ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ರಸಪಾಕ ಮತ್ತು ಆನ್‌ಲೈನ್‌ ಯುಗ

Last Updated 27 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಬೆಳೆದುಬಂದ ಆಹಾರ ಪದ್ಧತಿಯ ಹಿನ್ನೆಲೆ, ಆಚರಣೆಯ ಮೂಲ ಮತ್ತು ಅದರ ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂಸ್ಕೃತಿಯ ಭಾಗವಾಗುವಷ್ಟು ಮಹತ್ವ ಇಂತಹ ಆಹಾರಕ್ಕೆ ಏಕಿದೆ ಎನ್ನುವುದು ನಮ್ಮ ಅರಿವಿಗೆ ಬಂದೀತು. ಅಂತಿಮವಾಗಿ ತನಗೇನು ಬೇಕು, ಏಕೆ ಬೇಕು ಎಂದು ನಿರ್ಧರಿಸುವ ಹಕ್ಕು ವ್ಯಕ್ತಿಯದು, ಅದಕ್ಕೇ ಆಯ್ಕೆಯೂ ಅವನದೇ...

**
ಕಾಡಿನ ಕಂದಮೂಲಗಳನ್ನು, ಹಣ್ಣುಹಂಪಲುಗಳನ್ನು ಕಿತ್ತು, ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿಂದು ತಿರುಗಾಡಿಕೊಂಡಿದ್ದ ಮನುಷ್ಯ, ಬೆಂಕಿ, ಚಕ್ರ, ಹಣ, ಆಯುಧ, ಸಲಕರಣೆಗಳನ್ನು ಆವಿಷ್ಕರಿಸಿಕೊಂಡು, ಕೃಷಿ ಮಾಡಿ ಧಾನ್ಯಗಳನ್ನೂ ಬೆಳೆದು ಜೀವಜಗತ್ತಿನಲ್ಲಿಯೇ ಅತ್ಯಂತ ಬುದ್ಧಿವಂತ ಪ್ರಾಣಿಯೆನಿಸಿಕೊಂಡು ಬದುಕತೊಡಗಿ ಸಾವಿರಾರು ವರ್ಷಗಳು ಸಂದಿವೆ.

ವ್ಯಕ್ತಿಯು ತಾನು ಸೇವಿಸುವ ಆಹಾರ ಮತ್ತು ಅದನ್ನು ಸೇವಿಸುವ ಕ್ರಮಗಳಿಂದಾಗಿ ಇನ್ನೊಬ್ಬನಿಂದ ಭಿನ್ನ ಎನಿಸಿಕೊಳ್ಳುತ್ತಾನೆ. ಆದರೆ ಇಂತಹದೊಂದು ರೀತಿನೀತಿ ಬೆಳೆದುಬಂದಿದ್ದಕ್ಕೆ ಕಾರಣಗಳೇನು, ಅವು ನಿರ್ಧರಿಸುವ ಸಂಗತಿಗಳಾವುವು, ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲವೇ, ಬದಲಾಯಿಸುವುದು ನ್ಯಾಯವೇ, ಬದಲಾವಣೆ ವ್ಯಕ್ತಿಗತ ಆಯ್ಕೆಯೇ, ಸಮಷ್ಟಿಯ ಇಷ್ಟಾನಿಷ್ಟಗಳ ಸೂಚಕವೇ ಇತ್ಯಾದಿ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು ಕೆಲವೊಮ್ಮೆ ಹುಟ್ಟಿ ಹಾಗೆಯೇ ಮಾಯವಾಗುವುದಿಲ್ಲ. ಬೃಹದಾಕಾರವಾಗಿ ಬೆಳೆದು ವ್ಯಕ್ತಿಯ, ಸಮಾಜದ, ನಾಡಿನ, ದೇಶದ ನೆಮ್ಮದಿಯನ್ನು ಹಾಳುಗೆಡಹುತ್ತವೆ ಕೂಡ.

ಜಗತ್ತಿನ ಯಾವುದೇ ಭಾಗದ ಜನರ ಆಹಾರ ಪದ್ಧತಿಯನ್ನು ಗಮನಿಸಿದರೂ ಅದರ ಹುಟ್ಟು ಮತ್ತು ಬೆಳವಣಿಗೆಗೆ ಅವರು ವಾಸಿಸುವ ಭೌಗೋಳಿಕ ಪರಿಸರ ಮತ್ತು ಹವಾಮಾನ ಮುಖ್ಯ ಕಾರಣವಾಗಿದ್ದು ಖಾದ್ಯ ಪದಾರ್ಥಗಳ ಲಭ್ಯತೆ, ಸಾರಿಗೆ, ಸಂಪರ್ಕ ಸಾಧನ, ತಂತ್ರಜ್ಞಾನಗಳಲ್ಲಿನ ಪ್ರಗತಿ, ಆರ್ಥಿಕ-ಸಾಮಾಜಿಕ-ರಾಜಕೀಯ ಪರಿಸ್ಥಿತಿಗಳು ಕೂಡ ಪ್ರಭಾವ ಬೀರಿರುವುದು ಕಂಡುಬರುತ್ತದೆ. ಹೀಗೆ ಅಭ್ಯಾಸವಾದ ಒಂದು ಆಹಾರ ಕ್ರಮ ಹಾಗೆಯೇ ಮುಂದುವರೆದು ಅಲ್ಲಿನ ಜನಸಮುದಾಯದ ಸಂಸ್ಕೃತಿಯನ್ನೇ ರೂಪಿಸುತ್ತದೆ. ಯಾವುದೇ ಪ್ರದೇಶವಿರಲಿ, ಬಹುತೇಕವಾಗಿ ಪ್ರತೀ ಇಪ್ಪತ್ತೋ ಮೂವತ್ತೋ ಕಿಲೋಮೀಟರ್‌ಗೆ ಭಾಷೆಯಲ್ಲಿ ಭಿನ್ನತೆ ಕಂಡುಬರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಆಹಾರಕ್ಕೆ ಸಂಬಂಧಿಸಿದಂತೆಯೂ ವ್ಯತ್ಯಾಸಗಳಿರುವುದು ಕಾಣುತ್ತದೆ. ಇವೆರಡಕ್ಕೆ ಹೋಲಿಸಿದರೆ ವಸ್ತ್ರದಲ್ಲಿನ ಭಿನ್ನತೆಯು ರಾಜ್ಯ, ದೇಶಗಳ ಮಟ್ಟದಲ್ಲಿ ಮಾತ್ರ ಎದ್ದುತೋರುವಂಥದು. ಪ್ರತಿಯೊಂದು ಪ್ರದೇಶಕ್ಕೂ ಜನಸಮುದಾಯಕ್ಕೂ ತನ್ನತನವನ್ನು ತಂದುಕೊಡುವಂತಹ ಆಹಾರ-ಬಟ್ಟೆ-ಭಾಷೆಗಳು ವ್ಯಕ್ತಿ, ಸಮುದಾಯಗಳ ನಡುವೆ ಪರಸ್ಪರ ಸಂಘರ್ಷಗಳಿಗೆ ಎಡೆಮಾಡಿಕೊಡುವುದು, ಸೌಹಾರ್ದವನ್ನು ಕದಡುವುದು ವಿಷಾದಕರ ಸಂಗತಿ.

ಸೇವಿಸುವ ಆಹಾರ ಮತ್ತು ದೇಹ-ಮನಸ್ಸಿನ ಆರೋಗ್ಯದ ನಡುವಿನ ಅವಿನಾಭಾವ ಸಂಬಂಧವು ಈಗ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಸಸ್ಯಾಹಾರ, ಮಾಂಸಾಹಾರ ಎನ್ನುವುದು ಪ್ರಧಾನವಾದ, ಆದರೆ ಸಾಕಷ್ಟು ಹಳೆಯದಾದ ವಿಭಜನೆ. ಈಗ ಯಾರು, ಎಷ್ಟರ ಮಟ್ಟಿಗೆ ಶುದ್ಧ ಸಸ್ಯಾಹಾರಿ, ಶುದ್ಧ ಮಾಂಸಾಹಾರಿ ಎನ್ನುವುದೇ ಗೊಂದಲದ ಸಂಗತಿ. ಹಿತ್ತಲ ಒಳಹೊರಗೆ ಸಿಗುತ್ತಿದ್ದ, ಮನೆಯಂಗಳದಲ್ಲಿ ಬೆಳೆಸಿಕೊಂಡಿದ್ದ ತರಕಾರಿ-ಹಣ್ಣು-ಸೊಪ್ಪು-ದಂಟು-ಧಾನ್ಯ ಇತ್ಯಾದಿಗಳಿಗೆ ಸಾಕಿಕೊಂಡಿದ್ದ ಕುರಿ-ಕೋಳಿ-ಹಂದಿ ಮುಂತಾದ ಪ್ರಾಣಿಗಳು ಸೇರಿ, ಹತ್ತಿರದ ನದಿತೊರೆಗಳಿಂದ ಹಿಡಿದು ತರುತ್ತಿದ್ದ ಏಡಿ-ಸೀಗಡಿ-ಮೀನಿನಂತಹ ಜಲಚರಗಳು ಜೊತೆಗೂಡಿ, ಆಹಾರ ಸೇವನೆಯೆಂದರೆ, ನಿರ್ದಿಷ್ಟ ಋತುಮಾನದಲ್ಲಿ ಸುತ್ತಮುತ್ತ ಲಭ್ಯವಿದ್ದ ಪದಾರ್ಥಗಳನ್ನು ಪೌಷ್ಟಿಕತೆ, ಸ್ವಾದಾನುಸಾರ ಸಂಸ್ಕರಿಸಿ ದೇಹಪೋಷಣೆಗೆ ಒಗ್ಗಿಸಿಕೊಳ್ಳುವುದಷ್ಟೇ ಆಗಿತ್ತು. ಈಗ ಸನ್ನಿವೇಶ ಸಂಪೂರ್ಣವಾಗಿ ಬದಲಾಗಿದೆ. ತಂತ್ರಜ್ಞಾನದಲ್ಲಿನ ಪ್ರಗತಿ, ಸಾರಿಗೆ ವ್ಯವಸ್ಥೆ, ಸಂವಹನ ಮಾಧ್ಯಮ, ಜಾಹೀರಾತು, ವಾಣಿಜ್ಯೀಕರಣ, ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು, ಉದಾರೀಕರಣದ ನೀತಿ, ಸಿದ್ಧ ಆಹಾರವನ್ನು ಕ್ಷಿಪ್ರವಾಗಿ ಮನೆ ಬಾಗಿಲಿಗೆ ತಲುಪಿಸುವಂತಹ ವ್ಯಾಪಾರ ಚಟುವಟಿಕೆಗಳು ಇತ್ಯಾದಿ ಕಾಲಕ್ಕೆ ತಕ್ಕಂತೆ ಆದ ಬೆಳವಣಿಗೆಗೆ ಪೂರಕವಾಗಿ ಎಲ್ಲವೂ ತಮ್ಮ ತಮ್ಮ ನಿರ್ದಿಷ್ಟ ಸೀಮೆಯನ್ನು ದಾಟಿ ದಾಪುಗಾಲನ್ನಿಟ್ಟಾಗಿದೆ. ಇಂದು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿ ಏನನ್ನೇ ಆದರೂ ಪಡೆದುಕೊಳ್ಳಬಹುದಾದ ಸ್ಥಿತಿಯು ನಿರ್ಮಾಣವಾಗಿದೆ.

ಈರುಳ್ಳಿ-ಬೆಳ್ಳುಳ್ಳಿಯನ್ನು ಕೂಡ ನಿಷಿದ್ಧವೆಂದು ಭಾವಿಸುವ ಶಾಕಾಹಾರಿಗಳು, ಮೀನು ಮಾಂಸಾಹಾರ ವಲ್ಲವೆಂದು ಪರಿಗಣಿಸುವ ಸಸ್ಯಾಹಾರಿಗಳು, ಸಸ್ಯಾಹಾರಿ ಗಳಾಗಿದ್ದೂ ಮೊಟ್ಟೆಯನ್ನು ಮಾತ್ರ ಆಹಾರದ ಭಾಗವಾಗಿ ಒಪ್ಪುವವರು, ಹಾಲು-ಹೈನಿನಂತಹ ಪ್ರಾಣಿಜನ್ಯ ಪದಾರ್ಥ ಗಳನ್ನು ಕೂಡ ಸಂಪೂರ್ಣವಾಗಿ ನಿರಾಕರಿಸುವ ವೀಗನ್‌ ಸಮುದಾಯದವರು, ರಾಸಾಯನಿಕಮುಕ್ತ ನೈಸರ್ಗಿಕ, ಸಾವಯವ ಪದಾರ್ಥಗಳ ಬಳಕೆದಾರರು ಹೀಗೆ ಇತ್ತೀಚಿನ ದಿನಗಳಲ್ಲಿ ವಿಭಜನೆ ಮತ್ತಷ್ಟು ನಿರ್ದಿಷ್ಟ ಹಾಗೂ ಸೂಕ್ಷ್ಮ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಔಷಧ ಪದಾರ್ಥ, ಪ್ರಸಾಧನ ಸಾಮಗ್ರಿ ಮತ್ತು ಸಿದ್ಧ ತಿಂಡಿತಿನಿಸುಗಳಲ್ಲಿ ಸಾಮಾನ್ಯವಾಗಿ ಇದ್ದೇ ಇರುವ ಬಣ್ಣ, ಸ್ವಾದವರ್ಧಕ, ಸಂರಕ್ಷಕ ಇತ್ಯಾದಿ ನೈಸರ್ಗಿಕ ಹಾಗೂ ಕೃತಕ ಪದಾರ್ಥಗಳ ಮೂಲವನ್ನು ಹುಡುಕುತ್ತ ಹೋದಲ್ಲಿ ಈ ವಿಭಜನೆಗಳೆಲ್ಲ ಬಹುತೇಕ ಅರ್ಥ ಕಳೆದುಕೊಳ್ಳುತ್ತವೆ.

ಈ ಹಿನ್ನೆಲೆಯಲ್ಲಿ ಮಾನವನ ಆಹಾರ ಪದ್ಧತಿಯು ಆತನ ಸಂಸ್ಕೃತಿಯ ಭಾಗವೂ ಹೇಗಾಯಿತು ಎಂಬುದರ ಬಗ್ಗೆ ಆಲೋಚಿಸಬಹುದು. ಒಂದೊಂದು ಪ್ರದೇಶದಲ್ಲಿ ವಾಸವಾಗಿರುವ ಜನಸಮುದಾಯವೂ ಕಾಲಾನಂತರದಲ್ಲಿ ಅವಶ್ಯಕತೆಗನುಗುಣವಾಗಿ ಲಭ್ಯ ಸಂಪನ್ಮೂಲಗಳ ಆಧಾರದಲ್ಲಿ ಅನ್ವೇಷಣೆ, ಅನುಭವಗಳ ಮೂಲಕ ತನ್ನದೇ ಆದ ದೇಸೀ ಜ್ಞಾನ-ವಿವೇಕವನ್ನು ಒಟ್ಟುಗೂಡಿಸಿಕೊಂಡಿರುತ್ತದೆ. ವ್ಯಕ್ತಿ ಮತ್ತು ಒಟ್ಟಾರೆ ಸಮುದಾಯದ ಸ್ವಾಸ್ಥ್ಯಕ್ಕೆ ಹಾಗೂ ಕುಲ-ಪಂಗಡಗಳ ಮುಂದುವರೆಯುವಿಕೆಗೆ ಅದನ್ನು ಪಾಲಿಸುವುದು ಅಗತ್ಯ ಎನ್ನುವ ಧೋರಣೆಯೂ ಬೆಳೆಯುತ್ತದೆ.

ಸೂಕ್ತ ವೈದ್ಯಕೀಯ ನೆರವು, ಚಿಕಿತ್ಸೆಗಳಿಲ್ಲದಿದ್ದ ಕಾಲದಲ್ಲಿ, ರೋಗ ರುಜಿನಗಳು ಆಹಾರದ ಮೂಲಕವೂ ಬರುತ್ತಿದ್ದ ದಿನಗಳಲ್ಲಿ (ಈಗಲೂ) ಆಹಾರ ಸೇವನೆಗೆ ಸಂಬಂಧಿಸಿದಂತೆ ಕಟ್ಟುಪಾಡುಗಳು ಅನಿವಾರ್ಯ ವಾಗಿದ್ದವು. ಶರೀರದ ಸಂರಚನೆ-ಕಾರ್ಯಶೈಲಿಯ ಬಗ್ಗೆ, ಬಾಹ್ಯ ಪದಾರ್ಥಗಳಿಗೆ ಅದು ಪ್ರತಿಕ್ರಿಯಿಸುವ ರೀತಿಯ ಬಗ್ಗೆ ತಿಳಿವು ಹೆಚ್ಚಾದಂತೆಲ್ಲ ಆಹಾರ ಸೇವನೆಯ ನೀತಿನಿಯಮಗಳನ್ನು ರೂಪಿಸುವ ಕ್ರಮವೂ ಕಂಡುಬರತೊಡಗಿತು. ಆದರೆ ಕಟ್ಟಳೆಗಳನ್ನು ಪ್ರಶ್ನಿಸುವ, ಉಲ್ಲಂಘಿಸುವ ಮನೋಭಾವದ ಜನ ಎಲ್ಲ ಕಾಲದಲ್ಲಿಯೂ ಕಾಣಸಿಗುತ್ತಾರಲ್ಲ, ಆಗ ಸಹಾಯಕ್ಕೆ ಬಂದಿದ್ದು ಧಾರ್ಮಿಕತೆ ಹಾಗೂ ಸಾಮಾಜಿಕತೆ. ನೀತಿನಿಯಮಗಳನ್ನು ಪಾಲಿಸುವಂತೆ ಮಾಡಲು ದೇವರುದಿಂಡರು-ಪಾಪಪುಣ್ಯ-ಕರ್ಮ-ಪುನರ್ಜನ್ಮ ಮುಂತಾದ ಸಂಗತಿಗಳ ಭೀತಿ ನೆರವಿಗೆ ಬರುವಷ್ಟು ಬಹುಶಃ ಇನ್ಯಾವುದೂ ಬರುವುದಿಲ್ಲವೇನೋ. ಅದಕ್ಕೇ ಎಲ್ಲದಕ್ಕೂ ಪೂಜೆ-ಆರಾಧನೆ-ಹಬ್ಬ-ಆಚರಣೆ-ಸಂಭ್ರಮ-ಉತ್ಸವ-ನೇಮ-ನಿಷ್ಠೆ-ವ್ರತ-ನೋಂಪಿಗಳ ಚೌಕಟ್ಟು. ದಿನ-ವಾರ-ಮಾಸ-ಸಂವತ್ಸರ-ಋತು-ಕಾಲಗಳ ಇತಿಮಿತಿ. ಪ್ರತಿಯೊಂದು ಜಾತಿ-ಧರ್ಮ-ಕುಲ-ಪಂಗಡಗಳಿಗೆ ಈ ನೀತಿನಿಯಮಗಳು ಬೇರೆಯಾಗಿರುವಂತೆ ಕಂಡರೂ ಎಲ್ಲವುಗಳ ಮೂಲ ಉದ್ದೇಶ ಮಾತ್ರ ಒಂದೇ.

ವರ್ಷಾನುಗಟ್ಟಲೆ ನಿಯತವಾಗಿ ಪಾಲಿಸಲ್ಪಟ್ಟ ಆಚರಣೆಯೊಂದು ಮುಂದೆ ಉತ್ಸವದ ರೂಪದಲ್ಲಿಯೋ ಹಬ್ಬಹರಿದಿನವಾಗಿಯೋ ನಿರ್ದಿಷ್ಟ ಸಮುದಾಯ-ಕುಲ-ಪಂಗಡಗಳ ಬದುಕಿನ ಅವಿಭಾಜ್ಯ ಅಂಗವಾಗಿಹೋಗುತ್ತದೆ, ಸಂಸ್ಕೃತಿಯ ಕುರುಹಾಗಿಬಿಡುತ್ತದೆ. ಹುಟ್ಟು, ಬೆಳವಣಿಗೆಗಳ ಕಾರಣ ಯಾವುದನ್ನು ತನ್ನದೆಂದುಕೊಳ್ಳಲಾಗಿದೆಯೋ ಅದನ್ನು ಬಿಡದೆ ಪಾಲಿಸುವ ಆಂತರಿಕ ಬಯಕೆ ಹಾಗೂ ಶಿಕ್ಷಣ, ಉದ್ಯೋಗ, ಪ್ರಯಾಣ, ಆರ್ಥಿಕ-ಸಾಮಾಜಿಕ-ರಾಜಕೀಯ ಸ್ಥಿತಿಗತಿಗಳೇ ಮೊದಲಾದ ಪರಿಸರದ ಪ್ರಭಾವಕ್ಕೆ ಒಳಗಾಗಿ ತನ್ನದಲ್ಲದುದನ್ನು ಮೈಗೂಡಿಸಿಕೊಳ್ಳಬೇಕಾದ ಬಾಹ್ಯ ಒತ್ತಡಗಳ ನಡುವೆ ಆಧುನಿಕ ಮನುಷ್ಯ ಇವೆಲ್ಲದಕ್ಕೂ ಭಿನ್ನವಾದುದೇನೋ ಆಗಿ ಮಾರ್ಪಾಟಾಗುತ್ತಿದ್ದಾನೆಯೇ? ಒಂದೊಮ್ಮೆ ಹಾಗಾದರೆ, ಅದರ ಪರಿಣಾಮವೇನು? ಇದು ಒಳಿತಿಗೋ, ಕೆಡುಕಿಗೋ?

ಇದು ಹೀಗೇ ಎಂದು ಅಂತಿಮ ತೀರ್ಪು ಬರೆಯುವ ಮುನ್ನ ಬೆಳೆದುಬಂದ ಆಹಾರ ಪದ್ಧತಿಯ ಹಿನ್ನೆಲೆ, ಆಚರಣೆಯ ಮೂಲ ಮತ್ತು ಅದರ ಉದ್ದೇಶಗಳನ್ನು ತೆರೆದ ಮನಸ್ಸಿನಿಂದ ಸೂಕ್ಷ್ಮವಾಗಿ ಗಮನಿಸಿದರೆ, ಸಂಸ್ಕೃತಿಯ ಭಾಗವಾಗುವಷ್ಟು ಮಹತ್ವ ಅವುಗಳಿಗೇಕಿದೆ ಎನ್ನುವುದು ನಮ್ಮ ಅರಿವಿಗೆ ಬಂದೀತು. ಆಹಾರದೊಡನೆ ಬೆಸೆದುಕೊಂಡಿರುವ ಆಚರಣೆಗಳನ್ನು ಗೊಡ್ಡು, ಸಂಪ್ರದಾಯವಾದಿ ಎಂದು ಸಾರಾಸಗಟಾಗಿ ತಿರಸ್ಕರಿಸುವುದರ ಬದಲಾಗಿ ಅವುಗಳ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸಿದರೆ, ಕೌಟುಂಬಿಕ, ಸಾಮಾಜಿಕ ಸೌಹಾರ್ದಕ್ಕೆ ಅವುಗಳ ಕೊಡುಗೆಯನ್ನು ಪರಿಗಣಿಸಿದರೆ, ಸಂಘರ್ಷಕಾರಿ ಮನಃಸ್ಥಿತಿ ಬದಲಾದೀತು. ಕಾಲ-ದೇಶ-ಸನ್ನಿವೇಶಕ್ಕನುಗುಣವಾಗಿ ಎಲ್ಲ ಸಂಗತಿಗಳ ಹಾಗೆ ಆಹಾರಕ್ರಮವೂ ಬದಲಾಗುವುದು ಸಹಜ ಎಂದು ಭಾವಿಸಿದರೆ, ಬದುಕು ಸುಗಮವಾದೀತು. ಅಂತಿಮವಾಗಿ ತನಗೇನು ಬೇಕು, ಏಕೆ ಬೇಕು ಎಂದು ನಿರ್ಧರಿಸುವ ಹಕ್ಕು ವ್ಯಕ್ತಿಯದು, ಅದಕ್ಕೇ ಆಯ್ಕೆಯೂ ಅವನದೇ.

ಈ ಹಿನ್ನೆಲೆಯಲ್ಲಿ ಆಚರಣೆಯಲ್ಲಿರುವ ಹಲವಾರು ಸಂಪ್ರದಾಯ, ಪದ್ಧತಿಗಳನ್ನು ನೋಡಬಹುದು. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಕರ್ನಾಟಕದ ಮನೆಮನೆಗಳಲ್ಲಿ ಎಳ್ಳುಬೆಲ್ಲ, ಕಬ್ಬಿನ ತುಂಡುಗಳನ್ನು ಹಂಚುವ ಪದ್ಧತಿಯಿದೆ. ಚಳಿಗಾಲದಲ್ಲಿ ಶುಷ್ಕವಾಗುವ ಚರ್ಮಕ್ಕೆ ತೈಲಾಂಶವಿರುವ ಎಳ್ಳು, ಕಬ್ಬಿಣಾಂಶವಿರುವ ಬೆಲ್ಲ ಏಕೆ ಬೇಕೆನ್ನುವುದು ಸ್ಪಷ್ಟ. ಹಂಚಿ ತಿನ್ನುವ ಸಂಪ್ರದಾಯದ ಕಾರಣ ಅವುಗಳನ್ನು ಕೊಳ್ಳಲು ಸಾಮರ್ಥ್ಯವಿಲ್ಲದವರಿಗೂ ಅವು ಸಿಗುವಂತಾಗಿ ಪ್ರೀತಿ, ಆತ್ಮೀಯತೆಯೂ ಹೆಚ್ಚುತ್ತಿತ್ತು. ಸಂಕ್ರಾಂತಿಗೂ ಮೊದಲು ಬರುವ ಧನುರ್ಮಾಸದಲ್ಲಿ ಕೆಲ ದಿನಗಳಾದರೂ ಹುಣಿಸೇಹಣ್ಣಿನ ಸಿಹಿ ಗೊಜ್ಜಿನ ಜೊತೆಗೆ ಹೆಸರು ಬೇಳೆಯ ಹುಗ್ಗಿಯನ್ನು (ಪೊಂಗಲ್‌) ಬೆಳಗಿನ ಜಾವದಲ್ಲಿಯೇ ಸೇವಿಸುವ ಪದ್ಧತಿ ಮಲೆನಾಡಿನ ಪ್ರದೇಶಗಳಲ್ಲಿತ್ತು.

ಉತ್ತರಭಾರತದಲ್ಲಿ ತೀವ್ರ ಚಳಿಯ ಕಾರಣ ಮನೆಯಲ್ಲಿಯೇ ಇದ್ದು ಸೂರ್ಯಕಿರಣಗಳಿಂದ ವಂಚಿತರಾದ ಜನರಿಗೆ ಜನವರಿಯ ಹದವಾದ ಬಿಸಿಲಿನಲ್ಲಿ ಖರ್ಜೂರ ಮೆಲ್ಲುತ್ತ ಗಾಳಿಪಟ ಹಾರಿಸಿ ಎಲ್ಲರೊಡನೆ ಸಂಭ್ರಮಿಸುವುದು ಎಷ್ಟು ಮುಖ್ಯವೆನ್ನುವುದು ಅರಿವಾಗುತ್ತದೆ. ಯುಗಾದಿಯಲ್ಲಿ ತಿನ್ನುವ ಬೇವುಬೆಲ್ಲದ ಮಹತ್ವವಂತೂ ತಿಳಿದಿದ್ದೇ. ಚೈತ್ರಮಾಸದ ಮೊದಲ ದಿನದಿಂದ ಆರಂಭಿಸಿ, ಒಂದು ತಿಂಗಳ ಕಾಲ ಬೆಳಿಗ್ಗೆ ಎದ್ದ ಕೂಡಲೇ ಬೇವಿನ ಎಲೆ, ಬೆಲ್ಲದಿಂದ ತಯಾರಿಸಿದ ಗೋಲಿಗಾತ್ರದ ಉಂಡೆಯನ್ನು ತಿನ್ನುವ ರೂಢಿ ಗುಜರಾತಿಗಳಲ್ಲಿದೆ. ಬೇಸಿಗೆಯಲ್ಲಿ ತಲೆದೋರುವ ದಡಾರ, ಸಿಡುಬುಗಳಂತಹ ವೈರಾಣು ರೋಗಗಳ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತಿತ್ತು.

ಮತ್ತೊಂದು ಉದಾಹರಣೆಯೆಂದರೆ, ಆಷಾಢ ಮಾಸದಲ್ಲಿ ಆಚರಿಸುವ ಆಟಿ ಅಮವಾಸ್ಯೆ. ತುಳುನಾಡಿನಲ್ಲಿ ಹಾಲೆಮರದ ತೊಗಟೆಯಿಂದ ತಯಾರಿಸುವ ಕಷಾಯವನ್ನು ಸೇವಿಸುವ ಪರಿಪಾಟವಿದ್ದರೆ, ಕೊಡಗಿನಲ್ಲಿ ಆಟಿ ಸೊಪ್ಪಿನ ರಸವನ್ನು ಸೇರಿಸಿ ತಯಾರಿಸಿದ ಪಾಯಸವನ್ನು ಸೇವಿಸುವ ಪದ್ಧತಿಯಿದೆ. ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೆಂದೇ ಇವುಗಳನ್ನು ಸೇವಿಸುವ ರೂಢಿ ಬೆಳೆದುಬಂದಿದೆ. ಉತ್ತರ ಕರ್ನಾಟಕದಲ್ಲಿ ಆಚರಿಸುವ ನಾಗರಪಂಚಮಿಯಲ್ಲಿ ನೈವೇದ್ಯಕ್ಕೆ ನಿರ್ದಿಷ್ಟ ಖಾದ್ಯಗಳೇ ಆಗಬೇಕೆಂಬ ಸಂಪ್ರದಾಯವಿರುವಂತೆ ಬಂಗಾಲಿ ಮತ್ತು ಒಡಿಯಾ ಜನರು ಆಚರಿಸುವ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಪ್ರತೀ ವಾರ ವಿಭಿನ್ನ ಭೋಗ್‌ ಅನ್ನು ಅರ್ಪಿಸುವ ಪರಿಪಾಟವಿದೆ.

ನೆಲದಡಿ ಬೆಳೆಯುವ ಗಡ್ಡೆಗೆಣಸುಗಳನ್ನು ತಿನ್ನದ ಶ್ವೇತಾಂಬರ ಪಂಥದ ಜೈನ ಧರ್ಮೀಯರು ಸೊಪ್ಪು ತರಕಾರಿ ಹಸಿಮೆಣಸು ಮೊದಲಾದ ಹಸಿರು ಪದಾರ್ಥಗಳನ್ನು ಭಾದ್ರಪದ ಮಾಸದ ಒಂದಿಡೀ ತಿಂಗಳ ಕಾಲ ತಮ್ಮ ಆಹಾರದಲ್ಲಿ ಬಳಸುವುದಿಲ್ಲ. ಮಳೆಗಾಲದಲ್ಲಿ ಕ್ರಿಮಿಕೀಟಗಳು ಹೆಚ್ಚುತ್ತವೆ, ಜೊತೆಗೆ ಸಸ್ಯಗಳಲ್ಲಿ ನೈಸರ್ಗಿಕವಾಗಿ ಉತ್ಪನ್ನವಾಗುವ ವಸ್ತುವಿನಿಂದಾಗಿ ಇವು ಮಾನವ ಸೇವನೆಗೆ ಉಚಿತವಲ್ಲ ಎನ್ನುವ ವೈಜ್ಞಾನಿಕ ಅಂಶವನ್ನು ಅಂದಿನ ಜನ ತಿಳಿದಿದ್ದರೆನ್ನುವುದು ಬೆರಗು ಮೂಡಿಸುವ ಸಂಗತಿ.

ಕೆಲವೆಡೆ ದೀಪಾವಳಿಗೂ ಮೊದಲು ಆಚರಿಸುವ ಭೂಮಿಹುಣ್ಣಿಮೆಯ ಆಚರಣೆಯಲ್ಲಿ ಹಲವಾರು ವಿಧದ ಸೊಪ್ಪುಗಳನ್ನು ಬಳಸಿ ಪಲ್ಲೆಯನ್ನು ತಯಾರಿಸಿ ನೈವೇದ್ಯ ಮಾಡಿ ಸ್ವೀಕರಿಸುವುದಲ್ಲದೇ ಅವುಗಳನ್ನು ಹೊಲಗದ್ದೆಗಳಿಗೂ ಬೀರುವ ಸಂಪ್ರದಾಯ ಕೃಷಿ ಸಮುದಾಯದಲ್ಲಿದೆ. ಇದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೇ ಮಿಡತೆ, ಹಕ್ಕಿ ಮುಂತಾದವುಗಳ ಗಮನವನ್ನು ಬೇರೆಡೆ ಸೆಳೆದು ಬೆಳೆಯನ್ನು ರಕ್ಷಣೆ ಮಾಡುತ್ತದೆ ಎನ್ನುವುದು ಆಚರಣೆಯ ಹಿಂದಿರುವ ಉದ್ದೇಶ.

ಇಂದು ಮನುಷ್ಯ ತಾನು ರೂಢಿಸಿಕೊಂಡಿದ್ದ ಆಹಾರ ಪದ್ಧತಿಯನ್ನು ತಾನೇ ಮೀರಿ, ದೇಶ-ಕಾಲ-ಸನ್ನಿವೇಶಗಳ ಗಡಿಮಿತಿಯನ್ನು ದಾಟಿ, ಬದುಕಿನ ಬೇರೆಲ್ಲ ಮುಖ್ಯ ಸಂಗತಿಗಳ ಹಾಗೆಯೇ ಸಂಕರಿತ ಶೈಲಿಯೊಂದನ್ನು ತನ್ನದಾಗಿಸಿಕೊಳ್ಳುತ್ತಿದ್ದಾನೆ, ತಾನೇ ಸೃಷ್ಟಿಸಿಕೊಂಡಿದ್ದ ಭೇದಭಾವ-ತಾರತಮ್ಯಗಳನ್ನೆಲ್ಲ ಬದಿಗೊತ್ತಿ, ತಿಂದುಂಡು ಸುಖವಾಗಿರುವುದಷ್ಟೇ ಬದುಕಿನ ಪರಮಸತ್ಯವೆನ್ನುವ ಹಂತವನ್ನು ತಲುಪಿದ್ದಾನೆ. ಇಲ್ಲಿಂದ ಮುಂದೆ ಆತನ ನಡೆ ಹೇಗಿರುತ್ತದೆ ಎನ್ನುವುದು ಕೌತುಕದ ಸಂಗತಿ.

ಆಧುನಿಕ ಜೀವನಶೈಲಿ, ವಿಶಾಲ ಪ್ರಪಂಚದ ವೈವಿಧ್ಯಮಯ ಸಂಗತಿಗಳಿಗೆ ತೆರೆದುಕೊಂಡ ಬದುಕು, ಹೊಸದಕ್ಕೆ ಒಡ್ಡಿಕೊಳ್ಳುವ ಮನೋಭಾವ, ಆರ್ಥಿಕ ಸಬಲತೆ ಮುಂತಾದವುಗಳ ಕಾರಣ ಬದಲಾವಣೆಗಳಿಲ್ಲದ ಬದುಕನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಬದಲಾವಣೆ-ಬದಲಾವಣೆಯ ಕುರಿತಾದ ಹೆಬ್ಬಯಕೆ ಎನ್ನುವುದೊಂದೇ ಬದುಕಿನ ನಿತ್ಯಸತ್ಯ. ಆಹಾರ ತಯಾರಿಕೆ, ಸೇವನೆಗಳ ರೀತಿನೀತಿಯೇ ಬದಲಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಸಂಸ್ಕೃತಿಯೊಂದಿಗಿನ ಅದರ ನಂಟೇನೂ ಬದಲಾಗುವುದಿಲ್ಲ. ಸಂಸ್ಕೃತಿಯೇ ಬದಲಾಗಿರುತ್ತದೆ ಅಷ್ಟೆ. ಸೇವಿಸುವ ಆಹಾರ, ಆಚರಿಸುವ ಸಂಪ್ರದಾಯಗಳ ಆಧಾರದ ಮೇಲೆ ಜನರ ಜಾತಿ-ಧರ್ಮ-ಪಂಗಡಗಳನ್ನು ನಿರ್ಧರಿಸಿ, ವ್ಯವಹರಿಸುವ ಸಂಪ್ರದಾಯಕ್ಕೆ, ವೈವಿಧ್ಯಮಯ ಬದುಕಿನ ಶೈಲಿಗೆ ಹಾಡುತ್ತಿರುವ ಚರಮಗೀತೆಯೋ ಏಕರೂಪದ ಜೀವನಕ್ರಮಕ್ಕೆ, ಆಹಾರ ಪದ್ಧತಿಗೆ ಹಾಡುತ್ತಿರುವ ನಾಂದಿಪದ್ಯವೋ ಎನ್ನುವುದೂ ಅರ್ಥವಾಗದಂತಹ ಬೆಳವಣಿಗೆಗಳು ಇತ್ತೀಚೆಗೆ ಕಂಡುಬರುತ್ತಿವೆ:

ನಮ್ಮ ವಸತಿ ಸಂಕೀರ್ಣದ ಭದ್ರತಾ ಸಿಬ್ಬಂದಿಯೊಬ್ಬ, ದ್ವಿಚಕ್ರವಾಹನದವನೊಬ್ಬನನ್ನು ಕೂಗಿ ಕರೆಯುತ್ತಿದ್ದ, ‘ಓ ಡಂಜೊ ಭಾಯ್!’

ಇಲ್ಲಿಗೆ, ಭವಿಷ್ಯದ ಚಿತ್ರಣ ಸ್ಪಷ್ಟವಾಯಿತು ಅಂದುಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT