ಎನ್‌ಆರ್‌ಐ ಕೋಟಾ, ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳಕ್ಕೆ ವಿರೋಧ

7
ಎಐಡಿಎಸ್‍ಒ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

ಎನ್‌ಆರ್‌ಐ ಕೋಟಾ, ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳಕ್ಕೆ ವಿರೋಧ

Published:
Updated:
Prajavani

ರಾಯಚೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯ (ಎನ್‍ಆರ್‍ಐ) ಕೋಟಾ ಜಾರಿಗೆ ತರುವ ನಿರ್ಧಾರ ಮತ್ತು ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಳದ ಪ್ರಸ್ತಾವನೆಯನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಷನ್ (ಎಐಡಿಎಸ್‍ಒ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ನಗರದ ಚಂದ್ರಮೌಳೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಗುರುವಾರ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.

ಎನ್‌ಆರ್‌ಐ ಕೋಟಾ ಜಾರಿಗೆ ತರುವ ಪ್ರಸ್ತಾಪವನ್ನು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವರು ಈಚೆಗೆ ಸದನದಲ್ಲಿ ಮಂಡಿಸಿದ್ದಾರೆ. ಸರ್ಕಾರದ ಈ ನಿಲುವು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಆಘಾತ ಮೂಡಿಸಿದೆ. ಶೇ 10 ರಷ್ಟು ಕೋಟಾ ಜಾರಿಗೊಳಿಸುವುದು ಸಂವಿಧಾನ ಬಾಹಿರ ಹಾಗೂ ಸಹಜ ನ್ಯಾಯಕ್ಕೆ ವಿರುದ್ಧವಾದ ನಡೆಯಾಗಿದೆ ಎಂದು ಜಿಲ್ಲಾಧಿಕಾರಿ ಮೂಲಕ ವೈದ್ಯಕೀಯ ಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ಸರ್ಕಾರದ ಈ ನಿರ್ಧಾರದಿಂದ ವೈದ್ಯಕೀಯ ಶಿಕ್ಷಣ ಇನ್ನಷ್ಟು ವ್ಯಾಪರೀಕರಣ ಹಾಗೂ ಖಾಸಗೀಕರಣಗೊಳ್ಳಲಿದೆ. ಈಗಾಗಲೇ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಕೈಗೆಟುಕದಷ್ಟು ದುಬಾರಿಯಾಗಿದೆ. ಬಡ ವಿದ್ಯಾರ್ಥಿಗಳಿಗಿರುವ ಏಕೈಕ ಆಸರೆ ಸರ್ಕಾರಿ ಕಾಲೇಜುಗಳಾಗಿವೆ. ಸರ್ಕಾರಿ ಕಾಲೇಜುಗಳಲ್ಲಿ ಓದಿದ ಅದೆಷ್ಟೊ ಬಡ ವಿದ್ಯಾರ್ಥಿಗಳು ಜನರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಈ ಕೋಟಾ ಜಾರಿಗೊಂಡರೆ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ದೂರಿದರು.

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು ಶೇ 300ರಿಂದ 600ಕ್ಕೆ ಹೆಚ್ಚಿಸುವ ಕುರಿತು ಸರ್ಕಾರ ಪ್ರಸ್ತಾಪ ಮಾಡಿದೆ. ಪದವಿ ಶುಲ್ಕವನ್ನು ₹17 ಸಾವಿರದಿಂದ ₹50 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು ₹40 ಸಾವಿರದಿಂದ ₹3.5 ಲಕ್ಷಕ್ಕೆ ಏರಿಕೆ ಮಾಡುವ ಪ್ರಸ್ತಾಪವಿದೆ. ಈ ಮೂಲಕ ಸರ್ಕಾರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇನ್ನೊಂದು ಆಘಾತವನ್ನು ನೀಡಿದೆ. ಬೆಲೆ ಏರಿಕೆ ಹಾಗೂ ಬರಗಾಲದ ಸಂದರ್ಭದಲ್ಲಿ ಶುಲ್ಕ ಕಡಿಮೆ ಮಾಡದೇ ಮತ್ತಷ್ಟು ಹೆಚ್ಚಳ ಮಾಡುತ್ತಿರುವುದು ನೋವಿನ ವಿಚಾರವಾಗಿದೆ ಎಂದರು.

ವೈದ್ಯಕೀಯ ಕಾಲೇಜುಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಹೆಚ್ಚಿನ ಬಜೆಟ್ ನೀಡಿದರೆ ಸಂತೋಷದ ಸಂಗತಿ. ಆದರೆ, ಸೌಲಭ್ಯಗಳನ್ನು ನೀಡಲು ಶುಲ್ಕ ಹೆಚ್ಚಳ ಮಾಡುವುದು ಹಾಗೂ ಎನ್ಆರ್‌ಐ ಕೋಟಾ ಜಾರಿಗೆ ತರುವುದು ನ್ಯಾಯ ಸಮ್ಮತವಲ್ಲ. ಸರ್ಕಾರದ ಬೊಕ್ಕಸದಲ್ಲಿ ಸಾಕಷ್ಟು ಹಣವಿದ್ದು, ಅನಗತ್ಯ ದುಂದುವೆಚ್ಚ ತಡೆದರೆ ಜನ ಕಲ್ಯಾಣಕ್ಕೆ ಅಗತ್ಯವಿರುವಷ್ಟು ಹಣ ವಿನಿಯೋಗಿಸಬಹುದು. ಶುಲ್ಕವನ್ನು ಆದಾಯದ ಮೂಲವೆಂದು ಪರಿಗಣಿಸುವುದು ಶಿಕ್ಷಣದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ ಎಂದು ವಿವರಿಸಿದರು.

ಎಐಡಿಎಸ್‍ಒ ಸಂಘಟನೆಯ ಜಿಲ್ಲಾ ಘಟಕ ಅಧ್ಯಕ್ಷ ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್, ವಿದ್ಯಾರ್ಥಿಗಳಾದ ಗುರುನಾಥರೆಡ್ಡಿ, ಸಂಜೀವ್‍ರೆಡ್ಡಿ, ವಿಜೇತ್, ಕುಮಾರ ನಾಯಕ, ಪ್ರಶಾಂತ, ಶಿವಪ್ರಸಾದ, ಮನೋಜ್, ಸುಷ್ಮಿತಾ, ಸುಷ್ಮಾ, ಸ್ನೇಹ, ಐಶ್ವರ್ಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !