ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಚುನಾವಣೆ: ಬಿಜೆಪಿ ಬೆಂಬಲಿತರಿಗೆ ಮುನ್ನಡೆ

Last Updated 31 ಡಿಸೆಂಬರ್ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 226 ತಾಲ್ಲೂಕುಗಳ 5,728 ಗ್ರಾಮ ಪಂಚಾಯಿತಿಗಳ 82,576 ಸ್ಥಾನಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದು, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ನಂತರದ ಸ್ಥಾನದಲ್ಲಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 36,735, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 32,463 ಮಂದಿ ಗೆಲುವು ಸಾಧಿಸಿದ್ದಾರೆ ಎಂದು ಅಯಾ ಪಕ್ಷದ ಮೂಲಗಳು ಹೇಳಿಕೊಂಡಿವೆ.

ಒಟ್ಟು 91,339 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಈ ಪೈಕಿ, 8,153 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 610 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸದೇ ಇದ್ದುದರಿಂದ ಚುನಾವಣೆ ನಡೆದಿಲ್ಲ.

ಪಕ್ಷಗಳ ಚಿಹ್ನೆ ಇಲ್ಲದೆ, ‘ಪಕ್ಷರಹಿತ’ವಾಗಿ ಚುನಾವಣೆ ನಡೆದಿದ್ದರೂ, ತಮ್ಮ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಹೇಳಿಕೊಂಡಿದ್ದಾರೆ. ಪಕ್ಷ ತಳಮಟ್ಟದಲ್ಲೂ ಸ್ಥಿರ, ದೃಢವಾಗಿರುವುದನ್ನು ಕಾರ್ಯಕರ್ತರು ತೋರಿಸಿದ್ದಾರೆ ಎಂದು ಜೆಡಿಎಸ್‌ ನಾಯಕರು ಪ್ರತಿಪಾದಿಸಿದ್ದಾರೆ.

‘ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಶೇ 55ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ವಾದಿಸಿದರೆ, ‘ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಫಲಿತಾಂಶ ನನಗೆ ಸಮಾಧಾನ ಇದೆ. ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರಿಂದ ಸಂಪೂರ್ಣ ವರದಿ ತರಿಸಿಕೊಳ್ಳುತ್ತಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

‘ಕಾಂಗ್ರೆಸ್‌ ಈ ಬಾರಿ ತನ್ನ ಸಾಂಪ್ರದಾಯಿಕ ಮತಗಳನ್ನೂ ಕಳೆದುಕೊಂಡಿದೆ. ಎಸ್‌ಡಿಪಿಐ ಗೆಲುವುಗಳೇ ಇದಕ್ಕೆ ಸಾಕ್ಷಿ. ಎಪಿಎಂಸಿ ತಿದ್ದುಪಡಿ ಕಾಯ್ದೆಯ ಮೂಲಕ ಕಾಂಗ್ರೆಸ್‌ ಅಪಪ್ರಚಾರಕ್ಕೆ ಯತ್ನಿಸಿತು. ಆದರೆ, ಜನತೆ ಮತ್ತೊಮ್ಮೆ ಬಿಜೆಪಿ ಬೆಂಬಲಿಸಿದ್ದಾರೆ. ಇದಕ್ಕೆ ಬಿಜೆಪಿಯ ಕಾರ್ಯಕರ್ತರ ಶ್ರಮದ ಜೊತೆ ಸಂಘಟಿತ ಪ್ರಚಾರ, ಪಂಚತಂತ್ರ, ಪೇಜ್ ಪ್ರಮುಖ್, ಶಕ್ತಿ ಕೇಂದ್ರ, ಕುಟುಂಬ ಮಿಲನ್, ಗ್ರಾಮ ಸ್ವರಾಜ್ಯ ಮತ್ತಿತರ ಕಾರ್ಯಕ್ರಮಗಳೂ ಕಾರಣ’ ಎಂದು ಕಟೀಲ್‌ ವಿಶ್ಲೇಷಿಸಿದ್ದಾರೆ.

ಬಿಜೆಪಿ ವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಮುಂದೆ ಗ್ರಾಮ ಪಂಚಾಯತಿಗಳಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ ಎನ್ನುವುದು ನಿಮಗೆ ಗೊತ್ತಾಗಲಿದೆ. ಮೀಸಲಾತಿ ಬಳಸಿ ಗ್ರಾಮ ಪಂಚಾಯಿತಿಗಳ ಆಡಳಿತ ಹಿಡಿಯಲು ಬಿಜೆಪಿ ಮುಂದಾಗಬಾರದು’ ಎಂದು ಎಚ್ಚರಿಕೆ ನೀಡಿದ್ಧಾರೆ.

‘ರಾಷ್ಟ್ರೀಯ ಪಕ್ಷಗಳ ಹಣ, ಅಧಿಕಾರದ ಹೊರತಾಗಿಯೂ ಜೆಡಿಎಸ್‌ ಗಮನಾರ್ಹ ಸಾಧನೆ ಮಾಡಿದೆ. ರಾಜಕೀಯ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕಾರ್ಯಕರ್ತರು ಕೆಚ್ಚೆದೆಯ ಹೋರಾಟ ತೋರಿದ ಫಲವಾಗಿ ನಮ್ಮ ಅಭ್ಯರ್ಥಿಗಳು ಜಯಿಸಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಗ್ರಾಮ ಪಂಚಾಯಿತಿಗಳ ಪೂರ್ಣ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಕಾಂಗ್ರೆಸ್‌ ಸಾಧನೆ ಅಷ್ಟೇನೂ ಕಳಪೆಯಾಗಿಲ್ಲ.

ಐದು ಜಿಲ್ಲೆಗಳ 856 ಗ್ರಾಮ ಪಂಚಾಯಿತಿಗಳ 15,295 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು6663 ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಬೆಂಬಲಿಗರು6225 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ಗಿಂತ ಬಿಜೆಪಿ 438 ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಜೆಡಿಎಸ್‌ ಬೆಂಬಲಿಗರು 1312 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಚುನಾವಣೆ ಘೋಷಣೆಯಾಗುವ ಮುನ್ನವೇ ಸಂಘಟಿತ ಪ್ರಯತ್ನದ ಮೂಲಕ ಗ್ರಾಮ ಸ್ವರಾಜ್ಯ ಅಭಿಯಾನದಂತಹ ಕಾರ್ಯಕ್ರಮದ ಮೂಲಕ ಮತದಾರರನ್ನು ತಲುಪುವ ಯೋಜನೆ ರೂಪಿಸಿತ್ತು. ಅವಿರೋಧವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ₹ 1 ಕೋಟಿ ಕೊಡುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿಕೆ ವಿವಾದಕ್ಕೂ ಕಾರಣವಾಗಿತ್ತು.

‘ಅಧ್ಯಕ್ಷರ ಆಯ್ಕೆ ತಿಂಗಳೊಳಗೆ ಪೂರ್ಣ’
ಶಿವಮೊಗ್ಗ: ತಿಂಗಳ ಒಳಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಬಳಿಕ ಅವರಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಿಕೆ ಕುರಿತು ತರಬೇತಿ ನೀಡಲಾಗುವುದು. ಗ್ರಾಮ ಪಂಚಾಯಿತಿ ವ್ಯವಸ್ಥೆ ಬಲಪಡಿಸಲು ನಿರಂತರ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ರಾಜ್ಯದ 92,131 ಸದಸ್ಯರಿಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಿಂದ ಜನವರಿ 19ರಿಂದ ಮಾರ್ಚ್ 26ರ ವರೆಗೆ ತಾಲ್ಲೂಕು ಹಂತದಲ್ಲಿ ತರಬೇತಿ ನೀಡಲಾಗುವುದು. ರಾಜ್ಯದ 176 ತಾಲ್ಲೂಕುಗಳ 285 ಕೇಂದ್ರಗಳಲ್ಲಿ ತರಬೇತಿ ನಡೆಯಲಿದೆ. ಕೆಲವು ಕಡೆ ಎರಡು ಕೇಂದ್ರಗಳನ್ನು ಗುರುತಿಸಲಾಗಿದೆ. 900 ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ.40 ಸದಸ್ಯರಿಗೆ ಒಂದು ತಂಡ ರಚಿಸಲಾಗಿದೆ. ಪ್ರತಿ ತಂಡಕ್ಕೆ 5 ದಿನ ಕಾಲ ತರಬೇತಿ ನೀಡಲಾಗುವುದು ಎಂದರು.

ಪ್ರತಿ ದಿನ ಬೆಳಿಗ್ಗೆ 10.30ರಿಂದ ಸಂಜೆ 4ರ ವರೆಗೆ ತರಬೇತಿ ನಡೆಯಲಿದೆ. 15 ವಿಷಯಾಧಾರಿತ ಅಧಿವೇಶನಗಳು ಮತ್ತು ಕೌಶಲ ಮಾಹಿತಿ ನೀಡಲಾಗುವುದು. ಸದಸ್ಯರಿಗೆ ಪ್ರಯಾಣ ಭತ್ಯೆ, ಭಾಗವಹಿಸುವಿಕೆ ಭತ್ಯೆ ನೀಡಲಾಗುವುದು. ತರಬೇತಿಗೆ ಅಂದಾಜು ₹ 27.16 ಕೋಟಿ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ ಶೇ 60ರಷ್ಟು ವೆಚ್ಚ ಭರಿಸಲಿದೆ ಎಂದು ಅವರು ವಿವರ ನೀಡಿದರು.

ಗ್ರಾಮ ಪಂಚಾಯಿತಿ ಚುನಾವಣೆ: ಪಕ್ಷಗಳ ವಾದ

36,735: ಬಿಜೆಪಿ ಬೆಂಬಲಿತರು

32,463: ಕಾಂಗ್ರೆಸ್‌ ಬೆಂಬಲಿತರು

12,724: ಜೆಡಿಎಸ್‌ ಬೆಂಬಲಿತರು

6,771: ಇತರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT