ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಹುಭಾಷಿಕತೆಯ ಸಮೀಕ್ಷೆ ನಡೆಯಬೇಕು: ಭಾಷಾ ತಜ್ಞರ ಅಭಿಮತ

‘ಕರ್ನಾಟಕದ ಭಾಷೆಗಳು: ಬಹುತ್ವದ ಆಯಾಮ’ ಗೋಷ್ಠಿಯಲ್ಲಿ ಭಾಷಾ ತಜ್ಞರ ಅಭಿಮತ
Published 11 ಆಗಸ್ಟ್ 2024, 15:57 IST
Last Updated 11 ಆಗಸ್ಟ್ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲರಿಗೂ ಅವರ ಭಾಷೆಯನ್ನೇ ಮಾತನಾಡಲು ಸ್ವಾತಂತ್ರ್ಯ ನೀಡಿದ್ದರಿಂದ ಕರ್ನಾಟಕದಲ್ಲಿ ಭಾಷಾ ವೈವಿಧ್ಯ ಕಾಣಬಹುದು. ಆದ್ದರಿಂದ ಇಲ್ಲಿನ ಬಹುಭಾಷಿಕತೆಯ ಬಗ್ಗೆ ಸಮೀಕ್ಷೆ ನಡೆಯಬೇಕು’

ಇವು ಭಾಷಾ ತಜ್ಞರ ಅಭಿಮತ. ಭಾನುವಾರ ಇಲ್ಲಿ ನಡೆದ ಬುಕ್ ಬ್ರಹ್ಮ ಸಾಹಿತ್ಯೋತ್ಸವದ ‘ಕರ್ನಾಟಕದ ಭಾಷೆಗಳು: ಬಹುತ್ವದ ಆಯಾಮ’ ಗೋಷ್ಠಿಯಲ್ಲಿ ಭಾಷಾ ವೈವಿಧ್ಯದ ಬಗ್ಗೆ ಚರ್ಚಿಸಲಾಯಿತು. 

ಭಾಷಾ ವಿಜ್ಞಾನ ಪ್ರಾಧ್ಯಾಪಕ ಎಸ್.ಎನ್. ಶ್ರೀಧರ್, ‘ದೇಶದ ಎಲ್ಲ ವೈವಿಧ್ಯಗಳನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ. ಇಲ್ಲಿ ಹಲವು ಭಾಷೆಗಳಿದ್ದು, ಕರಾವಳಿಯಲ್ಲಿಯೇ ನೂರಾರು ಭಾಷೆಗಳಿವೆ. ಹೀಗಾಗಿ, ಇಲ್ಲಿನ ಭಾಷೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು. ಬಹುಭಾಷಿಕತೆಯ ಸಮೀಕ್ಷೆಯೂ ಅಗತ್ಯ. ಒಂದೆಡೆ ಪ್ರಬುದ್ಧವಾದ ಸಾಹಿತ್ಯಿಕ ಭಾಷಾ ಪ್ರಯೋಗ ಇದ್ದರೆ, ಇನ್ನೊಂದೆಡೆ ಆಡುಮಾತಿನ ಪ್ರಯೋಗವೂ ಇದೆ. ಇದೇ ಸರಿಯಾದ ಕನ್ನಡ ಎಂದು ಹೇಳುವ ಅಕಾಡೆಮಿ ಇಲ್ಲಿಲ್ಲ. ಅಷ್ಟಕ್ಕೂ ನಮ್ಮವರಿಗೆ ನಿರ್ದಿಷ್ಟ ಕನ್ನಡ ರುಚಿಸುವುದಿಲ್ಲ’ ಎಂದು ಹೇಳಿದರು. 

‘ಭಾಷಾ ವೈವಿಧ್ಯ, ಪದ ಪ್ರಯೋಗ, ಧ್ವನಿ ವತ್ಯಾಸ ಎಲ್ಲವನ್ನೂ ಒಳಗೊಂಡ ಸಮಗ್ರ ವ್ಯಾಕರಣವನ್ನು ಹೊರತರಬೇಕು. ಅದಕ್ಕೆ ಸರ್ಕಾರ ಮನಸ್ಸು ಮಾಡಬೇಕು’ ಎಂದರು. 

ಭಾಷಾ ತಜ್ಞೆ ಆರ್. ಅಮೃತವಲ್ಲಿ, ‘ಪ್ರತಿಯೊಬ್ಬರ ಭಾಷೆಯಲ್ಲಿಯೂ ಸಣ್ಣ ವ್ಯತ್ಯಾಸ ಇರುತ್ತದೆ. ಎಲ್ಲರ ಮನಸ್ಸಿನಲ್ಲಿಯೂ ಭಾಷೆ ಮತ್ತೆ ಮತ್ತೆ ಸೃಷ್ಟಿಯಾಗುತ್ತಾ ಇರುತ್ತದೆ’ ಎಂದು ಉದಾಹರಣೆ ಸಹಿತ ವಿವರಿಸಿದರು. 

ಗೋಷ್ಠಿ ನಿರ್ವಹಿಸಿದ ಭಾಷಾ ತಜ್ಞ ಬಸವರಾಜ್ ಕೊಡಗುಂಟಿ, ‘ರಾಜ್ಯದಲ್ಲಿ ಪ್ರದೇಶವಾರು ಭಾಷಾ ಬಳಕೆಯಲ್ಲಿ ವ್ಯತ್ಯಾಸ ಕಾಣಬಹುದು. ಇಲ್ಲಿ ಕನಿಷ್ಠ 350 ತಾಯ್ನುಡಿಗಳು ಬಳಕೆಯಲ್ಲಿವೆ. ರಾಜ್ಯದ ಒಟ್ಟು ಜನರಲ್ಲಿ ಶೇ 65ರಷ್ಟು ಮಂದಿ ಕನ್ನಡ ಮಾತನಾಡುತ್ತಾರೆ. ಉಳಿದವರು ಬೇರೆ ಬೇರೆ ಭಾಷೆ ಬಳಸುತ್ತಾರೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT