ಭಾನುವಾರ, ಅಕ್ಟೋಬರ್ 25, 2020
28 °C

ಬಿಹಾರ ಚುನಾವಣೆ | ಮೊದಲ ಹಂತ: ಮಹಾಮೈತ್ರಿಗೆ ಮುನ್ನಡೆ ಸಾಧ್ಯತೆ?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಎರಡು ವಾರಗಳಷ್ಟೇ ಬಾಕಿ ಇದ್ದು ವಿವಿಧ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸಗೊಂಡಿವೆ.

ಆಕ್ಟೋಬರ್‌ 28ರಂದು ಮೊದಲ ಹಂತದ ಮತದಾನ ನಡೆಯಲಿದೆ. ನಕ್ಸಲ್‌ ಪ್ರಾಬಲ್ಯವಿರುವ ಜಿಲ್ಲೆಗಳ ಒಟ್ಟು 71 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಔರಂಗಾಬಾದ್, ಗಯಾ, ನವಾಡಾ, ಮುಂಗೇರ್, ಲಖಿಸರಾಯ್, ಜಮುಯಿ, ಬಂಕಾ, ರೋಹ್ಟಾಸ್‌ ಮತ್ತು ಜೆಹಾನಾಬಾದ್‌ ಜಿಲ್ಲೆಗಳಲ್ಲಿ ಮಾವೋವಾದಿಗಳ ಪ್ರಾಬಲ್ಯ ಹೆಚ್ಚಿದೆ. ಈ ಜಿಲ್ಲೆಗಳಲ್ಲಿನ ಭದ್ರತೆಯು ಸವಾಲಿನ ಕೆಲಸ ಎನ್ನುತ್ತಾರೆ ಸ್ಥಳೀಯ ಪೊಲೀಸರು. 

ಮೊದಲ ಹಂತದ ಟ್ರೆಂಡಿಂಗ್‌ ಗಮನಿಸಿದರೆ ಮಹಾಮೈತ್ರಿಗೆ ಅನುಕೂಲತೆ ಹೆಚ್ಚಿದೆ ಎನ್ನಲಾಗುತ್ತಿದೆ. ಆರ್‌ಜೆಡಿ ನೇತೃತ್ವದ ‘ಮಹಾಮೈತ್ರಿ’ಯಲ್ಲಿ ಕಾಂಗ್ರೆಸ್‌, ಎಡಪಕ್ಷಗಳು ಸೇರಿವೆ. ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಈ ಭಾಗದಲ್ಲಿ ಪ್ರಾಬಲ್ಯ ಸಾಧಿಸುವ ಕುರುಹು ವ್ಯಕ್ತವಾಗಿದೆ. ಸುಮಾರು 40 ಸ್ಥಾನಗಳಲ್ಲಿ ಮಹಾಮೈತ್ರಿ  ಗೆಲುವು ಸಾಧಿಸಲಿದೆ ಎಂದು ಚುನಾವಣೆ ಪೂರ್ವ ಸಮೀಕ್ಷೆಗಳು ಹೇಳಿವೆ.

ಇಲ್ಲಿ ಬಿಜೆಪಿ ಮಂಕಾಗಿದ್ದು ಜೆಡಿಯು ಮಹಾಮೈತ್ರಿಗೆ ಪ್ರಬಲ ಪೈಪೋಟಿ ನೀಡಲಿದೆ. ಕಳೆದ ಸಲದ ಚುನಾವಣೆಯಲ್ಲಿ ಈ ಭಾಗದಲ್ಲಿ ಮಹಾಮೈತ್ರಿ ಹೆಚ್ಚು ಸ್ಥಾನಗಳನ್ನು ಪಡೆದಿತ್ತು. ಎಡ ಪಕ್ಷಗಳಿಗೆ ನಿರೀಕ್ಷಿತ ಜಯ ಲಭ್ಯವಾಗಲಿಲ್ಲ. ಎಡ ಪಕ್ಷಗಳು ಜೆಡಿಯು ಎದುರು ಸೋತಿದ್ದು ವಿಶೇಷ. 

ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕ ಹಾಗೂ ಕೇಂದ್ರದ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರು ನಿಧನರಾಗಿರುವುದು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಎಲ್‌ಜೆಪಿ ಎಷ್ಟೇ ಸ್ಥಾನಗಳನ್ನು ಪಡೆದರು ಅವು ಬಿಜೆಪಿಗೆ ಪ್ಲಸ್‌ ಎನ್ನಲಾಗುತ್ತಿದೆ.

ಮತ ಬ್ಯಾಂಕ್‌ 

70–80ರ ದಶಕದಲ್ಲಿ ಪ್ರಬಲ ಪಕ್ಷವಾಗಿದ್ದ ಕಾಂಗ್ರೆಸ್‌ ಸದ್ಯ ಪ್ರಾದೇಶಿಕ ಪಕ್ಷಗಳ ಬಲವನ್ನು ನೆಚ್ಚಿಕೊಂಡು ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ. ಸಂಪ್ರಾದಾಯಿಕ ಮುಸ್ಲಿಂ, ದಲಿತ ಹಾಗೂ ಹಿಂದುಳಿದ ವರ್ಗಗಳ ಬೆಂಬಲವನ್ನು ಈಗಲೂ ನೆಚ್ಚಿಕೊಂಡಿದೆ.

ಬನಿಯಾ ಸಮುದಾಯವು ಬಿಜೆಪಿಗೆ ಬಲ ತಂದುಕೊಡಲಿದೆ. ಇನ್ನು ನಿತೀಶ್‌ ಕುಮಾರ್‌ ಅವರ ಜೆಡಿಯುಗೆ ಯಾದವೇತರ ಸಮುದಾಯದವರ ಬೆಂಬಲ ಹೆಚ್ಚಾಗಿದೆ. ಅದರಲ್ಲಿ ಇತರ ಹಿಂದುಳಿದ ವರ್ಗದವರು, ಕುರ್ಮಿ, ಕೊಯಿರಿ ಮುಂತಾದ ಅತ್ಯಂತ ಹಿಂದುಳಿದ ವರ್ಗದವರು ಸೇರಿದ್ದಾರೆ.

ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿಯು ಮುಸ್ಲಿಂ ಹಾಗೂ ಯಾದವ ಸಮುದಾಯದವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.

ಒಟ್ಟಾರೆ ಆರಂಭಿಕ ಟ್ರೆಂಡ್‌ ಎನ್‌ಡಿಎ ಕಡೆ ವಾಲಿದೆ. ಆಡಳಿತ ವಿರೋಧಿ ಅಲೆ ಹಾಗೂ ಕೊರೊನಾ ವೈರಸ್‌ ನಿರ್ವಹಣೆಯಲ್ಲಿ ವೈಫಲ್ಯತೆ ಮಹಾಮೈತ್ರಿಗೆ ಗೆಲುವು ತಂದುಕೊಟ್ಟರು ಅಚ್ಚರಿ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು