ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಜೆಡಿಎಸ್‌ಗೆ ಪರ್ಯಾಯ ಅಭ್ಯರ್ಥಿ ಚಿಂತೆ, ಪ್ರಜ್ವಲ್‌ ಸ್ಪರ್ಧೆಗೆ BJP ಆಕ್ಷೇಪ

ದಾಖಲೆ ಸಹಿತ ವರಿಷ್ಠರಿಗೆ ಮನವರಿಕೆ
Published 18 ಮಾರ್ಚ್ 2024, 14:19 IST
Last Updated 18 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ಹಾಸನ: ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರನ್ನು ಬದಲಿಸುವಂತೆ ಎಚ್‌.ಡಿ.ರೇವಣ್ಣ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚಿಸಿದ್ದು, ಜೆಡಿಎಸ್‌ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆಯೇ ಎನ್ನುವ ಚರ್ಚೆ ಶುರುವಾಗಿದೆ.

ಸ್ಥಳೀಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ಮೈತ್ರಿಕೂಟದಲ್ಲಿ ಹಾಸನ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಈಗ ವರಿಷ್ಠರ ಮಾತಿಗೆ ಕಟ್ಟುಬಿದ್ದಿರುವ ಸ್ಥಳೀಯ ಬಿಜೆಪಿ ಮುಖಂಡರು, ಪ್ರಜ್ವಲ್‌ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್‌ಗೆ ಸೂಚಿಸುವಂತೆ ವರಿಷ್ಠರ ಮೇಲೆ ಒತ್ತಡ ಹಾಕಿದ್ದಾರೆ.

ಜೊತೆಗೆ, ‘ಪ್ರಜ್ವಲ್‌ ಅವರ ಅನರ್ಹತೆ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಚುನಾವಣೆಯ ಹೊತ್ತಿನಲ್ಲಿಯೇ ತೀರ್ಪು ಬಂದರೆ, ಮೈತ್ರಿಕೂಟಕ್ಕೆ ಮುಖಭಂಗವಾಗಲಿದೆ. ಸುರಕ್ಷತೆಗಾಗಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಸೂಚಿಸಬೇಕು ಎಂದು ಬಿಜೆಪಿ ಮುಖಂಡರು, ದಾಖಲೆಗಳ ಸಹಿತ ಕೇಂದ್ರ ನಾಯಕರಿಗೆ ಮನವರಿಕೆ ಮಾಡಿದ್ದಾರೆ’ ಎನ್ನಲಾಗಿದೆ.

ಪ್ರಜ್ವಲ್‌ ಸ್ಪರ್ಧೆಗೆ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಅಮಿತ್‌ ಶಾ ಮೈಸೂರಿಗೆ ಬಂದಾಗಲೂ ಅದನ್ನೇ ಹೇಳಿದ್ದರು. ಪ್ರಜ್ವಲ್‌ ವಿರುದ್ಧ ಪ್ರಕರಣ ದಾಖಲಿಸಿರುವ ಬಿಜೆಪಿ ಮುಖಂಡ ದೇವರಾಜೇಗೌಡರ ಮೂಲಕ ದಾಖಲೆಗಳನ್ನು ಅಮಿತ್‌ ಶಾ ಮುಂದಿಟ್ಟಿದ್ದು, ಮೈತ್ರಿ ಅಭ್ಯರ್ಥಿ ಬದಲಿಸುವಂತೆ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

‘ಎಚ್.ಡಿ.ದೇವೇಗೌಡರು ಅಥವಾ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧಿಸಲಿ. ಇಲ್ಲದಿದ್ದರೆ, ಬಿಜೆಪಿ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ’ ಎನ್ನಲಾಗಿದೆ.

ಎ.ಮಂಜು –ಕುಮಾರಸ್ವಾಮಿ ಭೇಟಿ: ಈ ನಡುವೆ, ಅರಕಲಗೂಡಿನ ಜೆಡಿಎಸ್‌ ಶಾಸಕ ಎ.ಮಂಜು ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ ಎಚ್.ಡಿ. ಕುಮಾರಸ್ವಾಮಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

‘ದೇವೇಗೌಡರಿಗೆ ಇದು ಕೊನೆಯ ಚುನಾವಣೆಯಾಗಿದ್ದು, ಹಾಸನದಿಂದ ಅವರೇ ಸ್ಪರ್ಧಿಸಲಿ’ ಎಂದು ಈ ಹಿಂದೆಯೇ ಎ.ಮಂಜು ಹೇಳಿದ್ದರು. ಅದರ ಬೆನ್ನಲ್ಲೇ, ಭವಾನಿ ರೇವಣ್ಣ ಹಾಗೂ ಪ್ರಜ್ವಲ್‌ ಕೂಡ ಎ.ಮಂಜು ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದರು.

ಇದೀಗ ಮಂಜು–ಕುಮಾರಸ್ವಾಮಿ ಮಾತುಕತೆ ನಡೆಸಿದ್ದು, ಅಂತಿಮ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT