ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬೆಳೆಗಾರರಿಗೆ ಹುಳಿಯಾದ ‘ದ್ರಾಕ್ಷಿ’, ಕೆ.ಜಿಗೆ ₹10 ಕುಸಿತ

Published 19 ಮೇ 2024, 6:16 IST
Last Updated 19 ಮೇ 2024, 6:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದ್ರಾಕ್ಷಿ ಬೆಲೆ ಕುಸಿದಿದೆ. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ದಿಲ್ ಖುಷ್, ಕಪ್ಪುದ್ರಾಕ್ಷಿ, ಕೃಷ್ಣಾಶರತ್, ರೆಡ್‍ಗ್ಲೋಬ್ ತಳಿಯ ದ್ರಾಕ್ಷಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈಗ ರೈತರ ತೋಟಗಳಲ್ಲಿ ದಿಲ್‌ಖುಷ್ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದೆ.

ಸಗಟು ದರದಲ್ಲಿ ಸದ್ಯ ಒಂದು ಕೆ.ಜಿ ದಿಲ್‌ಖುಷ್ ದ್ರಾಕ್ಷಿಗೆ ₹ 20ರಿಂದ 25 ಬೆಲೆ ಇದೆ. ಹದಿನೈದು ದಿನಗಳ ಹಿಂದೆ ದರವು ಕೆ.ಜಿಗೆ ₹ 30ರಿಂದ 35ರ ಆಸುಪಾಸಿನಲ್ಲಿ ಇತ್ತು. ಇದಕ್ಕೂ ಹಿಂದೆ ₹ 50ರ ದರವಿತ್ತು. 

ಮಳೆ, ಬೇಡಿಕೆ ಇಲ್ಲದಿರುವುದು ಮತ್ತು ಉತ್ತರದ ರಾಜ್ಯಗಳಲ್ಲಿ ಚುನಾವಣೆಯೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನುವುದು ರೈತರ ಪ್ರತಿಪಾದನೆ. ಬೆಲೆ ಹೆಚ್ಚಳವಾಗುವ ಸಾಧ್ಯತೆಯ ಬಗ್ಗೆಯೂ ರೈತರಿಗೆ ಖಚಿತ ಮಾಹಿತಿ ಇಲ್ಲ. 

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿಯೇ ಅಂದಾಜು ಎರಡರಿಂದ ಮೂರು ಸಾವಿರ ಎಕರೆಯಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. 

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 600 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಜಿಲ್ಲೆಯು ಮೊದಲಿನಿಂದಲೂ ದ್ರಾಕ್ಷಿಗೆ ಹೆಚ್ಚು ಹೆಸರುವಾಸಿ.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಬಹಳಷ್ಟು  ಬೆಳೆ ಈಗಾಗಲೇ ಕಟಾವು ಆಗಿದೆ. ಮತ್ತಷ್ಟು ರೈತರ ಬೆಳೆ ಈಗ ಕಟಾವಿಗೆ ಬಂದಿದೆ. ಮಳೆಯು ಅಬ್ಬರಿಸಿದರೆ ಮೈದುಂಬಿ ನಿಂತಿರುವ ದ್ರಾಕ್ಷಿ ತೋಟಗಳಿಗೆ ಹಾನಿ ಎಂದು ಬಹಳಷ್ಟು ರೈತರು ಬೆಲೆ ಕಡಿಮೆ ಇದ್ದರೂ ದ್ರಾಕ್ಷಿ ಕಟಾವು ಮಾಡಿಸುತ್ತಿದ್ದಾರೆ. 

ಮಹಾರಾಷ್ಟ್ರದ ಸಾಂಗ್ಲಿಯ ದ್ರಾಕ್ಷಿ ಇನ್ನೂ ಮಾರುಕಟ್ಟೆಗೆ ಬರುತ್ತಿದೆ. ಅಲ್ಲದೆ ಉತ್ತರದ ರಾಜ್ಯಗಳಲ್ಲಿ ಮಳೆ ಬರುತ್ತಿರುವುದು ಸಹ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ರೈತರು. 

ಬಾಂಗ್ಲಾದೇಶ, ಜಮ್ಮುಕಾಶ್ಮೀರ, ಕೋಲ್ಕತ್ತ, ಉತ್ತರ ಪ್ರದೇಶ, ತಮಿಳುನಾಡು, ಕೇರಳಕ್ಕೆ ಚಿಕ್ಕಬಳ್ಳಾಪುರದಿಂದ ದ್ರಾಕ್ಷಿ ರವಾನೆ ಆಗುತ್ತದೆ. ಬಾಂಗ್ಲಾ ಮತ್ತು ಜಮ್ಮು ಕಾಶ್ಮೀರಕ್ಕೆ ಗುಣಮಟ್ಟದ ದ್ರಾಕ್ಷಿ ಕಳುಹಿಸಲಾಗುತ್ತದೆ. ಕೋಲ್ಕತ್ತ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಮಳೆ ಬರುತ್ತಿರುವುದು ಸಹ ಆ ಭಾಗದಲ್ಲಿ ದ್ರಾಕ್ಷಿಗೆ ಬೇಡಿಕೆ ಕುಸಿಯಲು ಕಾರಣವಾಗಿದೆ. 

‘ಕಟಾವಿಗೆ ಬಂದರೂ ಬೆಲೆ ಇಲ್ಲ’

ಎರಡು ಎಕರೆ ದ್ರಾಕ್ಷಿ ಕಟಾವಿಗೆ ಬಂದಿದೆ. ಗೊಬ್ಬರ, ಔಷಧಿ ಇತ್ಯಾದಿಗಾಗಿ ಹೆಚ್ಚು ಹಣ ವೆಚ್ಚವಾಗಿದೆ. ಉತ್ತಮ ಫಸಲು ಸಹ ಬಂದಿದೆ. ಆದರೆ ಈಗ ಬೆಲೆ ಇಲ್ಲ ಎಂದು ಬೇಸರ ವ್ಯಕ್ತಪಡಿಸುವರು ರೈತ ಪಿ.ವಿ.ದ್ಯಾವಪ್ಪ.

ಸುಮಾರು 10 ದಿನಗಳಲ್ಲಿ ನಮ್ಮ ದ್ರಾಕ್ಷಿಯನ್ನು ಕಟಾವು ಮಾಡುವರು. ಆ ವೇಳೆಗಾದರೂ ಸ್ವಲ್ಪವಾದರೂ ಬೆಲೆ ಹೆಚ್ಚಳವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇದ್ದೇವೆ. ಬಹಳ ವರ್ಷಗಳ ನಂತರ ನಮ್ಮ ತೋಟದಲ್ಲಿ ಉತ್ತಮ ಫಸಲು ಬಂದಿದೆ. ಒಳ್ಳೆಯ ಫಸಲು ಬಂದ ವೇಳೆ ಬೆಲೆ ಕೈಕೊಟ್ಟರೆ ರೈತರಿಗೆ ನೋವು ಆಗುತ್ತದೆ. ಬೇಸಿಗೆಯ ಈ ದಿನಗಳಲ್ಲಿ ನೀರಿಗೆ ಬಹಳಷ್ಟವಿದೆ. ಈ ನಡುವೆಯೂ ಬೆಲೆ ಸಿಕ್ಕದಿದ್ದರೆ ರೈತರ ಸ್ಥಿತಿ ಚಿಂತಾಜನಕವಾಗುತ್ತದೆ ಎನ್ನುತ್ತಾರೆ.

ಹೊರರಾಜ್ಯಗಳಿಗೆ ರವಾನೆ ಕಡಿಮೆ

15 ದಿನಗಳ ಹಿಂದೆ ನಾವು ಬೆಳೆ ಕಟಾವು ಮಾಡಿದೆವು. ಆಗ ಒಂದು ಕೆ.ಜಿಗೆ ₹ 30ರಂತೆ ಮಾರಾಟ ಮಾಡಿದೆವು. ಆದರೆ ಈಗ ಏಕಾಏಕಿ ಬೆಲೆ ₹ 20ಕ್ಕೆ ಕುಸಿದಿದೆ ಎನ್ನುತ್ತಾರೆ ಗಿಡ್ನಹಳ್ಳಿ ದ್ರಾಕ್ಷಿ ಬೆಳೆಗಾರ ನಾರಾಯಣಸ್ವಾಮಿ.

ಕೋಲ್ಕತ್ತದಲ್ಲಿ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಚಿಕ್ಕಬಳ್ಳಾಪುರದಿಂದ ಕೋಲ್ಕತ್ತಕ್ಕೆ ಹೋಗಿದ್ದ ಲಾರಿಗಳಲ್ಲಿನ ದ್ರಾಕ್ಷಿಯನ್ನು ಇನ್ನೂ ಅನ್‌ಲೋಡ್ ಮಾಡಿಲ್ಲ. ಆಗ ಹಣ್ಣಿಗೆ ಪೆಟ್ಟಾಗುತ್ತದೆ ಎಂದರು. ಈಗ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯೂ ಇಲ್ಲ. ಚುನಾವಣೆಯ ಈ ಸಂದರ್ಭದಲ್ಲಿ ಉತ್ತರದ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ದ್ರಾಕ್ಷಿಯೂ ರವಾನೆ ಆಗುತ್ತಿಲ್ಲ. ಲಾರಿಗಳಲ್ಲಿನ ಬಾಕ್ಸ್‌ಗಳನ್ನು ಪರಿಶೀಲನೆ ನಡೆಸುವರು. ಈ ಕಾರಣದಿಂದ ಆ ರಾಜ್ಯಗಳಿಗೆ ದ್ರಾಕ್ಷಿಯನ್ನು ಕಳುಹಿಸಲು ವ್ಯಾಪಾರಿಗಳು ಹಿಂದೆ ಮುಂದೆ ನೋಡುವರು ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT