ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡಿಗಢದಲ್ಲಿ ರೈತರ ಪ್ರತಿಭಟನೆ; ಮಾತುಕತೆಗೆ ಸಿದ್ಧ ಎಂದ ಸಿಎಂ ಭಗವಂತ ಮಾನ್

ಅಕ್ಷರ ಗಾತ್ರ

ಚಂಡಿಗಢ: ಗೋಧಿ ಬೆಳೆಗೆ ಬೋನಸ್ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಂಡಿಗಢದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಹಲವಾರು ರೈತ ಸಂಘಟನೆಗಳು ಘೋಷಿಸಿದಬೆನ್ನಲ್ಲೇ ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ತಿಳಿಸಿದ್ದಾರೆ.

ರೈತರ ಪ್ರತಿಭಟನೆಯನ್ನು ‘ಅನಗತ್ಯ’ ಎಂದಿರುವ ಭಗವಂತ ಮಾನ್, ‘ಪ್ರತಿಭಟನೆ ನಡೆಸುವುದು ಅವರ (ರೈತರ) ಹಕ್ಕು. ಅವರ ಬೇಡಿಕೆಗಳಿಗೆ ನಾನು ಪ್ರಮಾಣಿಕವಾಗಿ ಸ್ಪಂದಿಸುತ್ತೇನೆ. ‘ಮುರ್ದಾಬಾದ್’ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ನಾನು ರೈತನ ಮಗನಾಗಿದ್ದು, ರೈತರ ಅವಶ್ಯಕತೆ ಏನು ಎಂಬುದು ಚೆನ್ನಾಗಿ ತಿಳಿದುಕೊಂಡಿದ್ದೇನೆ. ರೈತರೊಂದಿಗೆ ಮಾತುಕತೆ ನಡೆಸಲು ನಾನು ಸದಾ ಸಿದ್ಧನಿರುತ್ತೇನೆ. ಆದರೆ, ಟೊಳ್ಳು ಘೋಷಣೆಗಳನ್ನು ಕೂಗುವ ಮೂಲಕ ಜಲಮಂಡಳಿಯ ದೃಢ ಸಂಕಲ್ಪವನ್ನು ಮುರಿಯಲು ಪ್ರಯತ್ನಿಸುವವರಿಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ರೈತರು ಪ್ರತಿಭಟನೆ ನಡೆಸುವ ಬದಲು ಪಂಜಾಬ್ ಮತ್ತು ಪಂಜಾಬಿಗಳ ಒಳಿತಿಗಾಗಿ ರಾಜ್ಯ ಸರ್ಕಾರವನ್ನು ಬೆಂಬಲಿಸಬೇಕು ಎಂದು ಮಾನ್ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರವು ರೈತರನ್ನು ನೇರ ಬಿತ್ತನೆ ಮಾಡಲು ಪ್ರೋತ್ಸಾಹಿಸುತ್ತಿದೆ. ಬಾಸುಮತಿ ಮತ್ತು ಮೂಂಗಿ ಬೆಳೆಯನ್ನು ಎಂಎಸ್‌ಪಿಯಲ್ಲಿ ಖರೀದಿಸುವುದಾಗಿ ಈಗಾಗಲೇ ಘೋಷಿಸಿದ್ದೇನೆ. ರೈತರು ಸಹಕಾರ ನೀಡಬೇಕು ಎಂದು ಮಾನ್ ತಿಳಿಸಿದ್ದಾರೆ.

ರೈತರು ಒಂದು ವರ್ಷ ಸರ್ಕಾರಕ್ಕೆ ಬೆಂಬಲ ನೀಡಬೇಕು.ಈ ಅವಧಿಯಲ್ಲಿ ರೈತರಿಗೆ ಏನಾದರೂ ನಷ್ಟವಾದರೆ ನಮ್ಮ ಸರ್ಕಾರ ಅವರಿಗೆ ಸಂಪೂರ್ಣ ಪರಿಹಾರ ನೀಡಲಿದೆ ಎಂದು ಮಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈತರು ಗೋಧಿಗೆ ₹500 ಬೋನಸ್‌ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದರೂ ಅಧಿಸೂಚನೆಯನ್ನು ಹೊರಡಿಸಿಲ್ಲ ಎಂದು ಪ್ರತಿಭಟನಾನಿರತ ರೈತರೊಬ್ಬರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

‘ನಾವು ದೆಹಲಿಯವರೆಗೆ ಪ್ರತಿಭಟನೆ ಮರೆವಣಿಗೆಯನ್ನು ಹಮ್ಮಿಕೊಂಡಿದ್ದೇವೆ. ಗೋಧಿ ಬೆಳೆಗೆ ಬೋನಸ್‌ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಪ್ರತಿಭಟನೆ ಮುಂದುವರಿಸಲಿದ್ದೇವೆ. ವಿವಿಧ ಬೆಳೆಗಳಿಗೆ ಕೂಡಲೇ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಬೇಕು’ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ಸುರ್ಜೀತ್ ಸಿಂಗ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಚಂಡಿಗಢ- ಮೊಹಾಲಿ ಗಡಿಯಲ್ಲಿ ರೈತರನ್ನು ತಡೆಯಲು ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪಂಜಾಬ್‌ನ ಹಲವು ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ (ಎಎಪಿ) ವಿರುದ್ಧ ಪ್ರತಿಭಟನೆ ನಡೆಸಲು ಚಂಡೀಗಢದತ್ತ ಮೆರವಣಿಗೆ ನಡೆಸಿದ್ದರು.

ನಮ್ಮ 11 ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನಾನಿರತ ರೈತರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT