ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಮಹಿಳೆಯರ T-20 ಕ್ರಿಕೆಟ್‌ ಟ್ರೋಫಿ: ಕರ್ನಾಟಕ ತಂಡಕ್ಕೆ ಬೀದರ್‌ ವನಿತೆಯರು

Published 5 ಡಿಸೆಂಬರ್ 2023, 8:01 IST
Last Updated 5 ಡಿಸೆಂಬರ್ 2023, 8:01 IST
ಅಕ್ಷರ ಗಾತ್ರ

ಬೀದರ್‌: ಬಿಸಿಸಿಐನಿಂದ ಛತ್ತೀಸಗಢದ ರಾಯಪುರದಲ್ಲಿ ಹಮ್ಮಿಕೊಂಡಿರುವ 23 ವರ್ಷದೊಳಗಿನವರ ಮಹಿಳೆಯರ ಟಿ20 ಕ್ರಿಕೆಟ್‌ ಟ್ರೋಫಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯ ಇಬ್ಬರು ಕ್ರೀಡಾಪಟುಗಳು ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿರುವುದು ವಿಶೇಷ.

ಭಾಲ್ಕಿ ಪಟ್ಟಣದ ಅದಿತಿ ಬಕ್ಕಾ ಹಾಗೂ ಬೀದರ್‌ನ ಸಾಕ್ಷಿ ಡೈಜೋಡೆ ತಂಡದಲ್ಲಿ ಸ್ಥಾನ ಪಡೆದ ಆಟಗಾರ್ತಿಯರು. ಅದಿತಿ ವೇಗದ ಬೌಲರ್‌ ಹಾಗೂ ಬ್ಯಾಟ್ಸ್‌ವುಮೆನ್‌, ಸಾಕ್ಷಿ ವಿಕೆಟ್‌ ಕೀಪರ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಸೈ ಅನಿಸಿಕೊಂಡಿದ್ದಾರೆ.

2023–24ನೇ ಸಾಲಿನ ಟಿ20 ಪಂದ್ಯಾವಳಿಯಲ್ಲಿ ಸ್ಥಾನ ಗಿಟ್ಟಿಸಲು ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ಗಡಿ ಜಿಲ್ಲೆಯ ಇಬ್ಬರು ಪ್ರತಿಭೆಗಳು ಈಗ ಅವಕಾಶ ಪಡೆದಿದ್ದಾರೆ.

ಸಾಕ್ಷಿ ಹೇಳುವುದೇನು?: ಸಾಕ್ಷಿ ಡೈಜೋಡೆ ಅವರು ಬೀದರ್‌ ನಗರದಲ್ಲಿ ಹುಟ್ಟಿ ಬೆಳೆದವರು. ಇವರ ತಂದೆ ಕೃಷ್ಣ ಡೈಜೋಡೆ ವೃತ್ತಿಯಿಂದ ಶಿಕ್ಷಕರು. ತಾಯಿ ಸರಿತಾ ಗೃಹಿಣಿ. ಸಾಕ್ಷಿ ಅವರು ಪ್ರಾಥಮಿಕ, ಪ್ರೌಢ, ಪಿಯು ಹಾಗೂ ಬಿ.ಟೆಕ್‌ ಪದವಿಯನ್ನು ನಗರದ ಗುರುನಾನಕ ದೇವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.

22 ವಯಸ್ಸಿನ ಸಾಕ್ಷಿಗೆ ಬಾಲ್ಯದಿಂದಲೂ ಕ್ರಿಕೆಟ್‌ ಬಗ್ಗೆ ಹೆಚ್ಚಿನ ಒಲವು ಇದೆ. ಸಾಕ್ಷಿ ಜಿಎನ್‌ಡಿ ಕಾಲೇಜಿನಲ್ಲಿ ಪಿಯು ಮೊದಲ ವರ್ಷದಲ್ಲಿ ಓದುತ್ತಿರುವಾಗ ಕ್ರಿಕೆಟ್‌ ಅಕಾಡೆಮಿ ತೆಗೆದಿದ್ದರು. ಅವರ ಆಟಕ್ಕೆ ಇನ್ನಷ್ಟು ಇಂಬು ಸಿಕ್ಕಿತು. ಸದ್ಯ ಬೆಂಗಳೂರಿನ ಜಸ್ಟ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಟಕ್ಕಾಗಿಯೇ ಕಳೆದ ಎರಡು ವರ್ಷಗಳಿಂದ ಊರು ಬಿಟ್ಟು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಆಲ್‌ರೌಂಡರ್‌ ಅದಿತಿ: ಭಾಲ್ಕಿ ಪಟ್ಟಣದ ಬಕ್ಕಾ ಗಲ್ಲಿಯಲ್ಲಿ ಹುಟ್ಟಿ, ಬೆಳೆದಿರುವ ಅದಿತಿ ಬಕ್ಕಾ ಅವರಿಗೆ 17ನೇ ವಯಸ್ಸಿನಲ್ಲೇ ಕರ್ನಾಟಕ ಕ್ರಿಕೆಟ್‌ ತಂಡದ 23 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವುದಕ್ಕೆ ಅವಕಾಶ ಸಿಕ್ಕಿರುವುದು ವಿಶೇಷ. ಇದು ಅವರ ಸಾಮರ್ಥ್ಯ, ಪ್ರತಿಭೆ ತೋರಿಸುತ್ತದೆ.

ಬಾಲ್ಯದಿಂದಲೂ ಅದಿತಿ ಅವರಿಗೆ ಕ್ರಿಕೆಟ್‌ ಬಗ್ಗೆ ಎಲ್ಲಿಲ್ಲದ ಹುಚ್ಚು. ಬೆಳಗಾವಿಯ ಕಿತ್ತೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಕ್ರಿಕೆಟ್‌ ಆಡುವುದನ್ನು ಆರಂಭಿಸಿದ ಅವರು, 35ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದ್ಧಾರೆ. ಅಥ್ಲೆಟಿಕ್ಸ್‌ನಲ್ಲೂ ಮಿಂಚಿನ ಓಟಗಾರ್ತಿ. ಆದರೆ, ಕ್ರಿಕೆಟ್‌ ಕಡೆ ಹೆಚ್ಚು ಒಲವಿದ್ದ ಕಾರಣ ಅದರಿಂದ ದೂರ ಉಳಿದರು.

ಬೆಂಗಳೂರಿನ ಜೈನ್‌ ಕಾಲೇಜಿನಲ್ಲಿ ಪಿಯುಸಿಯಲ್ಲಿ ಓದುತ್ತಿರುವ ಅದಿತಿ, ಕೆಐಒಸಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ 19 ವರ್ಷದೊಳಗಿನವರ ಟೂರ್ನಿಯಲ್ಲಿ ಆಡಿದ್ದಾರೆ. ಆದರೆ, 11 ಆಟಗಾರರಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇವರ ತಂದೆ ವೀರಶೆಟ್ಟಿ ಬಕ್ಕಾ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ ಅನಿತಾ ಬಕ್ಕಾ ಗೃಹಿಣಿ. ಅದಿತಿ ಅವರಿಗೆ ಪೋಷಕರಿಂದ ಸಂಪೂರ್ಣ ಬೆಂಬಲವಿದೆ. ವೀರಶೆಟ್ಟಿ ಅವರಿಗೂ ಕ್ರಿಕೆಟ್‌ ಬಗ್ಗೆ ಬಹಳ ಹುಚ್ಚು ಇತ್ತು. ಆದರೆ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವವರು ಇರಲಿಲ್ಲ. ಆದರೆ, ತನಗೆ ಸಿಗದ ಅವಕಾಶ ಮಗಳಿಗೆ ಕಲ್ಪಿಸಿಕೊಟ್ಟು ಎತ್ತರಕ್ಕೆ ಬೆಳೆಯುವುದನ್ನು ನೋಡಬೇಕೆಂಬ ಮಹದಾಸೆ ಅವರದು.

ಅದಿತಿ
ಅದಿತಿ
ಕರ್ನಾಟಕ ತಂಡದಲ್ಲಿ ನನಗೆ ಸ್ಥಾನ ಸಿಕ್ಕಿರುವುದಕ್ಕೆ ಬಹಳ ಖುಷಿಯಾಗಿದೆ. ಭಾರತ ಕ್ರಿಕೆಟ್‌ ತಂಡದ ಪರ ಆಡುವುದು ನನ್ನ ಗುರಿ.
–ಸಾಕ್ಷಿ ಡೈಜೋಡೆ ಕ್ರಿಕೆಟ್‌ ಆಟಗಾರ್ತಿ
ನಿಜಕ್ಕೂ ನನಗೆ ಬಹಳ ಖುಷಿಯಾಗಿದೆ. ಉತ್ತಮ ಸಾಧನೆ ತೋರಿ ದೇಶ ಪ್ರತಿನಿಧಿಸಬೇಕೆಂಬ ಬಯಕೆ ಇದೆ.
–ಅದಿತಿ ಬಕ್ಕಾ ಕ್ರಿಕೆಟ್‌ ಆಟಗಾರ್ತಿ
‘ಹೆಮ್ಮೆಯ ವಿಷಯ’
ಬೀದರ್‌ ಜಿಲ್ಲೆಯ ಇಬ್ಬರು ಆಟಗಾರ್ತಿಯರಿಗೆ ಮೊದಲ ಬಾರಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕೆಎಸ್ಸಿಎ ರಾಯಚೂರು ವಲಯದ ಬೀದರ್‌ ಜಿಲ್ಲಾ ಸಂಚಾಲಕ ಕುಶಾಲ ಪಾಟೀಲ ಗಾದಗಿ ಗಜಾನನ ಕ್ರಿಕೆಟ್‌ ಕ್ಲಬ್‌ನ ಸಂಜಯ ಜಾಧವ ಯುವರಾಜ ಉನ್ನೆ ವಿಕ್ಕಿ ಅಥವಾಲ್‌ ಅನೀಲಕುಮಾರ ದೇಶಮುಖ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT