ಗುರುವಾರ , ಫೆಬ್ರವರಿ 25, 2021
19 °C

ಮಕ್ಕಳನ್ನು ಸಮಾಜಕ್ಕೆ ಆಸ್ತಿಯಾಗಿ ಮಾಡಿ: ತಹಶೀಲ್ದಾರ್‌ ಶೋಭಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಕ್ಕಳಿಗೆ ಆಸ್ತಿ ಮಾಡದೆ ಅವರಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ, ಬದುಕು ಕಲಿಸಿಕೊಡುವ ಮೂಲಕ ಸಮಾಜಕ್ಕೆ ಅವರನ್ನೇ ಆಸ್ತಿಯಾಗಿ ಮಾಡಬೇಕು’ ಎಂದು ತಹಶೀಲ್ದಾರ್‌ ಶೋಭಿತಾ ಕಿವಿಮಾತು ಹೇಳಿದರು.

ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಮಕ್ಕಳ ಹಕ್ಕುಗಳ ಗ್ರಾಮ ಸಭೆಗೆ ಚಾಲನೆ ನೀಡಿ ಮಾತನಾಡಿ, ‘ಮಕ್ಕಳ ಬಾಲ್ಯ ಅರಳಿಸಬೇಕು. ಆದರೆ, ಚಿವುಟಬಾರದು. ಶಿಕ್ಷಕರು ಸಮಯ ಪಾಲನೆಗೆ ಒತ್ತು ಕೊಡಬೇಕು. ಸಕಾರಣವಿಲ್ಲದೆ ಶಾಲೆ ಬಿಡಬಾರದು’ ಎಂದು ತಿಳಿಸಿದರು.

‘ಶಿಕ್ಷಕರು ಶಾಲೆಯಿಂದ ಹೊರಗೆ ಹೋಗಬೇಕಾದರೆ ಚಲನವಲನ ಪುಸ್ತಕದಲ್ಲಿ ದಾಖಲಿಸಿರಬೇಕು. ಮಕ್ಕಳನ್ನು ಸತ್ಪ್ರಜೆಗಳಾಗಿ ನಿರ್ಮಾಣ ಮಾಡುವುದು ಎಲ್ಲರ ಜವಾಬ್ದಾರಿ. ಶಿಕ್ಷಕರು ಮಕ್ಕಳ ಸಮಸ್ಯೆ ಆಲಿಸಿ ಪರಿಹರಿಸುವ ಪ್ರಯತ್ನ ಮಾಡಬೇಕು. ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯ ವಿವಾಹ ನಿರ್ಮೂಲನೆ ಮಾಡಬೇಕು. ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಮಕ್ಕಳು ಹೆಚ್ಚು ಕಾಲ ಮನೆಗಳಲ್ಲಿ ಇರುವುದರಿಂದ ಅವರ ಸಾಮರ್ಥ್ಯ ಗುರುತಿಸಲು ಪೋಷಕರು ಉತ್ತಮ ಅವಕಾಶವಿದೆ. ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಓದಷ್ಟೇ ಅಲ್ಲ. ಮಕ್ಕಳ ಸರ್ವತ್ತೋಮುಖ ಬೆಳವಣಿಗೆಗೆ ಆದ್ಯತೆ ನೀಡಬೇಕು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಪ್ಪ ಸಲಹೆ ನೀಡಿದರು.

ಪ್ರೋತ್ಸಾಹ ಕೊಡಬೇಕು: ‘ಪೋಷಕರು ಮಕ್ಕಳು ಆಸಕ್ತಿ ಅರಿತು ಅವರ ಸಾಧನೆಗೆ ಪ್ರೋತ್ಸಾಹ ಕೊಡಬೇಕು. ಶಿಸ್ತಿನ ಹೆಸರಿನಲ್ಲಿ ಮಕ್ಕಳಿಗೆ ಮಾನಸಿಕ ಹಿಂಸೆ ಕೊಡಬಾರದು. ತಪ್ಪು ಮಾಡಿದಾಗ ಭಯದಿಂದ ಬುದ್ಧಿ ಹೇಳಬೇಕು. ದೈಹಿಕ ಶಿಕ್ಷೆ ಕೊಡುವ ಬದಲು ಸರಿ-ತಪ್ಪುಗಳ ಬಗ್ಗೆ ಪ್ರೀತಿಯಿಂದ ಅರಿವು ಮೂಡಿಸಿ. ಸಣ್ಣಪುಟ್ಟ ಕೆಲಸಗಳಲ್ಲಿ ಮಕ್ಕಳು ತೋರಿಸುವ ಜಾಣ್ಮೆಯನ್ನು ಮನತುಂಬಿ ಪ್ರೋತ್ಸಾಹಿಸಿ’ ಎಂದರು.

‘ಓದುವ ಬೆಳಕು ಕಾರ್ಯಕ್ರಮದಲ್ಲಿ ಗ್ರಂಥಾಲಯ ಪುಸ್ತಕಗಳನ್ನು ಓದಲು ವ್ಯವಸ್ಥೆ ಮಾಡಲಾಗಿದೆ. ಶಾಲೆಗಳು ಸಾರ್ವಜನಿಕರ ಆಸ್ತಿಯಾಗಿದ್ದು, ಅವುಗಳನ್ನು ಕಾಪಾಡಲು ಇ–ಸ್ವತ್ತು ಮಾಡಿಕೊಡಲಾಗುವುದು. ಇದಕ್ಕೆ ಬೇಕಾದ ದಾಖಲೆಪತ್ರಗಳನ್ನು ಕೂಡಲೇ ಸಲ್ಲಿಸಿ’ ಎಂದು ಹೇಳಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರಾಜ್, ಸಮೂಹ ಸಂಪನ್ಮೂಲ ವ್ಯಕ್ತಿ ಸುಜಾತಾ, ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು