ಶುಕ್ರವಾರ, ಮೇ 14, 2021
32 °C
ಜೆಡಿಎಸ್‌ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ

Interview| ಜಾತ್ಯತೀತ ಗೆಲುವು ಕಷ್ಟವಲ್ಲ: ಬಸವಕಲ್ಯಾಣ ಜೆಡಿಎಸ್‌ ಅಭ್ಯರ್ಥಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

‘ಬಡೇಶಾ ಸಾಹೇಬ್’ ಎಂದೇ ಪರಿಚಿತರಾದ ಬಸವಕಲ್ಯಾಣದ ಬಡೇಶಾ ದರ್ಗಾದ ಮುಖ್ಯಸ್ಥ ಹಾಗೂ ಲಾರಿ ಉದ್ಯಮಿ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರು 15 ವರ್ಷಗಳಿಂದ ಕಾಂಗ್ರೆಸ್‌ನಲ್ಲೇ ಗುರುತಿಸಿಕೊಂಡವರು. ಈಚೆಗೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದ್ದಾರೆ.

l ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ನಿಮಗೆ ದೊರೆಯುತ್ತವೆಯೇ?

– ಬಸವಕಲ್ಯಾಣದಲ್ಲಿ ಅತಿವೃಷ್ಟಿಯಿಂದ ಮನೆ ಬಿದ್ದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ₹ 24 ಲಕ್ಷ ಮೊತ್ತದ ಚೆಕ್ ಕೊಟ್ಟಿದ್ದರು. ಅವರು ಉಜಳಂಬದಲ್ಲಿ ₹ 32 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ, ಅಲ್ಪಸಂಖ್ಯಾತರಿಗೆ ಯೋಜನೆಗಳನ್ನು ರೂಪಿಸಿದ್ದರು. ಹೀಗಾಗಿ ಅಲ್ಪಸಂಖ್ಯಾತರು ಜೆಡಿಎಸ್‌ ಬೆಂಬಲಿಸುವ ನಿರೀಕ್ಷೆ ಇದೆ.

l ಗೆದ್ದರೆ ನೀವು ಮಾಡುವ ಅಭಿವೃದ್ಧಿ ಕಾರ್ಯಗಳೇನು?

–ಆಟೊನಗರ ಅಭಿವೃದ್ಧಿ, ಹಣ್ಣಿನ ಸಗಟು ಮಾರುಕಟ್ಟೆ ನಿರ್ಮಾಣ ಮತ್ತು ಶಿಕ್ಷಣಕ್ಕೆ ಒತ್ತು ಕೊಟ್ಟು ಗುಣಮಟ್ಟದ ಶಿಕ್ಷಣ ಕೊಡಿಸುವುದು ನನ್ನ ಉದ್ದೇಶ.

l ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದೀರಿ..

–ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಸಿದ್ಧಾಂತಗಳಲ್ಲಿ ಸಾಮ್ಯತೆ ಇದೆ. ಜಾತ್ಯತೀತ ಪಕ್ಷವಾಗಿರುವ ಕಾರಣ ಜೆಡಿಎಸ್‌ನಲ್ಲಿ ಹೊಂದಿಕೊಳ್ಳಲು ಕಷ್ಟವಾಗಿಲ್ಲ.

l ಎಐಎಂಐಎಂ ಅಭ್ಯರ್ಥಿಯೂ ಸ್ಪರ್ಧಿಸಿದ್ದು, ಮುಸ್ಲಿಂ ಮತ ವಿಭಜನೆಯಾಗಲಿವೆಯೇ?

– 2018ರ ವಿಧಾನಸಭಾ ಚುನಾವಣೆಯಲ್ಲಿ ಎಐಎಐಎಂ ಜೆಡಿಎಸ್‌ಗೆ ಬೆಂಬಲ ನೀಡಿತ್ತು. ಅದು ಒಂದು ಕೋಮಿಗೆ ಸೀಮಿತ ಪಕ್ಷವಾದ್ದರಿಂದ ಬೆಳಗಾವಿಯಲ್ಲಿ ಎಐಎಐಎಂ ನಿಂದ ಲಾಭಕ್ಕಿಂತ ಹಾನಿ ಹೆಚ್ಚಾಯಿತು. ಕೆಲವಷ್ಟು ಜಾತ್ಯತೀತ ಮತಗಳು ಕೈಬಿಟ್ಟು ಹೋಗಿದ್ದವು. ಈ ಬಾರಿ ಹಾಗೆ ಆಗುವುದಿಲ್ಲ.

l ಮತದಾರರಲ್ಲಿ ನಿಮ್ಮ ಮನವಿ ಏನು?

–ಜೆಡಿಎಸ್‌ ಅಧಿಕಾರದ ಅವಧಿಯಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ದೊರೆತಿದೆ. ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಬಸವಕಲ್ಯಾಣ ಜಾತ್ಯತೀತ ನೆಲ ಎನ್ನುವುದನ್ನು ಸಾಬೀತು ಪಡಿಸಲು ಮತದಾರರು ಜೆಡಿಎಸ್‌ಗೆ ಬೆಂಬಲ ನೀಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು