ಬುಧವಾರ, ಜೂನ್ 29, 2022
26 °C
56 ಮನೆಗಳು, 1813 ಹೆಕ್ಟೇರ್ ಬೆಳೆ, 276 ವಿದ್ಯುತ್ ಕಂಬಗಳು, 6 ಶಾಲೆಗೆ ಹಾನಿ

ಶಿವಮೊಗ್ಗ: ಮುಂಗಾರು ಪೂರ್ವ ಮಳೆಗೆ ಸೂರು, ಪೈರು ಹಾನಿ

ಗಣೇಶ್‌ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ಜಿಲ್ಲೆಯ ಜನರು ಸೂರು, ಪೈರು ಕಳೆದುಕೊಂಡು ಹೈರಾಣಾಗಿದ್ದಾರೆ. ಕಳೆದ ಮೂರು ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವುದು ವರದಿಯಾಗಿದೆ.

ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಈಗ ಮತ್ತೆ ಮಳೆಗೆ ಮನೆ, ಬೆಳೆ ಕಳೆದುಕೊಂಡು ದಿಕ್ಕು ಕಾಣದ ಸ್ಥಿತಿಯಲ್ಲಿ ಜನರು ಒದ್ದಾಡುವಂತಾಗಿದೆ.

ನಗರ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಮನೆಯಲ್ಲಿದ್ದ ಬಹುತೇಕ ವಸ್ತುಗಳು ನೀರು ಪಾಲಾಗಿವೆ. ಇನ್ನು ಗ್ರಾಮೀಣ ಭಾಗದಲ್ಲಿ ಒಂದೇ ಮಳೆಗೆ ಬಹುತೇಕ ಕೆರೆಗಳು ಕೋಡಿ ಬಿದ್ದಿದ್ದು, ರಸ್ತೆಯ ಸಂಪರ್ಕವೇ ಕಡಿದುಹೋಗಿದೆ. ಹೊಲ ಗದ್ದೆಗಳಿಗೆ ನೀರು ನುಗ್ಗಿ ಎಕರೆಗಟ್ಟಲೇ ಬೆಳೆ ಹಾನಿಯಾಗಿದೆ.

56 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ಕಳೆದ ಮೂರು ದಿನಗಳಲ್ಲಿ ಒಟ್ಟು 56 ಮನೆಗಳು ಹಾನಿಗೀಡಾಗಿವೆ. ಒಂದು ಮನೆಗೆ ತೀವ್ರ ಹಾನಿಯಾಗಿದ್ದು, 53 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 2 ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಶಿವಮೊಗ್ಗ ನಗರದಲ್ಲೇ 16 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1,690 ಹೆಕ್ಟೇರ್ ಬೆಳೆ ಹಾನಿ: ಮಳೆಗೆ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸೇರಿ 1,813 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಪೈಕಿ 1,690 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿರುವುದು ವರದಿಯಾಗಿದೆ. ಇದರಲ್ಲಿ 372 ಹೆಕ್ಟೇರ್ ಭತ್ತ, 1,248 ಹೆಕ್ಟೇರ್ ಮುಸುಕಿನ ಜೋಳ ಬೆಳೆ ನೀರು ಪಾಲಾಗಿದೆ. 123.29 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

6 ಶಾಲೆಗಳಿಗೆ ಹಾನಿ: ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಒಟ್ಟು 6 ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿದೆ. ತೀರ್ಥಹಳ್ಳಿಯಲ್ಲಿ 1, ಸೊರಬದಲ್ಲಿ 5 ಶಾಲೆಗಳಿಗೆ ಹಾನಿಯಾಗಿದೆ. 276 ವಿದ್ಯುತ್ ಕಂಬಗ‌ಳಿಗೆ ಹಾನಿಯಾಗಿದ್ದು, ಸೊರಬ ಒಂದರಲ್ಲೇ 182 ವಿದ್ಯುತ್ ಕಂಬಗಳು ಹಾಳಾಗಿವೆ. ಹೊಸನಗರಲ್ಲಿ 25, ಸಾಗರ 25, ತೀರ್ಥಹಳ್ಳಿಯಲ್ಲಿ 44 ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಜೊತೆಗೆ 16 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊದಲ ಬಲಿ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಗ್ರಾಮದ ಕೃಷಿ ಕಾರ್ಮಿಕ ಶಂಕರ್ (52) ಎಂಬುವವರು ಗುರುವಾರ ರಾತ್ರಿ ಗದ್ದೆ ಅಂಚಿನಿಂದ ಕಾಲು ಜಾರಿ ಹಳ್ಳದಲ್ಲಿ ಬಿದ್ದು ಮೃತಪಟ್ಟಿರುವುದು ತಿಳಿದು ಬಂದಿದೆ.

ರಸ್ತೆ ಸಂಪರ್ಕ ಕಡಿತ
ಶಿವಮೊಗ್ಗ ತಾಲ್ಲೂಕಿನ ವಿಠಗೊಂಡನಕೊಪ್ಪ ಊರ ಮುಂದಿನ ಕೆರೆಗೆ ಹರಿದು ಬರುವ ಹಗೇದ ಹಳ್ಳವು ಮಳೆ ನೀರಿನಿಂದ ತುಂಬಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಜನರು ಓಡಾಡುವುದಕ್ಕೆ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ತನಿಖೆ ಮಾಡಿ ಹಳ್ಳ ದುರಸ್ತಿ ಮಾಡಬೇಕು, ಕೋಡಿ ನೀರು ಹೋಗುವ ಕಾಲುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

*
ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ನಷ್ಟಕ್ಕೆ ಶೀಘ್ರವೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
-ಡಾ.ಸೆಲ್ವಮಣಿ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು