ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಟ್ರ್ಯಾಕ್ಟರ್‌ಗಳೇ ಶಸ್ತ್ರಾಸ್ತ್ರವಾಗಲಿ: ರಾಕೇಶ್‌ ಟಿಕಾಯತ್‌ ಕರೆ

ರೈತ ಮಹಾ ಪಂಚಾಯತ್‌
Last Updated 21 ಮಾರ್ಚ್ 2021, 14:30 IST
ಅಕ್ಷರ ಗಾತ್ರ

ಹಾವೇರಿ: ‘ಅನ್ನದಾತರ ಬಳಿ ಇರುವ ಟ್ರ್ಯಾಕ್ಟರ್‌ಗಳೇ ಶಸ್ತ್ರಾಸ್ತ್ರಗಳಾಬೇಕು. ರೈತರ ಹೋರಾಟಕ್ಕೆ ಅಡ್ಡಿಯಾಗಿರುವ ಬ್ಯಾರಿಕೇಡ್‌ ಹಾಗೂ ತಂತಿಬೇಲಿ ತೆರವುಗೊಳಿಸಲು ಕಾರ್ಯಕ್ರಮ ರೂಪಿಸಬೇಕಿದೆ’ ಎಂದು ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚಾದ ಅಧ್ಯಕ್ಷ ರಾಕೇಶ್‌ ಟಿಕಾಯತ್‌ ಹೇಳಿದರು.

ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಸಂಯುಕ್ತ ಕಿಸಾನ್‌ ಮೋರ್ಚಾ, ಐಕ್ಯ ಹೋರಾಟ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರೈತ ಮಹಾ ಪಂಚಾಯತ್‌’ ಉದ್ಘಾಟಿಸಿ ಅವರು ಮಾತನಾಡಿದರು.

ಜನವರಿ 26ರಂದು ದೆಹಲಿಯಲ್ಲಿ 3 ಲಕ್ಷ ಟ್ರ್ಯಾಕ್ಟರ್‌ಗಳೊಂದಿಗೆ 25 ಲಕ್ಷ ರೈತರು ಒಗ್ಗೂಡಿ ಹೋರಾಟ ನಡೆಸಿದ್ದೆವು. ಅದೇ ರೀತಿ ನೀವು ಬೆಂಗಳೂರಿನಲ್ಲೂ ಹೋರಾಟ ನಡೆಸಿ ಎಂದು ಕರೆ ನೀಡಿದರು.

2021 ಆಂದೋಲನದ ವರ್ಷ: 2021 ಆಂದೋಲನದ ವರ್ಷವಾಗಿದ್ದು, ನಮ್ಮ ಬೆಳೆ ಮತ್ತು ತುಂಡು ಭೂಮಿಯನ್ನು ರಕ್ಷಿಸಿಕೊಳ್ಳಲು ಹೋರಾಟವನ್ನು ರೂಪಿಸಬೇಕಿದೆ. ಯುವಜನರು ರೈತರ ಹೋರಾಟವನ್ನು ಬೆಂಬಲಿಸಬೇಕು. ಪಟ್ಟಣ ಸೇರಿರುವ ಯುವಜನರು ಹಳ್ಳಿಗಳಿಗೆ ಹಿಂದಿರುಗಿ, ಕೃಷಿ ಸಂಸ್ಕೃತಿಯನ್ನು ಕಾಪಾಡಬೇಕು. ಈ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಎಸ್‌ಎನ್‌ಎಲ್‌ ಉಳಿಸಿ: ಕೇಂದ್ರ ಸರ್ಕಾರ ಕಂಪನಿಗಳ ಕೈಗೊಂಬೆಯಾಗಿದ್ದು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. 26 ಸರ್ಕಾರಿ ಉದ್ದಿಮೆಗಳು ಈಗಾಗಲೇ ಖಾಸಗೀಕರಣಗೊಂಡಿವೆ. ಬಿಎಸ್‌ಎನ್‌ಎಲ್ ಕೂಡ‌ ಸಾಯುವ ಸ್ಥಿತಿಯಲ್ಲಿದೆ. ‘ಅಂಬಾನಿಯ ಜಿಯೋ ಬೇಡ, ಬಿಎಸ್‌ಎನ್‌ಎಲ್‌ ಬೇಕು’, ‘ಕೋಕಕೋಲಾ ಬೇಡ ಎಳನೀರು ಬೇಕು’ ಘೋಷಣೆಗಳು ಮೊಳಗಬೇಕಿದೆ ಎಂದರು.

ಎನ್‌.ಡಿ.ಸುಂದರೇಶ್ ಮತ್ತು ಪ್ರೊ.ನಂಜುಂಡಸ್ವಾಮಿ ಅವರು ಚಳವಳಿ ರೂಪಿಸಿದ ನೆಲ ಇದಾಗಿದೆ. ಹೀಗಾಗಿ ಕರ್ನಾಟಕದಿಂದ ತುಂಬಾ ನಿರೀಕ್ಷೆಯಿದೆ. ಚಳವಳಿಯನ್ನು ಗಟ್ಟಿಗೊಳಿಸುವ ಮೂಲಕ ನಮ್ಮ ಬದುಕಿನ ರಕ್ಷಣೆ ಮಾಡಿಕೊಳ್ಳೋಣ ಎಂದು ಹೇಳಿದರು.

ವಿರೋಧಿಸಿದವರೇ ಜಾರಿಗೊಳಿಸಿದ್ರು: ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚಾದ ಕಾರ್ಯದರ್ಶಿ ಯುದ್ಧವೀರಸಿಂಗ್‌ ಮಾತನಾಡಿ, ಎಪಿಎಂಸಿ ಕಾಯ್ದೆ, ಗುತ್ತಿಗೆ ಕೃಷಿ ಪದ್ಧತಿಯನ್ನು 2012ರಲ್ಲಿ ಸುಷ್ಮಾ ಸ್ವರಾಜ್‌, ಅರುಣ್ ಜೇಟ್ಲಿ ತೀವ್ರವಾಗಿ ವಿರೋಧಿಸಿದ್ದರು. ಇವು ಜಾರಿಗೊಂಡರೆ ಕೃಷಿ ವ್ಯವಸ್ಥೆ ನಾಶವಾಗುತ್ತದೆ ಎಂದಿದ್ದರು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರು ಎಂ.ಎಸ್.‌ಪಿ ಅನ್ನು ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಒಟ್ಟಿನಲ್ಲಿ ಅಂದು ವಿರೋಧಿಸಿದವರೇ ಇಂದು ಜಾರಿಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ನಿಮ್ಮ ಭಾರತ ಮಾತೆ ಯಾರು?
ರೈತ ನಾಯಕ ಬಾಬಾಗೌಡ ಪಾಟೀಲ ಮಾತನಾಡಿ, ‘ಭೂಮಿಯನ್ನು ಉತ್ತಿ ಬೆಳೆ ಬೆಳೆದ, ಮಕ್ಕಳಿಗೆ ಹಾಲು ಕುಡಿಸಿದ ರೈತ ಮಹಿಳೆ ನಮ್ಮೆಲ್ಲರ ‘ಭಾರತ ಮಾತೆ’. ಮೋದಿ ಅಮಿತ್‌ಶಾ ಅವರೇ ಹೇಳಿ, ಯಾವಾಗಲೂ ಭಾರತ್‌ ಮಾತಾಕೀ ಜೈ ಅಂತೀರಲ್ಲ. ನಿಮ್ಮ ಭಾರತ ಮಾತೆ ಯಾರು? ಪ್ರಜ್ಞಾಸಿಂಗ್‌ ಠಾಕೂರ್‌ ಅಂಥವರು ನಿಮ್ಮ ಭಾರತ ಮಾತೆಯಾ..’ ಎಂದು ಪ್ರಶ್ನಿಸಿದರು.

ಸಮಾವೇಶದಲ್ಲಿ ಚುಕ್ಕಿ ನಂಜುಂಡಸ್ವಾಮಿ, ಕುರುಬೂರು ಶಾಂತಕುಮಾರ್‌, ಸಿದ್ಧನಗೌಡ ಪಾಟೀಲ, ನಂದಿನಿ ಜಯರಾಂ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT