ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಕಾಡುಗೊಲ್ಲರ ಪ್ರತಿಭಟನೆ

ಮೊಳಗಿದ ‘ಕಾಡುಗೊಲ್ಲರ ನಡೆ ಎಸ್ಟಿ ಮೀಸಲಾತಿ ಕಡೆ’ ಘೋಷಣೆ
Last Updated 26 ಜನವರಿ 2023, 5:23 IST
ಅಕ್ಷರ ಗಾತ್ರ

ಚಳ್ಳಕೆರೆ: ಎಸ್ಟಿ ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿಸಿ ‘ಕಾಡುಗೊಲ್ಲರ ನಡೆ ಎಸ್ಟಿ ಮೀಸಲಾತಿ ಕಡೆ’ ಎಂಬ ಘೋಷಣೆಯೊಂದಿಗೆ ಸಮುದಾಯದ ವಿವಿಧ ಸಂಘಟನೆಯ ಕಾರ್ಯಕರ್ತರು ಬುಧವಾರ ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಕಾಡುಗೊಲ್ಲ ಸಮುದಾಯದ ಮತಗಳಿದ್ದರೂ ಪ್ರಾತಿನಿಧ್ಯ ಕಲ್ಪಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಫಲವಾಗಿವೆ. ಹೀಗಾಗಿ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಬೇಕು. ಎಸ್ಟಿ ಮೀಸಲು ಸೌಲಭ್ಯ ಸಿಗುವವರೆಗೆ ಹೋರಾಟ ಮುಂದುವರಿಸಬೇಕು ಎಂದು ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಸಮುದಾಯದ ಜನರಿಗೆ ಸಲಹೆ ನೀಡಿದರು.

‘ಬುಡಕಟ್ಟು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ದನ– ಕುರಿಗಳೊಂದಿಗೆ ಕಾಡುಗೊಲ್ಲ ಸಮುದಾಯ ಅಲೆಮಾರಿ –ಅರೆಅಲೆಮಾರಿ ಜೀವನ ನಡೆಸುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್ ಹೇಳಿದರು.

‘ಸರ್ಕಾರದ ಜಾತಿ ಪಟ್ಟಿಯಲ್ಲಿ ಕಾಡುಗೊಲ್ಲ ಎಂಬ ಹೆಸರಿದ್ದರೂ ರಾಜ್ಯದಲ್ಲಿ ಇದುವರೆಗೆ ಕೇವಲ 60 ಜನರಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ದೊರೆತಿದೆ. ಇನ್ನುಳಿದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಅಧಿಕಾರಿಗಳ ವಿರುದ್ಧ ತಾಲ್ಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

‘ಸಮುದಾಯ ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಮಕ್ಕಳ ಶಿಕ್ಷಣಕ್ಕೂ ಸಮುದಾಯ ತೀವ್ರ ಕಷ್ಟಪಡುತ್ತಿದೆ. ಹಾಗಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವ ಜತೆಗೆ ಹಿಂಪಡೆದಿರುವ ₹ 7 ಕೋಟಿ ಅನುದಾನವನ್ನು ಕೂಡಲೇ ನಿಗಮಕ್ಕೆ ಹಿಂತಿರುಗಿಸಬೇಕು’ ಎಂದು ಮುಖಂಡ ಹಟ್ಟಿರುದ್ರಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಗೊಲ್ಲರ ಭವನದಲ್ಲಿ ಹಸೆ, ಒರಳಕ್ಕಿ, ಒನಕೆ, ಅಕ್ಕಿ ರಾಶಿ ಪೂಜೆ ಮಾಡಲಾಯಿತು. ಸಾಂಪ್ರದಾಯಿಕ ಆಚರಣೆಗಳ ವಿಶೇಷ ಪೂಜೆ ನಡೆಸಿಸಲಾಯಿತು.

ವಿಧಾನ ಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿ.ವೀರಭದ್ರಬಾಬು, ನಗರಸಭೆ ಸದಸ್ಯೆ ಸಾಕಮ್ಮ, ಸದಸ್ಯ ವೈ.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಾಂತಮ್ಮ, ಪರಶುರಾಂಪುರ ರಂಗಪ್ಪ, ಕಾಡುಗೊಲ್ಲ ಜಿಲ್ಲಾ ಸಂಘದ ಅಧ್ಯಕ್ಷ ರಾಜಕುಮಾರ್ ಮಾತನಾಡಿದರು.

ತಾಲ್ಲೂಕು ಖಜಾಂಚಿ ಹುಲಿಕುಂಟೆ ಕಾಂತರಾಜು, ಸದಸ್ಯ ನಿಸರ್ಗ ಗೋವಿಂದರಾಜ, ಕುರುಡಿಹಳ್ಳಿ ರಾಜಣ್ಣ, ಡಿ.ಉಪ್ಪಾರಹಟ್ಟಿ ಜಿ.ಕೆ.ಈರಣ್ಣ, ಯಲಗಟ್ಟೆ ಗೊಲ್ಲರಹಟ್ಟಿ ಶ್ರೀನಿವಾಸ್, ಕಾಟಪ್ಪನಹಟ್ಟಿ ರಂಗಣ್ಣ, ಅಜ್ಜಪ್ಪ, ಸುರೇಶ್, ರಂಗಸ್ವಾಮಿ, ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT