ಬುಧವಾರ, ಮಾರ್ಚ್ 22, 2023
21 °C

ಬ್ಯಾಂಕ್‌ಗಳು ಬಡ್ಡಿ ಇಳಿಸುತ್ತಿರುವ ಈ ಕಾಲದಲ್ಲಿ ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ?

ಕ್ಲಿಯೋನ್ ಡಿಸೋಜ Updated:

ಅಕ್ಷರ ಗಾತ್ರ : | |

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸಕ್ತ ಸಾಲಿನಲ್ಲಿ 5 ಬಾರಿ ರೆಪೊ ದರ ಕಡಿತ ಮಾಡಿದೆ. ಇದರ ಪರಿಣಾಮವಾಗಿ ಬ್ಯಾಂಕ್‌ಗಳು ಈಗ ಸಾಲಗಳ ಬಡ್ಡಿ ಇಳಿಸುವ ಜತೆಗೆ ವಿವಿಧ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ ಕಡಿತಗೊಳಿಸಿವೆ.


ಕ್ಲಿಯೋನ್ ಡಿಸೋಜ

ಎಸ್‌ಬಿಐ, ಸದ್ಯ 5 ವರ್ಷದ ಅವಧಿಯ ಎಫ್‌ಡಿಗೆ ಸಾಮಾನ್ಯ ನಾಗರಿಕರಿಗೆ ಶೇ 6.25 ರಷ್ಟು ಬಡ್ಡಿ ನೀಡುತ್ತಿದ್ದರೆ, ಹಿರಿಯ ನಾಗರಿಕರಿಗೆ ಶೇ 6.75 ರಷ್ಟು ಬಡ್ಡಿ ನಿಗದಿ ಮಾಡಿದೆ. ನಿಶ್ಚಿತ ಠೇವಣಿ (ಎಫ್‌ಡಿ) ಗಳ ಮೇಲಿನ ಬಡ್ಡಿ ದರ ತಗ್ಗಿರುವುದರಿಂದ, ಸಾಮಾನ್ಯ ನಾಗರಿಕರು ಹಾಗೂ ಹಿರಿಯ ನಾಗರಿಕರ ಮನದಲ್ಲಿ ನಿರ್ದಿಷ್ಟ ಮಾಸಿಕ ಆದಾಯಕ್ಕೆ ಪರ್ಯಾಯವೇನು ಎಂಬ ಚಿಂತೆ ಮನೆಮಾಡಿದೆ.

ಈ ಹೊತ್ತಿನಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿಗೆ ಸರಿ ಹೊಂದುವ ಕೆಲ ಹೂಡಿಕೆ ಸಾಧ್ಯತೆಗಳನ್ನು ಇಲ್ಲಿ ವಿವರಿಸಲಾಗಿದೆ.

ಮ್ಯೂಚುವಲ್ ಫಂಡ್ ಆಯ್ಕೆಗಳು

ಠೇವಣಿಗಳ ಮೇಲಿನ ಬಡ್ಡಿ ಇಳಿಕೆ ಕಾಲದಲ್ಲಿ ಹೂಡಿಕೆ ಮೇಲೆ ಹೆಚ್ಚು ಗಳಿಸಲು ಮ್ಯೂಚುವಲ್ ಫಂಡ್‌ಗಳೂ ಸೂಕ್ತವಾಗಿವೆ.

ಮ್ಯೂಚುವಲ್ ಫಂಡ್‌ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಹತ್ತಾರು ಆಯ್ಕೆಗಳಿವೆ. ಆದರೆ, ಇದರಲ್ಲಿ ಒಂದಿಷ್ಟು ನಷ್ಟ ಸಾಧ್ಯತೆ (ರಿಸ್ಕ್) ಇದ್ದೇ ಇರುತ್ತದೆ. 5 ಅಥವಾ 10 ವರ್ಷಕ್ಕಿಂತ ಹೆಚ್ಚಿನ ಅವಧಿಯ ಹೂಡಿಕೆಗೆ ಈಕ್ವಿಟಿ ಅಥವಾ ಬ್ಯಾಲೆನ್ಸ್ಡ್ ಫಂಡ್ ಒಳ್ಳೆಯ ಆಯ್ಕೆ.

ದೊಡ್ಡ ಮೊತ್ತದ ಹಣವಿದ್ದು, ತುರ್ತು ಸಂದರ್ಭಗಳಿಗೆ ಆ ಹಣ ಅಗತ್ಯ ಎಂದಾದರೆ ಲಿಕ್ವಿಡ್ ಫಂಡ್‌ನಲ್ಲಿ ಹಣ ತೊಡಗಿಸಬಹುದು. ನಿರ್ದಿಷ್ಟ ಆದಾಯ ಗಳಿಸಲು ಮಾಸಿಕ ಆದಾಯ ಯೋಜನೆ (ಮಂತ್ಲಿ ಇನ್‌ಕಂ ಪ್ಲ್ಯಾನ್) ಅಥವಾ ಆದಾಯ ನಿಧಿ ( ಇನ್‌ಕಂ ಫಂಡ್) ಪರಿಗಣಿ ಸಬಹುದು.

ಷೇರುಗಳ ಅಲ್ಪ ಗಳಿಕೆ

ಷೇರುಪೇಟೆ ಸೂಚ್ಯಂಕಗಳು ಅನಿಶ್ಚಿತ ವಾತಾವರಣದ ನಡುವೆಯೂ ಈ ವಾರ ಸಕಾರಾತ್ಮಕ ಏರಿಕೆ ದಾಖಲಿಸಿವೆ. ವಾರದ ಅವಧಿಯಲ್ಲಿ ಶೇ 1.2 ರಷ್ಟು ಏರಿಕೆ ಕಂಡಿರುವ ಸೆನ್ಸೆಕ್ಸ್ 38,127 ಅಂಶಗಳಲ್ಲಿ ವಹಿವಾಟು ಪೂರ್ಣ ಗೊಳಿಸಿದೆ. ನಿಫ್ಟಿ ಶೇ 1.1 ರಷ್ಟು ಗಳಿಕೆ ಕಂಡಿದ್ದು 11,301 ರಲ್ಲಿ ವಹಿವಾಟು ಮುಗಿಸಿದೆ.

ವಲಯವಾರು ಸಾಧನೆ ಪರಿಗಣಿಸಿದಾಗ ನಿಫ್ಟಿ ಎಫ್ಎಂಸಿಜಿ ಶೇ 4.3, ಬ್ಯಾಂಕ್ ಶೇ 3, ವಾಹನ ವಲಯ ಶೇ 3.3 ರಷ್ಟು ಏರಿಕೆ ದಾಖಲಿಸಿವೆ. ಮಾಧ್ಯಮ ವಲಯ, ಮಾಹಿತಿ ತಂತ್ರಜ್ಞಾನ ವಲಯ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಮಾರಾಟದ ಒತ್ತಡ ಕಂಡುಬಂದಿದೆ.

ಗಳಿಕೆ- ಇಳಿಕೆ: ಏರ್‌ಟೆಲ್, ಬ್ರಿಟಾನಿಯಾ ಇಂಡಸ್ಟ್ರೀಸ್, ಗ್ರಾಸಿಮ್ ಮತ್ತು ಸಿಪ್ಲಾ ಶೇ 5 ರಿಂದ ಶೇ 13 ರ ವರೆಗೆ ಗಳಿಸಿವೆ. ಬೇರೆ ನೆಟ್‌ವರ್ಕ್‌ನ ಮೊಬೈಲ್‌ಗಳಿಗೆ ಕರೆ ಮಾಡಿದರೆ ಶುಲ್ಕ ವಿಧಿಸುವುದಾಗಿ ಜಿಯೊ ಹೇಳಿದ ಪರಿಣಾಮ ಏರ್‌ಟೆಲ್ ಷೇರುಗಳು ಶೇ 13.3 ರಷ್ಟು ಜಿಗಿದಿವೆ.

ಮಧ್ಯಮ ಶ್ರೇಣಿಯಲ್ಲಿ ಗೃಹ ಫೈನಾನ್ಸ್ ಶೇ 12.9 ರಷ್ಟು ಗಳಿಸಿಕೊಂಡಿದೆ. ಬರ್ಜರ್ ಪೇಂಟ್ಸ್, ಬಯೋಕಾನ್, ಮಣಪ್ಪುರಂ ಫೈನಾನ್ಸ್, ಸ್ಟ್ರೈಡ್ಸ್, ಅಪೋಲೊ ಹಾಸ್ಪಿಟಲ್ಸ್ ಕೂಡ ಮಧ್ಯಮ ಶ್ರೇಣಿಯಲ್ಲಿ ಶೇ 3 ರಿಂದ ಶೇ 12.5 ರಷ್ಟು ಗಳಿಸಿವೆ.

ಕುಸಿತ: ಯೆಸ್ ಬ್ಯಾಂಕ್, ಗೇಲ್ , ಬಿಪಿಸಿಎಲ್, ಐಟಿಸಿ, ಐಒಸಿ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಿಫ್ಟಿ (50) ಸೂಚ್ಯಂಕದಲ್ಲಿ ಕುಸಿತ ದಾಖಲಿಸಿರುವ ಪ್ರಮುಖ ಕಂಪನಿಗಳು.

ಹೂಡಿಕೆ ವಿಚಾರವಾಗಿ ಮೈಕ್ರೊಸಾಫ್ಟ್ ಜತೆ ಮಾತುಕತೆ ನಡೆಸಿಲ್ಲ ಎಂದು ಯೆಸ್ ಬ್ಯಾಂಕ್ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಕಂಪನಿ ಷೇರುಗಳು ಶೇ 6 ರಷ್ಟು ಕುಸಿದಿವೆ. ತ್ರೈಮಾಸಿಕ ಫಲಿತಾಂಶದಲ್ಲಿ ನಿರೀಕ್ಷಿತ ಬೆಳವಣಿಗೆ ಸಾಧಿಸದ ಪರಿಣಾಮ ಟಿಸಿಎಸ್ ಷೇರುಗಳು ಶೇ 4.5 ರಷ್ಟು ತಗ್ಗಿವೆ.

ಮುನ್ನೋಟ: ಈ ವಾರ ಕರ್ಣಾಟಕ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಲಿ., ಎಚ್‌ಡಿಎಫ್‌ಸಿ ಬ್ಯಾಂಕ್, ಟಿವಿಎಸ್ ಮೋಟರ್ಸ್, ವಿಪ್ರೊ, ಮೈಂಡ್‌ಟ್ರೀ, ಡಿಎಚ್‌ಎಫ್‌ಎಲ್, ಫೆಡರಲ್ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ 2.4 ರಷ್ಟು ಇಳಿಕೆಯಾಗಿದೆ. ಕೈಗಾರಿಕೆ ಉತ್ಪಾದನೆ ಪ್ರಗತಿ ಶೇ -1.1 ಕ್ಕೆ ಕುಸಿದಿದೆ. ಈ ಮಧ್ಯೆ ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಬಿಕ್ಕಟ್ಟು ಶಮನವಾಗುವ ಲಕ್ಷಣ ಗೋಚರಿಸುತ್ತಿದೆ. ಈ ಎಲ್ಲಾ ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿವೆ. ತ್ರೈಮಾಸಿಕ ಫಲಿತಾಂಶಗಳು ಆಶಾದಾಯಕವಾಗಿರದ ಕಾರಣ ಹೂಡಿಕೆದಾರರು ಸದ್ಯಕ್ಕೆ ಎಚ್ಚರಿಕೆಯ ನಡೆ ಅನುಸರಿಸಬೇಕಾಗಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು