ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗ ಹೂಡಿ, ಶ್ರೀಮಂತರಾಗಿ!

Last Updated 18 ಫೆಬ್ರುವರಿ 2020, 5:52 IST
ಅಕ್ಷರ ಗಾತ್ರ
ADVERTISEMENT
""

ಇವತ್ತೇ ಹಣ ಹೂಡಿಕೆ ಮಾಡ್ತೀನಿ. ಇಲ್ಲಾ ನಾಳೆ ಶುರು ಮಾಡ್ತೀನಿ. ಅಯ್ಯೋ ಈ ತಿಂಗಳು ಖರ್ಚು ಜಾಸ್ತಿ. ಮುಂದಿನ ತಿಂಗಳಿಂದ ಖಂಡಿತವಾಗಿಯೂ ಉಳಿತಾಯ ಮಾಡಿ ಹೂಡಿಕೆ ಮಾಡ್ತೀನಿ. ಹೂಡಿಕೆ ವಿಚಾರದಲ್ಲಿ ಬಹುತೇಕರು ಹೀಗೆ ನಿರ್ಧಾರ ಮುಂದೂಡುತ್ತಾ ಸಾಗುತ್ತಾರೆ. ಆದರೆ, ಹಣ ಹೂಡಿಕೆ ತಡ ಮಾಡಿದಷ್ಟೂ ನಷ್ಟ ಜಾಸ್ತಿ ಎನ್ನುವ ಸತ್ಯವನ್ನು ನೀವು ಅರಿತುಕೊಳ್ಳಬೇಕು.

ಹನಿ ಹನಿಗೂಡಿದರೆ ಹಳ್ಳ ಎನ್ನುವ ಮಾತು ಉಳಿತಾಯ ಮತ್ತು ಹೂಡಿಕೆಗೂ ಅನ್ವಯಿಸುತ್ತದೆ. ನಾವು ಎಷ್ಟು ಬೇಗ ಹೂಡಿಕೆ ಆರಂಭಿಸುತ್ತಿವೋ ಅಷ್ಟರ ಮಟ್ಟಿಗೆ ನಾವು ಶ್ರೀಮಂತರಾಗುತ್ತೇವೆ. ಇದನ್ನೇ ಹಣಕಾಸು ನಿರ್ವಹಣೆಯ ಪರಿಭಾಷೆಯಲ್ಲಿ ಪವರ್ ಆಫ್ ಕಾಂಪೌಂಡಿಂಗ್ (ಹಣದ ಒಟ್ಟುಗೂಡುವಿಕೆಯ ಶಕ್ತಿ) ಎಂದು ಕರೆಯಲಾಗುತ್ತದೆ.

ಹೂಡಿಕೆ ವಿಳಂಬದಿಂದ ಆಗುವ ನಷ್ಟ ಎಷ್ಟು ಎನ್ನುವುದನ್ನು ಇಲ್ಲಿ ಎರಡು ನಿದರ್ಶನಗಳ ಮೂಲಕ ವಿವರಿಸಲಾಗಿದೆ.

ಉದಾಹರಣೆ 1: ಭರತ್ ಎಂಬಾತ 29 ವರ್ಷಕ್ಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. 30 ನೇ ವರ್ಷದಿಂದಲೇ ಆತ ನಿವೃತ್ತಿಗಾಗಿ ಯೋಜನೆ ರೂಪಿಸಿಕೊಂಡು ಮುಂದಿನ 10 ವರ್ಷಗಳ ಕಾಲ ( 120 ತಿಂಗಳು) ಮಾಸಿಕ ₹ 5 ಸಾವಿರದಂತೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತಾ ಸಾಗುತ್ತಾನೆ. ಆತನಿಗೆ 40 ವರ್ಷ ತುಂಬುವ ಹೊತ್ತಿಗೆ ಭರತ್ ಒಟ್ಟು ₹6 ಲಕ್ಷ ಹೂಡಿಕೆ ಮಾಡಿರುತ್ತಾನೆ. ಈ ₹ 6 ಲಕ್ಷ ಹೂಡಿಕೆಗೆ ಶೇ 12 ರಷ್ಟು ಲಾಭಾಂಶದಲ್ಲಿ ಭರತ್ ₹ 11,61,695 ಗಳಿಸಿರುತ್ತಾನೆ. ಈ ₹ 11.61 ಲಕ್ಷಗಳನ್ನು ಭರತ್‌ ಮುಂದಿನ 20 ವರ್ಷಗಳವರೆಗೆ ಮ್ಯೂಚುವಲ್ ಫಂಡ್ಸ್‌ಗಳಲ್ಲಿಯೇ ಮರಳಿ ಹೂಡಿಕೆ ಮಾಡುತ್ತಾನೆ. ಇದರಿಂದ ಈ ಮೊದಲೇ ಹೇಳಿದಂತೆ ಹಣದ ಒಟ್ಟುಗೂಡುವಿಕೆಯ ಶಕ್ತಿಯ ಫಲವಾಗಿ ಭರತ್‌ಗೆ 60 ವರ್ಷವಾಗುವ ವೇಳೆಗೆ ₹ 1.12 ಕೋಟಿ ಮೊತ್ತ ಸಿಗುತ್ತದೆ. (ಪಟ್ಟಿ ಗಮನಿಸಿ)

ಉದಾಹರಣೆ 2: ಭರತ್‌ನ ಸ್ನೇಹಿತ ಚಿನ್ಮಯ್ ಕೂಡ 29 ವರ್ಷಕ್ಕೆ ಕೆಲಸಕ್ಕೆ ಸೇರುತ್ತಾನೆ. ಆದರೆ, 40 ವರ್ಷಗಳ ತನಕ ಚಿನ್ಮಯ್ ನಿವೃತ್ತಿ ಜೀವನಕ್ಕಾಗಿ ಯಾವುದೇ ಹೂಡಿಕೆ ಮಾಡುವುದಿಲ್ಲ, ನಂತರದಲ್ಲಿ 41 ನೇ ವರ್ಷದಿಂದ ಆರಂಭಗೊಂದು ಮುಂದಿನ 20 ವರ್ಷಗಳ ಕಾಲ (240 ತಿಂಗಳು) ಮಾಸಿಕ ₹5 ಸಾವಿರದಂತೆ ಚಿನ್ಮಯ್ ಒಟ್ಟು ₹ 12 ಲಕ್ಷ ಹೂಡಿಕೆ ಮಾಡಿರುತ್ತಾನೆ. 20 ವರ್ಷಗಳ ಬಳಿಕ ಚಿನ್ಮಯ್‌ಗೆ ಹೂಡಿಕೆಯಿಂದ ಬಂದ ಲಾಭಾಂಶ ಒಳಗೊಂಡು ₹49.95 ಲಕ್ಷ ಮಾತ್ರ ಸಿಗುತ್ತದೆ. ಹೂಡಿಕೆ ವಿಳಂಬ ಮಾಡಿದರೆ, ಹೆಚ್ಚು ಹಣ ಹೂಡಿದರೂ ಕಡಿಮೆ ಲಾಭಾಂಶ ಪಡೆಯಬೇಕಾಗುತ್ತದೆ ಎನ್ನುವುದಕ್ಕೆ ಚಿನ್ಮಯ್ ಉದಾಹರಣೆಯೇ ಸಾಕ್ಷಿ.

ಪೇಟೆಯಲ್ಲಿ ಕೊರೊನಾ ಕಾರ್ಮೋಡ
ಷೇರುಪೇಟೆ ಸೂಚ್ಯಂಕಗಳು ಕಳೆದ ವಾರ ಅಲ್ಪ ಗಳಿಗೆಯೊಂದಿಗೆ ವಹಿವಾಟು ಪೂರ್ಣಗೊಳಿಸಿವೆ. 41,258 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.3 ರಷ್ಟು ಮಾತ್ರ ಗಳಿಸಿದೆ. ಇನ್ನು 12,113 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿರುವ ನಿಫ್ಟಿ ಶೇ 0.12 ರಷ್ಟು ಮಾತ್ರ ಗಳಿಸಿದೆ. ನಿಫ್ಟಿ ಮಧ್ಯಮ ಶ್ರೇಣಿ ಸೂಚ್ಯಂಕ ಶೇ 2 ರಷ್ಟು ಕುಸಿದಿದೆ.

ಕೊರೊನಾ ವೈರಸ್ ವ್ಯಾಪಕವಾಗಿ ಹೆಚ್ಚಳವಾಗುತ್ತಿರುವುದು ಜಾಗತಿಕವಾಗಿ ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ. ಹೊಸದಾಗಿ 5 ಸಾವಿರಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿರುವುದು ಸೇರಿ ಈವರೆಗೆ ಒಟ್ಟು ಸುಮಾರು 64 ಸಾವಿರ ಜನರು ಸೋಂಕಿಗೆ ಒಳಗಾಗಿದ್ದಾರೆ. ಇದು ನೇರವಾಗಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದಲ್ಲದೆ ಚಿಲ್ಲರೆ ಹಣದುಬ್ಬರ ಶೇ 7.59 ಕ್ಕೆ ಏರಿಕೆಯಾಗಿರುವುದು, ಕೈಗಾರಿಕೆ ಉತ್ಪಾದನೆ ಸೂಚ್ಯಂಕ ಶೇ 0.3 ರಷ್ಟು ಕುಸಿದಿರುವುದು ಸಹ ಮಾರುಕಟ್ಟೆ ಮುಗ್ಗರಿಸಲು ಕಾರಣವಾಗಿದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಶೇ 1 ರಷ್ಟು ಜಿಗಿದಿದೆ. ಲೋಹ ವಲಯ ಶೇ 3.5 ರಷ್ಟು ಕುಸಿದಿದೆ. ನಿಫ್ಟಿ ರಿಯಲ್ ಎಸ್ಟೇಟ್ ಮತ್ತು ವಾಹನ ಉತ್ಪಾದನಾ ವಲಯ ತಲಾ ಶೇ 3 ರಷ್ಟು ಕುಸಿದಿವೆ. ನಿಫ್ಟಿ ಬ್ಯಾಂಕ್ ಶೇ 1 ರಷ್ಟು ತಗ್ಗಿದೆ.

ಗಳಿಕೆ – ಇಳಿಕೆ: ಯುಪಿಎಲ್, ಏರ್‌ಟೆಲ್, ಡಾ ರೆಡ್ಡೀಸ್ , ಹಿಂದೂಸ್ಥಾನ್ ಯುನಿಲಿವರ್, ರಿಲಯನ್ಸ್ ಇಂಡಸ್ಟ್ರೀಸ್, ನಿಫ್ಟಿ ಸೂಚ್ಯಂಕದಲ್ಲಿ ಶೇ 3.5 ರಿಂದ ಶೇ 9 ರ ವರೆಗೆ ಗಳಿಕೆ ಕಂಡಿವೆ. ಬಜಾಜ್ ಫೈನಾನ್ಸ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್, ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಗಳು ಕೂಡ ಗಳಿಕೆ ದಾಖಲಿಸಿವೆ. ಇಂಡಸ್ ಇಂಡ್ ಬ್ಯಾಂಕ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟಾಟಾ ಸ್ಟೀಲ್, ಒಎನ್‌ಜಿಸಿ, ಕೋಲ್ ಇಂಡಿಯಾ, ನಿಫ್ಟಿ (50) ಸೂಚ್ಯಂಕದಲ್ಲಿ ಶೇ 5 ರಿಂದ ಶೇ 9.5 ರಷ್ಟು ಕುಸಿದಿವೆ.

ಗ್ರಾಸಿಮ್, ಐಷರ್ ಮೋಟರ್ಸ್, ಭಾರ್ತಿ ಇನ್ಫ್ರಾಟೆಲ್ ಮತ್ತು ಜೀ ಕೂಡ ನಕಾರಾತ್ಮಕ ಹಾದಿ ತುಳಿದಿವೆ.

ಪ್ರಮುಖ ಬೆಳವಣಿಗೆ: ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದ್ದು 5 ತಿಂಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ. ಜನವರಿಯಲ್ಲಿ ₹ 7,934 ಕೋಟಿ ಹೂಡಿಕೆಯಾಗಿದೆ. ಬಂಡವಾಳ ಸಂಗ್ರಹದ ಕಾರಣದಿಂದಾಗಿ ಯೆಸ್ ಬ್ಯಾಂಕ್ ತನ್ನ 3ನೇ ತ್ರೈಮಾಸಿಕ ಫಲಿತಾಂಶ ಮುಂದೂಡಿದೆ.

ಮುನ್ನೋಟ: ಅಮೆರಿಕದ ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿ ಸಭೆಯ ಪ್ರಮುಖಾಂಶಗಳು ಈ ವಾರ ಹೊರಬೀಳಲಿವೆ. ಇದರ ಜತೆಗೆ ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಮುಖ್ಯಾಂಶಗಳು ಕೂಡ ಬಿಡುಗಡೆಯಾಗಲಿವೆ. ಕೊರೊನಾ ವೈರಸ್ ನಿಯಂತ್ರಣ ಸೇರಿ ದೇಶಿಯ ಹಾಗೂ ಜಾಗತಿಕ ವಿದ್ಯಮಾನಗಳು ಮಾರುಕಟ್ಟೆ ತುಳಿಯಲಿರುವ ಮಾರ್ಗವನ್ನು ನಿರ್ಧರಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT