ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಯಾಮ... ಹಲವು ಆಯಾಮ! ಹ್ಞಾಂ.. ದೇಹ ಕಟಿಯಲು ಹೊರಟವರು ಇದನ್ನೊಮ್ಮೆ ಓದಿ ಬಿಡಿ

ವಿರಾಮ ಪುರವಣಿ ಲೇಖನ
Last Updated 20 ನವೆಂಬರ್ 2021, 22:00 IST
ಅಕ್ಷರ ಗಾತ್ರ

(ಜಿಮ್‌ಗೆ ಹೋಗಿ ಭಾರ ಎತ್ತಿಯೇ ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕು ಎಂದೇನೂ ಇಲ್ಲ. ಅದಕ್ಕೆ ದಾರಿ ನೂರಾರುಂಟು. ಏನು ಕಸರತ್ತು ಮಾಡಿದರೂ ಊಟಾಹಾರ ಸರಿಯಾಗಿರಬೇಕು, ಪರಿಣತರನ್ನು ಕೇಳಿಯೇ ಮುನ್ನಡೆಯಬೇಕು ಎನ್ನುವುದಕ್ಕೆ ಅಡಿಗೆರೆ ಎಳೆಯಬೇಕು. ಹ್ಞಾಂ, ದೇಹ ಕಟೆಯಲು ಹೊರಟವರು ಇದನ್ನೊಮ್ಮೆ ಓದಿಬಿಡಿ...)

ಎತ್ತರದ ಕಟ್ಟಾಳುವಿನಂತಿದ್ದ ಹಿರಿಯ ನಟ ಲೋಕನಾಥ್ ಹಿಂದೊಮ್ಮೆ ಕೆ.ವಿ. ಅಯ್ಯರ್ ವ್ಯಾಯಾಮ ಶಾಲೆಯ ಅನುಭವಗಳನ್ನು ಹೇಳಿಕೊಂಡಿದ್ದರು. ಅಲ್ಲಿ ಯುವಕರು ಬರೀ ಸಾಮು ಮಾಡುತ್ತಿರಲಿಲ್ಲ. ಭಟ್ಟಿ ಎಳೆಯುತ್ತಿರಲಿಲ್ಲ. ಮನಸ್ಸಿಗೂ ಸಾರ ಇಳಿಸಿಕೊಳ್ಳುತ್ತಿದ್ದರು. ಸಾಹಿತ್ಯ, ರಂಗಭೂಮಿ ಕುರಿತ ಮಾತುಕತೆಗೂ ಅದು ಚಾವಡಿ. ಈಗ ದೇಹವ ದೇಗುಲ ಎಂದುಕೊಂಡವರ ಬಾಯಲ್ಲಿ ‘ಫಿಟ್‌ನೆಸ್ ಪರ್ಯಾಯ’ಗಳದ್ದೇ ಮಾತು. ಪುನೀತ್ ರಾಜ್‌ಕುಮಾರ್ ಅಷ್ಟೆಲ್ಲ ಶ್ರದ್ಧೆಯಿಂದ ದೇಹ ದಂಡಿಸಿ, ಮನಸ್ಸನ್ನು ಶುದ್ಧವಾಗಿಟ್ಟುಕೊಂಡೂ ದಿಢೀರನೆ ಅಗಲಿದರಲ್ಲ. ಫಿಟ್‌ನೆಸ್‌ ಪರ್ಯಾಯದ ಮಾತು ಕುದಿಬಿಂದುವಿನ ಮಟ್ಟಕ್ಕೆ ಏರಲು ಬೇರೇನು ಕಾರಣ ಬೇಕು?

ಕೋವಿಡ್ ಬಂದಮೇಲೆ ತಿಂಗಳುಗಟ್ಟಲೆ ದಣಿದ ದೇಹವ ಮುದುಡಿಸಿಕೊಂಡೇ ಇದ್ದವರ ನಡುವೆ ನಟ, ಮಾಡೆಲ್ ಮಿಲಿಂದ್ ಸೋಮನ್ ಒಂದು ಪ್ರಾತ್ಯಕ್ಷಿಕೆ ಕೊಟ್ಟರು. ಅದು ಅವರದ್ದೇ ಕ್ಷಮತೆಯ ಪರೀಕ್ಷೆಯಾಗಿತ್ತು. ಇದೇ ವರ್ಷ ಏಪ್ರಿಲ್ ಮೊದಲ ವಾರದವರೆಗೆ ಕೋವಿಡ್‌ನಿಂದಾಗಿ ವ್ಯಾಯಾಮಕ್ಕೆ ಅವರು ಅಲ್ಪವಿರಾಮ ಹಾಕಿದ್ದರು. ಅದೊಂದು ದಿನ ಬೆಳಿಗ್ಗೆ ಎದ್ದವರೇ 5 ಕಿ.ಮೀ. ಓಡಿದರು. ತಮ್ಮ ಪತ್ನಿಯಿಂದಲೇ ಓಟದ ವಿಡಿಯೊ ಚಿತ್ರೀಕರಣ ಮಾಡಿಸಿದರು. 40 ನಿಮಿಷಗಳಲ್ಲಿ ಅವರು ಓಟ ಪೂರೈಸಿದ್ದರು. ತಮ್ಮ ಓಟದ ವಿಡಿಯೊವನ್ನು ತಾವೇ ನೋಡಿ, ‘ನಾಟ್ ಬ್ಯಾಡ್’ ಎಂದು ಉದ್ಗರಿಸಿದ್ದೇ ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಾಕಿಕೊಂಡರು. ಐವತ್ತೈದರ ಹರೆಯದಲ್ಲಿ ಅವರ ಈ ಫಿಟ್‌ನೆಸ್‌ ಟೆಸ್ಟ್‌ ಎಂಥವರಿಗೂ ಮಾದರಿ.

ಕೋವಿಡ್ ಸೋಂಕಿಗೊಳಗಾದವರ ಶ್ವಾಸಕೋಶದ ಚಟುವಟಿಕೆ ಮೊದಲಿನಂತೆ ಇರುವುದಿಲ್ಲ, ರಕ್ತ ಹೆಪ್ಪುಗಟ್ಟುವಿಕೆಯ ಮೇಲೂ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎಂಬ ಅಭಿಪ್ರಾಯಗಳಿವೆ. ಅವುಗಳ ಬಗೆಗೆ ನಿಯಮಿತ ಪರೀಕ್ಷೆಗೆ ಒಳಪಡುತ್ತಲೇ, ತಮ್ಮ ದೈನಂದಿನ ಫಿಟ್‌ನೆಸ್‌ ಚಟುವಟಿಕೆಗಳಿಗೆ ಹೊರಳಿಕೊಳ್ಳಬೇಕು ಎನ್ನುವುದು ಮಿಲಿಂದ್ ಸಂಕಲ್ಪ.

ಜಿಮ್‌ನಲ್ಲಿ ಭಾರ ಎತ್ತುವುದರಿಂದಷ್ಟೇ ದೇಹ ಕಟೆಯಬೇಕು ಎನ್ನುವ ಯುವಮನದ ಉತ್ಸಾಹ ಈಗ ಕಾಣುತ್ತಿದೆ. ಆದರೆ, ಅದಕ್ಕೆ ಪರ್ಯಾಯವಾದ ಬರ್ಪೀಸ್, ಫ್ಲ್ಯಾಂಕ್ಸ್‌, ಪುಷ್‌–ಅಪ್ಸ್, ಮೌಂಟೇನ್ ಕ್ಲೈಂಬರ್ಸ್, ಸ್ಕ್ವಾಟ್ಸ್‌ ಇವೆಲ್ಲವನ್ನೂ ಜಿಮ್‌ಗೆ ಹೋದವರಿಗೂ ಹೇಳಿಕೊಡಲಾಗುತ್ತಿದೆ. ಇವು ಭಾರ ಎತ್ತುವುದನ್ನು ಬಿಟ್ಟು ಮಾಡಬಹುದಾದ ವ್ಯಾಯಾಮಗಳು. ತನ್ನ ದೇಹತೂಕವನ್ನು ಅವಯವಗಳು ನಿಭಾಯಿಸುವಂತೆ ಮಾಡಬಹುದಾದ ಇಂತಹ ಕಸರತ್ತುಗಳಿಗೆ ಫಿಟ್‌ನೆಸ್‌ ಗುರುಗಳು ಹೆಚ್ಚು ಒತ್ತುನೀಡುತ್ತಾರೆ.

ಝುಂಬಾ, ಪವರ್‌ಯೋಗ, ಏರೋಬಿಕ್ಸ್, ಸ್ಕಿಪ್ಪಿಂಗ್, ಈಜು, ಬ್ಯಾಡ್ಮಿಂಟನ್ ತರಹದ ಹೊರಾಂಗಣ ಆಟಗಳು, ಬಿರುನಡಿಗೆ ಅಥವಾ ಬ್ರಿಸ್ಕ್ ವಾಕ್, ಸೊಂಟ ಹಾಗೂ ಪೃಷ್ಟದ ಭಾಗಗಳನ್ನು ಗಿರಗಿರನೆ ತಿರುಗಿಸುವ ಹುಲಾ ಹೂಪ್, ಕಿಕ್‌ ಬಾಕ್ಸಿಂಗ್, ರೋಲರ್ ಸ್ಕೇಟಿಂಗ್ ಇವೆಲ್ಲವೂ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಇರುವ ಪರ್ಯಾಯಗಳು. ಇವುಗಳಲ್ಲಿ ಬಹುತೇಕವು ನಗರ ನಾಗರಿಕತೆಯ ಭಾಗಗಳೇ ಆಗಿವೆ.

ಪ್ರತಿ ದೇಹವೂ ಭಿನ್ನ ಎಂದೇ ವೈದ್ಯಲೋಕ ವಿಶ್ಲೇಷಿಸುತ್ತದೆ. ಹೀಗಾಗಿ ವ್ಯಾಯಾಮ ಮಾಡುವ ಮೊದಲು ತನ್ನತನವನ್ನು ಭೌತಿಕವಾಗಿ, ಆರೋಗ್ಯದ ದೃಷ್ಟಿಯಿಂದ ಅರಿಯುವುದು ಒಳಿತು. ಹೃದ್ರೋಗ ಇರಲಿ ಬಿಡಲಿ, ವ್ಯಾಯಾಮಕ್ಕೆ ಏರೋಬಿಕ್ಸ್ ತರಹದ ಚಟುವಟಿಕೆಯೇ ಅತ್ಯುತ್ತಮ ಎಂದು ಹೃದಯ, ರಕ್ತನಾಳ ಮತ್ತು ಎದೆರೋಗಗಳ ತಜ್ಞರಾದ, ದಾವಣಗೆರೆಯ ಡಾ. ಎಚ್‌.ಎಲ್.ಸುಬ್ಬರಾವ್ ಕಿವಿಮಾತು ಹೇಳುತ್ತಾರೆ.

ಜಿಮ್‌ನಲ್ಲಿ ಭಾರ ಎತ್ತುವ ಮೂಲಕ ದೇಹ ಕಟೆಯುವುದನ್ನು ಅವರು ‘ಐಸೋಮೆಟ್ರಿಕ್ ವ್ಯಾಯಾಮ’ ಎಂದು ವಿಶ್ಲೇಷಿಸುತ್ತಾರೆ. ಒಂದೇ ಸ್ಥಿತಿಯಲ್ಲಿ ನಿಂತು ಮಾಡುವ ಈ ವ್ಯಾಯಾಮದಿಂದ ಸ್ನಾಯುಗಳೇನೋ ಗಟ್ಟಿಯಾಗುತ್ತವೆ. ಆದರೆ, ಕೀಲುಗಳು ಹಾಗೂ ಅವುಗಳ ಸುತ್ತಲಿನ ಸ್ನಾಯುಗಳ ಸ್ಥಿತಿಸ್ಥಾಪಕತ್ವ ಹಾಳಾಗುತ್ತದೆ. ಶಟಲ್ ಆಡಿದರೆ ನಮ್ಮ ಇಡೀ ದೇಹ ಚಟುವಟಿಕೆಗೆ ಒಳಪಡುತ್ತದೆ. ಕೈಗಳು, ಕಾಲುಗಳು, ಜ್ಞಾನೇಂದ್ರಿಯಗಳೆಲ್ಲ ಆ ಆಟದಲ್ಲಿ ತೊಡಗುತ್ತವೆ. ಹೀಗಾದಾಗ ಸ್ನಾಯುಗಳ ಚಲನೆ, ಕೀಲುಗಳ ವರ್ತನೆ ಅತಿ ಆರೋಗ್ಯವಾಗಿ ಇರುತ್ತದೆ. ಹೃದಯದ ತಾಳಿಕೊಳ್ಳುವಿಕೆಗೆ ಅಥವಾ ಪ್ರತಿರೋಧ ಸಾಮರ್ಥ್ಯಕ್ಕೆ ಇಂತಹ ಚಟುವಟಿಕೆಯೇ ಸರಿ ಎನ್ನುವುದು ಸುಬ್ಬರಾವ್ ಮಾತು.

ರಕ್ತದೊತ್ತಡ ಹೆಚ್ಚಾಗಿರುವ, ಮಧುಮೇಹದ ಸಮಸ್ಯೆ ಇರುವ ಯುವಕರಾಗಲೀ, ವಯಸ್ಸಾದವರಾಗಲೀ ಭಾರ ಎತ್ತುವ ವ್ಯಾಯಾಮಗಳನ್ನು ಮಾಡಲೇಕೂಡದು ಎನ್ನುವುದು ಅವರ ಖಚಿತ ಸಲಹೆ. ಅವರು ಹೇಳುವಂತೆ, ಸಾಮಾನ್ಯವಾಗಿ ಜಿಮ್‌ನಲ್ಲಿ ವ್ಯಾಯಾಮ ಮಾಡುವವರ ದೇಹ ‘ವಿ’ ಆಕಾರದಲ್ಲಿ ಇರುತ್ತದೆ, ಭುಜ–ತೋಳುಗಳು, ವಕ್ಷಸ್ಥಳ, ಟ್ರೈಸಿಪ್ಸ್‌ ಎಲ್ಲವೂ ಕಟೆದಂತೆ. ಸ್ನಾಯುಗಳೆಲ್ಲ ಗಟ್ಟಿಯಾಗಿ ನೋಡಲು ಮೋಹಕವೆನ್ನಿಸುವ ಆಕಾರ ದೊರೆಯುತ್ತದೆ. ಆದರೆ, ಕಾಲಿನ ಸ್ನಾಯುಗಳನ್ನು ಇದೇ ರೀತಿ ಬರೀ ಗಟ್ಟಿ ಮಾಡಿದರೆ ಸಾಲದು. ಭಾರವನ್ನು ಕಾಲಿನ ಪಾದಗಳಿಂದ ತುಳಿದು, ನೂಕುವುದೂ ಕಸರತ್ತಿನ ವರಸೆ. ಇದರಿಂದ ಸ್ನಾಯು ಗಟ್ಟಿಯಾಗಿ ಶೇಪ್ ಬರಬಹುದೇ ವಿನಾ ಒಳಗಿನ ರಕ್ತ ಪರಿಚಲನೆ ಉತ್ತಮ ರೀತಿಯಲ್ಲಿ ಇರುವುದಿಲ್ಲ. ಅದಕ್ಕೆ ಟ್ರೆಡ್‌ಮಿಲ್‌, ಬ್ರಿಸ್ಕ್‌ ವಾಕ್‌, ಜಾಗಿಂಗ್ ಅತ್ಯಗತ್ಯ.

‘ದೇಹದ ಕೆಳಗಿನ ಭಾಗದ ರಕ್ತ ಪರಿಚಲನೆಯನ್ನು ಡಯಸ್ಟಾಲಿಕ್ ಎನ್ನುತ್ತೇವೆ, ಮೇಲಿನದ್ದು ಸಿಸ್ಟಾಲಿಕ್. ಕೆಲವರು ಹೆಸರಿಗಷ್ಟೇ ಟ್ರೆಡ್‌ಮಿಲ್ ಮಾಡುತ್ತಾರೆ. ಯಾರು ಭಾರ ಎತ್ತದೆ ಪರ್ಯಾಯ ವ್ಯಾಯಾಮಗಳನ್ನಷ್ಟೇ ಮಾಡುತ್ತಾರೋ ಅಂಥವರಲ್ಲಿ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಪರ್ಯಾಯ ವ್ಯಾಯಾಮಗಳಷ್ಟೇ ಅಲ್ಲದೆ ಉಸಿರಾಟವನ್ನು ಉತ್ತಮಗೊಳಿಸುವ ಪ್ರಾಣಾಯಾಮ, ಸ್ನಾಯುಗಳ ಬಾಗುವಿಕೆಗೆ ಪೂರಕವಾದ ಯೋಗ ಕೂಡ ಬೇಕು’ ಎನ್ನುತ್ತಾರೆ ಡಾ. ಸುಬ್ಬರಾವ್.

ವ್ಯಾಯಾಮದ ವಿಷಯ ಇದಾಯಿತು. ಇನ್ನು ಊಟ–ತಿಂಡಿಯ ತಥ್ಯ. ಎಲ್ಲರಿಗೂ ಇರುವುದಿಲ್ಲ ಒಂದೇ ರೀತಿಯ ಪಥ್ಯ ಎಂದೇ ಎಚ್ಚರಿಕೆಯ ದನಿಯ ಸಮೇತ ಮಾತಿಗೆ ತೆರೆದುಕೊಂಡರು ಡಯಟಿಷಿಯನ್ ಶೀಲಾ ಕೃಷ್ಣಸ್ವಾಮಿ. ಮನುಷ್ಯನ ದೇಹದ ಎತ್ತರ–ಗಾತ್ರ–ತೂಕ, ಲಿಪಿಡ್ ಪ್ರೊಫೈಲ್ ಕೊಡುವ ರೀಡಿಂಗ್‌ಗಳು ಎಲ್ಲವನ್ನೂ ಪರಿಶೀಲಿಸಿಯೇ ಆಹಾರ ಕ್ರಮವನ್ನು ನಿರ್ಧರಿಸುವುದು ಸೂಕ್ತ ಎನ್ನುತ್ತಾರೆ ಅವರು. ವ್ಯಾಯಾಮಶಾಲೆಗಳಿಗೆ ಹೋಗುವವರು ಅಲ್ಲಿ ಕಲಿಸುವ ತರಬೇತುದಾರರನ್ನೇ ಎಲ್ಲದಕ್ಕೂ ನೆಚ್ಚಿಕೊಳ್ಳುತ್ತಾರೆ. ಇಲ್ಲವಾದರೆ ಆಪ್ತೇಷ್ಟರ ಸಲಹೆ ಪಡೆದು ಆಹಾರಕ್ರಮ ನಿರ್ಧರಿಸಿಕೊಳ್ಳುತ್ತಾರೆ. ಕೆಲವರು ಇಂಟರ್‌ನೆಟ್‌ ನೋಡಿ ಸ್ವಯಂ ತೀರ್ಮಾನಕ್ಕೆ ಬರುವುದೂ ಉಂಟು. ಇವೆಲ್ಲವೂ ಸರಿಯಲ್ಲ ಎನ್ನುತ್ತಾರೆ ಶೀಲಾ.

‘ಒಬ್ಬೊಬ್ಬರನ್ನು ನಾವು 45 ನಿಮಿಷದಿಂದ 60 ನಿಮಿಷ ಕೌನ್ಸೆಲಿಂಗ್ ಮಾಡುತ್ತೇವೆ. ಅವರ ಜೀವನಕ್ರಮ, ಆಹಾರಕ್ರಮ ಹೇಗಿದೆ ಎಂದು ವಿವರವಾಗಿ ತಿಳಿದುಕೊಳ್ಳಬೇಕು. ಹೀಗಾಗಿ ಇದು ಅನಿವಾರ್ಯ. ವಾರಕ್ಕೆ ಎಷ್ಟು ಬಾರಿ, ಯಾವ ಸೊಪ್ಪು ತಿನ್ನುತ್ತಾರೆ, ಐಸ್‌ಕ್ರೀಂ ತಿನ್ನುವ ಅಭ್ಯಾಸವಿದ್ದರೆ ಎಷ್ಟು ಸಲ? ಪಾನಿಪೂರಿಯನ್ನೋ ಮತ್ಯಾವುದೋ ಜಂಕ್‌ ಫುಡ್‌ ಅನ್ನೋ ಎಷ್ಟು ಬಾರಿ ಸೇವಿಸುತ್ತಾರೆ ಎಂದೆಲ್ಲ ಕೂಲಂಕಷವಾಗಿ ಕೇಳುತ್ತೇವೆ. ನಿದ್ದೆ ಮಾಡುವ ಅವಧಿ, ನಿತ್ಯದ ಚಟುವಟಿಕೆಯ ಟೈಮ್‌ಲೈನ್ ಇತ್ಯಾದಿ ಮಾಹಿತಿ ಪಡೆದ ಮೇಲೆ ಯಾವ ಆಹಾರಕ್ರಮ ಹೇಳಬೇಕೆಂದು ತಿಳಿಸುತ್ತೇವೆ’ ಎಂದು ತಮ್ಮ ಕಾರ್ಯವಿಧಾನವನ್ನು ಬಿಚ್ಚಿಡುತ್ತಾರೆ ಈ ಡಯಟಿಷಿಯನ್.

ಮಿಲಿಂದ್ ಸೋಮನ್ ತರಹದ ‘ಫಿಟ್‌ನೆಸ್‌ ಫ್ರೀಕ್‌’ಗಳು ಈಗ ವ್ಯಕ್ತವಾದ ಎಲ್ಲವನ್ನೂ ಅನುಸರಿಸುತ್ತಾರೆ. ತಮ್ಮ ದೇಹವನ್ನು ಸಿಂಗಲ್‌ ಬಾರ್‌ನಲ್ಲಿ ಲೀಲಾಜಾಲವಾಗಿ ಮೇಲಕ್ಕೆತ್ತುತ್ತಾ ಕೆಳಗಿಳಿಸುವುದನ್ನು ನೋಡಿದರೆ ಧಮನಿ ಧಮನಿಯಲ್ಲೂ ಉತ್ಸಾಹ ತುಂಬುತ್ತದೆ. ಪುನೀತ್ ಕೂಡ ಹಾಗೆಯೇ ಇದ್ದರು.

ಏನಾದರೂ ಮಾಡಿ... ಸರಿಯಾಗಿ ಮಾಡಿ

ಕ್ರಾಸ್‌ಫಿಟ್, ಕ್ಯಾಲ್‌ಸ್ನೇಕ್, ಜಿಮ್ನಾಸ್ಟಿಕ್ ಫಾರ್ಮ್ಸ್‌ ಇಂತಹ ಪರ್ಯಾಯಗಳೆಲ್ಲ ಭಾರ ಎತ್ತುವ ವ್ಯಾಯಾಮಕ್ಕೆ ಇವೆ ಎಂದು ಹೇಳಿದವರು ಚೇತನ್ ಡಿಸೋಜಾ. ಪುನೀತ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್‌’ನ ಸ್ಟಂಟ್‌ಗಳನ್ನು ರೂಪಿಸಲು ಕೆಲಸ ಮಾಡಿರುವ ಇವರು, ಪುನೀತ್ ಅವರ ಸಹಭಾಗಿತ್ವದಲ್ಲಿ ಹೆಬ್ಬಾಳದಲ್ಲಿ ಒಂದು ಜಿಮ್ ಪ್ರಾರಂಭಿಸಲೂ ಸಿದ್ಧತೆ ನಡೆಸಿದ್ದರು. ಅವರು ಫಿಟ್‌ನೆಸ್‌ ಕುರಿತು ಹೀಗೆನ್ನುತ್ತಾರೆ:

‘ಮನುಷ್ಯನ ದೇಹವನ್ನು ಯಾವ ವ್ಯಾಯಾಮಕ್ಕೆ ಬೇಕಾದರೂ ಅಣಿಗೊಳಿಸಬಹುದು. ಪೂರಕವಾಗಿ ನಿದ್ದೆ, ಆಹಾರ ತೆಗೆದುಕೊಳ್ಳುವ ರೀತಿ ಸರಿಯಾಗಿ ಇರಬೇಕು. ದೇಹವನ್ನು ದಂಡಿಸಿದ ಮೇಲೆ ಚೇತರಿಸಿಕೊಳ್ಳಲು ಇಂತಿಷ್ಟು ಕಾಲಾವಕಾಶ ನೀಡಬೇಕು ಎಂದಿರುತ್ತದೆ. ಇದನ್ನು ಉಪೇಕ್ಷಿಸಿದರೆ ವ್ಯಾಯಾಮ ಮಾಡಿಯೂ ಪ್ರಯೋಜನವಿಲ್ಲ. ಒಂದಿಷ್ಟು ದಿನ ಝುಂಬಾ ಮಾಡಿ, ಇನ್ನಷ್ಟು ಸಮಯ ಕಿಕ್‌ ಬಾಕ್ಸಿಂಗ್ ಮಾಡಿ, ಅದಾದ ಮೇಲೆ ಸ್ವಲ್ಪ ದಿನಗಳ ನಂತರ ಏರೋಬಿಕ್ಸ್ ಮಾಡಿದರೂ ತೊಂದರೆ ಇಲ್ಲ. ಆದರೆ, ಎಲ್ಲದಕ್ಕೂ ತಕ್ಕಂತೆ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಡಯಟಿಷಿಯನ್‌ಗಳ, ನ್ಯೂಟ್ರಿಷಿಯನ್‌ಗಳ ಸಲಹೆಯನ್ನು ಪಡೆದೇ ಆಹಾರಕ್ರಮ ನಿರ್ಧರಿಸಬೇಕು.

‘ಪುನೀತ್ ನಿತ್ಯವೂ ಕನಿಷ್ಠ ವಾಕಿಂಗ್ ಅಥವಾ ಜಾಗಿಂಗ್ ಮಾಡದೇ ಇರುತ್ತಿರಲಿಲ್ಲ. ಕಿಕ್ ಬಾಕ್ಸಿಂಗ್ ಕೂಡ ಮಾಡುತ್ತಿದ್ದರು. ಅವರ ಜೀವನಶೈಲಿ ತುಂಬಾ ಚೆನ್ನಾಗಿತ್ತು. ಹೃದಯಸ್ತಂಭನಕ್ಕೂ ವ್ಯಾಯಾಮಕ್ಕೂ ಸಂಬಂಧ ಇರಲೇಬೇಕು ಎಂದೇನೂ ಇಲ್ಲ. ಕೆಲವೊಮ್ಮೆ ವಂಶವಾಹಿಗಳು ದೇಹದ ಆರೋಗ್ಯವನ್ನು ನಿರ್ಧರಿಸುತ್ತಿರುತ್ತವೆ’.

ಯಾವಾಗ್ಯಾವಾಗ ಏನೇನು ತಿನ್ನಬೇಕು?

ನ್ಯೂಟ್ರೀಷನಿಸ್ಟ್‌ಗಳ ಕಾರ್ಯವಿಧಾನವೂ ಆಸಕ್ತಿಕರ. ದೀರ್ಘ ಕಾಲದ ನಂತರ ವ್ಯಾಯಾಮ ಮಾಡುವವರು ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದುವೇಳೆ ರಕ್ತದೊತ್ತಡ ಅಥವಾ ಮಧುಮೇಹ ಇದ್ದರೆ ಮೂರು ತಿಂಗಳು ಬಿರುನಡಿಗೆಯಲ್ಲಿ ತೊಡಗಬೇಕು. ಆಮೇಲೆ ಮತ್ತೊಮ್ಮೆ ರಕ್ತಪರೀಕ್ಷೆ ಮಾಡಿಸಿದ ಮೇಲೆ ಸರಿಯೆನ್ನಿಸಿದರೆ ವ್ಯಾಯಾಮದ ಸಲಹೆಯನ್ನು ನ್ಯೂಟ್ರೀಷನಿಸ್ಟ್‌ಗಳು ನೀಡುತ್ತಾರೆ.

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಕು ಎಂದೇ ಎಷ್ಟೋ ಜನ ಭಾವಿಸಿದ್ದಾರೆ. ಆದರೆ, ಎಲ್ಲರ ವಿಷಯದಲ್ಲೂ ಇದು ಸರಿಯಲ್ಲ. ಹೆವಿ ವರ್ಕ್‌ಔಟ್ ಮಾಡುವವರು ವ್ಯಾಯಾಮ ಪ್ರಾರಂಭಿಸುವ ಒಂದು ತಾಸು ಮೊದಲು ಗ್ರೀನ್ ಟೀ ಕುಡಿಯಬೇಕು. ಹಣ್ಣಿನ ರಸ ಅಥವಾ ಲಘುವಾದ ಬ್ಲ್ಯಾಕ್‌ ಕಾಫಿ ಸೇವಿಸಿದರೂ ಆದೀತು, ಕೆಫೀನ್‌ ಅಂಶವು ವ್ಯಾಯಾಮದ ದಣಿವನ್ನು ಸಹಿಸಿಕೊಳ್ಳುವಂತೆ ಮಾಡುತ್ತದೆ. ವ್ಯಾಯಾಮ ಮಾಡಿದ ಮೇಲೆ 15 ಗ್ರಾಂನಷ್ಟು ಪ್ರೊಟೀನ್‌ಯುಕ್ತ ಆಹಾರ ತೆಗೆದುಕೊಳ್ಳಬೇಕು. ಒಂದು ಅಥವಾ ಎರಡು ಮೊಟ್ಟೆಯ ಬಿಳಿಭಾಗ, ಪನೀರ್‌ನ ಕೆಲವು ತುಂಡುಗಳು ಇದನ್ನು ಪೂರೈಸಬಲ್ಲವು. ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ವ್ಯಾಯಾಮ ಮಾಡುವ ಕ್ಷಮತೆ ಇರುತ್ತದೆ. ಹೀಗಾಗಿ ಅವರು ಇನ್ನಷ್ಟು ಪ್ರೊಟೀನನ್ನು ತೆಗೆದುಕೊಳ್ಳಬಹುದು ಎಂದು ನ್ಯೂಟ್ರಿಷನಿಸ್ಟ್‌ ರ‍್ಯಾನ್ ಕುಆ ಸಲಹೆ ನೀಡುತ್ತಾರೆ.

ಪ್ರೊಟೀನ್ ಮತ್ತಿತರ ಸಬ್‌ಸ್ಟಿಟ್ಯೂಟ್‌ಗಳನ್ನು ಸೇವಿಸುವವರಿಗೆ ತಾವು ಮಾಡುವ ವ್ಯಾಯಾಮದ ಪ್ರಮಾಣದ ಅರಿವು ಚೆನ್ನಾಗಿ ಮನದಟ್ಟಾಗಿರಬೇಕು. ಎಷ್ಟು ಕ್ಯಾಲರಿಗಳನ್ನು ಕಸರತ್ತಿನಿಂದ ಕಳೆದುಕೊಳ್ಳುತ್ತಾರೆ ಎಂದು ಅರಿವಿದ್ದವರಷ್ಟೇ ಇದನ್ನು ಮಾಡಬೇಕು. ತಮ್ಮಷ್ಟಕ್ಕೆ ತಾವೇ ಯಾವ್ಯಾವುದೋ ಸಬ್‌ಸ್ಟಿಟ್ಯೂಟ್‌ಗಳನ್ನು ಸೇವಿಸಿದರೆ ಅಪಾಯ ಇದ್ದೇ ಇದೆ ಎನ್ನುವುದು ಅವರು ನೀಡುವ ಎಚ್ಚರ. ಅನ್ನ, ಚಪಾತಿ ಜತೆಗೆ ಕಾಳು–ಪಲ್ಲೆಗಳ ಸೇವನೆ ಯಥೇಚ್ಛವಾಗಿರಬೇಕು ಎಂದೂ ಅವರು ಮಾತು ಸೇರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT