ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75 | ದೇಶಕ್ಕೆ ಹೊಸ ಭಾಷಾ ನೀತಿ ಅಗತ್ಯ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Last Updated 19 ನವೆಂಬರ್ 2022, 10:16 IST
ಅಕ್ಷರ ಗಾತ್ರ

ಮೈಸೂರು: ‘ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ದೇಶಕ್ಕೆ ಹೊಸ ಭಾಷಾ ನೀತಿಯ ಅಗತ್ಯವಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ಪ್ರಜಾವಾಣಿ’ಯ ಅಮೃತ ಮಹೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕದ ಸಹಯೋಗದಲ್ಲಿ ಇಲ್ಲಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ‘ಹಿಂದಿ ಹೇರಿಕೆಯ ಸ್ವರೂಪ–ಪರಿಣಾಮಗಳು’ ವಿಷಯದ ಕುರಿತು ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದಿ ಹೇರಿಕೆಯನ್ನು ಹಿಂದಿಯೇತರ ರಾಜ್ಯಗಳ ಜನರೆಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ನಾನಾ ಭಾಷೆಗಳ ತವರು ನಮ್ಮ ದೇಶ. ಪ್ರತಿ ಭಾಷೆಗೂ ತನ್ನದೇ ಆದ ಪರಂಪರೆ ಇದೆ. ಅಸ್ಮಿತೆಗಳನ್ನು ಒಳಗೊಂಡ ಭಾಷೆಗಳಿವು. ಇವುಗಳನ್ನು ನಾಶಪಡಿಸುವುದು ಆಘಾತಕಾರಿಯಾದುದು’ ಎಂದು ಕಳವಳ ವ್ಯಕ್ತಪಡಿಸಿದರು.

19,569 ಮಾತೃ ಭಾಷೆಗಳಿವೆ: ‘ದೇಶದಲ್ಲಿ, 19,569 ಮಾತೃಭಾಷೆಗಳಿವೆ. 10 ಲಕ್ಷಕ್ಕಿಂತ ಜಾಸ್ತಿ ಜನರು ಮಾತನಾಡುವ 40 ಭಾಷೆಗಳಿವೆ. ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತನಾಡುವ 60 ಭಾಷೆಗಳಿವೆ. 10ಸಾವಿರಕ್ಕೂ ಹೆಚ್ಚು ಜನರು ಬಳಸುವ 122 ಭಾಷೆಗಳಿವೆ. ಸ್ವತಂತ್ರ ಭಾಷೆಗಳು 121. ಸಂವಿಧಾನವು 22 ಭಾಷೆಗಳನ್ನು ಅಂಗೀಕರಿಸಿದೆ. ಅದರಲ್ಲಿ ಕನ್ನಡವೂ ಒಂದು. ಎಲ್ಲವೂ ರಾಷ್ಟ್ರೀಯ ಭಾಷೆಗಳೇ. ಯಾವುದನ್ನೂ ರಾಷ್ಟ್ರ ಭಾಷೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಬಿಂಬಿಸಲಾಗಿದೆ. ಶಿಕ್ಷಕರೂ ಮಕ್ಕಳಿಗೆ ಅದನ್ನೇ ಹೇಳಿಕೊಡುತ್ತಿದ್ದಾರೆ. ಇದು ತಪ್ಪು. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆಯನ್ನೂ ಸಮಾನವಾಗಿ ಕಾಣಬೇಕು. ಹೀಗಾಗಿ, ಭಾಷಾ ನೀತಿ ವಿರೋಧಿಸಿ ತಿದ್ದುಪಡಿಗೆ ಆಗ್ರಹಿಸಬೇಕು’ ಎಂದು ತಿಳಿಸಿದರು.

‘ಹಿಂದಿಯನ್ನು ಆಡಳಿತ ಭಾಷೆಯಾಗಿಸಲು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಕನ್ನಡ ಶಾಲೆಗಳಲ್ಲಿ ಶಾಲೆಗಳಲ್ಲಿ ‌ಹಿಂದಿ‌ ಕಲಿಕೆ ಕಡ್ಡಾಯ ಮಾಡಲಾಗಿದೆ. ನೌಕರಿ ಬೇಕೆಂದರೆ ಹಿಂದಿ ಕಲಿಯಬೇಕು ಎಂದು ಮಾಡಿದ್ದಾರೆ’ ಎಂದು ಹಿಂದಿ ಹೇರಿಕೆಯ ಸ್ವರೂಪ–ಪರಿಣಾಮಗಳನ್ನು ಕಟ್ಟಿಕೊಟ್ಟರು.

ಎಲ್ಲವನ್ನೂ ಕಳೆದುಕೊಳ್ಳುತ್ತೇವೆ: ‘ಹಿಂದಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಇತರ ಭಾಷೆಗಳಿಗೆ ಸಿಗುತ್ತಿಲ್ಲ. ಇದರಿಂದ, ನಮ್ಮ ನೆಲದಲ್ಲಿ ನಾವೇ ಪರದೇಸಿಗಳಾಗುತ್ತಿದ್ದೇವೆ. ನಮ್ಮ ಭಾಷೆ ಪರದೇಸಿಯಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಳೆದು ಹೋಗುತ್ತಿದೆ. ಇಂಗ್ಲಿಷ್ ವಿದೇಶಿ ಭಾಷೆಯಾದರೂ ನಮ್ಮ ಮೇಲೆ ಸವಾರಿ ಮಾಡುತ್ತಿದ್ದರೂ ನಮ್ಮ ಭಾಷೆ ಕಡೆಗಣಿಸುವುದಿಲ್ಲ‌. ಬದುಕು ಕಸಿದುಕೊಳ್ಳುವುದಿಲ್ಲ. ಆದರೆ, ಹಿಂದಿ ಹೇರಿಕೆಯಿಂದ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

‘ಖಾಸಗಿ ಶಾಲೆಗಳಲ್ಲಿ ಪ್ರಥಮ ಹಾಗೂ‌ ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸುತ್ತಿಲ್ಲ‌. ಶಿಕ್ಷಣ ಸಚಿವರು ಅತ್ತ ಗಮನಹರಿಸುತ್ತಿಲ್ಲ. ಏಕೆಂದರೆ ಶಿಕ್ಷಣ ಎನ್ನುವುದು ಒಂದು ವ್ಯಾಪಾರದಂತಾಗಿ ಹೋಗಿದೆ’ ಎಂದು ವಿಷಾದಿಸಿದರು.

ರಾಜ್ಯಗಳ ಹಕ್ಕು ಗೌರವಿಸಬೇಕು: ‌‘ಕನ್ನಡ ಭಾಷೆ ನಶಿಸಿದರೆ ನಮ್ಮ ಬದುಕು, ಸಂಸ್ಕೃತಿಯನ್ನೂ ಕಳೆದುಕೊಳ್ಳುತ್ತೇನೆ. ಬದುಕಿನಲ್ಲಿ ಪತನ ಸಂಭ್ರಮಿಸುತ್ತದೆ. ನಮ್ಮ ಹಳ್ಳಿಗಾಡಿನ ಮಕ್ಕಳು ಬ್ಯಾಂಕ್, ರೈಲ್ವೆ ಹುದ್ದೆಗಳನ್ನು ಪಡೆದುಕೊಳ್ಳಲು ಆಗವುದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನಿಜವಾದ ಹಕ್ಕುಗಳನ್ನು ಗೌರವಿಸಬೇಕು’ ಎಂದರು.

ಕರ್ನಾಟಕ ರಾಜ್ಯ ‌ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಂಯೋಜನಾಧಿಕಾರಿ ಡಾ.ಸಂತೋಷ್‌ ನಾಯಕ್‌ ಆರ್‌. ಮಾತನಾಡಿ, ‘ಮಹಾನ್ ಚಿಂತಕರನ್ನು ಕೊಟ್ಟ ಕನ್ನಡ ಭಾಷೆಯ ಮೇಲೆ ಹಿಂದಿ ಹೇರಿಕೆ ಸಲ್ಲದು. ಇಂಗ್ಲಿಷನ್ನು ಹೇರಿಕೆ ಎನ್ನಲಾಗದು. ಅದು ಸಂಪರ್ಕ ಭಾಷೆಯಾಗಿ ಕೆಲಸ ಮಾಡುತ್ತಿದೆ. ಅದರಿಂದ ಕನ್ನಡದ ಅಸ್ಮಿತೆಯನ್ನು ನಾವು ಕಳೆದುಕೊಳ್ಳಬೇಕಿಲ್ಲ. ಆದರೆ, ಕನ್ನಡದ ಜಾಗದಲ್ಲಿ ಹಿಂದಿ ಭಾಷೆಯು ಕೆಲಸ ಮಾಡುವುದಕ್ಕೆ ಮಾತ್ರವೇ ನಮ್ಮ ವಿರೋಧವಿದೆ’ ಎಂದರು.

‘ಪರಿಸರದ ಭಾಷೆಯಲ್ಲಿ ಮಾಡುವ ಕೆಲಸ ಪರಿಣಾಮಕಾರಿಯಾಗಿರುತ್ತದೆ. ಕನ್ನಡ ಭಾಷೆಯನ್ನು, ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಉದ್ಯೋಗ ಭದ್ರತೆ ಖಾತ್ರಿಯಾದರೆ ಕನ್ನಡದಲ್ಲೇ ಕಲಿಯುತ್ತಾರೆ’ ಎಂದರು.

ದೃಢ ನಿಲುವು ಅಗತ್ಯ: ‘ಹಲವು ಸಂದರ್ಭಗಳಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಭಾಷೆಯನ್ನು ಬಳಸದಿದ್ದರೆ ನಾಶವಾಗುತ್ತದೆ. ಹೀಗಾಗಿ ಬಳಸಬೇಕು. ಅದರಲ್ಲೇ ಚಿಂತಿಸಬೇಕು. ಹಿಂದಿ ಹೇರಿಕೆಯಾಗದ ರೀತಿ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು. ಎಲ್ಲ ಸೇವೆ, ಪರೀಕ್ಷೆಯೂ ಕನ್ನಡದಲ್ಲಿ ಇರಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ದೃಢವಾದ ನಿಲುವನ್ನು ಸರ್ಕಾರ ಪ್ರದರ್ಶಿಸಬೇಕು’ ಎಂದು ಹೇಳಿದರು.

ಅತಿಥಿಯಾಗಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ‘ಕನ್ನಡದ ಅಭಿವೃದ್ಧಿ ವಿಷಯದಲ್ಲಿ ವರದಿಗಳು ಬರುತ್ತಲೇ‌ ಇವೆ. ಆದರೆ, ಅನುಷ್ಠಾನಕ್ಕೆ ತರಲಾಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಕಸಾಪ ನಗರ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ಪ್ರಜಾವಾಣಿ’ಯು 75 ವರ್ಷಗಳಿಂದ ಜ‌ನರ ಧ್ವನಿಯಾಗಿ, ಆದರ್ಶ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡಿದೆ. ಜನರ ವಿಶ್ವಾಸ ಗಳಿಸಿ ಬೆಳೆದುಕೊಂಡು ‌ಬಂದಿದೆ‌. ಇದು ಶ್ಲಾಘನೀಯವಾದುದು’ ಎಂದರು.

‘ಡೆಕ್ಕನ್ ಹೆರಾಲ್ಡ್‌’ ಮೈಸೂರು ಬ್ಯೂರೋ ಮುಖ್ಯಸ್ಥ ಟಿ.ಆರ್.ಸತೀಶ್‌ಕುಮಾರ್‌, ಪ್ರಸರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ್ ಪಾಲ್ಗೊಂಡಿದ್ದರು.

‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವರದಿಗಾರ ಎಂ.ಮಹೇಶ ನಿರೂಪಿಸಿದರು.

‘ಪ್ರಜಾವಾಣಿ’ಯು ನಾಡಿನ ಸಾಕ್ಷಿಪ್ರಜ್ಞೆ
‘ನಾವೆಲ್ಲ ‘ಪ್ರಜಾವಾಣಿ’ ‌ಓದಿ ಬೆಳೆದವರೇ. ಎಲ್ಲ ಸಾಹಿತ್ಯಿಕ ಪಲ್ಲಟಗಳಿಗೂ ಈ ‍ಪತ್ರಿಕೆ ಸಾಕ್ಷಿಯಾಗಿದೆ. ಸೈದ್ಧಾಂತಿಕ ಪಲ್ಲಟಗಳಿಗೂ ಸಾಕ್ಷಿಪ್ರಜ್ಞೆಯ ಕಣ್ಣಾಗಿ ಮುನ್ನಡೆಸಿದೆ. ಎಲ್ಲ‌ ಚಿಂತನೆಗಳನ್ನೂ ನೇರವಾಗಿ ಬೆಳೆಸಿದೆ. ಹೀಗಾಗಿ, ಓದುಗರ ಬಳಗದ ಸದಸ್ಯನಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಪ್ರಜಾಸತ್ತಾತ್ಮಕ ನಿಲುವು ಹೊಂದಿದೆ’ ಎಂದು ಪ್ರೊ.ಸಿದ್ದರಾಮಯ್ಯ ಹೇಳಿದರು.

*
ನೆಲ ನಿಷ್ಠೆ ತೋರಬೇಕು
ಕನ್ನಡದ ರಾಜಕಾರಣಿಗಳು ಪಕ್ಷ ನಿಷ್ಠೆ ಜೊತೆ ನೆಲ ನಿಷ್ಠೆಯನ್ನೂ ತೋರಿಸಬೇಕು. ಸರೋಜಿನಿ ಮಹಿಷಿ ವರದಿಯ (ಪರಿಷ್ಕರಿಸಿದ) ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು.
–ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಮಾಜಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

*
ಕೆಲಸ ಕಳೆದುಕೊಳ್ಳುತ್ತಿದ್ದೇವೆ
ಕನ್ನಡಿಗರಾದ ನಾವು ವಲಸಿಗರಿಂದಾಗಿ ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದೇವೆ. ವಲಸೆ ಬಂದವರಿಗೆ ಕನ್ನಡ ಕಲಿಸುವ ಜವಾಬ್ದಾರಿ ಯಾರದು?
– ನಾಗೇಶ್, ಸವಿತಾ ಸಮಾಜದ ಅಧ್ಯಕ್ಷ

*
ಹೀಯಾಳಿಸಿದ್ದರು
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ನಾನು ಕನ್ನಡ ಬಳಸಿದ್ದಕ್ಕೆ ಹೀಯಾಳಿಸಿದ್ದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ನಮ್ಮ ಭಾಷೆ ಬಳಸುವಂತೆ ಆಗಬೇಕು.
–ಬಸವರಾಜ ಹುಡೇದಗಡ್ಡಿ, ನಿವೃತ್ತ ಅಭಿಯೋಜಕ

*
ಇಚ್ಛಾಶಕ್ತಿ ಪ್ರದರ್ಶಿಸಿ
ಕನ್ನಡದ ಉಳಿವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಎಲ್ಲ ಕಡೆಯೂ ಕನ್ನಡವೇ ಸಾರ್ವಭೌಮ ಆಗುವಂತಹ ಇಚ್ಛಾಶಕ್ತಿ ಪ್ರದರ್ಶಿಸಬೇಕು.
–ಯೋಗೇಶ್ ಉಪ್ಪಾರ, ಅಧ್ಯಕ್ಷ, ಉಪ್ಪಾರ ಸಮಾಜ

*
ಪ್ರಜಾವಾಣಿಗೆ ಅಭಿನಂದನೆ
ಹಿಂದಿ ಹೇರಿಕೆಯಿಂದಾಗಿ ಕನ್ನಡದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಬೆಳಕು ಚೆಲ್ಲುವ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ‘ಪ್ರಜಾವಾಣಿ’ಗೆ ಅಭಿನಂದನೆಗಳು.
– ರಾಘವೇಂದ್ರ, ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT