ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಪ್ರಜಾವಾಣಿ ಚರ್ಚೆ : ರಾಜಕೀಯ ಪಕ್ಷಗಳ ಪ್ರಣಾಳಿಕೆ ಘೋಷಣೆಗಳು ಕಾರ್ಯಸಾಧುವೇ?
ಪ್ರಜಾವಾಣಿ ಚರ್ಚೆ : ರಾಜಕೀಯ ಪಕ್ಷಗಳ ಪ್ರಣಾಳಿಕೆ ಘೋಷಣೆಗಳು ಕಾರ್ಯಸಾಧುವೇ?
Published 5 ಮೇ 2023, 19:03 IST
Last Updated 5 ಮೇ 2023, 19:03 IST
ಅಕ್ಷರ ಗಾತ್ರ

ರಾಜ್ಯ ವಿಧಾನಸಭಾ ಚುನಾವಣಾ ಕಣಕ್ಕೆ ಎಲ್ಲಾ ಪಕ್ಷಗಳೂ ಭಾರಿ ಸಿದ್ದತೆಯೊಂದಿಗೆ ಇಳಿದಿವೆ. ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್ ತಮ್ಮ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಮೂರೂ ಪಕ್ಷಗಳು ಮತದಾರರಿಗೆ ತಮ್ಮ ಪ್ರಣಾಳಿಕೆಗಳಲ್ಲಿ ಭರಪೂರ ಭರವಸೆಗಳನ್ನು ನೀಡಿವೆ. ಮೂರೂ ಪಕ್ಷಗಳ ನಾಯಕರು, ಎದುರಾಳಿ ಪಕ್ಷಗಳ ಪ್ರಣಾಳಿಕೆಯಲ್ಲಿ ಇರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ತಮ್ಮ ತಮ್ಮ ಪ್ರಣಾಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ

‘ಅನುಷ್ಠಾನ ಸಾಧ್ಯ ಭರವಸೆಗಷ್ಟೇ ಜಾಗ’

ಡಾ. ಜಿ ಪರಮೇಶ್ವರ

ಮೊದಲನೆಯದಾಗಿ ಭ್ರಷ್ಟಾಚಾರ ರಹಿತ ಆಡಳಿತ ಕೊಡಬೇಕು ಎಂಬ ಮೂಲ ಉದ್ದೇಶ ಇಟ್ಟುಕೊಂಡೇ ಕಾಂಗ್ರೆಸ್ ಪಕ್ಷ ಈ ಬಾರಿ ಪ್ರಣಾಳಿಕೆ ಸಿದ್ಧಪಡಿಸಿದೆ. ಲೋಕಾಯುಕ್ತವನ್ನು ಮತ್ತಷ್ಟು ಬಲಪಡಿಸುವುದು, ಭ್ರಷ್ಟಾಚಾರ ತಡೆಗೆ ಇರುವ ಕಾನೂನುಗಳಿಗೆ ಇನ್ನಷ್ಟು ಸ್ಪಷ್ಟತೆ ತರುವ ಉದ್ದೇಶವಿದೆ. ಕಾನೂನು ಬಲಗೊಂಡರೆ ಭ್ರಷ್ಟಾಚಾರ ನಿಯಂತ್ರಿಸಬಹುದು.

‘ಅನುಷ್ಠಾನ ಸಾಧ್ಯ ಭರವಸೆಗಷ್ಟೇ ಜಾಗ’
ಡಾ. ಜಿ ಪರಮೇಶ್ವರ
‘ಅನುಷ್ಠಾನ ಸಾಧ್ಯ ಭರವಸೆಗಷ್ಟೇ ಜಾಗ’ ಡಾ. ಜಿ ಪರಮೇಶ್ವರ

ಈಡೇರಿಸುವ ಉದ್ದೇಶ ಹಾಗೂ ಎಲ್ಲಾ ರೀತಿಯ ಲೆಕ್ಕಾಚಾರ ಮಾಡಿಯೇ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ಸೇರಿಸಲಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣ, ರಾಜ್ಯ ಸರ್ಕಾರದ ಮೇಲೆ ಯಾವ ರೀತಿ ಹಣಕಾಸಿನ ಹೊರೆ ಬೀಳಲಿದೆ ಎಂಬ ಲೆಕ್ಕಾಚಾರ ನಡೆಸಿ ಭರವಸೆಗಳನ್ನು ಕೊಡಲಾಗಿದೆ. ಪ್ರತಿ ವರ್ಷವೂ ಜಿಎಸ್‌ಟಿ ಸೇರಿದಂತೆ ತೆರಿಗೆ ಸಂಗ್ರಹವು ಹೆಚ್ಚುತ್ತಲೇ ಇರುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಕಷ್ಟಕರವಾಗಲಾರದು. ಕೆಲವು ಯೋಜನೆಗಳಿಗೆ ಕೇಂದ್ರವೂ ನೆರವು ನೀಡುತ್ತದೆ.

ಉದಾಹರಣೆಗೆ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವುದಾದರೆ ಸುಮಾರು ₹1 ಲಕ್ಷ ಕೋಟಿಗೂ ಹೆಚ್ಚು ಹಣ ಬೇಕಾಗಬಹುದು. ಆದರೆ ಇಷ್ಟೊಂದು ದೊಡ್ಡ ಮೊತ್ತದ ಹಣ ನಾಳೆಯೇ ಬೇಕಾಗಿಲ್ಲ. 2036–2038ರ ವೇಳೆ ಬೇಕಾಗುತ್ತದೆ. ಅದಕ್ಕಾಗಿ ಪ್ರತಿ ವರ್ಷ ₹5 ಸಾವಿರ ಕೋಟಿ ನೀಡುತ್ತಾ ಹೋಗಬೇಕಾಗುತ್ತದೆ. ಈ ಹಣದ ಜತೆಗೆ ಬಡ್ಡಿ ಸೇರಿದರೆ ದೊಡ್ಡ ಮೊತ್ತವಾಗುತ್ತದೆ. ಆಗ ಜಾರಿ ಮಾಡುವುದು ಸುಲಭ. ನೀರಾವರಿ ಯೋಜನೆಗೆ ₹1.50 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದೇವೆ. ಪ್ರತಿ ವರ್ಷ ₹25 ಸಾವಿರ ಕೋಟಿ ಕೊಡುವುದು ಹೊರೆಯಾಗುವುದಿಲ್ಲ. ರಾಜ್ಯದ ಬಜೆಟ್ ಗಾತ್ರ ₹2 ಲಕ್ಷ ಕೋಟಿ ಒಳಗೆ ಇದ್ದ ಸಮಯದಲ್ಲಿ ನೀರಾವರಿಗೆ ಪ್ರತಿ ವರ್ಷ ₹10 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಬಜೆಟ್ ಗಾತ್ರ ₹3 ಲಕ್ಷ ಕೋಟಿ ದಾಟಿದ್ದು, ಪ್ರತಿ ವರ್ಷವೂ ಅದರ ಗಾತ್ರ ಶೇ 10–15ರಷ್ಟು ಹೆಚ್ಚಳವಾಗುತ್ತಿದೆ.

ಪ್ರತಿ ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವ ಭರವಸೆ ಕೊಟ್ಟಿದ್ದೇವೆ. ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ಉತ್ಪಾದನೆ ಆಗುತ್ತಿದ್ದು, ಅದನ್ನು ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಪಾವಗಡದಲ್ಲಿ ಸೋಲಾರ್ ವಿದ್ಯುತ್ ಪಾರ್ಕ್ ನಿರ್ಮಿಸಲಾಗಿದೆ. ಅದೇ ರೀತಿ 2,500 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಎರಡು ಸೋಲಾರ್ ಪಾರ್ಕ್ ನಿರ್ಮಿಸಿದರೆ ಉಚಿತವಾಗಿ ವಿದ್ಯುತ್ ನೀಡಬಹುದು. ಒಮ್ಮೆ ಬಂಡವಾಳ ತೊಡಗಿಸಿದರೆ, ಸೂರ್ಯನ ಬಿಸಿಲಿಗೆ ದುಡ್ಡು ಕೊಡಬೇಕಾಗಿಲ್ಲ. ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದು. ಉಚಿತವಾಗಿ 200 ಯೂನಿಟ್ ಕೊಟ್ಟ ತಕ್ಷಣ ಅಷ್ಟನ್ನೂ ಎಲ್ಲರೂ ಬಳಸುವುದಿಲ್ಲ. ಅಲ್ಲೂ ಉಳಿತಾಯವಾಗುತ್ತದೆ.

ಉಚಿತ, ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿ ಮಾಡುವುದು ‘ಎರಡು ಕಡೆಯೂ ಹರಿತವಾದ ಖಡ್ಗ’ ಇದ್ದಂತೆ. ಉಚಿತ ಯೋಜನೆಗಳಿಂದ ಜನರಿಗೂ ಸವಲತ್ತು ಕೈಗೆ ಸಿಕ್ಕಂತಾಗುತ್ತದೆ. ಬೊಕ್ಕಸದ ಮೇಲೂ ಹೊರೆ ಬೀಳುತ್ತದೆ. ಅಂತಹ ಸಮಯದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಉಚಿತವಾಗಿ ಮನೆ ಕಟ್ಟಿಸಿಕೊಡುವ ಕಾರ್ಯಕ್ರಮ ಏಕೆ ಮಾಡಬೇಕು ಎಂಬ ಪ್ರಶ್ನೆ ಬರಬಹುದು. ದುಡಿಯದವರು, ಬಡವರಿಗೆ ಉಚಿತವಾಗಿ ಏಕೆ ಅಕ್ಕಿ ಕೊಡಬೇಕು ಎನ್ನುತ್ತಾರೆ. ಇದೊಂದು ಸಾಮಾಜಿಕ ಬದ್ಧತೆ. ಯಾವುದೇ ಸರ್ಕಾರಕ್ಕೆ ಇಂತಹದೊಂದು ಜವಾಬ್ದಾರಿ ಇರಬೇಕಾಗುತ್ತದೆ.

ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ನಂಬಿ ಮತ ಹಾಕುವ ಪ್ರಮಾಣ ಕಡಿಮೆಯಾಗಿದೆ. ಹಾಗಂತ ಪ್ರಣಾಳಿಕೆಯೇ ಇಲ್ಲವಾದರೆ ನಮ್ಮ ಕಾರ್ಯಕ್ರಮಗಳು ಏನು? ನಮ್ಮ ಬದ್ಧತೆ ಏನು ಎಂಬುದು ಗೊತ್ತಾಗುವುದಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರಣಾಳಿಕೆ ಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕವಾಗಿ ಏನೆಲ್ಲ ಅನುಕೂಲ ಆಗುತ್ತದೆ ಎಂದೂ ನೋಡುತ್ತಾರೆ. ಬಿಪಿಎಲ್ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ತಿಂಗಳು ₹2 ಸಾವಿರ ನೆರವು, ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ಭರವಸೆ ಕೊಟ್ಟಿದ್ದೇವೆ. ಇಂತಹ ಕಾರ್ಯಕ್ರಮಗಳು ವೈಯಕ್ತಿಕವಾಗಿ ಅನುಕೂಲ ಆಗುವುದರ ಜತೆಗೆ ಆಕರ್ಷಕವಾಗಿಯೂ ಕಾಣುತ್ತವೆ. ಹಳ್ಳಿಗೆ ರಸ್ತೆ, ನೀರು, ಶಾಲೆ ಕಟ್ಟಡ ಇತರೆ ಹಲವು ರೀತಿಯ ಕೆಲಸ ಮಾಡಿಕೊಟ್ಟರೂ ವೈಯಕ್ತಿಕವಾಗಿ ಏನು ಅನುಕೂಲ ಮಾಡಿಕೊಟ್ಟಿದ್ದೀರಿ ಎಂದು ಕೇಳುತ್ತಾರೆ. ಹಾಗಾಗಿ ವೈಯಕ್ತಿಕವಾಗಿ ನೆರವಾಗುವ ಕೆಲವು ಯೋಜನೆಗಳನ್ನು ಜಾರಿಗೆ ತರುವುದು ಅನಿವಾರ್ಯವಾಗಿದೆ.

ಅನುಷ್ಠಾನ ಸಾಧ್ಯವಿಲ್ಲದ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಲ್ಲ. ಜಾರಿಗೆ ತರುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಸರ್ಕಾರದ ಹಣಕಾಸು ಪರಿಸ್ಥಿತಿ, ಸಾಮಾಜಿಕ ಸ್ಥಿತಿಗತಿ, ಪ್ರತಿಯೊಂದು ಕಾರ್ಯಕ್ರಮದ ಹಿನ್ನೆಲೆ, ಸಾಧಕ–ಬಾಧಕಗಳನ್ನು ಗಮನಿಸಿ ಚರ್ಚಿಸಿದ ನಂತರ ಸೇರ್ಪಡೆ ಮಾಡಲಾಗಿದೆ. ಸುಮ್ಮನೆ ಏನೋ ಸೇರಿಸಬೇಕು ಎಂಬ ಕಾರಣಕ್ಕೆ ಸೇರಿಸಿಲ್ಲ. ಒಟ್ಟಾರೆಯಾಗಿ ಅಭಿವೃದ್ಧಿ ದೃಷ್ಟಿಕೋನ, ಎಲ್ಲಾ ವರ್ಗವನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ಇದೆ. 2013ರ ಚುನಾವಣೆ ಸಮಯದಲ್ಲಿ 160 ಭರವಸೆಗಳನ್ನು ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಣ್ಣಪುಟ್ಟವನ್ನು ಹೊರತುಪಡಿಸಿ ಉಳಿದವನ್ನು ಈಡೇರಿಸಲಾಗಿದೆ. ಈ ಬಾರಿ 500ಕ್ಕೂ ಹೆಚ್ಚು ಭರವಸೆ ನೀಡಲಾಗಿದೆ.

ಸಮ್ಮಿಶ್ರ ಸರ್ಕಾರದ ಬಗ್ಗೆ ಯೋಚಿಸಿಲ್ಲ. 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ. ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ಚುನಾವಣೆ ನಡೆದ ಸಮಯದಲ್ಲಿ ಹೊರ ಬಂದ ಸಮೀಕ್ಷೆಗಳು ನಿಜವಾಗಿವೆ. ರಾಜ್ಯದಲ್ಲೂ ನಾವು ಸಮೀಕ್ಷೆ ನಂಬಿದ್ದೇವೆ. ಸಮ್ಮಿಶ್ರ ಸರ್ಕಾರ ರಚನೆ ಅಗತ್ಯ ಬರುವುದಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ಅದು ‘ಕೊನೆಯ ಪ್ರಶ್ನೆ’ ಆಗಿರುತ್ತದೆ.

ಲೇಖಕ: ಅಧ್ಯಕ್ಷ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ

‘ವಾಸ್ತವಿಕತೆಯೇ ನಮ್ಮ ಪ್ರಣಾಳಿಕೆಯ ಆಧಾರ’

ಬಿ.ಎಂ. ಫಾರೂಕ್‌

ಜೆಡಿಎಸ್‌ ಪಕ್ಷವು ಜನರನ್ನು ಸೆಳೆಯುವ ಉದ್ದೇಶದಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಅವಾಸ್ತವಿಕ ಸಂಗತಿಗಳನ್ನು ಪ್ರಸ್ತಾಪಿಸಿಲ್ಲ. ನಮ್ಮ ಪ್ರಣಾಳಿಕೆಯ ಎಲ್ಲ ಭರವಸೆಗಳೂ ವಾಸ್ತವಿಕ ತಳಹದಿ ಮತ್ತು ಅನುಷ್ಠಾನ ಸಾಧ್ಯತೆಯನ್ನೇ ಆಧರಿಸಿವೆ. ‘ಪಂಚರತ್ನ ಯೋಜನೆ’ ನಮ್ಮ ಪ್ರಣಾಳಿಕೆಯ ಪ್ರಮುಖ ಭಾಗ. ನಾವು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ದೊಡ್ಡ ಮೊತ್ತದ ಆರ್ಥಿಕ ಸಂಪನ್ಮೂಲ ಅಗತ್ಯ ಎಂಬುದು ನಮಗೆ ಗೊತ್ತಿದೆ. ಭರವಸೆಗಳ ಜತೆಯಲ್ಲೇ ಸಂಪನ್ಮೂಲ ಸಂಗ್ರಹದ ಯೋಜನೆಯನ್ನೂ ಸಿದ್ಧಪಡಿಸಿಕೊಂಡಿದ್ದೇವೆ. ಮೀನು ಮತ್ತಿತರ ಸಾಗರ ಮೂಲದ ಆಹಾರ ಉತ್ಪನ್ನಗಳ ರಫ್ತು ಹೆಚ್ಚಿಸಲು ಹೊಸ ಬಂದರುಗಳ ನಿರ್ಮಾಣ, ಸಾಫ್ಟ್‌ವೇರ್‌ ರಫ್ತಿನಲ್ಲಿ ಹೆಚ್ಚಿನ ವರಮಾನ ಪಡೆಯುವುದು, ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳ, ಹೊಸ ಕೈಗಾರಿಕಾ ಪ್ರದೇಶಗಳ ನಿರ್ಮಾಣದ ಮೂಲಕ ಹೊಸ ವರಮಾನ ಮೂಲಗಳನ್ನು ಕಂಡುಕೊಳ್ಳುವ ಗುರಿ ಇದೆ.

ಬಿ.ಎಂ. ಫಾರೂಕ್‌
ಬಿ.ಎಂ. ಫಾರೂಕ್‌

ಎಲ್ಲ ಪಕ್ಷಗಳ ಪ್ರಣಾಳಿಕೆಯನ್ನೂ ಜನರು ಒಂದೇ ರೀತಿ ಸ್ವೀಕರಿಸುವುದಿಲ್ಲ. ನಮ್ಮ ಪಕ್ಷವು ನಂಬಿಕೆಗೆ ಅರ್ಹವಾದ ಪ್ರಣಾಳಿಕೆಯನ್ನು ನೀಡಿದೆ. ಬಿಪಿಎಲ್‌ ಕುಟುಂಬಗಳಿಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ವರ್ಷಕ್ಕೆ ತಲಾ ಎರಡು ಎಲ್‌ಪಿಜಿ ಸಿಲಿಂಡರ್‌ ಉಚಿತವಾಗಿ ನೀಡುವ ಭರವಸೆಯನ್ನು ಬಿಜೆಪಿ ಕೊಟ್ಟಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಈ ಭರವಸೆಯನ್ನು ತ್ವರಿತವಾಗಿ ಈಡೇರಿಸುವ ವಾಗ್ದಾನ ನೀಡಿದ್ದರು. ಅದು ಈವರೆಗೂ ಈಡೇರಿಲ್ಲ. ಕರ್ನಾಟಕದಲ್ಲಿ ಮೂರು ಸಿಲಿಂಡರ್‌ ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ ಕೂಡ ಉಚಿತವಾಗಿ ವಿದ್ಯುತ್‌ ವಿತರಿಸುವ ಭರವಸೆ ನೀಡಿದೆ. ಅದು ಕೂಡ ಕಾರ್ಯಸಾಧುವಲ್ಲ. ಜೆಡಿಎಸ್‌ ಘೋಷಿಸಿರುವ ಯೋಜನೆಗಳಿಗೂ ಫಲಾನುಭವಿಗಳ ಆಯ್ಕೆಗೆ ಮಾನದಂಡ ವಿಧಿಸಲಾಗುತ್ತದೆ. ನಮ್ಮ ಎಲ್ಲ ಭರವಸೆಗಳೂ ಅನುಷ್ಠಾನಯೋಗ್ಯವಾಗಿವೆ. ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲು ಬಜೆಟ್‌ ಹೇಗೆ ರೂಪಿಸಬೇಕು ಎಂಬ ಪರಿಕಲ್ಪನೆಯೂ ಸಿದ್ಧವಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಬೇಕಾದರೆ ಬಜೆಟ್‌ ಗಾತ್ರವನ್ನು ಎಷ್ಟು ಹೆಚ್ಚಿಸಬೇಕು? ಯಾವ ಮೂಲದಿಂದ ಹೆಚ್ಚಿನ ವರಮಾನ ಸಂಗ್ರಹಿಸಬೇಕು? ಎಂಬ ನೀಲನಕ್ಷೆಯೂ ಸಿದ್ಧವಾಗಿದೆ.

ಹಿಂದಿನ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ನಮ್ಮ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು, ರೈತರ ಕೃಷಿ ಸಾಲ ಮನ್ನಾ ವಿಚಾರದಲ್ಲಿ ನುಡಿದಂತೆ ನಡೆದಿದ್ದರು. ₹ 25,000 ಕೋಟಿಯಷ್ಟು ಹೊರೆಯಾಗಬಲ್ಲ ಯೋಜನೆಯನ್ನು ಯಾವುದೇ ಅಳುಕಿಲ್ಲದೆ ಅನುಷ್ಠಾನಕ್ಕೆ ತಂದಿದ್ದರು. ಈಗಲೂ ನಾವು ಅಂತಹ ಧೈರ್ಯ ಮಾಡಿದ್ದೇವೆ. ಯೂರೋಪ್‌ ರಾಷ್ಟ್ರಗಳಲ್ಲಿರುವ ಹಸಿರು ಇಂಧನಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಸಿರು ಇಂಧನ ಉತ್ಪಾದನೆಯಿಂದ ಹೆಚ್ಚು ವರಮಾನ ಪಡೆಯುವುದು ಮತ್ತು ಬಳಕೆದಾರರಿಗೆ ಉತ್ತೇಜನ ನೀಡುವುದು ಜೆಡಿಎಸ್‌ ಪ್ರಣಾಳಿಕೆಯ ಭಾಗವಾಗಿವೆ. ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಇಂತಹ ಯೋಚನೆಗಳೇ ನಮ್ಮ ಪ್ರಣಾಳಿಕೆ ವೈಜ್ಞಾನಿಕ ತಳಹದಿ ಮೇಲೆ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ.

ಜೆಡಿಎಸ್‌ ಪ್ರಣಾಳಿಕೆಯು ಉಚಿತ ಸೌಲಭ್ಯಗಳ ಘೋಷಣೆಗೆ ಸೀಮಿತವಾಗಿಲ್ಲ. ಇಡೀ ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಕ್ಕೆ ಪೂರಕವಾದ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ರೈತರು, ಯುವಜನರು, ಮಹಿಳೆಯರು, ಕಾರ್ಮಿಕರು, ಉದ್ಯಮಿಗಳು ಸೇರಿದಂತೆ ಎಲ್ಲ ಜನ ಸಮುದಾಯಗಳಿಗೂ ಪ್ರೋತ್ಸಾಹ ನೀಡುವುದಕ್ಕೆ ಪೂರಕವಾಗಿ ಭರವಸೆಗಳನ್ನು ನೀಡಲಾಗಿದೆ. ಕೃಷಿ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗ ಈ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಪ್ರಣಾಳಿಕೆ ರೂಪಿಸಲಾಗಿದೆ. ಕರ್ನಾಟಕ ಸೌಹಾರ್ದದ ನೆಲೆವೀಡಾಗಿ ಮುಂದುವರಿದು, ಅಭಿವೃದ್ಧಿಯ ಪಥದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರಲು ಬೇಕಾದ ಎಲ್ಲ ಯೋಜನೆಗಳೂ ನಮ್ಮ ಪ್ರಣಾಳಿಕೆಯಲ್ಲಿವೆ.

ರಾಜಕೀಯ ಲಾಭ ಗಳಿಸುವುದೇ ಜೆಡಿಎಸ್‌ ಪ್ರಣಾಳಿಕೆಯ ಉದ್ದೇಶವಲ್ಲ. ಪಕ್ಷ ಈಗಾಗಲೇ ಘೋಷಿಸಿರುವಂತೆ ಇದು ಜನರನ್ನೇ ಕೇಂದ್ರೀಕರಿಸಿ ಸಿದ್ಧಪಡಿಸಿದ ‘ಜನತಾ ಪ್ರಣಾಳಿಕೆ’. ಅನುಷ್ಠಾನ ಸಾಧ್ಯವಿಲ್ಲದಂತಹ ಯಾವುದೇ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಬಾರದು ಎಂಬ ನಿಲುವನ್ನು ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ತೆಗೆದುಕೊಂಡಿದ್ದರು. ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಮತ ಗಳಿಸುವ ಉದ್ದೇಶವೂ ಪಕ್ಷಕ್ಕಿಲ್ಲ. ಅದನ್ನು ಪ್ರಣಾಳಿಕೆ ಸಮಿತಿ ಚಾಚೂತಪ್ಪದೆ ಪಾಲಿಸಿದೆ.

ಕರ್ನಾಟಕಕ್ಕೆ ಸಂಬಂಧವೇ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಜನರನ್ನು ಮೋಸಗೊಳಿಸುವ ಕೆಲಸವನ್ನು ನಾವು ಮಾಡಿಲ್ಲ. ಉದ್ಯೋಗ ಮತ್ತು ಆದಾಯ ಸೃಜಿಸುವ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಜೆಡಿಎಸ್‌ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು, ಎಲ್ಲ ಭರವಸೆಗಳನ್ನೂ ಈಡೇರಿಸುತ್ತದೆ ಎಂಬ ವಿಶ್ವಾಸವಿದೆ. ನಮ್ಮ ಹೈಕಮಾಂಡ್‌ ಸ್ಥಳೀಯವಾಗಿಯೇ ಇರುವುದರಿಂದ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ಪಡೆಯಲು ದೆಹಲಿಗೆ ಹೋಗಬೇಕಾದ ಪರಿಸ್ಥಿತಿ ಇಲ್ಲ. ಸಮ್ಮಿಶ್ರ ಸರ್ಕಾರ ಅನಿವಾರ್ಯ ಆದರೆ ಎರಡೂ ಪಕ್ಷಗಳ ವರಿಷ್ಠರು ಚರ್ಚಿಸಿ ಯಾವ ಭರವಸೆಗಳನ್ನು ಈಡೇರಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ.

ಲೇಖಕ: ಜೆಡಿಎಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ

‘ಖಜಾನೆಗೆ ಹೊರೆಯಾಗುವ ಆಶ್ವಾಸನೆಗಳನ್ನು ಕೊಟ್ಟಿಲ್ಲ’

ಡಾ.ಕೆ.ಸುಧಾಕರ್‌

ಬಿಜೆಪಿಯ ಪ್ರಣಾಳಿಕೆ ಜನರ ಅಭಿಪ್ರಾಯ ಮತ್ತು ಪರಿಣಿತರ ಸಲಹೆಗಳನ್ನು ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಓರೆಗೆ ಹಚ್ಚಿ ಕರ್ನಾಟಕದ ಮುಂದಿನ 25 ವರ್ಷಗಳ ಸರ್ವಾಂಗೀಣ ಅಭವೃದ್ಧಿಯ ದೂರದೃಷ್ಟಿಯೊಂದಿಗೆ ರೂಪಿಸಲಾಗಿರುವ ಸಂಕಲ್ಪ ಪತ್ರ . ಶಿಕ್ಷಣ, ಆರೋಗ್ಯ ಸೇರಿದಂತೆ 33 ವಲಯಗಳ ಪ್ರಮುಖರೊಂದಿಗೆ ಸಭೆ, 138 ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ, ಸಲಹಾ ಪೆಟ್ಟಿಗೆಗಳಿಂದ 6 ಲಕ್ಷ ಸಲಹೆ ಸ್ವೀಕಾರ, 40ಕ್ಕೂ ಹೆಚ್ಚು ವಲಯಗಳ ಪರಿಣಿತರಿಂದ 250 ಸಲಹೆ ಸೇರಿದಂತೆ ಹಲವಾರು ರೀತಿಯಲ್ಲಿ ಸಲಹೆ ಪಡೆದು ಪ್ರಣಾಳಿಕೆ ರೂಪಿಸಲಾಗಿದೆ. ಪ್ರತಿ ಭರವಸೆ ರೂಪಿಸುವ ಮುನ್ನ, ಇದಕ್ಕೆ ಬಜೆಟ್‌ನಲ್ಲಿ ಸಂಪನ್ಮೂಲ ಲಭ್ಯವಿದೆಯೇ ಎಂದು ದೀರ್ಘ ಚರ್ಚೆ ನಡೆಸಲಾಗಿದೆ. ರಾಜ್ಯದ ಒಟ್ಟು ಆರ್ಥಿಕ ವ್ಯವಸ್ಥೆ, ಸರ್ಕಾರದ ಖಜಾನೆಗೆ ಬರುತ್ತಿರುವ ಆದಾಯ, ಪ್ರತಿ ವರ್ಷ ಸರ್ಕಾರ ಮಾಡುವ ವೆಚ್ಚಗಳು, ಸಾಲ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಭರವಸೆಗಳನ್ನು ನೀಡಲಾಗಿದೆ. ಇದನ್ನು ಯಾವುದೋ ಕೊಠಡಿಯಲ್ಲಿ ನಾಲ್ಕು ಜನರು ಕುಳಿತು ರೂಪಿಸಿದ್ದಲ್ಲ. ಅಥವಾ ಚುನಾವಣಾ ರಣತಂತ್ರದ ಭಾಗವಾಗಿ ಚುನಾವಣಾ ಕಾರ್ಯತಂತ್ರ ನಿಪುಣರು ರೂಪಿಸಿದ ಅಸ್ತ್ರವಲ್ಲ.

ಡಾ.ಕೆ.ಸುಧಾಕರ್‌
ಡಾ.ಕೆ.ಸುಧಾಕರ್‌

ಕೆಪಿಸಿಸಿ ಅಧ್ಯಕ್ಷರು ಇತ್ತೀಚಿನ ಟಿ.ವಿ ಸಂದರ್ಶನದಲ್ಲಿ 200 ಯೂನಿಟ್‌ ಉಚಿತ ವಿದ್ಯುತ್‌ ಬಗ್ಗೆ ಮಾತಾಡುವುದನ್ನು ಗಮನಿಸಿದೆ. 200 ಯೂನಿಟ್‌ವರೆಗೆ ರಾಜ್ಯದ ಎಲ್ಲ ಬಳಕೆದಾರರಿಗೆ ಈ ಯೋಜನೆ ಅನ್ವಯವಾಗುವುದೋ ಅಥವಾ 200 ಯೂನಿಟ್‌ಗಿಂತ ಕಡಿಮೆ ಬಳಸುವ ಕುಟುಂಬಗಳಿಗೆ ಮಾತ್ರ ಇದು ಅನ್ವಯ ಆಗುತ್ತೋ ಎಂಬ ಬಗ್ಗೆ ಅವರಿಗೆ ಖಚಿತತೆಯೇ ಇಲ್ಲ. ಈ ರೀತಿ ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿ, ನಂತರ ನಿರ್ಧಾರ ಮಾಡುವ ಬೇಜವಾಬ್ದಾರಿತನವನ್ನು ಪ್ರಣಾಳಿಕೆಯಲ್ಲಿ ತೋರಬಾರದು. ಬಿಜೆಪಿ ಈ ರೀತಿ ಮುಂದಾಲೋಚನೆ ಅಥವಾ ಸ್ಪಷ್ಟತೆ ಇಲ್ಲದ ಭರವಸೆ ನೀಡಿಲ್ಲ.

ಮತದಾರರು ಕೇವಲ ಪ್ರಣಾಳಿಕೆ ನೋಡಿ ಮತ ಚಲಾಯಿಸುವುದಿಲ್ಲ. ಆದರೆ ಮತ ಚಲಾಯಿಸುವ ವೇಳೆ ಪ್ರಣಾಳಿಕೆಯನ್ನೂ ಗಮನದಲ್ಲಿರಿಸಿಕೊಳ್ಳುತ್ತಾರೆ. ಪಕ್ಷದ ಸಿದ್ಧಾಂತ, ಅಭ್ಯರ್ಥಿ, ನಾಯಕತ್ವ ಮುಂತಾದ ಅನೇಕ ಅಂಶಗಳು ಮತದಾರರ ಮೇಲೆ ಪ್ರಭಾವ ಬೀರುತ್ತವೆ. ಪ್ರಣಾಳಿಕೆಯು ಒಂದು ಪಕ್ಷದ ಸಿದ್ಧಾಂತ, ಬದ್ಧತೆ, ಜನ ಕಾಳಜಿ ಹಾಗೂ ಆದ್ಯತೆಗಳನ್ನು ಎತ್ತಿ ತೋರಿಸುತ್ತದೆ. ಬಜರಂಗದಳ ನಿಷೇಧ, 34 ವರ್ಷಗಳ ಬಳಿಕ ಕೇಂದ್ರ ಸರ್ಕಾರ ತಂದ ರಾಷ್ಟ್ರೀಯ ಶಿಕ್ಷಣ ನೀತಿಯ ರದ್ದು, ಮೊದಲಾದ ಭರವಸೆಗಳು ಕಾಂಗ್ರೆಸ್‌ನ ಆದ್ಯತೆಯನ್ನು ತೋರಿಸುತ್ತದೆ. ಬಿಜೆಪಿ ಇಂತಹ ದ್ವೇಷಪೂರಿತ ರಾಜಕಾರಣದಲ್ಲಿ ನಂಬಿಕೆ ಇಟ್ಟಿಲ್ಲ. ಬಿಜೆಪಿ ಜನರ ಜೀವನ ಗುಣಮಟ್ಟ ಸುಧಾರಿಸುವ ಭರವಸೆಗಳನ್ನು ನೀಡಿದೆ. ಹಬ್ಬದ ಸಮಯದಲ್ಲಿ
ಜನಸಾಮಾನ್ಯರ ಖರ್ಚಿನ ಹೊರೆ ತಗ್ಗಿಸಲು ಉಚಿತ ಸಿಲಿಂಡರ್ ನೀಡುವ ಭರವಸೆ ನೀಡಲಾಗಿದೆ. ಅಪೌಷ್ಟಿಕತೆ ನಿವಾರಣೆಗೆ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಜೊತೆಗೆ ಸಿರಿಧಾನ್ಯ ಮತ್ತು ಹಾಲು ನೀಡುವ ಯೋಜನೆ ರೂಪಿಸಿದ್ದೇವೆ. ಇದು ಜನರ ಆರೋಗ್ಯದ ಮೇಲೆ ಮಾತ್ರವಲ್ಲದೆ ಸಿರಿಧಾನ್ಯ ಕೃಷಿ ಹಾಗೂ ಪರಿಸರ ಸಂರಕ್ಷಣೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ. ಇದು ಬೇರೆ ಪಕ್ಷಗಳಂತೆ ಸರ್ಕಾರಿ ಖಜಾನೆಗೆ ಹೊರೆಯಾಗುವ ಯೋಜನೆಗಳಲ್ಲ, ಬದಲಾಗಿ ನಮ್ಮ ಆರ್ಥಿಕತೆಗೆ ಉತ್ತೇಜಕವಾಗಿ ಪರಿಣಮಿಸಲಿದೆ ಹಾಗೂ ಸಾಮಾಜಿಕ ಮತ್ತು ಆರ್ಥಿಕವಾಗಿ ಸಕಾರಾತ್ಮಕ ಪರಿಣಾಮ ಬೀರುವಂತಹ ಯೋಜನೆಗಳು. ಕರ್ನಾಟಕದ ಪ್ರಬುದ್ಧ ಮತ್ತು ಪ್ರಜ್ಞಾವಂತ ಮತದಾರರು ಇವೆಲ್ಲವನ್ನೂ ಗಮನಿಸಿ, ಬೇರೆ ಪಕ್ಷಗಳ ಪ್ರಣಾಳಿಕೆಗಳೊಂದಿಗೆ ತುಲನೆ ಮಾಡಿ ವಿಶ್ಲೇಷಣೆ ಮಾಡುತ್ತಾರೆ. ಬಿಜೆಪಿ ಪ್ರಣಾಳಿಕೆಯಲ್ಲಿ ಇರುವುದೆಲ್ಲವೂ ವಾಸ್ತವ ಪ್ರಜ್ಞೆಯಿಂದ ಕೂಡಿದ್ದು, ಅನುಷ್ಠಾನ ಮಾಡಲೆಂದೇ ನೀಡಲಾಗಿದೆ. ಚುನಾವಣಾ ಗಿಮಿಕ್‌ಗಾಗಿ ಭರವಸೆ ನೀಡುವಷ್ಟು ಕೆಳಮಟ್ಟದ ರಾಜಕಾರಣವನ್ನು ಬಿಜೆಪಿ ಮಾಡುವುದಿಲ್ಲ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದರೆ ಭರವಸೆ ಈಡೇರಿಕೆ ಹೇಗೆ ಎಂಬ ಪ್ರಶ್ನೆಯೂ ಕೇಳಿಬಂದಿದೆ. ಆದರೆ ಇಂತಹ ಸನ್ನಿವೇಶವೇ ರಾಜ್ಯದಲ್ಲಿ ಉದ್ಭವ ಆಗುವುದಿಲ್ಲ. 2014ರ ಮುಂಚೆ ಸುಮಾರು 25 ವರ್ಷಗಳ ಕಾಲ ನಮ್ಮ ದೇಶ ಸಮ್ಮಿಶ್ರ ಸರ್ಕಾರಗಳನ್ನು ಕಂಡಿತ್ತು. ಆದರೆ 2014ರ ನಂತರ ಸತತವಾಗಿ ಎರಡು ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬಂತು. ಹಾಗಾಗಿ ಆಡಳಿತ ವಿರೋಧಿ ಅಲೆ ಅನ್ನುವುದು ಸದಾ ಅನ್ವಯವಾಗುವುದಿಲ್ಲ, ನಮ್ಮ ರಾಜ್ಯದ ಜನತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರದಿಂದ ಆಗುವ ಲಾಭವನ್ನು ಅರಿತಿದ್ದಾರೆ. ಆದ್ದರಿಂದ ನಮಗೆ ಆಡಳಿತ ಪರ ಅಲೆ ಇದೆ. ಕನ್ನಡ ನಾಡಿನ ಜನತೆ ಬಿಜೆಪಿಗೆ ಮತ್ತೂಮ್ಮೆ ಆಶೀರ್ವಾದ ಮಾಡಲಿದ್ದು, ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚನೆಯಾಗಿ ಈ ಎಲ್ಲಾ ಭರವಸೆಗಳನ್ನು ಸಾಕಾರಗೊಳಿಸಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.

ಲೇಖಕ: ಬಿಜೆಪಿ ಪ್ರಣಾಳಿಕೆ ಸಮಿತಿ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT