ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ರಾಜ್ಯದಲ್ಲಿ ಲಾಕ್‌ಡೌನ್‌ ಪ್ರಶ್ನೆಯೇ ಇಲ್ಲ: ಆರ್‌.ಅಶೋಕ್‌

ಜುಲೈ 7ರ ಬಳಿಕ ಕಠಿಣ ಕ್ರಮ ಜಾರಿ: ಕಂದಾಯ ಸಚಿವ
Last Updated 30 ಜೂನ್ 2020, 13:31 IST
ಅಕ್ಷರ ಗಾತ್ರ

ಹಾಸನ: ‌ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಲಾಕ್‌ಡೌನ್‌ ಮಾಡುವ ಪರಿಸ್ಥಿತಿ ಇಲ್ಲ. ಕೊರೊನಾ ತಡೆಗಾಗಿ ಜುಲೈ 7ರ ನಂತರ ಕಠಿಣ ನಿಯಮಗಳನ್ನು ‌ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್‌ ಸ್ಪಷ್ಟಪಡಿಸಿದರು‌.

ಕೊರೊನಾ ತಡೆಗೆ ಸಮರೋಪಾದಿ ಕೆಲಸ ಆಗಬೇಕು. ಇದು ಇಂದು, ನಾಳೆ ಹೋಗುವ ಕಾಯಿಲೆ ಅಲ್ಲ, ಸಮೀಕ್ಷೆ ಪ್ರಕಾರ, ಇನ್ನೂ 6 ತಿಂಗಳು ಕೊರೊನಾ ಇರಲಿದೆ. ಲಾಕ್‌ಡೌನ್‌ನಿಂದ ಕೊರೊನಾ‌ ಮುಂದೂಡಬಹುದು ಅಷ್ಟೇ. ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಇನ್ನೇರಡು ತಿಂಗಳು ಕೊರೊನಾ ಹರಡುವಿಕೆಯ ಸ್ಥಿತಿ ಇದೇ ರೀತಿ ಮುಂದುವರೆಯಲಿದೆ. ಕಠಿಣ ಪರಿಸ್ಥಿತಿ ಎದುರಿಸಲು ಆರೋಗ್ಯ, ಪೊಲೀಸ್ ಇಲಾಖೆ ಮಾನಸಿಕವಾಗಿ ತಯಾರಾಗಬೇಕು. ಶೇಕಡಾ 20ರಷ್ಟು ಜನರು ಎರಡು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥ ಶೇಖರಣೆ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಶೇಕಡಾ 80 ರಷ್ಟು ರೈತರು, ಕೂಲಿ ಕಾರ್ಮಿಕರು ಇದ್ದಾರೆ. ಇವರಿಗೆ ಸಾಮರ್ಥ್ಯ ಇಲ್ಲ. ಸೋಂಕಿತರ ಪ್ರದೇಶವನ್ನು ಸೀಲ್‌ ಡೌನ್‌ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲೂ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ. ಮೊದಲು ಹೊರಗಿನಿಂದ ಬಂದವರಿಂದ ಹರಡುತ್ತಿದ್ದ ಕೊರೊನಾ, ಈಗ ಸ್ಥಳೀಯವಾಗಿ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ವಿವಿಧ ಯೋಜನೆಗಳಡಿ ವರ್ಷಕ್ಕೆ ಸರ್ಕಾರ ₹ 7 ಸಾವಿರ ಕೋಟಿ ಪಿಂಚಣಿಯನ್ನು ಫಲಾನುಭವಿಗಳಿಗೆ ನೀಡುತ್ತಿದೆ. ಬ್ಯಾಂಕ್‌ ಮೂಲಕ ಶೇಕಡಾ 80 ಹಾಗೂ ಅಂಚೆ ಕಚೇರಿ ಶೇಕಡಾ 20ರಷ್ಟು ನೀಡಲಾಗುತ್ತಿದೆ. ಅಂಚೆ ಕಚೇರಿಯಿಂದ 3–4 ತಿಂಗಳು ತಡವಾಗುತ್ತಿದೆ. ಹಾಗಾಗಿ ಎಲ್ಲವನ್ನು ಬ್ಯಾಂಕ್‌ ಮೂಲಕವೇ ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಲಾಕ್‌ಡೌನ್‌ ಮಾಡಿಕೊಳ್ಳಬಹುದು. ಆದರೆ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲು ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಅನುಮತಿ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನು ಪಾಲಿಸಲೇಬೇಕು. ರಾಜ್ಯದಲ್ಲಿ ಉದ್ಯೋಗವಕಾಶಗಳು ಸಾಕಷ್ಟು ಇದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿದರೆ ಪರಿಹಾರ ನೀಡಲಾಗುವುದು. ಅದೇ ರೀತಿ ಆಲೂಗಡ್ಡೆ ಬೆಳೆ ನಷ್ಟಕ್ಕೂ ಪರಿಹಾರ ನೀಡಲಾಗುವುದು. ಈಗಾಗಲೇ ಕೇಂದ್ರ ಸರ್ಕಾರ ಬೆಳೆ ಹಾನಿ ಪರಿಹಾರವಾಗಿ ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಶಾಸಕ ಪ್ರೀತಂ ಗೌಡ, ಆರ್‌.ಗಿರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT