ಸೋಮವಾರ, ಜುಲೈ 26, 2021
21 °C

ಬೆರಗಿನ ಬೆಳಕು | ಸುಖವೆಂಬ ಮೃಗಜಲ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ |

ಹುಲ್ಲುಬಯಲೊಂದೆಡೆಯಿನೊಂದಕ್ಕೆ ನೆಗೆದು ||
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ|
ಡೆಲ್ಲಿಯೋ ಸುಖ ನಿನಗೆ? – ಮಂಕುತಿಮ್ಮ || 301||

ಪದ-ಅರ್ಥ: ಚೆನ್ನೆನುತೆಣಿಸಿ=ಚೆನ್ನು+ಎನುತ+
ಎಣಿಸಿ, ಹುಲ್ಲುಬಯಲೊಂದೆಡೆಯಿನೊಂದಕ್ಕೆ= ಹುಲ್ಲುಬಯಲಿನ+ಒಂದೆಡೆಯಿಂದ+ಇನ್ನೊಂದಕ್ಕೆ, ಪೋಲ್ತೊಡೆಲ್ಲಿಯೋ=ಪೋಲ್ತೊಡೆ (ಅದರಂತೆ ಆದರೆ, ಸದೃಶವಾದರೆ)+ಎಲ್ಲಿಯೋ.

ವಾಚ್ಯಾರ್ಥ: ಇಲ್ಲಿ ಚೆನ್ನಾಗಿದೆ, ಅಲ್ಲಿ ಚೆನ್ನಾಗಿದೆ, ಎಲ್ಲೋ ಚೆನ್ನಾಗಿದೆ ಎಂದು ಭಾವಿಸಿ, ಹುಲ್ಲು ಅಲ್ಲಿ ಚೆನ್ನಾಗಿದೆ, ಇಲ್ಲಿ ಚೆನ್ನಾಗಿದೆಯೆಂದು ಹುಲ್ಲು ಬಯಲಿನಲ್ಲಿ ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಹಾರಾಡುತ್ತ ಏನನ್ನೂ ತಿನ್ನದೆ ದಣಿದು ಬಳಲುವ ಕರುವಿನಂತೆ ನೀನೂ ಮಾಡಿದರೆ ಸುಖ ಎಲ್ಲಿ ದೊರಕೀತು?

ವಿವರಣೆ: ಅವನೊಬ್ಬ ರಾಜಕುಮಾರ. ಬೇಟೆಗೆಂದು ಕಾಡಿಗೆ ತೆರಳಿದ. ಒಂದು ಮರದ ಕೆಳಗೆ ಮಂಚವನ್ನು ಕಟ್ಟಿಕೊಂಡು ಕುಳಿತ. ಅವನ ಸೈನಿಕರು, ಜೊತೆಗಿದ್ದ ಬೇಟೆಗಾರರು ತಮಟೆ, ಹಲಗೆಗಳನ್ನು ಬಾರಿಸುತ್ತ ಪ್ರಾಣಿಗಳನ್ನು ಹೆದರಿಸಿ ರಾಜನಿರುವ ಕಡೆಗೆ ಓಡಿಸುತ್ತಿದ್ದರು. ಅವು ಹತ್ತಿರ ಬಂದಾಗ ಹೊಡೆದು ಹೆಮ್ಮೆಪಡುವುದು ಅವನ ಕೆಲಸ. ಅವನು ಬಿಲ್ಲಿಗೆ ಬಾಣ ಹೂಡಿ ನೋಡುತ್ತ ಕುಳಿತಾಗ ಕೇವಲ ಹತ್ತು ಅಡಿ ಅಂತರದಲ್ಲಿ ಒಂದು ಸುಂದರವಾದ ಮೊಲ ಹಾರುತ್ತ ಹಾರುತ್ತ ಅವನ ಮುಂದೆಯೇ ಕುಳಿತಿತು. ಅದನ್ನು ಅತ್ಯಂತ ಸುಲಭದಲ್ಲಿ ಹೊಡೆಯಬಹುದಿತ್ತು. ಅವನು ಇನ್ನೇನು ಬಾಣ ಬಿಡಬೇಕು ಎನ್ನುವಷ್ಟರಲ್ಲಿ ಅವನ ಕಣ್ಣಂಚಿನಲ್ಲಿ ಒಂದು ಜಿಂಕೆ ಕಂಡಿತು. ಅದು ನೂರು ಗಜ ದೂರವಿತ್ತು. ಜಿಂಕೆ ಸಿಕ್ಕಾಗ ಮೊಲ ಹೊಡೆಯುವುದು ಯಾವ ಶೌರ್ಯ ಎಂದು ರಾಜಕುಮಾರ ಆ ಕಡೆಗೆ ನಿಧಾನವಾಗಿ ನಡೆದ. ಹತ್ತಿರಕ್ಕೆ ಬರುತ್ತಿದ್ದಂತೆ ಅದು ಛಂಗನೇ ಹಾರಿ, ಹೆದರಿ ಓಡಿ ಹೋಯಿತು. ಆಗ ಅಲ್ಲಿಗೆ ಬಂದದ್ದು ಒಂದು ದೊಡ್ಡ ಹುಲಿ. ಭಲೇ, ಭಾರೀ ಬೇಟೆಯೇ ಸಿಕ್ಕಿತು ಎಂದು ಬಾಣ ಬಿಡುವಷ್ಟರಲ್ಲಿ ಹುಲಿ ಜಿಂಕೆಯನ್ನು ಅಟ್ಟಿಸಿಕೊಂಡು ಓಡಿತು. ಹುಲಿ ತಪ್ಪಿತು, ಜಿಂಕೆಯೂ ತಪ್ಪಿತು. ಕೊನೆಗೆ ಮೊಲವನ್ನಾದರೂ ಹೊಡೆಯಬೇಕು ಎಂದು ಬಂದರೆ ಅದೆಲ್ಲಿದೆ? ಅದು ಬೇಟೆಗಾರನಿಗೆ ಕಾಯುತ್ತ ಕುಳಿತಿರುತ್ತದೆಯೇ? ರಾಜಕುಮಾರ ಯಾವ ಬೇಟೆಯೂ ಸಿಗದೆ ಮುಖ ಒಣಗಿಸಿಕೊಂಡು ಮರಳಿದ. ಮನುಷ್ಯನ ಸ್ವಭಾವವೇ ಹಾಗೆ. ಯಾವುದೋ ವಸ್ತುವೋ, ಸ್ಥಾನವೋ, ದೊರೆತಾಗ ಅದರ ಬಗ್ಗೆ ತೃಪ್ತಿಪಡುವುದು ಅಪರೂಪ. ಇದಕ್ಕಿಂತ ಚೆನ್ನಾಗಿರುವುದು ಬೇರೆ ಇದೆ ಎಂದುಕೊಂಡು ಅದನ್ನು ಬೆನ್ನಟ್ಟಿ ಹೊರಡುವುದು. ಅದೂ ದೊರೆತರೆ ಮತ್ತೊಂದಕ್ಕೆ ಅಪೇಕ್ಷೆ. ಕಲಿತ ಮೇಲೆ ಕೆಲಸದ ಆಸೆ. ಅದು ದೊರೆತ ಮೇಲೆ, ಇನ್ನೊಂದು ಆಕರ್ಷಕ ಕೆಲಸದ ಅಪೇಕ್ಷೆ. ನಂತರ ಬೇರೆ ದೇಶದಲ್ಲಿ ಹೆಚ್ಚು ಹಣದ, ಸ್ಥಿರತೆಯ, ಮೆರಗಿನ ಪ್ರಪಂಚಕ್ಕೆ ಹಾತೊರೆತ. ಅಲ್ಲಿ ಏನಾದರೂ ತೊಂದರೆಯಾದಾಗ, ಆತ್ಮೀಯರು ಯಾರೂ ಇಲ್ಲದೆ ಒದ್ದಾಡಿ ಮರಳಿ ನಮ್ಮ ದೇಶಕ್ಕೇ ಬರಬೇಕೆಂಬ ಆಸೆ. ಹೀಗೆ ಸುಖದ ಬೆನ್ನತ್ತಿ, ಓಡುತ್ತ ಓಡುತ್ತ, ಹಸಿರು ಹುಲ್ಲಿಗಾಗಿ ಕಾಡೆಲ್ಲ ಸುತ್ತಿ, ಹುಲ್ಲನ್ನು ತಿನ್ನದೆ ಸುಸ್ತಾಗಿ ಮರಳಿದ ಹಸುವಿನಂತೆ, ಮನುಷ್ಯನೂ ಸುಖದ ಮೃಗಜಲವನ್ನು ಬೆನ್ನಟ್ಟಿ ಓಡುತ್ತಿದ್ದಾನೆ. ಇರುವಲ್ಲಿಯೇ, ಇರುವುದರಲ್ಲಿಯೇ ಸುಖವನ್ನು ಕಾಣುವುದನ್ನು ಬಿಟ್ಟು ಎಲ್ಲೆಲ್ಲಿಯೋ ಹುಡುಕುತ್ತ ಧಾವಂತ ಪಟ್ಟರೆ ಸುಖ ಸಿಕ್ಕೀತೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು