ಬುಧವಾರ, ಮಾರ್ಚ್ 22, 2023
25 °C

ಖರ್ಗೆ ಭಾವಚಿತ್ರಕ್ಕೆ ಅವಮಾನ: ಬಿಜೆಪಿ ಕಾರ್ಯಕರ್ತನ ವಿರುದ್ಧ ಎಫ್ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ(ಕಲಬುರಗಿ): ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾವಚಿತ್ರಕ್ಕೆ ಅವಮಾನ ಮಾಡಿ ವಾಟ್ಸ್‌ಆ್ಯಪ್‌ ಸ್ಟೇಟಸ್ ಹಾಕಿದ್ದ ಆರೋಪದಡಿ ಬಿಜೆಪಿ ಕಾರ್ಯಕರ್ತ ಅಶ್ವಥ್ ರಾಠೋಡ ಅವರ ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ಸೋಮವಾರ ತಡರಾತ್ರಿ ದೂರು ದಾಖಲಾಗಿದೆ.

ಅಶ್ವಥ್ ರಾಠೋಡ ಎಂಬಾತ ಮಲ್ಲಿಕಾರ್ಜುನ ಖರ್ಗೆ ಅವರು ಮೈಕ್ ಮುಂದೆ ಮಾತನಾಡುವ ಭಾವಚಿತ್ರವನ್ನು ಎಡಿಟ್‌ ಮಾಡಿ ಅವಮಾನ ಮಾಡಿದ್ದಾರೆ. ಬಳಿಕ ಅದನ್ನು ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಅದನ್ನು ನೋಡಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಧ್ಯರಾತ್ರಿ ಪೊಲೀಸ್‌ ಠಾಣೆಗೆ ತೆರಳಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.

‘ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಉನ್ನತ ಹುದ್ದೆಯಲ್ಲಿದ್ದು, ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದಾರೆ. ಭಾವಚಿತ್ರದ ಅವಮಾನದಿಂದ ಕಾರ್ಯಕರ್ತರ, ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಅಶ್ವಥ್ ರಾಠೋಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹಾಗೂ ಇತರೆ ಮುಖಂಡರು, ಕಾರ್ಯಕರ್ತರೊಂದಿಗೆ ರಾತ್ರಿಯೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ದೂರು ಪಡೆದ ಪಿಎಸ್ಐ ಚೇತನ ಪೂಜಾರಿ ಅವರು ಐಪಿಸಿ ಕಲಂ 504 ರಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಖರ್ಗೆ ಅವರನ್ನು ಕೆಟ್ಟದ್ದಾಗಿ ಬಿಂಬಿಸಿ ಅವಮಾನಿಸಿದ ಅಶ್ವಥ್ ರಾಠೋಡ ಅವರನ್ನು ಕೂಡಲೇ ಬಂಧಿಸಬೇಕು ಎಂದು  ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಧ್ಯರಾತ್ರಿ ಠಾಣೆಯ ಹತ್ತಿರ ಬಿಗಿ ಪಟ್ಟು ಹಿಡಿದು ಆಗ್ರಹಿಸಿದ್ದರು.

ಪರಿಸ್ಥಿತಿ ಅವಲೋಕಿಸಿದ ಸಿಪಿಐ ಪ್ರಕಾಶ ಯಾತನೂರ, ಪಿಎಸ್ಐ ಚೇತನ ಅವರು ಆರೋಪಿಯನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದರು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ರಾತ್ರಿಯೇ  ಅಶ್ವಥ್ ಅವರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು