ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಲೋಕಸಭಾ ಕ್ಷೇತ್ರ: ಸಿಎಂ, ಎಚ್‌ಸಿಎಂಗೆ ಪ್ರತಿಷ್ಠೆಯ ಕಣ

ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಗೆಲ್ಲಲು ವಿವಿಧ ಕಾರ್ಯತಂತ್ರ
Published 29 ಮಾರ್ಚ್ 2024, 5:49 IST
Last Updated 29 ಮಾರ್ಚ್ 2024, 5:49 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕಣವಾಗಿದೆ.

ತಮ್ಮ ಮಗ ಸುನೀಲ್‌ ಬೋಸ್‌ ಅಭ್ಯರ್ಥಿಯಾಗಿರುವುದರಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ (ಎಚ್‌ಸಿಎಂ) ಅವರು ಕೂಡ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅಭ್ಯರ್ಥಿಗಿಂತಲೂ ಹೆಚ್ಚು ಅವರೇ ಪ್ರಚಾರದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ ಪ‍ಕ್ಷದ ಪದಾಧಿಕಾರಿಗಳ ಸಭೆಯಲ್ಲಿ, ‘ಮೈಸೂರು–ಕೊಡಗು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಪಕ್ಷವು ಯಾವುದೇ ಕಾರಣಕ್ಕೂ ಸೋಲಬಾರದು. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂಬ ಸ್ಪಷ್ಟ ಸೂಚನೆಯನ್ನು ಸಿದ್ದರಾಮಯ್ಯ ಅವರು ಶಾಸಕರು, ಮುಖಂಡರಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. 

‘ಚಾಮರಾಜನಗರ ಮೀಸಲು ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಕ್ಷೇತ್ರ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್‌ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಧ್ರುವನಾರಾಯಣ ಅವರು ಕಡಿಮೆ ಮತಗಳ ಅಂತರದಿಂದ ಸೋಲಬೇಕಾಯಿತು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಶಾಸಕರು ಇರುವಾಗ ಯಾವುದೇ ಕಾರಣಕ್ಕೂ ಪಕ್ಷ ಸೋಲಬಾರದು ಎಂಬ ಸ್ಪಷ್ಟ ಸಂದೇಶವನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ’ ಎಂದು ಹೇಳುತ್ತಾರೆ ಕಾಂಗ್ರೆಸ್‌ ಮುಖಂಡರು. 

ಗೆಲುವಿಗೆ ಕಾರ್ಯತಂತ್ರ: ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಳಂಬವಾಗಿದ್ದರೂ, ಅಭ್ಯರ್ಥಿ ಹೆಸರು ಅಧಿಕೃತ ಘೋಷಣೆಗೂ ಮುನ್ನ ಪಕ್ಷ ಸಿದ್ಧತೆ ಆರಂಭಿಸಿದೆ. ಸಿದ್ದರಾಮಯ್ಯ ಹಾಗೂ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಕಾರ್ಯತಂತ್ರದಲ್ಲಿ ತೊಡಗಿದ್ದಾರೆ. 

ಪಕ್ಷದಲ್ಲಿದ್ದ ಟಿಕೆಟ್‌ ಆಕಾಂಕ್ಷಿಗಳನ್ನು ಸಮಾಧಾನಿಸುವ ಪ್ರಯತ್ನ ಒಂದೆಡೆಯಾದರೆ, ಶಾಸಕರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮತ್ತೊಂದೆಡೆ ಮಾಡುತ್ತಿದ್ದಾರೆ.

ಇದರೊಂದಿಗೆ ಬಿಜೆಪಿಯ ಮುಖಂಡರನ್ನು ಸೆಳೆಯುವ ಪ್ರಯತ್ನಗಳನ್ನೂ ಕಾಂಗ್ರೆಸ್‌ ಮಾಡುತ್ತಿದೆ. 

ಎಚ್‌.ಡಿ.ಕೋಟೆಯ ಮುಖಂಡ, ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಂ.ಶಿವಣ್ಣ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ವರುಣಾ ಕ್ಷೇತ್ರದ ಬಿಜೆಪಿ ಮುಖಂಡ ಸದಾನಂದ ಅವರನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನ ನಡೆಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಧ್ಯಪ್ರವೇಶದಿಂದಾಗಿ ಕೊನೆ ಕ್ಷಣದಲ್ಲಿ ವಿಫಲವಾಗಿತ್ತು. 

ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಅವರು ಬುಧವಾರ ರಾತ್ರಿ ಮೈಸೂರಿನಲ್ಲಿ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರ, ಸಚಿವ ಮಹದೇವಪ್ಪ ಅವರ ತಿ.ನರಸೀಪುರ ಕ್ಷೇತ್ರವೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಧಿಕಾರದಲ್ಲಿದ್ದುಕೊಂಡು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲೇ ಗೆಲ್ಲದಿದ್ದರೆ, ರಾಜಕೀಯವಾಗಿ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೂ ಇಬ್ಬರೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. 

ಸಂಭಾವ್ಯ ಅಭ್ಯರ್ಥಿ ಸುನೀಲ್‌ ಬೋಸ್‌ ಏಪ್ರಿಲ್‌ 3ರಂದು ನಾಮಪತ್ರ ಸಲ್ಲಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬರುವುದು ಇನ್ನೂ ಖಚಿತವಾಗಿಲ್ಲ. 

ಕುತೂಹಲ ಕೆರಳಿಸಿದ ಶ್ರೀನಿವಾಸ ಪ್ರಸಾದ್‌ ಭೇಟಿ

ಈ ಮಧ್ಯೆ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಅವರು ಬುಧವಾರ ರಾತ್ರಿ ಮೈಸೂರಿನಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಶ್ರೀನಿವಾಸ ಪ್ರಸಾದ್‌ ಅವರು ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ. ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರ ಕಿರಿಯ ಅಳಿಯ ಡಾ.ಎನ್‌.ಎಸ್‌.ಮೋಹನ್‌ ಅವರಿಗೆ ಟಿಕೆಟ್‌ ಬಿಜೆಪಿ ಟಿಕೆಟ್‌ ಕೊಡಿಸಲು ಯತ್ನಿಸಿದ್ದರು. ವರಿಷ್ಠರು ಬಾಲರಾಜ್‌ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರು.  ಇದರ ಬೆನ್ನಲ್ಲೇ ಮೋಹನ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಕೆಲವು ದಿನಗಳ ನಂತರ ಅವರೇ ಪತ್ರಿಕಾ ಹೇಳಿಕೆಯ ಮೂಲಕ ಬಿಜೆಪಿಯಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದರು. 

ಶ್ರೀನಿವಾಸ ಪ್ರಸಾದ್ ಮತ್ತು ಡಾ.ಎಚ್‌.ಸಿ.ಮಹದೇವಪ್ಪ ಅವರ ನಡುವೆ ರಾಜಕೀಯವಾಗಿ ಉತ್ತಮ ಬಾಂಧವ್ಯ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಇಬ್ಬರೂ ಜೊತೆಯಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಹಾಗಿದ್ದರೂ ಸುನೀಲ್‌ ಬೋಸ್‌ ಸಂಸದರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. 

‘ಸುನೀಲ್‌ ಬೋಸ್‌ ಅವರು ತಾವು ಸ್ಪರ್ಧಿಸುವ ವಿಚಾರ ತಿಳಿಸಿ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಸದರು ನೋಡೋಣ ಎಂದು ಹೇಳಿ ಶುಭಾಶಯ ಕೋರಿದರು’ ಎಂದು ಮೂಲಗಳು ತಿಳಿಸಿವೆ.  ಹನೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮಹದೇವಪ್ಪ ಇದೊಂದು ಸೌಜನ್ಯದ ಭೇಟಿಯಷ್ಟೆ ಎಂದು ಹೇಳಿದ್ದಾರೆ.  ಸಂಸದರ ಅಳಿಯ ಡಾ.ಮೋಹನ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ ‘ಈ ವಿಚಾರ ನನಗೆ ಗೊತ್ತಿಲ್ಲ. ಕಾಂಗ್ರೆಸ್‌ ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಪಕ್ಷದಲ್ಲಿ ಸ್ವಾಗತ ಇದೆ’ ಎಂದು ಉತ್ತರಿಸಿದ್ದಾರೆ.

ಮುನ್ನಡೆ ಪಡೆಯುವ ಸವಾಲು

ಚಾಮರಾಜನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು ಏಳರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. 2019ರ ಚುನಾವಣೆಯಲ್ಲಿ ಗುಂಡ್ಲುಪೇಟೆ ಚಾಮರಾಜನಗರ ನಂಜನಗೂಡು ಕ್ಷೇತ್ರಗಳಲ್ಲಿ ಶ್ರೀನಿವಾಸ ಪ್ರಸಾದ್‌ ಅವರು ಅತಿ ಹೆಚ್ಚು ಮತಗಳಿಂದ ಮುನ್ನಡೆಗಳಿಸಿದ್ದರು. ಇದುವೇ ಅವರ ಗೆಲುವಿಗೆ ಕಾರಣವಾಗಿತ್ತು. ಧ್ರುವನಾರಾಯಣ ಅವರು ಹನೂರು ವರುಣ ತಿ.ನರಸೀಪುರ ಎಚ್‌.ಡಿ.ಕೋಟೆ ಮತ್ತು ಕೊಳ್ಳೇಗಾಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಒಟ್ಟಾರೆ ಮತಗಳ ಮುನ್ನಡೆಯಲ್ಲಿ ಶ್ರೀನಿವಾಸ ಪ್ರಸಾದ್‌ ಇದ್ದರು.  ಈ ಬಾರಿ ಇದು ಪುನರಾವರ್ತನೆಯಾಗಬಾರದು ಎಂಬ ಕಾರಣಕ್ಕೆ ಸ್ವತಃ ಮುಖ್ಯಮಂತ್ರಿಯವರು ಕ್ಷೇತ್ರದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು. 

ಶ್ರೀನಿವಾಸ ಪ್ರಸಾದ್‌ ಈ ಭಾಗದ ಹಿರಿಯ ಮುಖಂಡರು. ಜನರೊಂದಿಗೆ ಹೆಚ್ಚು ಸಂಪರ್ಕ ಇದೆ. ಸೌಜನ್ಯದಿಂದ ಸುನೀಲ್‌ ಬೋಸ್‌ ಭೇಟಿ ನೀಡಿದ್ದಾರೆ.
–ಡಾ.ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ (ಹನೂರಿನಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT