಳಲ್ಲಿ ವಿಶೇಷ ರಿಯಾಯಿತಿ ಘೋಷಿಸಲಾಗುತ್ತದೆ. ಇರುವ ಬೇಡಿಕೆ ಹಾಗೂ ಬ್ರ್ಯಾಂಡ್‌ಗಳಿಗೆ ತಕ್ಕಂತೆ ವಸ್ತುಗಳ ಮೇಲಿನ ರಿಯಾಯಿತಿ ನಿರ್ಧಾರವಾಗಿರುತ್ತದೆ. ಶೇ 10 ರಿಂದ ಶೇ 60ರ ವರೆಗೂ ರಿಯಾಯಿತಿ ದೊರೆಯುತ್ತದೆ, ಇದರಿಂದ ಉತ್ತಮ ಗುಣಮಟ್ಟದ ವಸ್ತುಗಳನ್ನೂ ಸಹ ಕಡಿಮೆ ಬೆಲೆಗೆ ಕೊಳ್ಳುವ ಅವಕಾಶ ಗ್ರಾಹಕರಿಗೆ ಸಿಕ್ಕಿದಂತೆ ಆಗುತ್ತದೆ.

ಇದೇ ರೀತಿ ಷೇರುಪೇಟೆ ಸೂಚ್ಯಂಕ ಇಳಿಕೆಯಾದ ಸಮಯದಲ್ಲಿ ಕಂಪನಿಗಳ ಷೇರುಗಳ ಬೆಲೆಯೂ ಕಡಿಮೆಯಾಗಿರುತ್ತದೆ. ಇಲ್ಲಿ ಬೃಹತ್‌ ಹೂಡಿಕೆಯನ್ನು ಒಳಗೊಂಡಿರುವ ಉತ್ತಮ ಲಾಭದಲ್ಲಿರುವ ಕಂಪನಿಗಳ ಪ್ರತಿ ಷೇರು ಬೆಲೆಯೂ ಇಳಿಕೆಯಾಗಿರುತ್ತದೆ. ಅಂದರೆ, ಉತ್ತಮ ಗಳಿಕೆಯ ಹಿನ್ನೆಲೆ ಹೊಂದಿರುವ ಷೇರುಗಳು ಕಡಿಮೆ ಬೆಲೆಗೆ ಲಭ್ಯವಿರುತ್ತವೆ. ಅಂಥ ಷೇರುಗಳ ಖರೀದಿ ನಮ್ಮಲ್ಲಿದ್ದರೆ ಮುಂದೆ ಸೂಚ್ಯಂಕ ಏರಿಕೆಯಾಗುತ್ತಿದ್ದಂತೆ ಲಾಭ ಖಚಿತ. ದೀರ್ಘಾವಧಿ ಹೂಡಿಕೆದಾರರಿಗೂ ಇದು ಒಳ್ಳೆಯ ಅವಕಾಶವಾಗಿರುತ್ತದೆ’ ಎಂದು ವಿವರಿಸುತ್ತಾರೆ ಶರಣ್‌.

ಈಗಾಗಲೇ ಹೂಡಿಕೆ ಮಾಡಿದ್ದರೆ?

ಈಗಾಗಲೇ ಕೆಲವು ಕಂಪನಿಗಳ ಷೇರುಗಳನ್ನು ನೀವು ಖರೀದಿಸಿದ್ದು, ಮಾಡಿದ್ದ ಹೂಡಿಕೆ ಕರಗುತ್ತಿರುವುದು ಕಂಡರೆ ಗಾಬರಿಯಾಗುವ ಅಗತ್ಯವಿಲ್ಲ. ಹೂಡಿಕೆ ಮಾಡುವಾಗಲೇ ಸರಿಯಾದ ಷೇರುಗಳ ಆಯ್ಕೆ ಮಾಡಿದ್ದರೆ, ಈಗ ಅದರೊಂದಿಗೆ ಇನ್ನಷ್ಟು ಹೂಡಿಕೆ ಮಾಡುವುದು ಸೂಕ್ತ ಮಾರ್ಗ. ನಿಮ್ಮ ಹೂಡಿಕೆ ದೀರ್ಘಾವಧಿಗೆ ಎಂಬುದು ನಿಮ್ಮಲ್ಲಿ ನಿಮಗೆ ಸ್ಪಷ್ಟತೆ ಇರಬೇಕು. ಹಾಗಿದ್ದರೆ, ಮತ್ತಷ್ಟು ಹೂಡಿಕೆ ಸಾಧ್ಯವಾಗದಿದ್ದರೂ ದಿಢೀರ್‌ ಷೇರು ಮಾರಾಟ ಮಾಡಿ ಬಂದಷ್ಟು ಹಣ ಉಳಿಸಿಕೊಳ್ಳುವ ಆತುರದ ನಿರ್ಧಾರಕ್ಕೆ ಮುಂದಾಗಬಾರದು. ಏಕೆಂದರೆ, ಷೇರು ಮಾರುಕಟ್ಟೆಯಲ್ಲಿ ಏರಿಕೆ ಮತ್ತು ಇಳಿಕೆ ಇದ್ದರೆ ಮಾತ್ರವೇ ಪ್ರತಿ ಷೇರು ಮೌಲ್ಯ ಏರಲು ಹಾಗೂ ಶೇಕಡವಾರು ಗಳಿಕೆ ಹೆಚ್ಚಲು ಸಾಧ್ಯ.

ಏಳು–ಬೀಳುಗಳೇಕೆ?

ಹಗರಣಗಳು, ಸರ್ಕಾರ ರಚನೆ, ಚುನಾವಣೆ, ಯುದ್ಧ, ಪ್ರವಾಹ ಅಥವಾ ಬರ ಪರಿಸ್ಥಿತಿ,.. ಎಲ್ಲವೂ ಷೇರುಪೇಟೆಯ ಮೇಲೆ ಪ್ರಭಾವ ಬೀರುತ್ತವೆ. ಇವೆಲ್ಲವೂ ಅಲ್ಪಾವಧಿ ಪ್ರಭಾವ ಬೀರುವ ಅಂಶಗಳು. ಆದರೆ ದೀರ್ಘಾವಧಿಯಲ್ಲಿ ಸೂಚ್ಯಂಕ ದಾಖಲೆ ಏರಿಕೆಯಾಗುತ್ತಲೇ ಇದೆ.

1992ರಲ್ಲಿ ಹರ್ಷದ್‌ ಮೆಹ್ತಾ ಹಗರಣದಿಂದಾಗಿ ಒಂದೇ ವರ್ಷದಲ್ಲಿ ಷೇರುಪೇಟೆ ಸೂಚ್ಯಂಕ ಶೇ 54ರಷ್ಟು ಕುಸಿಯಿತು. ಅದೇ ಮಾರುಕಟ್ಟೆ ಒಂದೂವರೆ ವರ್ಷದ ಬಳಿಕ ಶೇ 127 ಗಳಿಕೆ ಕಂಡಿತು. ಇದೇ ರೀತಿ 1996, 2000 ಹಾಗೂ 2008ರಲ್ಲಿ ಷೇರುಪೇಟೆ ದಿಢೀರ್‌ ಕುಸಿತದ ನಂತರವೂ ಉತ್ತಮ ಗಳಿಕೆಯನ್ನೇ ಕಂಡಿದೆ. ಷೇರುಪೇಟೆ ಕುಸಿಯುವ ಪ್ರತಿ ಸಲವೂ ಹೂಡಿಕೆಗೆ ಬಹುದೊಡ್ಡ ಅವಕಾಶ ಸೃಷ್ಟಿಯಾಗುತ್ತದೆ.

ಕಳೆದ 15 ವರ್ಷಗಳಲ್ಲಿ...

ಷೇರುಪೇಟೆಯಲ್ಲಿ ದೀರ್ಘಾವಧಿ ಹೂಡಿಕೆಯಿಂದ ಹೆಚ್ಚು ಗಳಿಕೆ ಸಾಧ್ಯವಾಗುತ್ತದೆ. ಕಳೆದ ಹದಿನೈದು ವರ್ಷಗಳಲ್ಲಿ ಸೂಚ್ಯಂಕ ಬೆಳವಣಿಗೆಯನ್ನು ಗಮನಿಸಿದರೆ; 2003ರ ಸೆಪ್ಟೆಂಬರ್‌ 30ರಂದು ಷೇರುಪೇಟೆ ಸೂಚ್ಯಂಕ 4453 ಅಂಶಗಳಿತ್ತು. ಹದಿನೈದು ವರ್ಷಗಳ ನಂತರ, ಅಂದರೆ 2018ರ ಸೆಪ್ಟೆಂಬರ್‌ 30ರಂದು 36,227 ಅಂಶಗಳು ದಾಖಲಾಗಿತ್ತು. ಸೂಚ್ಯಂಕದ ಆಧಾರದಲ್ಲಿ ಈ 15 ವರ್ಷಗಳಲ್ಲಿ 8.14ಪಟ್ಟು ಹೆಚ್ಚಳ ದಾಖಲಾಗಿದೆ. ಆದಾಯದ ಲೆಕ್ಕದಲ್ಲಿ ಶೇ 15ರಷ್ಟು ಗಳಿಕೆಯಾಗಿದೆ.

ಹಾಗಾಗಿ, ಷೇರುಪೇಟೆಯ ಮೇಲೆ ಸುದ್ದಿಗಳ ಪರಿಣಾಮ ಹಾಗೂ ಷೇರುಪೇಟೆ ಕುಸಿತ ಅಲ್ಪಾವಧಿಯಾಗಿರುತ್ತದೆ. ಭಾರತದಂತಹ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಲ್ಲಿ ಷೇರುಪೇಟೆ ಇನ್ನಷ್ಟು ಎತ್ತರಕ್ಕೆ ಸಾಗುವ ಅವಕಾಶಗಳು ದಟ್ಟವಾಗಿವೆ. ಶರಣ್‌ ಅವರ ಪ್ರಕಾರ, ಮುಂದಿನ 15 ವರ್ಷಗಳಲ್ಲಿ ಸೂಚ್ಯಂಕ 2 ಲಕ್ಷ ಅಂಶಗಳನ್ನು ದಾಟುವ ಸಾಧ್ಯತೆಯಿದೆ.

ಹೂಡಿಕೆಗೆ ಎಸ್‌ಐಪಿ ಸೂತ್ರ

ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆ ಸಾಧ್ಯವಾಗದಿದ್ದರೆ, ಮ್ಯೂಚುಯಲ್‌ ಫಂಡ್‌ಗಳ ಮೂಲಕ ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ಷೇರುಪೇಟೆಯ ಗಳಿಕೆಯ ಲಾಭ ಪಡೆಯಬಹುದು. ಪ್ರತಿ ತಿಂಗಳು ನಿಗದಿತ ಮೊತ್ತದೊಂದಿಗೆ ಆಯ್ಕೆ ಮಾಡಿದ ಕಂಪನಿಯ ಉತ್ಪನ್ನಗಳ ಯೂನಿಟ್‌ಗಳನ್ನು ಕೊಳ್ಳುವುದು ಎಸ್‌ಐಪಿ(ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌)ಯಿಂದ ಸಾಧ್ಯ. ಪ್ರತಿ ತಿಂಗಳು ಷೇರುಪೇಟೆ ಸೂಚ್ಯಂಕದ ಆಧಾರದ ಮೇಲೆ ನಿರ್ದಿಷ್ಟ ಕಂಪನಿಯ ಉತ್ಪನ್ನಗಳ ಯೂನಿಟ್‌ ಮೌಲ್ಯ ನಿಗದಿಯಾಗುತ್ತದೆ.

ಇದರಿಂದಾಗಿ ಷೇರುಪೇಟೆ ಸೂಚ್ಯಂಕ ಇಳಿಕೆಯಾದಾಗ, ಹೆಚ್ಚು ಯೂನಿಟ್‌ಗಳು ನಮ್ಮ ಖಾತೆಗೆ ಸೇರುತ್ತವೆ. ಪ್ರತಿ ಏರಿಳಿತವನ್ನು ನಿಯಮಿತ ಖರೀದಿಯಿಂದಾಗಿ ತೂಗಿಸಬಹುದಾಗಿದೆ. ದೀರ್ಘಾವಧಿಯಲ್ಲಿ ಈ ಮೂಲಕ ಪಡೆಯುವ ಗಳಿಕೆ ಉಳಿದ ಯಾವುದೇ ಉಳಿತಾಯ ಯೋಜನೆಗಳಿಗಿಂತಲೂ ಅಧಿಕ ಮಟ್ಟದಲ್ಲಿರುತ್ತದೆ.

ಆರ್ಥಿಕತೆಯ ಆಧಾರ

ಜಿಡಿಪಿ ವೃದ್ಧಿಯೊಂದಿಗೆ ಉತ್ತಮಗೊಳ್ಳುವ ದೇಶದ ಆರ್ಥಿಕತೆಯು ಷೇರುಪೇಟೆಯ ಮೇಲೂ ಪರಿಣಾಮ ಬೀರುತ್ತದೆ. 2018ರಲ್ಲಿ ಭಾರತದ ‘ಜಿಡಿಪಿ’ಯು ₹190 ಲಕ್ಷ ಕೋಟಿಗಳಷ್ಟಿದೆ ಎಂದು ವಿಶ್ವಬ್ಯಾಂಕ್‌ ಲೆಕ್ಕ ಹಾಕಿದೆ. ₹350 ಲಕ್ಷ ಕೋಟಿ ಮೊತ್ತದ ಆರ್ಥಿಕತೆಯಾಗುವ ಗುರಿಯನ್ನು ಭಾರತ ಹೊಂದಿದೆ. ಯುವ ಸಮುದಾಯದ ಬಲ ಹೊಂದಿರುವ ಭಾರತದಲ್ಲಿ ಅಭಿವೃದ್ಧಿ ಮತ್ತು ಆರ್ಥಿಕತೆ ಷೇರುಪೇಟೆಯ ಏರಿಳಿತದಲ್ಲಿ ಪ್ರಮುಖಪಾತ್ರ ವಹಿಸುವುದಾಗಿ ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT