ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಡೆಂಗಿ: ಆತಂಕ ಬೇಡ, ಮುನ್ನೆಚ್ಚರಿಕೆ ವಹಿಸಿ

ರಾಷ್ಟ್ರೀಯ ಡೆಂಗಿ ದಿನಾಚರಣೆ, ಜಾಗೃತಿ ಜಾಥಾ
Published 14 ಜೂನ್ 2024, 13:10 IST
Last Updated 14 ಜೂನ್ 2024, 13:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ 31 ಡೆಂಗಿ ಜ್ವರದ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಡೆಂಗಿ ಲಕ್ಷಣ ಕಂಡುಬಂದಲ್ಲಿ ಆತಂಕಕ್ಕೆ ಒಳಗಾಗದೆ ವೈದ್ಯರಿಂದ ಚಿಕಿತ್ಸೆ ಪಡೆದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ‘ರಾಷ್ಟ್ರೀಯ ಡೆಂಗಿ ದಿನ’ ಅಂಗವಾಗಿ ಏರ್ಪಡಿಸಿದ್ದ ಜಾಥಾಗೆ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಗೋಪಾಲಕೃಷ್ಣ ಮಾತನಾಡಿ, ‘ಗ್ರಾಮೀಣ ಪ್ರದೇಶಕ್ಕಿಂತ ನಗರ ಭಾಗದಲ್ಲೇ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಮಳೆಗಾಲದಲ್ಲಿ ಮನೆ ಮುಂದೆ ನೀರು ನಿಂತು ಸೊಳ್ಳೆಗಳ ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು. ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಮನೆ ಮನೆಗೆ ಭೇಟಿ ನೀಡಿ ಲಾರ್ವ ಸಮೀಕ್ಷೆ ನಡೆಸುತ್ತಿದ್ದಾರೆ. ಡೆಂಗಿ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜ್ವರದ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯವಹಿಸುವುದು ಬೇಡ, ವೈದ್ಯರಿಂದ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದ್ದಕ್ಕಿದ್ದಂತೆ ವಿಪರೀತ ಜ್ವರ, ತಲೆನೋವು, ಬಾಯಿ, ಮೂಗು, ಒಸಡುಗಳಿಂದ ರಕ್ತಸ್ರಾವ ಉಂಟಾಗುವುದು ಡೆಂಗಿ ಜ್ವರದ ಸಾಮಾನ್ಯ ಲಕ್ಷಣಗಳು. ಸೊಳ್ಳೆಗಳ ನಿಯಂತ್ರಣದಿಂದ ಈ ರೋಗದ ಹತೋಟಿ ಸಾಧ್ಯ. ಮನೆಗಳಲ್ಲಿ ರಾತ್ರಿ ಮಲಗುವಾಗ ಸೊಳ್ಳೆಪರದೆ ಬಳಸಬೇಕು. ಸಿಮೆಂಟ್ ತೊಟ್ಟಿ, ಡ್ರಮ್‌ಗಳಲ್ಲಿ ದೀರ್ಘಕಾಲ ನೀರು ಶೇಖರಿಸಬಾರದು. ಮನೆ ಮುಂದೆ ಎಳನೀರಿನ ಚಿಪ್ಪು, ಒಡೆದ ಬಾಟಲಿ ಮೊದಲಾದ ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಜಾಗೃತಿ ಜಾಥಾ ತಾಲ್ಲೂಕು ಕಚೇರಿ ಆವರಣದಿಂದ ಹೊರಟು ಎಂ.ಜಿ. ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತ ತಲುಪಿತು. ಮಾನವ ಸರಪಳಿ ರಚಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ತಾಲ್ಲೂಕು ಆರೋಗ್ಯಾಧಿಕಾರಿ ಸೀಮಾ, ಆಯುಷ್ ವೈದ್ಯಾಧಿಕಾರಿ ಗೀತಾ, ಮಲೇರಿಯಾ ನಿಯಂತ್ರಣಾಧಿಕಾರಿ ಬಾಲಕೃಷ್ಣ, ಕ್ಷಯರೋಗ ನಿಯಂತ್ರಣಾಧಿಕಾರಿ ಹರೀಶ್‌ಬಾಬು, ಜಿಲ್ಲಾ ಆರ್‌ಸಿಎಚ್ ಮಂಜುನಾಥ್‌, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ, ಬೇಬಿ ಹಾಗೂ ರಾಮಕೃಷ್ಣ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಆಜಾದ್ ಪಾರ್ಕ್ ವೃತ್ತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಡೆಂಗಿ ಜ್ವರದ ಜಾಗೃತಿ ಮೂಡಿಸಿದರು
ಆಜಾದ್ ಪಾರ್ಕ್ ವೃತ್ತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಡೆಂಗಿ ಜ್ವರದ ಜಾಗೃತಿ ಮೂಡಿಸಿದರು

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗಿ ಪ್ರಕರಣ  ( ಜನವರಿಯಿಂದ ಜೂನ್‌ವರೆಗಿನ ಅಂಕಿ ಅಂಶ)

ಒಟ್ಟು ತಪಾಸಣೆಗೆ ಒಳಗಾದವರು:  2312 ಪತ್ತೆಯಾದ ಸಕ್ರಿಯ ಪ್ರಕರಣಗಳು: 378 ಗುಣಮುಖವಾದ ಪ್ರಕರಣಗಳು: 374 ಸದ್ಯದ ಸಕ್ರಿಯ ಪ್ರಕರಣಗಳ: 31 ಲಾರ್ವಾಗಳು ಪತ್ತೆಯಾದ ಒಟ್ಟು ಮನೆಗಳು: 4813  ಲಾರ್ವಾಗಳು ಪತ್ತೆಯಾದ ಇತರೆ ತಾಣಗಳು: 5696

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT