ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಅವೈಜ್ಞಾನಿಕ ಮೀನುಗಾರಿಕೆಗೆ ಕಡಲದಂಡೆಯ ಮರಳು ಹೇರಳ ಬಳಕೆ: ಪ್ಲಾಸ್ಟಿಕ್‌ನಿಂದ ಸಮುದ್ರ ಮಾಲಿನ್ಯ

ಕಾರವಾರ: ‘ಕಪ್ಪೆ ಬೊಂಡಾಸ್‌’ ಬೇಟೆಗೆ ಕರಗಿತು ಲೇಡೀಸ್ ಬೀಚ್!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಸಮೀಪದ ‘ಲೇಡೀಸ್ ಬೀಚ್’ ಕಡಲತೀರದಲ್ಲಿ ಕಪ್ಪೆ ಬೊಂಡಾಸ್ ಮೀನುಗಳ ಅವೈಜ್ಞಾನಿಕವಾದ ಬೇಟೆ ಅವ್ಯಾಹತವಾಗಿ ಮುಂದುವರಿದಿದೆ. ಇದರ ಪರಿಣಾಮ ಕಡಲದಂಡೆಯೇ ಕರಗಿ ಹೋಗುತ್ತಿದ್ದು, ಸುಂದರ ತಾಣ ಶೀಘ್ರವೇ ಸಮುದ್ರ ಪಾಲಾಗಬಹುದು ಎಂದು ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕಪ್ಪೆ ಬೊಂಡಾಸ್ ಮೀನುಗಳನ್ನು ಹಿಡಿಯಲು ಕಡಲತೀರದ ಮರಳನ್ನು ಗೋಣಿಗಳಲ್ಲಿ ಲೋಡ್‌ಗಟ್ಟಲೆ ತುಂಬಿಸಿದ ಕುರುಹು, ಸೋಮವಾರ ಅಲ್ಲಿಗೆ ಭೇಟಿ ನೀಡಿದ್ದ ಪತ್ರಕರ್ತರಿಗೆ ಗೋಚರಿಸಿತು. ಸ್ಥಳದಲ್ಲಿ ಹತ್ತಾರು ಪ್ಲಾಸ್ಟಿಕ್ ಗೋಣಿಗಳು, ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಅವುಗಳನ್ನು ಬಿಗಿಯಲು ತಂದಿದ್ದ ದಾರಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೇರಳ ಮತ್ತು ತಮಿಳುನಾಡಿನ ಮೀನುಗಾರರೇ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಹೇಗೆ ಹಿಡಿಯುತ್ತಾರೆ?: ಸಮುದ್ರ ದಂಡೆಯ ಮರಳನ್ನು ತುಂಬಿಸಿದ ಪ್ಲಾಸ್ಟಿಕ್ ಚೀಲಗಳನ್ನು ಗಾಳಿ ಮರದ ಟೊಂಗೆಗಳಿಗೆ ಬಿಗಿಯುತ್ತಾರೆ. ಅದಕ್ಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಕಟ್ಟಿ ಸಮುದ್ರದಲ್ಲಿ 70 ಮೀಟರ್‌ಗೂ ಅಧಿಕ ಆಳವಿರುವ ಜಾಗದಲ್ಲಿ ಮುಳುಗಿಸುತ್ತಾರೆ. ಕಪ್ಪೆ ಬೊಂಡಾಸ್ ಮೀನುಗಳು ಸುಮಾರು ಒಂದು ವಾರದ ಬಳಿಕ ಆ ಗೋಣಿ ಹಾಗೂ ಟೊಂಗೆಗಳ ಮೇಲೆ ಮೊಟ್ಟೆಯಿಡಲು ಬರುತ್ತವೆ. ಆಗ ಅಲ್ಲಿಗೆ ಹೋಗಿ ಗಾಳ ಹಾಕಿ ಬೇಟೆಯಾಡುತ್ತಾರೆ.

ಅವೈಜ್ಞಾನಿಕ ಪದ್ಧತಿ: ‘ಈ ಪದ್ಧತಿಯ ಮೀನುಗಾರಿಕೆಯನ್ನು ಕೇರಳದಲ್ಲಿ ನಿಷೇಧಿಸಲಾಗಿದೆ. ಇದರಲ್ಲಿ ಪ್ಲಾಸ್ಟಿಕ್ ಬಳಸುವುದರಿಂದ ಸಮುದ್ರದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚುತ್ತದೆ. ಮೀನನ್ನು ಹಿಡಿದ ಬಳಿಕ ಗೋಣಿ, ದಾರವನ್ನು ಅಲ್ಲೇ ಬಿಡುತ್ತಾರೆ. ಅವು ಜಲಚರಗಳಿಗೂ ಸಂಕಷ್ಟ ತರುತ್ತವೆ. ದೋಣಿಗಳ ಎಂಜಿನ್‌ಗಳಿಗೂ ಸುತ್ತಿಕೊಳ್ಳುತ್ತವೆ. ನನ್ನ ದೋಣಿಯ ಗೇರ್ ಬಾಕ್ಸ್ ಇದೇ ಕಾರಣಕ್ಕೆ ಹಾಳಾಗಿತ್ತು’ ಎನ್ನುತ್ತಾರೆ ಮೀನುಗಾರ ಬೈತಖೋಲ್‌ನ ಸುಧಾಕರ ಹರಿಕಂತ್ರ. 

‘ಕಪ್ಪೆ ಬೊಂಡಾಸ್ ಮೀನುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಇಂತಹ ಅವೈಜ್ಞಾನಿಕ ಮೀನುಗಾರಿಕೆಯಿಂದ ಅವು ಮುಂದಕ್ಕೆ ಬರುವುದೇ ಇಲ್ಲ. ಎಲ್ಲವೂ ಒಂದೇ ಕಡೆ, ಕೆಲವರಿಗೇ ಸಿಗುವುದರಿಂದ ಪರ್ಸೀನ್ ಹಾಗೂ ನಾಡದೋಣಿ ಮೀನುಗಾರರಿಗೆ ಭಾರಿ ನಷ್ಟವಾಗುತ್ತದೆ’ ಎಂದು ಮೀನುಗಾರ ವಿನಾಯಕ ಹರಿಕಂತ್ರ ವಿವರಿಸುತ್ತಾರೆ.

‘ಕುಡಿಯುವ ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕೆಲವು ತಿಂಗಳ ಹಿಂದಿನವರೆಗೆ ಯಾರೂ ಕೇಳುತ್ತಿರಲಿಲ್ಲ. ಈಗ ಒಂದು ಬಾಟಲಿಗೆ ₹ 1ರಂತೆ ಕೆಲವರು ಖರೀದಿಸುತ್ತಿದ್ದಾರೆ. ಅವುಗಳೆಲ್ಲ ಕ‍ಪ್ಪೆ ಬೊಂಡಾಸ್ ಬೇಟೆಗೇ ಬಳಕೆಯಾಗುತ್ತಿವೆ’ ಎಂದು ಅವರು ದೂರಿದರು.

‘ದಿನಕ್ಕೆ ಐದರಿಂದ ಆರು ಕ್ವಿಂಟಲ್ ಮೀನನ್ನು ಹಿಡಿಯಲಾಗುತ್ತದೆ. ಅವುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲೇ ಮಾರಾಟ ಮಾಡುತ್ತಾರೆ. ಕೆಲವು ಸ್ಥಳೀಯ ಏಜೆಂಟರು ಕಮಿಷನ್ ಆಸೆಗೆ ಅವರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ’ ಎನ್ನುವುದು ಕೆಲವು ಸಾಂಪ್ರದಾಯಿಕ ಮೀನುಗಾರರ ಆರೋಪವಾಗಿದೆ.

ಬೆಳಗಿನ ಜಾವದ ಚಟುವಟಿಕೆ: ‘ಕಡಲದಂಡೆಯಿಂದ 30– 40 ಲೋಡ್‌ಗಳಷ್ಟು ಮರಳು ಖಾಲಿಯಾದರೂ ಕೇವಲ ₹ 2 ಸಾವಿರ ದಂಡ ವಿಧಿಸಲಾಯಿತು. ಇದರಿಂದ ಪರಿಸರಕ್ಕೆ ಆಗುತ್ತಿರುವ ನಷ್ಟವನ್ನು ಭರ್ತಿ ಮಾಡುವವರು ಯಾರು’ ಎಂಬುದು ಮೀನುಗಾರರಾದ ಮೋಹನ್ ದಾಜಿ ಅವರ್ಸೇಕರ್, ಆನಂದ ಖಾರ್ವಿ ಅವರ ಪ್ರಶ್ನೆಯಾಗಿದೆ.

‘ಬೆಳಿಗ್ಗೆ ಮೂರು ಗಂಟೆ ಸುಮಾರಿಗೆ ಈ ಚಟುವಟಿಕೆ ಶುರು ಮಾಡುತ್ತಾರೆ. ಎಲ್ಲರೂ ಮೀನುಗಾರಿಕೆಗೆ ತೆರಳುವ ಸಮಯದಲ್ಲಿ ಜಾಗ ಖಾಲಿ ಮಾಡಿರುತ್ತಾರೆ. ಎರಡು ಎಂಜಿನ್‌ಗಳ ಪಾತಿ ದೋಣಿಯಲ್ಲಿ ಬಂದು ಇಷ್ಟೆಲ್ಲ ಅಕ್ರಮ ನಡೆಸುತ್ತಿದ್ದರೂ ಅವರ ವಿರುದ್ಧ ಯಾಕೆ ಕಟ್ಟುನಿಟ್ಟಿನ ಕ್ರಮವಾಗುತ್ತಿಲ್ಲ ಎಂಬುದೇ ತಿಳಿಯುತ್ತಿಲ್ಲ’ ಎಂದು ಅವರು ಬೇಸರಿಸುತ್ತಾರೆ.

*
ಕಳೆದ ವರ್ಷವೂ ಈ ರೀತಿಯ ಮೀನುಗಾರಿಕೆ ಮಾಡುತ್ತಿದ್ದವರನ್ನು ‍ಪತ್ತೆ ಹಚ್ಚಿ ಅವರಿಗೆ ಮೀನುಗಾರಿಕಾ ಇಲಾಖೆಯಿಂದ ದಂಡ ವಿಧಿಸಲಾಗಿತ್ತು. ಆದರೂ ಮತ್ತೆ ಮುಂದುವರಿದಿದೆ.
-ವಿನಾಯಕ ಹರಿಕಂತ್ರ, ಮೀನುಗಾರ

*
ಸಮುದ್ರದಲ್ಲಿ ಗಸ್ತು ತಿರುಗುವ ಕರಾವಳಿ ಕಾವಲು ಪೊಲೀಸರು ನಮ್ಮ ಇಲಾಖೆಗೆ ಮಾಹಿತಿ ನೀಡಬೇಕು. ಅವರೊಂದಿಗೆ ನ.12ರಂದು ಸಭೆ ನಡೆಸಿ, ಲಿಖಿತ ದೂರು ನೀಡುತ್ತೇನೆ.
-ನಾಗರಾಜು, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು