ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರಿಗೆ ಸಲಹೆ: ಮನೆಯಲ್ಲಿರಲಿ ‘ಕ್ರಿಯೇಟಿವ್‌ ಕಾರ್ನರ್‌’

Last Updated 7 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಮಕ್ಕಳನ್ನು ಹೇಗೆ ಬೆಳೆಸಬೇಕು? ಅವರ ಆಸಕ್ತಿ–ಅಭಿರುಚಿಯನ್ನು ಅರಿತು, ಅದನ್ನು ನಿರ್ದಿಷ್ಟವಾಗಿ ಕೇಂದ್ರೀಕರಿಸುವ ಬಗೆ ಹೇಗೆ? ಅನ್ನುವುದು ಬಹುಶಃ ಜಗತ್ತಿನ ಎಲ್ಲ ತಂದೆ ತಾಯಂದಿರನ್ನು ಕಾಡುವ ಪ್ರಶ್ನೆಗಳೇ.

ಮಕ್ಕಳ ಅಭಿರುಚಿಯನ್ನು ಅರಿತು, ಪೋಷಿಸಿದರೆ ಬದುಕಿನ ಹಾದಿ ಸುಗಮವಾಗುತ್ತದೆ. ಆದರೆ, ಅದನ್ನು ಅರಿಯುವುದು ಅಷ್ಟು ಸುಲಭದ ಮಾತೇ?. ನಿರ್ದಿಷ್ಟ ಪ್ರಕಾರವನ್ನು ಕಲಿಸುವ ಶಿಬಿರಗಳು ಬೇಸಿಗೆ ರಜೆಯಲ್ಲಿ ಹೇರಳವಾಗೇನೋ ಇವೆ. ಅಭಿರುಚಿ, ಹವ್ಯಾಸಗಳು ಮಗುವಿನ ವ್ಯಕ್ತಿತ್ವಕ್ಕೆ ಮೆರುಗು ತಂದರೆ ಅದಕ್ಕಿಂತ ಖುಷಿ ಬೇರೇನಿರುತ್ತದೆ. ಎಳವೆಯಿಂದಲೇ ಮನೆಯಲ್ಲಿ ಇವನ್ನು ಗುರುತಿಸಿ, ಪೋಷಿಸುವ ಕೆಲಸವಾದರೆ ಶಿಬಿರಕ್ಕೆ ಕಳುಹಿಸಲೇಬೇಕೆಂಬ ಅಗತ್ಯತೆ ಇರುವುದಿಲ್ಲ.

ಮಕ್ಕಳ ಆಸಕ್ತಿ ಅರಿಯಲು ಪೋಷಕರಾದವರಿಗೆ ತಾಳ್ಮೆ, ಸಂಯಮ ಬಹಳ ಮುಖ್ಯ. ಅದನ್ನು ಅರಿತುಕೊಳ್ಳುವ ಧಾವಂತದಲ್ಲಿ ಮಕ್ಕಳ ಮೇಲೆ ಚಟುವಟಿಕೆಗಳನ್ನು ಹೇರುವ ಕೆಲಸ ಮಾಡಬಾರದು. ಸಣ್ಣ ವಯಸ್ಸಿಗೆ ಆಸಕ್ತಿ ಬಾರದೇ ಇರಬಹುದು. ಪ್ರಬುದ್ಧರಾದ ಹಾಗೇ ಆಸಕ್ತಿ ತಳೆಯಬಹುದು. ಅಲ್ಲಿವರೆಗೆ ಕಾಯಬೇಕು. ಏನನ್ನು ನೋಡಿದಾಗ, ಕೇಳಿದಾಗ ಅವರ ಕಣ್ಣಲ್ಲಿ ಖುಷಿ ಕಾಣುತ್ತೆ ಅನ್ನುವುದನ್ನು ಗಮನಿಸುವ ಸೂಕ್ಷ್ಮತೆ ಪೋಷಕರಿಗೆ ಇರಬೇಕು.

ಫೈನ್‌ ಮೋಟಾರ್‌ ಸ್ಕಿಲ್ಸ್‌ (ಉತ್ತಮ ಕೌಶಲಗಳು) ಕಲಿಯಲು ಮನೆಗಿಂತ ಬೇರೆ ತಾಣವಿಲ್ಲ. ಅದರಲ್ಲಿಯೂ ಅಡುಗೆ ಮನೆಯ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಮಕ್ಕಳು ಈ ಕೌಶಲಗಳನ್ನು ಕಲಿಯಬಲ್ಲರು. ತರಕಾರಿ ಹೆಚ್ಚುವುದು, ರಂಗೋಲಿ ಹಾಕುವುದು, ಕಸೂತಿ ಬಿಡಿಸುವುದು, ಹೊಲಿಗೆ, ಆಟಿಕೆಗಳ ಬಿಡಿಭಾಗಗಳನ್ನು ಬಿಡಿಸಿ ಅವುಗಳನ್ನು ಮರು ಜೋಡಿಸುವುದು.. ಹೀಗೆ ಇವೆಲ್ಲವನ್ನು ಲಿಂಗಭೇದವಿಲ್ಲದೇ ಕಲಿಯಲು ಮಕ್ಕಳಿಗೆ ಅನುವು ಮಾಡಿಕೊಡಬೇಕು.

ಈ ಮಾತಿಗೆ ಪೂರಕವಾಗಿ ತನ್ನ ಏಳು ವರ್ಷದ ಮಗಳು ಸುರಗಿ ಜತೆ ಹಲವು ಪ್ರಯೋಗಗಳನ್ನು ನಡೆಸಿರುವ ವನಿತಾ ಅಣ್ಣಯ್ಯ ಯಾಜಿ ಅವರ ಅನುಭವ ಹೀಗಿದೆ; ‘ಪೋಷಕರು ಏನು ಮಾಡುತ್ತಾರೋ ಅದನ್ನೇ ಮಕ್ಕಳು ಮಾಡುವುದು. ಹಾಗಾಗಿ ಗರ್ಭಿಣಿಯಾಗಿದ್ದಾಗಿನಿಂದಲೂ ನಾನು ಪೋಷಕಳಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆಯಿತ್ತು. ಸುರಗಿಗೆ ಚನ್ನಪಟ್ಟಣದ ಆಟಿಕೆಗಳು ಮತ್ತು ನಾನೇ ಬಟ್ಟೆಯಲ್ಲಿ ತಯಾರಿಸಿದ ಗೊಂಬೆಗಳನ್ನು ಆಡಲು ಕೊಡುತ್ತಿದ್ದೆ. ಎಂಟು ತಿಂಗಳು ಮಗುವಾಗಿದ್ದಾಗಿನಿಂದ ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡೇ ಹೊಲಿಗೆ, ಕಸೂತಿ ಕೆಲಸವನ್ನೂ ಮಾಡುತ್ತಿದ್ದೆ. ‘ನಾದ’ ಹೊಮ್ಮಿಸುವ ಚನ್ನಪಟ್ಟಣದ ಆಟಿಕೆಗಳು ಅವಳಲ್ಲಿ ಸಂಗೀತ ಹಾಗೂ ವಾದ್ಯದ ಬಗೆಗೆ ಆಸಕ್ತಿ ಮೂಡಿಸಿದವು. ಅವಳೀಗ ಕ್ರೋಶೆಯ ಮೊದಲ ಹಂತವನ್ನು ಕಲಿಯುತ್ತಿದ್ದಾಳೆ. ಎಂಬ್ರಾಯಡರಿ ಕೂಡ ಮಾಡುತ್ತಾಳೆ’ ಎಂದು ವನಿತಾ ನೆನಪಿಸಿಕೊಳ್ಳುತ್ತಾರೆ.

‘ನಾನು ವಿವಿಧ ಕಲಾಪ್ರಕಾರಗಳನ್ನು ಕಲಿಸುವ ಶಿಕ್ಷಕಿಯಾಗಿ ರುವುದರಿಂದ ಇಂಥವನ್ನೆಲ್ಲ ಮಗುವಿಗೆ ಹೇಳಿಕೊಡಲು ತಕ್ಕ ಮಟ್ಟಿಗೆ ಸಹಾಯವಾಯಿತು. ನನ್ನ ವಿದ್ಯಾರ್ಥಿಗಳನ್ನು ಕಂಡು ಅವಳೂ ಕಲಿತಳು. ಅಷ್ಟೇ ಅಲ್ಲ, ಅವಳು ಸ್ವಭಾವತಃ ಸ್ವ ಅಭ್ಯಾಸಿ. ಹೀಗಾಗಿ ಯೂಟ್ಯೂಬ್‌ ನೋಡಿಕೊಂಡೇ ಸಂಗೀತ ಮತ್ತು ನೃತ್ಯವನ್ನೂ ಕಲಿಯುತ್ತಿದ್ದಾಳೆ. ಟಿ.ವಿ. ಇಟ್ಟುಕೊಂಡಿಲ್ಲ. ವಾರಕ್ಕೆ ಎರಡು ದಿನ ಮಾತ್ರ ಎರಡು ಗಂಟೆಗಳ ಕಾಲ ಮೊಬೈಲ್ ನೋಡುವ ಹಾಗೆ ಹೇಳಿಕೊಟ್ಟಿದ್ದೇನೆ. ಅವಳೇ, ಇಡೀ ವಾರ ಏನು ನೋಡಬೇಕು. ತಿಳಿದುಕೊಳ್ಳಲು ಹೊಸತು ಏನಿದೆ ಎನ್ನುವುದರ ಪಟ್ಟಿ ಮಾಡಿಕೊಳ್ಳುತ್ತಾಳೆ. ಇದರಿಂದ ಸುರಗಿಯಲ್ಲಿ ತೀವ್ರವಾಗಿರುವ ಶಕ್ತಿಯನ್ನು ಒಂದು ಕಡೆಗೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿದೆ’ ಎಂದು ಖುಷಿಯಿಂದ ಹೇಳುತ್ತಾರೆ ವನಿತಾ.

ಮಕ್ಕಳಿಗೆಂದೇ ಸ್ಪೇಸ್ ಇರಲಿ
ನಿರ್ದಿಷ್ಟ ಶಿಬಿರಕ್ಕೆ ಹೋದಾಗ ಮಕ್ಕಳು ಒಂದೇ ಪ್ಯಾಟರ್ನ್ ಚಟುವಟಿಕೆ ಕಲಿಯವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದರೆ, ಮಕ್ಕಳ ಎದುರು ಪ್ರಾಯೋಗಿಕ ಪ್ರಪಂಚವನ್ನೇ ತೆರೆದಿಡಬೇಕು. ‘ಅಯ್ಯೊ ಅದು ಹಾಳಾಗುತ್ತದೆ, ಇದು ದೂಳಾಗುತ್ತದೆ’ ಎಂಬ ಚಿಂತೆ ಬಿಟ್ಟು, ಅವರಿಗಾಗಿಯೇ ಸ್ಪೇಸ್‌ವೊಂದನ್ನು ಸೃಷ್ಟಿಸಬೇಕು. ಆ ಸ್ಪೇಸ್‌ನಲ್ಲಿ ಮಗುವಿಗೆ ತನ್ನದು ಎನಿಸುವ ಎಲ್ಲ ವಸ್ತುಗಳನ್ನು ಅದರ ಕೈಗೆ ತಾಗುವಂತೆ ಇಡಬೇಕು. ಪುಸ್ತಕ, ಬಣ್ಣದ ಬಣ್ಣದ ಪೆನ್ಸಿಲು, ಪೆನ್ನು, ಒಣಗಿದರೂ ಬಿಸಾಡದ ಹೂವುಗಳು, ಕ್ಲೇ ಇತ್ಯಾದಿ...

ಮನೆಯಲ್ಲಿ ಮಗುವಿಗೆಂದೇ ಮಾಡಿದ ಸ್ಪೇಸ್‌ನಲ್ಲಿ ಅಗತ್ಯವಾಗಿ ಮಕ್ಕಳು ಓದುವಂಥ ಪುಸ್ತಕಗಳಿರಲಿ. ಕ್ರಮೇಣ ಅದು ಆ ಮಗುವಿನ ಗ್ರಂಥಾಲಯದಂತೆ ಭಾಸವಾಗಲಿ. ಅಕ್ಷರವೊಂದು ಸಂಗಾತಿಯಾಗಿ ಬಿಟ್ಟರೆ ಮಗು ತನ್ನ ಪ್ರಪಂಚವನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಹಾಗಾಗಿ ಪೋಷಕರು ನಿತ್ಯ ಮಕ್ಕಳ ಮುಂದೆ ಕಥೆ ಓದುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಇದರಿಂದ ಮಗುವಿನಲ್ಲಿ ಕೇಳಿಸಿಕೊಳ್ಳುವ, ಕಲ್ಪಿಸಿಕೊಳ್ಳುವ ಕೌಶಲ ಹೆಚ್ಚುತ್ತದೆ.

ಸ್ಕ್ರೀನ್‌ ಟೈಮ್‌ಗೆ ಮಿತಿಯಿರಲಿ
ಇದಂತೂ ಡಿಜಿಟಲ್‌ ಯುಗ. ಮಕ್ಕಳನ್ನು ಮೊಬೈಲ್‌, ಟ್ಯಾಬ್‌ ಸೇರಿ ಎಲೆಕ್ಟ್ರಾನಿಕ್ಸ್‌ ಗ್ಯಾಜೆಟ್‌ಗಳು ಮೋಡಿ ಮಾಡಿವೆ. ಮಕ್ಕಳ ಬಾಲ್ಯದ ತುಂಬಾ ರೀಲ್ಸು, ಸ್ನ್ಯಾಪ್‌ಚಾಟ್‌, ಲೈಕ್ಸು, ವ್ಲಾಗ್ಸೂಗಳು ಜಾಗ ಪಡೆದಿವೆ. ಇದು ಪೋಷಕರನ್ನು ಆತಂಕಕ್ಕೆ ದೂಡಿರುವುದಂತೂ ನಿಜ. ಅಂಬೆಗಾಲು ಇಡುತ್ತಿದ್ದ ಮಗುವಿಗೆ ತುತ್ತು ತಿನಿಸಲು ಆಪ್ತನಂತೆ ಒದಗಿ ಬರುತ್ತಿದ್ದ ಕಾರ್ಟೂನ್‌ಗಳು ಕ್ರಮೇಣ ಗೀಳಾಗುತ್ತಿದೆಯಲ್ಲ ಎಂಬ ಅಳಲು ಹಲವು ತಾಯಂದಿರದ್ದು. ಮಕ್ಕಳನ್ನು ಇಂಥ ಗ್ಯಾಜೆಟ್‌ ಗೀಳಿನಿಂದ ತಪ್ಪಿಸಲು ಯಾವುದಾದರೂ ಶಿಬಿರಕ್ಕೆ ಹಾಕಿಬಿಡೋಣ್ವಾ? ಎಂದು ಯೋಚಿಸುವ ಪೋಷಕರೇ ಹೆಚ್ಚು.

ಕೊರೊನಾ ನಂತರ ಪಠ್ಯಕ್ಕೂ ಮೊಬೈಲ್‌ಗೂ ಗಾಢವಾದ ಸಂಬಂಧವೇ ಇರುವುದರಿಂದ ಅಷ್ಟು ಸುಲಭಕ್ಕೆ ಅದರಿಂದ ದೂರವಿಡಲು ಆಗದು. ಇದರ ನಡುವೆ ಡಾಟಾ ಕ್ರಾಂತಿಯಿಂದಾಗಿ ಅಂಗೈಯಲ್ಲಿರುವ ಜಗತ್ತನ್ನು ಎಷ್ಟು ತೋರಿಸ ಬೇಕು ಎಂಬ ಜವಾಬ್ದಾರಿ ಕೂಡ ಪೋಷಕರ ಮೇಲಿದೆ. ಮೊಬೈಲ್‌ನಲ್ಲಿ ಏನನ್ನು, ಎಷ್ಟು ಸಮಯ ನೋಡಬೇಕು. ಎಂಥದ್ದನ್ನೂ ನೋಡಿದರೆ ಮಗುವಿನ ಬೆಳವಣಿಗೆಗೆ ಪೂರಕವಾಗಬಲ್ಲದು ಎಂಬುದರ ಬಗ್ಗೆಯೂ ಪೋಷಕರಿಗೆ ಅರಿವಿರಬೇಕು. ಮಗುವಿನ ಜತೆಗೆ ಪೋಷಕರು ಸ್ಕ್ರೀನ್‌ ಟೈಮ್‌ಗೆ ಮಿತಿ ಹಾಕಿಕೊಳ್ಳಬೇಕು.

ಇದಕ್ಕೆ ವನ್ಯಜೀವಿ ಛಾಯಾಗ್ರಾಹಕಿ ಪ್ರಿಯಾ ಕುಂಜಿರ್ಕಾನ ಹೇಳುವುದಿಷ್ಟು; ‘ಸಾಧ್ಯವಾದಷ್ಟು ಮಗುವಿನ ಮುಂದೆ ನಾನಾ ಅನುಭವಗಳ ಜಗತ್ತನ್ನು ತೆರೆದಿಡಬೇಕು. ಆಸಕ್ತಿ–ಅಭಿರುಚಿ ಗುರುತಿಸುವ ಮುಂಚೆ ಹೀಗೆಲ್ಲ ನಾನಾ ಜಗತ್ತಿನ ಪರಿಚಯವನ್ನು ಕಡ್ಡಾಯವಾಗಿ ಮಾಡಿಸಬೇಕು. ಮಕ್ಕಳ ಮೂಡ್‌ ಬದಲಾಗುತ್ತಲೇ ಇರುತ್ತದೆ. ಇವತ್ತು ಬಣ್ಣ ಇಷ್ಟ ಅಂದರೆ, ನಾಳೆ ಮಣ್ಣು ಇಷ್ಟ ಎನ್ನುತ್ತಾರೆ. ಒಂದು ಹಂತದವರೆಗೆ ಮಗುವಿಗೆ ಇದೇ ಆಸಕ್ತಿ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲವೇನೋ. ಆದರೆ, ಮಗುವನ್ನು ಹಲವು ಸೃಜನಾತ್ಮಕ ಚಟವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುವ ಕೆಲಸ ಮಾಡಬೇಕು. ಇದರಿಂದ ಮುಂದಿನ ದಾರಿ ಸ್ಪಷ್ಟವಾಗುವುದು ನಿಶ್ಚಿತ’.

ತಮ್ಮ ಮಗಳು ಬೆಳೆಯುತ್ತಿರುವ ರೀತಿಯನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ. ‘ಮಗಳು ಅನಾಯಳಿಗೆ ಈಗ 9 ವರ್ಷ. ಅವಳಿಗೆ ಬಾಹ್ಯಾಕಾಶ ಹಾಗೂ ಫೋಟೋಗ್ರಫಿಯಲ್ಲಿ ಆಸಕ್ತಿ ಬಂದಿದೆ. ಅವಳು 3 ತಿಂಗಳ ಮಗುವಾಗಿದ್ದಲೇ ಚಾರಣಕ್ಕೆ ಕರೆದುಕೊಂಡು ಹೋಗಿದ್ದಿದೆ. ಮಗುವಿಗೆ ಆದಷ್ಟು ಪರಿಸರದ ಜತೆ ಒಡನಾಡವಿರಬೇಕು ಎಂಬುದು ನನ್ನ ಉದ್ದೇಶವಾಗಿತ್ತು’ ಎಂದು ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಅವರು.

‘ಮೊದ ಮೊದಲು ಇರುವೆಗೂ ಹುಳ ಬಂತು ಎಂದು ಹೆದರುತ್ತಿದ್ದ ಮಗಳೀಗ ನಿರ್ಭಿಡೆಯಾಗಿ ಪರಿಸರದ ಜತೆ ಬೆರೆಯುತ್ತಿರುವುದಕ್ಕೆ ಖುಷಿ ಇದೆ. ಬೆಳಕಿನ ಮಾಲಿನ್ಯವೇ ಇಲ್ಲದ ಕತ್ತಲಿನಲ್ಲಿ ನಕ್ಷತ್ರಪುಂಜ ನೋಡಲು ಊರಿಗೆ ಹೋಗೋಣವೆಂದು ತವಕಿಸುತ್ತಾಳೆ. ನದಿ, ಹಕ್ಕಿ, ಪ್ರಾಣಿ, ಕಾಡು ಹೀಗೆ ಎಲ್ಲದರ ಬಗ್ಗೆ ಆಸಕ್ತಿ ಬಂದಿದೆ. ಗಿಡದಿಂದ ನೆಲಕ್ಕೆ ಬಿದ್ದ ಹೂವು ಮಾತ್ರ ಬಳಕೆಗೆ, ಹೂವನ್ನು ಕೊಯ್ಯುವ ಹಕ್ಕಿಲ್ಲ ಎಂದು ವಾದಿಸುವಷ್ಟು ಕಾಳಜಿ ಬಂದಿದೆ’ ಎನ್ನುತ್ತಾರೆ ಅವರು.

‘ಮಗಳಿಗೆ ಸಂಗೀತ, ನೃತ್ಯ ಪ್ರಕಾರದಲ್ಲಿ ತೊಡಗಿಕೊಳ್ಳು ವಂತೆ ಪ್ರೇರೇಪಿಸಿದ್ದೆ. ಆದರೆ, ಅವಳು ಸಂಗೀತದ ಬಗ್ಗೆ ಆಸಕ್ತಿ ತೋರಲಿಲ್ಲ. ನಾನೂ ಬಲವಂತ ಮಾಡಲಿಲ್ಲ. ಈಗ ಪೃಕೃತಿಯ ಒಡನಾಟದಿಂದ ತುಂಬಾ ತಾಳ್ಮೆ ಬೇಡುವ ಹೈಡ್‌ ಫೋಟೋಗ್ರಫಿ ಮಾಡುತ್ತಿದ್ದಾಳೆ. ಹೀಗೆ, ಮಕ್ಕಳಿಗೆ ಎಲ್ಲವನ್ನು ಪರಿಚಯಿಸುವ ಕೆಲಸ ಮಾಡಬೇಕು. ಆಸಕ್ತಿ ಇಲ್ಲದ್ದರ ಬಗ್ಗೆ ಒತ್ತಾಯ ಮಾಡಬಾರದು’ ಎಂದು ತಮ್ಮ ಅನುಭವ ಹಂಚಿಕೊಂಡರು.

ದುಡಿಯುವ ಅಪ್ಪ ಅಮ್ಮಂದಿರಿಗೆ ಸಮಯದ ಅಭಾವ. ಮಕ್ಕಳಿಗೆ ಸಮಯ ನೀಡಲು ಆಗದೇ ಅವರನ್ನು ಶಿಬಿರಗಳಿಗೆ ಕಳುಹಿಸುವುದಕ್ಕೂ ಮೊದಲು ಇರುವ ಸಮಯದಲ್ಲಿ ಸೃಜನಶೀಲತೆಯಿಂದ ತೊಡಗಿಕೊಳ್ಳುವಂತೆ ಹುರಿದುಂಬಿಸಿ. ಮನೆಯಲ್ಲಿಯೇ ಮಕ್ಕಳಿಗೆ ‘ಕ್ರಿಯೇಟಿವ್ ಕಾರ್ನರ್‌‘ ಒಂದನ್ನು ರೂಪಿಸಿ.

‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ನಿಮ್ಮ ಮೂಲಕ ಬರುವ ದೈವಸೃಷ್ಟಿ’ ಎನ್ನುವ ಕವಿವಾಣಿಯಂತೆ ಅತಿ ನಿರೀಕ್ಷೆಯ ಭಾರವನ್ನು ಮಕ್ಕಳ ಮೇಲೆ ಹೇರದೇ, ಆಯಾ ವಯಸ್ಸಿಗೆ ಬೇಕಿರುವಷ್ಟು ಸ್ವಾತಂತ್ರ್ಯವನ್ನು ಮಕ್ಕಳ ಪಾಲಿಗಿಟ್ಟು, ತೀವ್ರವಾಗಿ ಬದುಕುವುದನ್ನು ಕಲಿಸೋಣ.

ಪೋಷಕ– ಮಗುವಿನ ಬಂಧ ಗಟ್ಟಿಯಿರಲಿ
ಮುಖ್ಯವಾಗಿ ಮಕ್ಕಳಲ್ಲಿರುವ ಅಭಿರುಚಿಯನ್ನು ಪ್ರೋತ್ಸಾಹಿಸುವ ಮುಂಚೆ ಪೋಷಕರು ಮತ್ತು ಮಗುವಿನ ನಡುವೆ ಭಾವಾನಾತ್ಮಕ ಸಂಬಂಧ ಚೆನ್ನಾಗಿರಬೇಕು. ಪರಸ್ಪರ ನಂಬುಗೆ, ಪ್ರೀತಿ, ವಿಶ್ವಾಸ ಗಟ್ಟಿಯಾಗಿರಬೇಕು. ಇಲ್ಲವಾದರೆ ಏನೇ ಹೇಳಿದರೂ ಮಗುವಿಗೆ ಅದು ಹೇರಿಕೆ ಎನಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೇಳಿದ್ದನ್ನು ಮಾಡದೇ ಅದಕ್ಕೆ ವಿರುದ್ಧವಾದದ್ದನ್ನು ಮಾಡುವ ಸಾಧ್ಯತೆಯೂ ಇರುತ್ತದೆ.

ಪ್ರತಿ ಮಗುವು ಅನುರೂಪ (ಯುನಿಕ್‌). ಇದು ಪೋಷಕರ ತಲೆಯಲ್ಲಿ ಸದಾ ಇರಬೇಕು. ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ ಮಗುವಿನ ಆಸಕ್ತಿ ಬದಲಾಗಬಹುದು. ಹಾಗಾಗಿ ಒಂದು ಹವ್ಯಾಸ ದಿನಚರಿಯ ಭಾಗವಾಗುವಂತೆ ನೋಡಿಕೊಳ್ಳಿ. ಇದರಿಂದ ಶಿಸ್ತು ಬರುತ್ತದೆ. ಹವ್ಯಾಸದ ಮೇಲೆ ನಿರಂತರ ಆಸಕ್ತಿಯೂ ಉಳಿಯುತ್ತದೆ. ಆಸಕ್ತಿ ಬದಲಾಗುತ್ತಿದ್ದರೆ, ಹವ್ಯಾಸ ಅರ್ಧಕ್ಕೆ ನಿಂತರೆ ಬೇಸರ ಮಾಡಿಕೊಳ್ಳದೇ, ಅದಕ್ಕೆ ಕಾರಣ ಹುಡುಕಿ.

ಯಾವುದೇ ಹವ್ಯಾಸವೇ ಇರಲಿ, ಅದರಲ್ಲಿ ತೊಡಗಿಕೊಂಡಾಗ ಶ್ಲಾಘನೆ ಮಾಡಿ. ತಪ್ಪಾದಾಗ ಹಂಗಿಸದೇ ತಪ್ಪುಗಳಿಂದಲೇ ದೊಡ್ಡವರಾಗೋದು ಎನ್ನುವುದನ್ನು ಮನದಟ್ಟು ಮಾಡಿ. ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ನಾಯಕತ್ವ, ಟೀಂ ವರ್ಕ್‌ ಕಲಿಸುತ್ತದೆ. ಆದಷ್ಟು ಪರಿಸರದ ಜತೆ ಬೆರೆಯುವಂಥ ಶಿಬಿರಗಳಿಗೆ ಕಳಿಸಿ.
ಡಾ. ಅರುಣಾ ಯಡಿಯಾಳ್, ಮನೋವೈದ್ಯೆ , ಫಾದರ್ ಮುಲ್ಲರ್‌ ಮೆಡಿಕಲ್‌ ಕಾಲೇಜು, ಮಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT