ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಒತ್ತುವರಿ ತೆರವುಗೊಳಿಸದ ಬಿಬಿಎಂಪಿ

ಬಿದರಹಳ್ಳಿ: ರಾಷ್ಟ್ರೀಯ ಹಸಿರು ಪೀಠ (ದಕ್ಷಿಣ ವಲಯ) ಆತಂಕ
Last Updated 1 ಸೆಪ್ಟೆಂಬರ್ 2022, 21:34 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಪೂರ್ವಭಾಗದ ಬಿದರಹಳ್ಳಿಯ ಕುಂಬೇನ ಅಗ್ರಹಾರ ದಲ್ಲಿ ಬಿಲ್ಡರ್‌ ಒಬ್ಬರು ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆಯನ್ನು ಬಿಬಿಎಂಪಿ ಇನ್ನೂ ತೆರವು ಮಾಡದಿರುವ ಬಗ್ಗೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಆತಂಕ ವ್ಯಕ್ತಪಡಿಸಿದೆ.

ಕುಂಬೇನ ಅಗ್ರಹಾರ ಸರ್ವೆ ನಂ. 2/1 ಮತ್ತು 2/7ನಲ್ಲಿ ಎಸ್.ವಿ. ಎಲಿಗೆಂಟ್‌ ಅಪಾರ್ಟ್‌ಮೆಂಟ್‌ ನಿರ್ಮಿಸಿರುವ ಬಗ್ಗೆ ವಿ. ಪರಮೇಶ್‌ ಅವರು ಎನ್‌ಜಿಟಿ ದಕ್ಷಿಣ ವಲಯ ಪೀಠಕ್ಕೆ ದೂರು ನೀಡಿದ್ದರು. ಇದಾದ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಏಪ್ರಿಲ್‌ 27ರಂದು ವರದಿ ನೀಡಿ, ‘ರಾಜಕಾಲುವೆಯ ಬಫರ್‌ ಝೋನ್‌ನಲ್ಲಿ ಬಿಲ್ಡರ್‌ ಈಜುಕೊಳ, ಬಾತ್‌ರೂಂ ನಿರ್ಮಿಸುತ್ತಿದ್ದಾರೆ’ ಎಂದಿತ್ತು. ಈ ಬಗ್ಗೆ ಬಿಬಿಎಂಪಿಯಿಂದ ಪೀಠ ಕಳೆದ ತಿಂಗಳು ಪ್ರತಿಕ್ರಿಯೆ ಬಯಸಿತ್ತು. ‘ಎನ್‌ಜಿಟಿ ಮುಂದೆ ಪ್ರಕರಣ ಇದ್ದರೂ ಅಧಿಕಾರಿಗಳು ಬಿಲ್ಡರ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ತಂದಿದೆ. ಯೋಜನೆ ಮುಂದೂಡುವ ಯಾವುದೇ ಪ್ರಕ್ರಿಯೆಗೂ ಆತ ಸಿದ್ಧನಿಲ್ಲ’ ಎಂದು ಪೀಠ ಹೇಳಿದೆ.

ಬೆಂಗಳೂರು ಪೂರ್ವ ವಲಯದ ರಾಜಕಾಲುವೆ ಒತ್ತುವರಿ ಪ್ರಕರಣದಲ್ಲಿ ಎಸ್‌.ವಿ. ಎಲಿಗೆಂಟ್‌ನದ್ದು ಎರಡನೇ ಪ್ರಕರಣವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಳೆದ ತಿಂಗಳು ಸಲ್ಲಿಸಿದ ವರದಿಯಲ್ಲಿ, ಕುಂಬೇನ ಅಗ್ರಹಾರದಲ್ಲಿ ರಾಜಕಾಲುವೆಗಳೂ ಒತ್ತುವರಿಯಾಗಿವೆ. ಸರ್ವೆ ನಂ. 46, 47, 49, 57, 58 ಮತ್ತು 61ರಲ್ಲಿ 15 ಎಕರೆ 24 ಗುಂಟೆಯಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ವರದಿ ಸಲ್ಲಿಸಲು ಬಿಡಿಎಗೆ ಎನ್‌ಜಿಟಿ ಸೂಚಿಸಿತ್ತು. ಬಫರ್‌ ಝೋನ್‌ನಲ್ಲಿ ನಡೆಯುತ್ತಿದ್ದ ಕೆಲಸವನ್ನು ಬಿಲ್ಡರ್ ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಕ್ಲಬ್‌ ಹೌಸ್‌, ಮಾಕ್‌ ಫ್ಲಾಟ್ಸ್‌ ಇತರೆ ನಿರ್ಮಾಣವನ್ನು ನಕ್ಷೆ ಅನುಮೋದನೆ ಇಲ್ಲದೆ ಕೈಗೆತ್ತಿಕೊಂಡಿದ್ದಾರೆ ಎಂದು ಬಿಡಿಎಯು ಇತ್ತೀಚೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು.

ಕೆರೆ ಪ್ರದೇಶ: 33 ಒತ್ತುವರಿ ತೆರವು
ಬೆಂಗಳೂರು:
‘ಬೇಗೂರು ಕೆರೆ ಪ್ರದೇಶದಲ್ಲಿ ಒಟ್ಟು 81 ಒತ್ತುವರಿಗಳನ್ನು ಪತ್ತೆ ಹಚ್ಚಲಾಗಿದ್ದು, ಅವುಗಳಲ್ಲಿ 33 ಒತ್ತುವರಿ ತೆರವುಗೊಳಿಸಲಾಗಿದೆ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತಂತೆ ‘ಸಿಟಿಜನ್ಸ್‌ ಆ್ಯಕ್ಷನ್‌ ಗ್ರೂಪ್‌’ ಕಾರ್ಯದರ್ಶಿ ನೊಮಿತಾ ಚಾಂಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.ವಿಚಾರಣೆ ವೇಳೆ ಪಾಲಿಕೆ ಪರ ವಕೀಲರು ನಿಯೋಜಿತ ಅಧಿಕಾರಿಯು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನೀಡಿರುವ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ತಂತಿ ಬೇಲಿ ಅಳವಡಿಸಿರುವುದಕ್ಕೆ ಸಂಬಂಧಿಸಿದ ಫೋಟೋಗಳನ್ನು ನೀಡಿದರು.

ಪ್ರಮಾಣ ಪತ್ರದಲ್ಲಿ ಏನಿದೆ?:‘ಹೈಕೋರ್ಟ್ ನಿರ್ದೇಶನದಂತೆ ಬೇಗೂರು ಕೆರೆ ಪ್ರದೇಶದ ಸರ್ವೆ ನಡೆಸಲಾಗಿದೆ. ಜುಲೈ 26ರಂದು ಸರ್ವೆ ಪೂರ್ಣಗೊಂಡಿದ್ದು, ಒಟ್ಟು 81 ಒತ್ತುವರಿಗಳು ಪತ್ತೆಯಾಗಿವೆ. ಎಲ್ಲಾ ಒತ್ತುವರಿದಾರರಿಗೆ ಜುಲೈ 27ರಂದು ನೋಟಿಸ್ ಜಾರಿಗೊಳಿಸಲಾಗಿದೆ. ಕೆರೆ ಪ್ರದೇಶದಲ್ಲಿ ಅರಳಿ ಮರವೊಂದು ಇದ್ದು, ಅದರ ಸುತ್ತ ಕಲ್ಲಿನ ಕಟ್ಟೆ ಕಟ್ಟಲಾಗಿದೆ. ಅದರ ಸಮೀಪದಲ್ಲೇ ದೇವಸ್ಥಾನವೂ ಇದ್ದು, ಇವುಗಳ ಬಗ್ಗೆ ಸೂಕ್ತ ದಾಖಲೆ ಒದಗಿಸುವ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ ಕೋರಲಾಗಿದೆ’ ಎಂದು ತಿಳಿಸಲಾಗಿದೆ.

‘ಅರಕೆರೆಯ ಬಫರ್ ಝೋನ್‌ನಲ್ಲಿ ಹೆಬಿಟೇಟ್ ಹೆಸರಿನ ವಸತಿ ಸಮುಚ್ಚಯವೊಂದನ್ನು ನಿರ್ಮಾಣ ಮಾಡಲಾಗಿದೆ. ಈಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ದಕ್ಷಿಣ ವಲಯದ ಜಂಟಿ ನಿರ್ದೇಶಕರಿಂದ (ನಗರ ಯೋಜನೆ) ನಕ್ಷೆ ಮಂಜೂರಾತಿ ನೀಡಲಾಗಿದೆ. ಹಾಗಾಗಿ, ಸರ್ವೆ ನಡೆಸಿ ಬಫರ್ ಜೋನ್ ಬಗ್ಗೆ ಮಾಹಿತಿ ಒದಗಿಸುವಂತೆ ಜಂಟಿ ನಿರ್ದೇಶಕರನ್ನು ಕೋರಲಾಗಿದೆ’ ಎಂದು ತಿಳಿಸಲಾಗಿದೆ.

‘ಕನ್ನಹಳ್ಳಿ ಕೆರೆ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿದ್ದು, ಇತ್ತೀಚೆಗಷ್ಟೇ ಸರ್ಕಾರ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿದೆ. ಕೆರೆ ಮಾಲಿನ್ಯ ತಡೆಗಟ್ಟುವ ದಿಸೆಯಲ್ಲಿ ಪಾಲಿಕೆಯು ಜಲಮಂಡಳಿ ಜೊತೆಗೆ ಕೈಜೋಡಿಸಿ ತುರ್ತು ಕ್ರಮ ಜರುಗಿಸುತ್ತಿದೆ. ಯಾವುದೇ ಅನುದಾನ ದೊರೆಯದಿದ್ದರೂ ತರಿಹೋಬನ ಕೆರೆ ಅಭಿವೃದ್ಧಿಗೆ ಅಮೃತ್ ನಗರೋತ್ಥಾನ ಕ್ರಿಯಾ ಯೋಜನೆಯಡಿ ₹ 4.5 ಕೋಟಿ ಮಂಜೂರಾತಿಗೆ ಅನುಮೋದನೆ ಸಿಕ್ಕಿದೆ’ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT