ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ: ವಾಹನ ಮೇಳದಲ್ಲಿ ತಂತ್ರಜ್ಞಾನ ವೈವಿಧ್ಯ

Last Updated 12 ಜನವರಿ 2023, 19:32 IST
ಅಕ್ಷರ ಗಾತ್ರ

ದೆಹಲಿ ಬಳಿಯ ನೊಯಿಡಾದಲ್ಲಿ ವರ್ಷಕ್ಕೊಮ್ಮೆ ನಡೆಯುವ ‘ಆಟೊ ಎಕ್ಸ್‌ಪೋ’ ದೇಶದ ಅತ್ಯಂತ ದೊಡ್ಡ ವಾಹನ ಪ್ರದರ್ಶನ ಮೇಳ. ದೇಶದ ಆಟೊಮೊಬೈಲ್‌ ಕ್ಷೇತ್ರವು ಎತ್ತಸಾಗುತ್ತಿದೆ ಎಂಬುದರ ಮುನ್ನೋಟವನ್ನು ಈ ಪ್ರದರ್ಶನವು ನೀಡುತ್ತದೆ. 2020ರ ನಂತರ ಇಂತಹ ಪ್ರದರ್ಶನ ನಡೆದಿರಲಿಲ್ಲ. ಈಗ ಎರಡು ವರ್ಷಗಳ ಅಂತರದ ನಂತರ ಆರಂಭವಾಗಿರುವ ಪ್ರದರ್ಶನವು ಹಲವು ಕಾರಣಗಳಿಗೆ ಮಹತ್ವ ಪಡೆದಿದೆ. ಈವರೆಗಿನ ಪ್ರದರ್ಶನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಚಾಲಿತ ಎಂಜಿನ್‌ ಇರುವ ವಾಹನಗಳೇ ಕೇಂದ್ರ ಬಿಂದುವಾಗಿರುತ್ತಿದ್ದವು. ಆದರೆ, 2023ರ ಪ್ರದರ್ಶನದ ತುಂಬಾ ಕಡಿಮೆ ಮಾಲಿನ್ಯದ ಮತ್ತು ವಿದ್ಯುತ್ ಚಾಲಿತ ವಾಹನಗಳೇ ಇವೆ. ಮುಂದಿನ ವರ್ಷಗಳಲ್ಲಿ ಸಾಂಪ್ರದಾಯಿಕ ತಂತ್ರಜ್ಞಾನವಿಲ್ಲದ ವಾಹನಗಳು ಮತ್ತು ವಿದ್ಯುತ್ ಚಾಲಿತ ವಾಹನಗಳೇ ದೇಶದ ಆಟೊಮೊಬೈಲ್‌ ಕ್ಷೇತ್ರವನ್ನು ಆವರಿಸಲಿವೆ ಎಂಬುದನ್ನು ಈ ಪ್ರದರ್ಶನವು ಸೂಚಿಸುತ್ತಿದೆ

***

ಈ ಬಾರಿಯ ದೆಹಲಿ ಆಟೊ ಎಕ್ಸ್‌ಪೋದಲ್ಲಿ ವಿದ್ಯುತ್ ಚಾಲಿತವಾಹನಗಳೇ ಎಲ್ಲರ ಗಮನ ಸೆಳೆಯುತ್ತಿವೆ. ಜತೆಗೆ ಜಲಜನಕವನ್ನು ಇಂಧನವಾಗಿ ಬಳಸಿಕೊಂಡು ಚಲಿಸುವ ವಾಹನಗಳು, ಹೈಬ್ರಿಡ್‌ವಾಹನಗಳು, ಫ್ಲೆಕ್ಸಿ ಇಂಧನ ವಾಹನಗಳನ್ನೂ ತಯಾರಕ ಕಂಪನಿಗಳು ಪ್ರದರ್ಶನಕ್ಕೆ ಇರಿಸಿವೆ. ಡೀಸೆಲ್‌ ಮತ್ತು ಪೆಟ್ರೋಲ್‌ ಎಂಜಿನ್‌ ಚಾಲಿತ ವಾಹನಗಳು ಪ್ರದರ್ಶನದಲ್ಲಿ ಇದ್ದರೂ ಹೊಸ ಎಂಜಿನ್‌ ತಂತ್ರಜ್ಞಾನದ ವಾಹನಗಳನ್ನು ನೋಡುವುದಕ್ಕೇ ಹೆಚ್ಚಿನ ಜನರು ಮುಗಿಬಿದ್ದಿದ್ದಾರೆ.

ದೇಶದಲ್ಲಿ ವಾಹನ ಮತ್ತು ಕೈಗಾರಿಕೆಗಳು ಹೊರಸೂಸುವ ಇಂಗಾಲದ ಪ್ರಮಾಣವನ್ನು 2050ರ ವೇಳೆಗೆ ಬಹುತೇಕ ಶೂನ್ಯಮಟ್ಟಕ್ಕೆ ಇಳಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಈ ಹಿಂದಿನ ಹವಾಮಾನ ವೈಪರೀತ್ಯ ತಡೆ ಶೃಂಗಸಭೆಯಲ್ಲಿ ಘೋಷಿಸಿದ್ದರು. ಈ ಗುರಿಯನ್ನು ಸಾಧಿಸುವಲ್ಲಿ 2030ರ ವೇಳೆಗೆ ಕೆಲವು ಮೈಲುಗಲ್ಲುಗಳನ್ನು ಮುಟ್ಟಬೇಕಿದೆ. ಅಂತಹ ಮೈಲುಗಲ್ಲುಗಳನ್ನು ಮುಟ್ಟಲು ಕೇಂದ್ರ ಸರ್ಕಾರವು ಕೆಲವು ನೀತಿಗಳನ್ನು ಪ್ರಕಟಿಸಿದ್ದು, ಅವುಗಳಲ್ಲಿ ಬಹುತೇಕವು ಇನ್ನಷ್ಟೇ ಅನುಷ್ಠಾನಕ್ಕೆ ಬರಬೇಕಿದೆ. ಆದರೆ, ವಾಹನ ತಯಾರಿಕಾ ಕಂಪನಿಗಳು ಈ ನಿಟ್ಟಿನಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಕೊಂಡಿವೆ.

ಪ್ರತ್ಯಕ್ಷ ಕಡಿಮೆ ವಾಯುಮಾಲಿನ್ಯ ಮತ್ತು ಪ್ರತ್ಯಕ್ಷ ಶೂನ್ಯ ವಾಯುಮಾಲಿನ್ಯ ಎಂಜಿನ್‌ ಇರುವ ವಾಹನಗಳನ್ನು ತಯಾರಿಕಾ ಕಂಪನಿಗಳು ಸಿದ್ಧಪಡಿಸಿಕೊಂಡಿವೆ. ಆದರೆ, ಅಂತಹ ವಾಹನಗಳ ಕಾರ್ಯಾಚರಣೆಗೆ ಅಗತ್ಯವಿರುವ ಇಂಧನ ಮತ್ತು ಮೂಲಸೌಕರ್ಯ ದೇಶದಲ್ಲಿ ಲಭ್ಯವಿಲ್ಲ. ಹೀಗಿದ್ದೂ ತಯಾರಿಕಾ ಕಂಪನಿಗಳು ಅಂತಹ ತಂತ್ರಜ್ಞಾನಗಳನ್ನು ದೇಶಕ್ಕೆ ಪರಿಚಯಿಸಲು ಮುಂದಾಗಿವೆ. ದೆಹಲಿ ಆಟೊ ಎಕ್ಸ್‌ಪೋ–2023ರಲ್ಲಿ ಕಂಪನಿಗಳು ಪ್ರದರ್ಶಿಸಿರುವ ಅಂತಹ ನವೀನ ತಂತ್ರಜ್ಞಾನಗಳು ಎಲ್ಲರ ಗಮನ ಸೆಳೆಯುತ್ತಿವೆ.

ಸಾಲು ಸಾಲು ಇ.ವಿಗಳು
ವಿದ್ಯುತ್ ಚಾಲಿತ ವಾಹನಗಳನ್ನು ಇ.ವಿಗಳು ಎಂದು ಸಂಕ್ಷಿಪ್ತವಾಗಿ ಕರೆಯುವುದು ರೂಢಿ. ಭಾರತೀಯರಿಗೆ ಈ ತಂತ್ರಜ್ಞಾನ ಈಗ ಹೊಸದೇನೂ ಅಲ್ಲ. ದೇಶದಲ್ಲಿ ಈಗಾಗಲೇ ಏಥರ್, ಓಲಾ ಕಂಪನಿಯ ಇ.ವಿ ದ್ವಿಚಕ್ರವಾಹನಗಳು ಜನಪ್ರಿಯವಾಗಿವೆ. ಅಂತೆಯೇ ಟಾಟಾ ನೆಕ್ಸಾನ್‌, ಹುಂಡೈ ಕೋನಾ, ಎಂಜಿ ಝಡ್‌ಎಸ್‌ ಇ.ವಿ ಎಸ್‌ಯುವಿಗಳೂ ಜನಪ್ರಿಯತೆ ಪಡೆದಿವೆ. ಈ ವಾಹನಗಳು ಐದಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಇದ್ದರೂ, ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಲಭ್ಯವಿಲ್ಲ. ಹೀಗಾಗಿ ಹೆಚ್ಚು ಜನರಿಗೆ ಇ.ವಿ ಎಂಬುದು ದೂರದ ಮಾತೇ ಆಗಿದೆ. ಆದರೆ, ಕಡಿಮೆ ಮಾಲಿನ್ಯ ಮತ್ತು ಕಡಿಮೆ ಕಾರ್ಯಾಚರಣೆ ವೆಚ್ಚದ ಕಾರಣ ಮುಂದಿನ ದಿನಗಳಲ್ಲಿ ಇ.ವಿಗಳೇ ಸಾಮಾನ್ಯ ವಾಹನಗಳು ಎಂಬಂತಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲಾ ಕಂಪನಿಗಳು ಇ.ವಿಗಳ ಅಭಿವೃದ್ಧಿಯತ್ತ ಗಮನ ಹರಿಸುತ್ತಿವೆ.

ಸಿಯೆರಾ ಇ.ವಿ ಪರಿಕಲ್ಪನೆ
ಸಿಯೆರಾ ಇ.ವಿ ಪರಿಕಲ್ಪನೆ

ಬ್ಯಾಟರಿಪ್ಯಾಕ್‌ಗಳಲ್ಲಿ ಸಂಗ್ರಹಿಸಲಾಗಿರುವ ವಿದ್ಯುತ್ ಅನ್ನು ಬಳಸಿಕೊಂಡು, ವಿದ್ಯುತ್ ಮೋಟರ್‌ಗಳ ಮೂಲಕ ವಾಹನಗಳು ಚಲಿಸುವಂತೆ ಮಾಡುವುದೇ ಇ.ವಿ ವಾಹನಗಳಲ್ಲಿ ಬಳಕೆಯಲ್ಲಿರುವ ಮೂಲ ತಂತ್ರಜ್ಞಾನ. ಇದರಲ್ಲೇ ಬೇರೆ ಸ್ವರೂಪದ ಮೋಟರ್‌ ಮತ್ತು ಬ್ಯಾಟರಿಪ್ಯಾಕ್‌ಗಳನ್ನು ಕಂಪನಿಗಳು ಬಳಸುತ್ತವೆ. ಈ ಬಾರಿಯ ಪ್ರದರ್ಶನದಲ್ಲಿ ಟಾಟಾ ಮೋಟರ್ಸ್‌ ಹ್ಯಾರಿಯರ್ ಇ.ವಿ, ಸಿಯೆರಾ ಇ.ವಿ, ಅವಿನಿಯಾ ಇ.ವಿಗಳನ್ನು ಪ್ರದರ್ಶನದಲ್ಲಿ ಅನಾವರಣ ಮಾಡಿದೆ. ಹತ್ತಕ್ಕೂ ಹೆಚ್ಚು ಇ.ವಿ ಟ್ರಕ್‌ಗಳನ್ನು ಮತ್ತು ಸ್ಟಾರ್‌ಬಸ್‌ ಸರಣಿಯ ಇ.ವಿ ಅವತರಣಿಕೆಯನ್ನು ಅನಾವರಣ ಮಾಡಿದೆ. ಮಾರುತಿ ಸುಜುಕಿ ತನ್ನ ಮೊದಲ ಇ.ವಿಯನ್ನು ಇದೇ ಪ್ರದರ್ಶನದಲ್ಲಿ ಅನಾವರಣ ಮಾಡಿದೆ. ಹುಂಡೈ ತನ್ನ ಹೆಚ್ಚು ರೇಂಜ್‌ನ ಇ.ವಿಯನ್ನು ಪ್ರದರ್ಶಿಸಿದೆ. ಹಲವು ದ್ವಿಚಕ್ರವಾಹನ ತಯಾರಿಕಾ ಕಂಪನಿಗಳೂ ತಮ್ಮ ನೂತನ ಇ.ವಿಗಳನ್ನು ಈ ಪ್ರದರ್ಶನದಲ್ಲಿ ಅನಾವರಣ ಮಾಡಿವೆ.

ದೇಶದಲ್ಲಿ ಇ.ವಿ ಚಾರ್ಜಿಂಗ್‌ ಘಟಕಗಳ ಕೊರತೆ ಇದೆ. ಈ ಕೊರತೆಯನ್ನು ನಿವಾರಿಸಲು ಸರ್ಕಾರ ಮತ್ತು ಖಾಸಗಿ ಕಂಪನಿಗಳೂ ಪ್ರಯತ್ನಿಸುತ್ತಿವೆ. ಆದರೆ, ಚಾರ್ಜಿಂಗ್‌ಗೆ ಬಳಸುವ ವಿದ್ಯುತ್‌ನ ಮೂಲವೇ ದೊಡ್ಡ ಸಮಸ್ಯೆಯಾಗಿದೆ. ದೇಶದಲ್ಲಿ ಉತ್ಪಾದಿಸಲಾಗುವ ಒಟ್ಟು ವಿದ್ಯುತ್‌ನಲ್ಲಿ ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಸ್ಥಾವರಗಳ ಪಾಲು ಶೇ 68ರಷ್ಟಿದೆ. ಹೀಗಾಗಿ ಇ.ವಿಗಳಿಂದ ನೇರವಾಗಿ ವಾಯುಮಾಲಿನ್ಯವಾಗದೇ ಇದ್ದರೂ ಪರೋಕ್ಷವಾಗಿ ವಾಯುಮಾಲಿನ್ಯವಾಗುತ್ತಿದೆ. ಇದನ್ನು ತಪ್ಪಿಸಲು ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಸರ್ಕಾರವು ಒತ್ತು ನೀಡುತ್ತಿದೆ.

ಫ್ಯುಯೆಲ್‌ಸೆಲ್‌ ತಂತ್ರಜ್ಞಾನ
ಈ ಬಾರಿಯ ಪ್ರದರ್ಶನದಲ್ಲಿ ಟಾಟಾ ಮೋಟರ್ಸ್‌ ಮತ್ತು ಟೊಯೊಟಾ ಕಂಪನಿಗಳು ಫ್ಯುಯೆಲ್‌ಸೆಲ್‌ ತಂತ್ರಜ್ಞಾನದ ವಾಹನಗಳನ್ನು ಪ್ರದರ್ಶಿಸಿವೆ. ಜಲಜನಕವನ್ನು ಇಂಧನವಾಗಿ ಬಳಸಿಕೊಳ್ಳುವ ಎಂಜಿನ್‌ ಇರುವ ಟ್ರಕ್‌ ಮತ್ತು ಮಿನಿಟ್ರಕ್‌ಗಳನ್ನು ಟಾಟಾ ಮೋಟರ್ಸ್‌ ಪ್ರದರ್ಶಿಸಿದೆ. ಜಲಜನಕವನ್ನು ತಾವೇ ಉತ್ಪಾದಿಸಿಕೊಳ್ಳುವ ಫ್ಯುಯೆಲ್‌ಸೆಲ್‌ ತಂತ್ರಜ್ಞಾನವಿರುವ ಸಿಗ್ನಾ, ಪ್ರಿಮಾ ಟ್ರಕ್‌ಗಳನ್ನು ಟಾಟಾ ಮೋಟರ್ಸ್‌ ಪ್ರದರ್ಶಿಸಿದೆ. ಭಾರತದ ಮಟ್ಟಿಗೆ ಇದು ಹೊಸ ತಂತ್ರಜ್ಞಾನ. ಜತೆಗೆ ಜಲಜನಕದ ಮೂಲಕ ವಿದ್ಯುತ್ ಉತ್ಪಾದಿಸಿ, ಆ ವಿದ್ಯುತ್‌ ಬಳಸಿಕೊಂಡು ಚಲಿಸುವ ಇ.ವಿ ಟ್ರಕ್‌ ಮತ್ತು ಬಸ್‌ ಅನ್ನು ಕಂಪನಿ ಪರಿಚಯಿಸಿದೆ.

ಟಾಟಾ ಪ್ರಿಮಾ ಜಲಜನಕದ ಎಂಜಿನ್‌ ಟ್ರಕ್‌
ಟಾಟಾ ಪ್ರಿಮಾ ಜಲಜನಕದ ಎಂಜಿನ್‌ ಟ್ರಕ್‌

ಇದರ ಹೊರತಾಗಿ ಜಲಜನಕವನ್ನೇ ಇಂಧನವಾಗಿ ಬಳಸುವ ಎಂಜಿನ್‌ ಇರುವ ಟ್ರಕ್‌ಗಳ ಅವತರಣಿಕೆಗಳನ್ನೂ ಕಂಪನಿ ಪ್ರದರ್ಶಿಸಿದೆ. ಈ ಟ್ರಕ್‌ಗಳು ತಾವೇ ಜಲಜನಕ ಉತ್ಪಾದಿಸುವ ಮತ್ತು ಬಂಕ್‌ಗಳಲ್ಲಿ ಜಲಜನಕವನ್ನು ಭರ್ತಿ ಮಾಡಿಕೊಳ್ಳುವ ಸವಲತ್ತು ಹೊಂದಿವೆ. ಜಲಜನಕವನ್ನು ಇಂಧನವಾಗಿ ಬಳಸಿಕೊಳ್ಳುವ ಎಂಜಿನ್‌ಗಳಿಂದ ಕಡಿಮೆ ಮಟ್ಟದ ವಾಯುಮಾಲಿನ್ಯವಾಗುತ್ತದೆ ಮತ್ತು ಈ ಎಂಜಿನ್‌ಗಳ ಶಕ್ತಿ ಹೆಚ್ಚು. ಚಾರ್ಜಿಂಗ್ ಮೂಲಸೌಕರ್ಯದ ಕೊರತೆ ಇರುವೆಡೆ ಇ.ವಿಗಳ ಬದಲಿಗೆ ಈ ತಂತ್ರಜ್ಞಾನವು ಹೆಚ್ಚು ಅನುಕೂಲವನ್ನು ಒದಗಿಸುತ್ತದೆ. ಇಂಥದ್ದೇ ತಂತ್ರಜ್ಞಾನ ಇರುವ ಮಿರಾಯಿ ಕಾರನ್ನು ಟೊಯೊಟಾ ಕಂಪನಿ ಆಟೊ ಎಕ್ಸ್‌ಪೋನಲ್ಲಿ ಪ್ರದರ್ಶಿಸಿದೆ.

ಆದರೆ, ದೇಶದಲ್ಲಿ ಜಲಜನಕದ ಬೆಲೆಯು ಪೆಟ್ರೋಲ್‌ ಮತ್ತು ಡೀಸೆಲ್‌ನ ಬೆಲೆಗೆ ಹೋಲಿಸಿದರೆ ಬಾರಿ ಹೆಚ್ಚು. ಎಲ್‌ಪಿಜಿ ಮತ್ತು ಸಿಎನ್‌ಜಿ ಬೆಲೆಗೆ ಹೋಲಿಸಿದರೆ, ಜಲಜನಕದ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚು. ಈಗ ಪ್ರತಿ ಕೆ.ಜಿ. ಜಲಜನಕಕ್ಕೆ ಭಾರತದಲ್ಲಿ₹300ರಿಂದ ₹305ರಷ್ಟು ಹಣ ನೀಡಬೇಕಿದೆ. ಹೀಗಾಗಿ ತಕ್ಷಣದ ಸಂದರ್ಭದಲ್ಲಿ ಆರ್ಥಿಕ ದೃಷ್ಟಿಕೋನದಿಂದ ಜಲಜನಕದ ಎಂಜಿನ್‌ ಇರುವ ವಾಹನಗಳು ಲಾಭದಾಯಕವಲ್ಲ. ಸರ್ಕಾರವು 2030ರ ವೇಳೆಗೆ ಜಲಜನಕದ ಬೆಲೆಯನ್ನು ₹160–₹170ರಷ್ಟಕ್ಕೆ ಇಳಿಸುವ ಗುರಿಯನ್ನು ಹಾಕಿಕೊಂಡಿದೆ. ಇದು ಸಾಧ್ಯವಾದರೆ ಮಾತ್ರ ಜಲಜನಕದ ಎಂಜಿನ್‌ ಮತ್ತು ಜಲಜನಕದ ಫ್ಯುಯೆಲ್‌ ಸೆಲ್‌ ವಾಹನಗಳು ಭಾರತದಲ್ಲಿ ಕಾರ್ಯಸಾಧು ಎನಿಸಿಕೊಳ್ಳುತ್ತವೆ.

ಫ್ಲೆಕ್ಸಿ ಫ್ಯುಯೆಲ್‌ ಎಂಜಿನ್‌
ಎರಡು ಬೇರೆ–ಬೇರೆ ಇಂಧನಗಳನ್ನು ಏಕಕಾಲದಲ್ಲಿ ಬಳಸಿಕೊಂಡು ಕಾರ್ಯನಿರ್ವಹಿಸುವ ಎಂಜಿನ್‌ಗಳನ್ನು ಫ್ಲೆಕ್ಸಿ ಫ್ಯುಯೆಲ್‌ ಎಂಜಿನ್‌ ಎಂದು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಪೆಟ್ರೋಲ್‌ ಎಂಜಿನ್‌ಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇಂತಹ ಎಂಜಿನ್‌ಗಳಲ್ಲಿ ಎರಡನೇ ಇಂಧನವಾಗಿ ಎಥೆನಾಲ್‌ ಅನ್ನು ಬಳಸಲಾಗುತ್ತದೆ. ಈ ಎಂಜಿನ್‌ಗಳು ಸಂಪೂರ್ಣವಾಗಿ ಪೆಟ್ರೋಲ್‌ ಅಥವಾ ಸಂಪೂರ್ಣವಾಗಿ ಎಥೆನಾಲ್‌ ಮತ್ತು ಪೆಟ್ರೋಲ್‌–ಎಥೆನಾಲ್‌ನ ಭಿನ್ನ ಪ್ರಮಾಣದ ಮಿಶ್ರಣವನ್ನು ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಈ ಎಂಜಿನ್‌ಗಳ ಶಕ್ತಿ ಮತ್ತು ಇಂಧನ ಕಾರ್ಯಕ್ಷಮತೆ ಹೆಚ್ಚು. ಜತೆಗೆ ವಾಯುಮಾಲಿನ್ಯದ ಪ್ರಮಾಣವೂ ಕಡಿಮೆ.

ಟೊಯೊಟಾ ಪೈರಸ್‌ ಹೈಬ್ರಿಡ್‌
ಟೊಯೊಟಾ ಪೈರಸ್‌ ಹೈಬ್ರಿಡ್‌

ಬ್ರೆಜಿಲ್‌ನಲ್ಲಿ ಎಥೆನಾಲ್‌ ಉತ್ಪಾದನೆ ಹೆಚ್ಚು ಇರುವ ಕಾರಣ, ಫ್ಲೆಕ್ಸಿ ಫ್ಯುಯೆಲ್‌ ಎಂಜಿನ್‌ ಇರುವ ವಾಹನಗಳು ಜನಪ್ರಿಯತೆ ಪಡೆದಿವೆ. ಬ್ರೆಜಿಲ್‌ನಲ್ಲಿ ಹೀಗೆ ಜನಪ್ರಿಯತೆ ಪಡೆದಿರುವ ತನ್ನ ಕೊರೋಲ್ಲಾ ಆಲ್ಟಿಸ್‌ ಸೆಡಾನ್‌ ಅನ್ನು ಟೊಯೊಟಾ ಕಂಪನಿಯು ಆಟೊ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಗರಿಷ್ಠ ಶೇ 20ರಷ್ಟು ಎಥೆನಾಲ್‌ ಮಿಶ್ರಣವಿರುವ ಪೆಟ್ರೋಲ್‌ ಅನ್ನು ಬಳಸಿಕೊಳ್ಳುವ ಸಾಮರ್ಥ್ಯವಿರುವ ಎರಡು ಎಂಜಿನ್‌ಗಳನ್ನು ಟಾಟಾ ಮೋಟರ್ಸ್‌ ಪ್ರದರ್ಶಿಸಿದೆ.

ಆದರೆ, ಭಾರತದಲ್ಲಿ ಶೇ 80ರಷ್ಟು ಪೆಟ್ರೋಲ್‌ ಮತ್ತು ಶೇ20ರಷ್ಟು ಎಥೆನಾಲ್‌ ಮಿಶ್ರಣ ಇನ್ನಷ್ಟೇ ಕಡ್ಡಾಯವಾಗಿ ಜಾರಿಯಾಗಬೇಕಿದೆ. ಎಥೆನಾಲ್‌ ಉತ್ಪಾದನೆ ಹೆಚ್ಚಳ ವಿಚಾರವೂ ನೀತಿ ಮಟ್ಟದಲ್ಲಿಯೇ ಇದೆ. ಈ ನೀತಿಗಳು ಪರಿಣಾಮಕಾರಿಯಾಗಿ ಜಾರಿಯಾದರೆ, ಇಂತಹ ತಂತ್ರಜ್ಞಾನ ಹೆಚ್ಚು ಉಪಯೋಗಕ್ಕೆ ಬರುತ್ತದೆ.

ಈ ವರ್ಷ ಹಲವು ಹೊಸ ಕಾರುಗಳು
ಆಟೊಮೊಬೈಲ್ ಉದ್ಯಮವು ಕಾಲಕಾಲಕ್ಕೆ ಹೊಸ ತಂತ್ರಜ್ಞಾನ, ವಿನ್ಯಾಸ ಹಾಗೂ ಪ್ರಯಾಣಿಕ ಸ್ನೇಹಿ ಸವಲತ್ತುಗಳನ್ನು ಅಳವಡಿಸಿಕೊಳ್ಳುವ ಯತ್ನ ಮಾಡುತ್ತಿರುತ್ತದೆ. ಈ ರೀತಿ ಹೊಸತನದಿಂದ ಕೂಡಿದ ಹತ್ತಾರು ಕಾರುಗಳು 2023ರಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ಎಲೆಕ್ಟ್ರಿಕ್ ಕಾರುಗಳು, ಹೈಬ್ರಿಡ್ ಮಾದರಿಗಳು, ಸ್ಪೋರ್ಟ್ಸ್ ಕಾರುಗಳು, ಎಸ್‌ಯುವಿಗಳು ಇವುಗಳಲ್ಲಿ ಪ್ರಮುಖವಾಗಿವೆ. ದೇಶದ ಹಾಗೂ ವಿದೇಶದ ಪ್ರಮುಖ ಆಟೊಮೊಬೈಲ್ ಕಂಪನಿಗಳು ತಮ್ಮ ಹೊಸ ಶ್ರೇಣಿಯ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸಲು ಸಜ್ಜಾಗಿವೆ.

ಮಾರುತಿ ಸುಜುಕಿ
ಭಾರತದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ, ‘ವೈಟಿಬಿ ಕೂಪ್‌’ ಅನ್ನು ಪರಿಚಯಿಸಲು ಸಜ್ಜಾಗಿದೆ. ಆಕರ್ಷಕವಾಗಿ ಕಾಣುವ ಇದು, ಭಾರತೀಯ ಆಟೊಮೊಬೈಲ್ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಜಿಮ್ನಿ 5 ಡೋರ್ ಅವತರಣಿಕೆಯನ್ನು (ಭಾರತದಲ್ಲಿ ಜಿಪ್ಸಿ) ಪರಿಚಯಿಸುವ ನಿರೀಕ್ಷೆ ಇದೆ. ಜಾಗತಿಕವಾಗಿ ಇದು ಸುಜುಕಿ ಜಿಮ್ನಿ ಎಂದೇ ಪ್ರಸಿದ್ಧವಾಗಿದ್ದು, ಭಾರತದಲ್ಲಿ ಜಿಪ್ಸಿ ಎಂದು ಕರೆಯಲಾಗುತ್ತದೆ. ಮೂಲ ವಿನ್ಯಾಸ ಹಾಗೂ ಆಫ್‌ರೋಡ್‌ನ ಸಾಮರ್ಥ್ಯಗಳನ್ನು ಇದರಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಹುಂಡೈ
ಹುಂಡೈ ಕಂಪನಿಯು ಹೊಸ ಮೈಕ್ರೊ ಎಸ್‌ಯುವಿಯನ್ನು ಈ ವರ್ಷ ಪರಿಚಯಿಸುತ್ತಿದೆ. ಭಾರತದಲ್ಲಿ ಅತಿ ಪ್ರಸಿದ್ಧವಾಗಿರುವ ‘ಕ್ರೆಟಾ’ದ ಫೇಸ್‌ಲಿಫ್ಟ್ ಮಾದರಿಯನ್ನು ಸಂಸ್ಥೆ ಪರಿಚಯಿಸಲಿದೆ. ಸಂಸ್ಥೆಯ ಸೆಡಾನ್ ಮಾದರಿಯಾದ ‘ವರ್ನಾ’ ಕಾರು, ಸುಧಾರಿತ ತಂತ್ರಜ್ಞಾನ ಹಾಗೂ ಪ್ರಯಾಣಿಕಸ್ನೇಹಿ ಸವಲತ್ತುಗಳೊಂದಿಗೆ ಬರುತ್ತಿದೆ. ‘ಅಯಾನಿಕ್ಯು’ ಇ–ವಿ ರೂಪದಲ್ಲಿ ಬರಲು ಸಜ್ಜಾಗಿದೆ. ಹೈಬ್ರಿಡ್, ಪ್ಲಗ್‌ಇನ್ ಹೈಬ್ರಿಡ್ ಮತ್ತು ಸಂಪೂರ್ಣ ಎಲೆಕ್ಟ್ರಿಕ್ ಮಾದರಿಗಳಲ್ಲೂ ಇದು ಲಭ್ಯವಿದೆ.

ಎಂಜಿ
ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಎಂಜಿ ಹೆಕ್ಟರ್‌ ಮಾದರಿಯು ಈ ವರ್ಷ ಗ್ರಾಹಕರಿಗೆ ಲಭ್ಯವಾಗಲಿದ್ದು, ಮಧ್ಯಮಗಾತ್ರದ ಎಸ್‌ಯುವಿ ವರ್ಗದಲ್ಲಿ ಇನ್ನಷ್ಟು ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ. ಇದರ ಕಾರ್ಯಕ್ಷಮತೆ, ದಕ್ಷತೆ ಹಾಗೂ ಆಧುನಿಕ ಲಕ್ಷಣಗಳು ಚಾಲನೆ ಮಾಡುವವರನ್ನು ಸೆಳೆಯಲಿವೆ ಎನ್ನಲಾಗಿದೆ.

ಹೋಂಡಾ
ಚಿಕ್ಕ ಗಾತ್ರದ ಮತ್ತು ನಗರಗಳಿಗೆ ಸೂಕ್ತವಾದ ಎಸ್‌ಯುವಿಗಳಿಗೆ ಇರುವ ಬೇಡಿಕೆಯನ್ನು ಮನಗಂಡು ಹೋಂಡಾ ಕಂಪನಿಯು ಕಾಂಪ್ಯಾಕ್ಟ್‌ ಎಸ್‌ಯುವಿಯನ್ನು ಈ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಸಿಟ್ರಾನ್
ಸಿಟ್ರಾನ್ ಕಂಪನಿಯು ‘ಇಸಿ3’ ಎಂಬ ಇವಿ ಕಾರನ್ನು ರಸ್ತೆಗೆ ಇಳಿಸಲಿದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ ಈ ಕಾರು, ಒಮ್ಮೆಗೆ ಚಾರ್ಜ್ ಮಾಡಿದರೆ, 200 ಕಿಲೋಮೀಟರ್ ಓಡಲಿದೆ.

ಮಹೀಂದ್ರಾ
ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್ ರೂಪದ ‘ಎಕ್ಸ್‌ಯುವಿ 4ಒಒ’, ಜನವರಿಯಿಂದಲೇ ಗ್ರಾಹಕರ ಕೈಸೇರಲಿದೆ. ಹೊಸ ಥಾರ್‌ನ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.

ನಿಸಾನ್
ಜಾಗತಿಕ ಮಾರುಕಟ್ಟೆಯಲ್ಲಿ ನಿಸಾನ್‌ಗೆ ಹೆಸರು ತಂದುಕೊಟ್ಟಿರುವ ಎಕ್ಸ್‌–ಟ್ರೈಲ್, ಕಷ್‌ಕಾಯ್ ಹಾಗೂ ಜೂಕ್ ಎಂಬ ಮೂರು ಮಾದರಿಗಳನ್ನು ಸಂಸ್ಥೆ ಭಾರತದಲ್ಲಿ ಪರಿಚಯಿಸುತ್ತಿದೆ.

ಕಿಯಾ
ಕಿಯಾ ಸಂಸ್ಥೆಯ ಸೆಲ್ಟೋಸ್‌ ಮಾದರಿಯ ಫೇಸ್‌ಲಿಫ್ಟ್ ಅವತರಣಿಕೆಯು ಕೆಲವೊಂದು ವಿನ್ಯಾಸ ಬದಲಾವಣೆಹೊಂದಿಗೆ ರಸ್ತೆಗಿಳಿಯಲು ಸಜ್ಜಾಗಿದೆ.

ಆಧಾರ: ದೆಹಲಿ ಆಟೊ ಎಕ್ಸ್‌ಪೋ–2023 ಅಧಿಕೃತ ಜಾಲತಾಣ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT