ಗುರುವಾರ , ಮೇ 6, 2021
25 °C

ದಿನದ ಸೂಕ್ತಿ: ವಿದ್ಯೆ ಮತ್ತು ಸುಖ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಸುಖಾರ್ಥಿನಃ ಕುತೋ ವಿದ್ಯಾ ಕುತೋ ವಿದ್ಯಾರ್ಥಿನಃ ಸುಖಮ್‌ ।

ಸುಖಾರ್ಥೀ ವಾ ತ್ಯಜೇದ್ವಿದ್ಯಾಂ ವಿದ್ಯಾರ್ಥೀ ವಾ ತ್ಯಜೇತ್‌ ಸುಖಮ್‌ ।।

ಇದರ ತಾತ್ಪರ್ಯ ಹೀಗೆ:

‘ಸುಖವನ್ನು ಬಯಸತಕ್ಕವನಿಗೆ ವಿದ್ಯೆ ಹೇಗೆ ಬಂದೀತು? ವಿದ್ಯೆಯನ್ನು ಬಯಸತಕ್ಕವನಿಗೆ ಸುಖವೆಲ್ಲಿ? ಸುಖಾರ್ಥಿಯಾಗಿದ್ದರೆ ವಿದ್ಯೆಯನ್ನು ಕೈ ಬಿಡಬೇಕಾಗುತ್ತದೆ ಅಥವಾ ವಿದ್ಯೆಯ ಅಪೇಕ್ಷೆಯಿದ್ದರೆ ಸುಖವನ್ನು ಕೈ ಬಿಡಬೇಕಾಗುತ್ತದೆ.’

ವಿದ್ಯೆಗೂ ಸುಖಕ್ಕೂ ಇರುವ ಸಂಬಂಧವನ್ನು ಈ ಸುಭಾಷಿತ ಹೇಳುತ್ತಿದೆ.

ಕೊರೊನಾ ಸಂಕಷ್ಟದಿಂದ ಇದೀಗ ಹಂತಹಂತವಾಗಿ ಪರಿಸ್ಥಿತಿ ಸಹಜಸ್ಥಿತಿಗೆ ಬರುತ್ತಿರುವಂತೆ ಅನ್ನಿಸುತ್ತಿದೆ. ಶಾಲಾಕಾಲೇಜುಗಳು ಕೂಡ ಕ್ರಮೇಣ ಆರಂಭವಾಗಿವೆ. ಇಷ್ಟು ದಿನಗಳು ತರಗತಿಗಳು ಎಂದಿನಂತೆ ನಡೆಯಲಿಲ್ಲ; ಆನ್‌ಲೈನ್‌ ತರಗತಿಗಳೇ ಎಲ್ಲೆಲ್ಲೂ. ಈಗ ಪರೀಕ್ಷಾಸಮಯ. ಸರ್ಕಾರ ಪರೀಕ್ಷೆಗಳನ್ನು ನಡೆಸಲು ಸಜ್ಜಾಗಿರುವಂತಿದೆ. ವಿದ್ಯಾರ್ಥಿಗಳಿಗೆ ಈ ವರ್ಷ ನಿಜವಾದ ಪರೀಕ್ಷಾವರ್ಷವೇ ಹೌದು.

ವಿದ್ಯಾರ್ಥಿಗಳು ತಮಗಿರುವ ಅಲ್ಪಕಾಲದಲ್ಲಿ ಕಷ್ಟಪಟ್ಟು ಚೆನ್ನಾಗಿ ಓದಬೇಕು. ಇಷ್ಟು ದಿನ ಭಯದ ವಾತಾವರಣದಲ್ಲಿಯೇ ಇದ್ದರು. ಈಗ ಎಲ್ಲವನ್ನೂ ಮರೆತು, ಹೊಸ ಉತ್ಸಾಹದಲ್ಲಿ, ದೊಡ್ಡ ಗುರಿಯನ್ನು ಸಾಧಿಸಲು ಕಷ್ಟಪಟ್ಟು ವಿದ್ಯಾರ್ಜನೆಯನ್ನು ಮಾಡಬೇಕು. ಇಂಥ ಸಂದರ್ಭದಲ್ಲಿ ಈ ಸುಭಾಷಿತವು ವಿದ್ಯಾರ್ಥಿಗಳ ನೆರವಿಗೆ ಬರಬಲ್ಲದು; ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬಲ್ಲದು; ದಾರಿಯನ್ನೂ ತೋರಿಸಬಲ್ಲದು.

‘ಸುಖವನ್ನು ಬಯಸತಕ್ಕವನಿಗೆ ವಿದ್ಯೆ ಹೇಗೆ ಬಂದೀತು? ವಿದ್ಯೆಯನ್ನು ಬಯಸತಕ್ಕವನಿಗೆ ಸುಖವೆಲ್ಲಿ?‘ – ಸುಭಾಷಿತದ ಈ ಮಾತು ಇಂದಿನ ಸಂದರ್ಭಕ್ಕೆ ತುಂಬ ಒಪ್ಪುತ್ತದೆ.

ಸುಖ ಮತ್ತು ವಿದ್ಯೆ – ಇವೆರಡೂ ಜೊತೆ ಜೊತೆಯಲ್ಲಿ ಇರದು – ಎನ್ನುತ್ತಿದೆ ಸುಭಾಷಿತ. ಈಗಾಗಲೇ ನಮ್ಮ ವಿದ್ಯಾರ್ಥಿಗಳಿಗೆ ಈ ಮಾತು ಅನುಭವಕ್ಕೆ ಬಂದಿದೆಯೆನ್ನಿ!

ಈ ಮೊದಲು ರಾತ್ರಿ–ಹಗಲು ವಿದ್ಯೆಗಾಗಿ ಕಷ್ಟಪಡಬೇಕಾಗುತ್ತಿತ್ತು. ಈಗಿನ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಮಾನಸಿಕ ಸ್ಥೈರ್ಯವೂ ಬೇಕಾಗುತ್ತಿದೆ.

ಹಿಂದಿನ ಕಾಲದಲ್ಲಿ ಶಿಕ್ಷಣವನ್ನು ತುಂಬ ಕಷ್ಟದಿಂದ ಸಂಪಾದಿಸಬೇಕಾಗುತ್ತಿತ್ತು. ಗುರುಕುಲಗಳಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ತಂದೆತಾಯಿಗಳಿಂದ ಮಕ್ಕಳು ದೂರ ಇರಬೇಕಾಗುತ್ತಿತ್ತು. ಈಗಿರುವಂತೆ ವಾಹನ, ವಿದ್ಯುಚ್ಛಕ್ತಿ ಮುಂತಾದ ಸೌಕರ್ಯಗಳಿರಲಿ, ಪುಸ್ತಕಗಳೂ ಇಲ್ಲದ ಕಾಲ. ಅಂಥ ಕಷ್ಟದ ಪರಿಸ್ಥಿತಿಯಲ್ಲೂ ಆ ಕಾಲದ ಜನರು ಗಳಿಸಿದ ಜ್ಞಾನದ ವ್ಯಾಪ್ತಿ ತುಂಬ ವಿಶಾಲವಾದುದು.

ಈಗ ಕೆಲವರಿಗಾದರೂ ಶಿಕ್ಷಣಕ್ಕೆ ತುಂಬ ಸೌಕರ್ಯಗಳು ಸಿಗುತ್ತಿವೆ. ಸೌಕರ್ಯಗಳು ಹೆಚ್ಚಿದಷ್ಟು ವಿದ್ಯೆಯ ನಿಜವಾದ ಮಹತ್ವ ಮರೆಯಾಗುವ ಅಪಾಯ ಇರುತ್ತದೆ. ವಿದ್ಯೆ ಇರುವುದು ನಮ್ಮ ಒಳಿತಿಗಾಗಿ, ಅತ್ಮಸಂಸ್ಕಾರಕ್ಕೆ, ಸಮಾಜದ ಹಿತಕ್ಕಾಗಿ ಎಂಬ ಅರಿವು ಇಂದು ನಮಗೆ ಬೇಕಾದ ನಿಜವಾದ ವಿದ್ಯೆ. ಹಣಸಂಪಾದನೆಗೂ ವಿದ್ಯೆಗೂ ಸಂಬಂಧವನ್ನು ಏರ್ಪಡಿಸುವ ಮಾನಸಿಕತೆಯಿಂದ ನಾವು ಹೊರಬರಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು