ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಲೀಡ್ ಬಂದ್ರೆ ನನ್ನನ್ಯಾರೂ ಮುಟ್ಟಕ್ಕಾಗಲ್ಲ: ಸಿದ್ದರಾಮಯ್ಯ

Published 1 ಏಪ್ರಿಲ್ 2024, 15:45 IST
Last Updated 1 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ಮೈಸೂರು: ‘ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್ ಅವರಿಗೆ ನಾನು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಿಂದ 60ಸಾವಿರ ಮತಗಳ ಲೀಡ್ ನೀಡಿದರೆ ಸಂತೋಷವಾಗುತ್ತದೆ ಮತ್ತು ನನ್ನನ್ನು ಯಾರೂ ಮುಟ್ಟಲಾಗುವುದಿಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವರುಣ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಬಳಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನನಗೆ 48ಸಾವಿರ ಲೀಡ್ ಕೊಟ್ಟು ಗೆಲ್ಲಿಸಿದ್ದೀರಿ. ಈಗ ಅದಕ್ಕಿಂತ ಜಾಸ್ತಿ ಕೊಡಬೇಕಲ್ಲವೇ? ನಿಮಗೆ ಮಹದೇವಪ್ಪ ಪರಿಚಯ, ನಾನು ನಿಮ್ಮ ಶಾಸಕ ಹಾಗೂ ಯತೀಂದ್ರ ಮಾಜಿ ಶಾಸಕ... ನಾವೆಲ್ಲರೂ ಇರುವಾಗ ನಮಗೆ ಲೀಡ್ ಸಿಗಬೇಕಲ್ಲವೇ?’ ಎಂದು ಕೇಳಿದರು.

‘ನಾನು ಇರಬೇಕೋ, ಬೇಡವೋ?’ ಎಂಬ ಅವರ ಪ್ರಶ್ನೆಗೆ, ನೆರೆದಿದ್ದವರು ‘ಇರಬೇಕು’ ಎಂದು ಕೂಗಿ ಹೇಳಿದರು.

ತವರಲ್ಲಿ ಮುಖ್ಯಮಂತ್ರಿ ಚುನಾವಣಾ ರಣಕಹಳೆ

ಮೈಸೂರು: ಮೈಸೂರು–ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳಾದ ಎಂ. ಲಕ್ಷ್ಮಣ ಹಾಗೂ ಸುನೀಲ್‌ ಬೋಸ್ ಅವರನ್ನು ಗೆಲ್ಲಿಸಿಕೊಳ್ಳಬೇಕೆಂಬ ಸಂಕಲ್ಪ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿವಿಧೆಡೆ ಪ್ರಚಾರ ನಡೆಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು. ಇದರೊಂದಿಗೆ ಚುನಾವಣಾ ಕಣ ರಂಗೇರುವಂತೆ ಮಾಡಿದರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಬಳಿ ಹಾಗೂ ತಿ.ನರಸೀ‍ಪುರದಲ್ಲಿ ಸುನೀಲ್‌ ಪರವಾಗಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮತ ಯಾಚಿಸಿದರು.

ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು ತಮ್ಮ ಸರ್ಕಾರದ ಸಾಧನೆಗಳು ಮತ್ತು ಗ್ಯಾರಂಟಿ ಕಾರ್ಯಕ್ರಮಗಳಿಂದ ಆಗಿರುವ ಪ್ರಯೋಜನಗಳ ಬಗ್ಗೆ ತಿಳಿಸಿದರು. ಈ ಅಂಶಗಳನ್ನೇ ಮತದಾರರ ಮನೆ ಮನೆಗಳಿಗೆ ತಲುಪಿಸುವಂತೆ ಕಾರ್ಯಕರ್ತರು, ಮುಖಂಡರು ಹಾಗೂ ಜನಪ್ರತಿನಿಧಿಗಳಿಗೆ ಸೂಚಿಸಿದರು. ಕೆಲವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಸಂಜೆ ಮೈಸೂರಿನಲ್ಲಿ ಕ್ರೈಸ್ತ ಧರ್ಮಗುರುವನ್ನು ಭೇಟಿಯಾಗಿ ಚರ್ಚಿಸಿ ಬೆಂಬಲ ಕೋರಿದರು. ಈ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಪ್ರಯತ್ನವನ್ನು ನಡೆಸಿದರು.

ತಿ. ನರಸೀಪುರ ವರದಿ: ‘ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ನರೇಂದ್ರ ಮೋದಿ ಅವರಿಗೆ ಮತ ಹಾಕಬೇಕೇ ಅಥವಾ ನುಡಿದಂತೆ ನಡೆದು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕೇ ಎಂಬುದನ್ನು ಮತದಾರರು ಯೋಚಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಕೋರಿದರು.

ಪಟ್ಟಣದ ತಲಕಾಡು ಮುಖ್ಯರಸ್ತೆಯ ಮೈದಾನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ತೆರಿಗೆ ಪಾಲನ್ನು ಕೊಡದೇ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದೆ. ನಮ್ಮ ಜನರ ತೆರಿಗೆ ನಮಗೇ ನೀಡುತ್ತಿಲ್ಲ. ಪತ್ರ ಬರೆದು, ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬರ ಪರಿಹಾರವಾಗಿ ಈವರೆಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಳೆಗೇರಿ ನಿವಾಸಿಗಳಿಗೆ ಮನೆ ಕೊಡುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಗ್ಗೆ ಹೇಳಿದ ಅವರು, ‘ಆ ಯೋಜನೆಯಲ್ಲಿ ಕೇಂದ್ರ ಕೊಡುವುದು ₹ 12ಸಾವಿರ ಮಾತ್ರ. ಒಂದು ಕೈಯಲ್ಲಿ ₹ 1.50 ಲಕ್ಷವನ್ನು ಕೊಟ್ಟು, ಮತ್ತೊಂದು ಕೈಯಲ್ಲಿ ಶೇ 18ರಷ್ಟು ಜಿಎಸ್‌ಟಿ ಲೆಕ್ಕದಲ್ಲಿ ಕೊಳೆಗೇರಿ ಫಲಾನುಭವಿಗಳಿಂದಲೂ ಪ್ರತೀ ಮನೆಗೆ ₹ 1.38 ಲಕ್ಷ ವಸೂಲಿ ಮಾಡುತ್ತದೆ’ ಎಂದು ಆರೋಪಿಸಿದರು.

‘ವಸತಿ ಸಚಿವ ಜಮೀರ್ ಈ ಬಗ್ಗೆ ತಿಳಿಸಿದಾಗ, ಫಲಾನುಭವಿಗಳಿಂದ ₹ 1 ಲಕ್ಷ ಮಾತ್ರ ಪಡೆಯಿರಿ. ಉಳಿದ ಹಣ ನಾನು ನೀಡುವುದಾಗಿ ತಿಳಿಸಿ ಕೊಡುತ್ತಿದ್ದೇವೆ. ಕೇಂದ್ರದ ಹೆಸರಿನ ಯೋಜನೆಗೆ ನಮ್ಮ ಹಣ ಕೊಡುತ್ತಿದ್ದೇವೆ. ಬಿಜೆಪಿಯವರಿಗೆ ಮತ್ತೆ ಅಧಿಕಾರ ಕೊಡಬೇಕೇ?’ ಎಂದು ಕೇಳಿದರು.

ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ ಸೇರಿದಂತೆ ಹಲವು ಮುಖಂಡರು ಮುಖ್ಯಮಂತ್ರಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ನಂಜನಗೂಡು ವರದಿ: ತಾವು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ಬಿಳಿಗೆರೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ವರುಣ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಮುಖ್ಯಮಂತ್ರಿಯಾದೆ’ ಎಂದು ಕೃತಜ್ಞತೆ ಸಲ್ಲಿಸಿದರು.

‘ನಮ್ಮ ಗ್ಯಾರಂಟಿ ಕಾರ್ಯಕ್ರಮಗಳಿಂದಾಗಿ ಹೆಣ್ಣುಮಕ್ಕಳ ಆರ್ಥಿಕ‌ ಸಾಮರ್ಥ್ಯ ಹೆಚ್ಚಿದೆ. ಪುರುಷರಿಗೆ ಹಣ ಉಳಿತಾಯ ಆಗುತ್ತಿದೆ’ ಎಂದು ತಿಳಿಸಿದರು.

‘ಮೈಸೂರು-ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ನಾನು ಇನ್ನಷ್ಟು ಗಟ್ಟಿಯಾಗಿ ನನ್ನ ಶಕ್ತಿ ಹೆಚ್ಚುತ್ತದೆ. ಬಿಜೆಪಿಯ ಸುಳ್ಳುಗಳನ್ನು ಸೋಲಿಸಬೇಕು. ನನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕರಿಸಬೇಕು’ ಎಂದು ಕೋರಿದರು.

‘ನಮ್ಮ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಜೇಬಿಗೆ ಹಣ ಹಾಕಿ, ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯ ಕಾರ್ಯಕರ್ತರು ಹಾಗೂ ಬೆಂಬಲಿಗರೂ ನಮ್ಮ ಗ್ಯಾರಂಟಿ ಯೋಜನೆಗಳ ಫಾಲಾನುಭವಿಗಳಾಗಿದ್ದಾರೆ’ ಎಂದರು.

‘ಈ ಬಾರಿ ಚುನಾವಣೆಯಲ್ಲಿ ಸುನೀಲ್ ಬೋಸ್ ಅವರಿಗೆ ವರುಣ ಕ್ಷೇತ್ರದಲ್ಲಿ 60ಸಾವಿರ ಲೀಡ್ ಬಂದಲ್ಲಿ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನಾನು ಗಟ್ಟಿಯಾಗಿ ಇರಬೇಕಾದರೆ ಅವರನ್ನು ಗೆಲ್ಲಿಸಿ’ ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ‘ಸಿದ್ದರಾಮಯ್ಯಗೆ ಕ್ಷೇತ್ರವೇ ಇಲ್ಲ, ಅವರನ್ನು ಸೋಲಿಸುತ್ತೇವೆ ಎಂದಿದ್ದವರಿಗೆ ವರುಣ ಕ್ಷೇತ್ರದ ಜನರು ತಕ್ಕ ಉತ್ತರ ನೀಡಿ ಇತಿಹಾಸ ನಿರ್ಮಾಣ ಮಾಡಿದ್ದೀರಿ. ಅದರಂತೆ ಈಗ, ಕೋಮುವಾದ ಅಳಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಬಿಜೆಪಿಯನ್ನು ಸೋಲಿಸಬೇಕು. ಸುನೀಲ್ ಬೋಸ್ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯಗೆ ಶಕ್ತಿ ತುಂಬಬೇಕು’ ಎಂದು ಮನವಿ ಮಾಡಿದರು.

ಅಭ್ಯರ್ಥಿ ಸುನೀಲ್ ಬೋಸ್ ಮಾತನಾಡಿ, ‘ಜನರ ಸೇವೆ ಮಾಡಲು ನನಗೆ ಅವಕಾಶ ಕೊಡಬೇಕು’ ಎಂದು ಕೋರಿದರು.

ಮಾಜಿ ಶಾಸಕ ಭಾರತೀಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡರು. ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ಶಾಸಕರಾದ ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಎಚ್‌.ಎಂ. ಗಣೇಶ್ ಪ್ರಸಾದ್, ಎ.ಆರ್.ಕೃಷ್ಣಮೂರ್ತಿ, ಮುಖಂಡರಾದ ಕಳಲೆ ಕೇಶವಮೂರ್ತಿ, ನಂಜುಂಡಸ್ವಾಮಿ, ಕೋಟೆ ಶಿವಣ್ಣ, ಕಾಗಲವಾಡಿ ಶಿವಣ್ಣ, ಎಸ್.ಸಿ.ಬಸವರಾಜು, ಬಿ.ಎಂ.ರಾಮು, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ‍‍‍ಪ‍್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಮಾಜಿ ಶಾಸಕರಾದ ಎಸ್.ಕೃಷ್ಣಪ್ಪ. ಸುನೀತಾ ವೀರಪ್ಪಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT