ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ: ನ್ಯಾಯ ಯಾತ್ರೆಗೆ ಚಾಲನೆ ನೀಡಿದ ಖರ್ಗೆ, ರಾಹುಲ್

Published 14 ಜನವರಿ 2024, 11:39 IST
Last Updated 14 ಜನವರಿ 2024, 11:39 IST
ಅಕ್ಷರ ಗಾತ್ರ

ಖೊಂಗ್‌ಜೊಮ್ (ಮಣಿಪುರ): ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ನಾಯಕರು ಜನರ ಬವಣೆಗಳನ್ನು ಅಲಕ್ಷಿಸುತ್ತಿದ್ದಾರೆ, ಮತ ಗಳಿಸುವ ಉದ್ದೇಶ
ದಿಂದ ಧರ್ಮದ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ 66 ದಿನಗಳ ‘ಭಾರತ್ ಜೋಡೊ ನ್ಯಾಯ
ಯಾತ್ರೆ’ಗೆ ಭಾನುವಾರ ಇಲ್ಲಿ ಚಾಲನೆ ನೀಡಿದರು.

ಇಲ್ಲಿನ ಯುದ್ಧ ಸ್ಮಾರಕದಲ್ಲಿ ಯಾತ್ರೆಗೆ ಚಾಲನೆ ನೀಡಲಾಯಿತು. ವಸಾಹತುಶಾಹಿಗಳನ್ನು ವಿರೋಧಿಸಿ ಹೋರಾಡಿದವರ ನೆನಪಿನ ಯುದ್ಧ ಸ್ಮಾರಕಕ್ಕೆ ಯಾತ್ರೆ ಆರಂಭಕ್ಕೂ ಮೊದಲು ರಾಹುಲ್ ಅವರು ಗೌರವ ಅರ್ಪಿಸಿದರು. ಈ ಯಾತ್ರೆಯ ಸಮಯದಲ್ಲಿ ‘ಜನರ ಮಾತಿಗೆ ಆದ್ಯತೆ ಇರಲಿದೆ’ ಎಂಬ ಸಂದೇಶವನ್ನು ಕಾಂಗ್ರೆಸ್ ನಾಯಕರು ರವಾನಿಸಿದರು.

ಯಾತ್ರೆಗೆ ಚಾಲನೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ತೀಕ್ಷ್ಣ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಅವರ ಮಾತುಗಳು ಕೂಡ ಮೋದಿ ಅವರನ್ನೇ ಉದ್ದೇಶಿಸಿದ್ದವು. ಯಾತ್ರೆಯು ಮುಂಬೈನಲ್ಲಿ ಮಾರ್ಚ್‌ 20ರಂದು ಕೊನೆಗೊಳ್ಳಲಿದೆ, ಒಟ್ಟು 6,713 ಕಿ.ಮೀ. ಮಾರ್ಗವನ್ನು ಕ್ರಮಿಸಲಿದೆ.

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅನ್ಯಾಯವು ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಏಕೆ ಹೆಚ್ಚಾಗುತ್ತಿದೆ, ಮೋದಿ ಅವರು ಗಲಭೆಗ್ರಸ್ತ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ ಎಂದು ಇಬ್ಬರೂ ನಾಯಕರು ಪ್ರಶ್ನಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ದ್ವೇಷದ ರಾಜಕಾರಣಕ್ಕೆ ಮಣಿಪುರವು ಒಂದು ಸಂಕೇತವಾಗಿ ಪರಿವರ್ತನೆ ಕಂಡಿದೆ ಎಂದು ರಾಹುಲ್ ಆರೋಪಿಸಿದರು. ಮೋದಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಖರ್ಗೆ, ‘ಅವರು ಸಮುದ್ರದ ದಡದಲ್ಲಿ ಉಲ್ಲಾಸದಿಂದ ಇದ್ದಂತೆ ಕಾಣಿಸಿಕೊಳ್ಳುತ್ತಾರೆ, ಕುಳಿತು ರಾಮ ರಾಮ ಎನ್ನುತ್ತಿರುತ್ತಾರೆ. ಆದರೆ, ಮುಖದಲ್ಲಿ ರಾಮನಾಮ ಇರುತ್ತದೆ, ಬಗಲಿನಲ್ಲಿ ಚೂರಿ ಇರುತ್ತದೆ’ (ಮುಖ್ ಮೆ ರಾಮ್, ಬಗಲ್ ಮೆ ಚೂರಿ) ಎಂದು ಟೀಕಿಸಿದರು. ‘ಇಂತಹ ಕೆಲಸವನ್ನು ಜನರ ಜೊತೆ ಮಾಡಬಾರದು’ ಎಂದರು.

ಮಾತು ಮತ್ತು ಕ್ರಿಯೆಗಳ ನಡುವೆ ಅಂತರ ಇರುವವರ ಬಗ್ಗೆ ಎಚ್ಚರಿಕೆ ನೀಡಲು ‘ಮುಖ್ ಮೆ ರಾಮ್, ಬಗಲ್ ಮೆ ಚೂರಿ’ ನಾಣ್ನುಡಿಯನ್ನು ಹಿಂದಿಯಲ್ಲಿ ಬಳಸಲಾಗುತ್ತದೆ.

‘ಎಲ್ಲರಿಗೂ ದೇವರಲ್ಲಿ ನಂಬಿಕೆ ಇದೆ, ದೇವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಈ ವಿಚಾರವಾಗಿ ಅನುಮಾನ ಬೇಡ. ಆದರೆ, ಈ ಕೆಲಸವನ್ನು ಮತ ಗಳಿಸುವ ಉದ್ದೇಶದಿಂದ ಮಾಡಬಾರದು. ಮತ ಗಳಿಸಲು ಯಾರೂ ವಂಚಿಸಬಾರದು’ ಎಂದು ಖರ್ಗೆ ಹೇಳಿದರು. ರಾಮ ಮಂದಿರ ಉದ್ಘಾಟನೆಗೂ ಮೊದಲು 11 ದಿನಗಳ ವ್ರತ ಆಚರಿಸಲಾಗುವುದು ಎಂದು ಮೋದಿ ಅವರು ಶುಕ್ರವಾರ ಹೇಳಿರುವುದನ್ನು ಗುರಿಯಾಗಿಸಿಕೊಂಡು ಖರ್ಗೆ ಈ ಮಾತು ಆಡಿದ್ದಾರೆ ಎನ್ನಲಾಗಿದೆ.

ರಾಹುಲ್ ಹಾಗೂ ಇತರ ಕೆಲವು ಮುಖಂಡರು ಯಾತ್ರೆ ಆರಂಭವಾಗುವ ಸ್ಥಳ ತಲುಪುವುದು ತುಸು ತಡವಾದ ಕಾರಣದಿಂದಾಗಿ, ಯಾತ್ರೆಯ ಆರಂಭ ಕೂಡ ವಿಳಂಬವಾಯಿತು.

ಕಳೆದ ವರ್ಷದ ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಶುರುವಾದ ನಂತರದಲ್ಲಿ ಮೋದಿ ಅವರು ಅಲ್ಲಿಗೆ ಭೇಟಿ ನೀಡಿಲ್ಲ ಎಂದು ಇಬ್ಬರೂ ನಾಯಕರು ಟೀಕಿಸಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪಾಲಿಗೆ ಮಣಿಪುರವು ಭಾರತದ ಭಾಗವಾಗಿ ಕಾಣುತ್ತಿಲ್ಲ ಎಂಬುದು ಸ್ಪಷ್ಟ ಎಂದು ರಾಹುಲ್ ಅವರು
ಆರೋಪಿಸಿದರು.

ಡ್ಯಾನಿಶ್‌ ಅಲಿ ಭಾಗಿ

* ಬಿಎಸ್‌ಪಿಯಿಂದ ಉಚ್ಚಾಟಿತ
ರಾಗಿರುವ ಸಂಸದ
ಡ್ಯಾನಿಶ್ ಅಲಿ ಅವರು ಯಾತ್ರೆಯ ಆರಂಭದ ದಿನ ಭಾಗಿ

* ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿರುವ 10 ಪಕ್ಷಗಳ ರಾಜ್ಯದ ಘಟಕ
ಗಳ ಪ್ರತಿನಿಧಿಗಳು
ಕೂಡ ಯಾತ್ರೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಹಾಜರು

* ಬಸ್‌ ಯಾತ್ರೆ ಸಾಗಿದ
ಹಾದಿಯ ಉದ್ದಕ್ಕೂ ಜನರು ಸಾಲುಗಟ್ಟಿದ್ದರು. ರಾಹುಲ್‌ ಜನರೊಂದಿಗೆ ಸಂವಾದ ನಡೆಸಿದರು

* ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪಾಲ್ಗೊಂಡಿದ್ದರು

* ಯಾತ್ರೆಯು 6,713 ಕಿ.ಮೀ. ಕ್ರಮಿಸಲಿದೆ. ಒಟ್ಟು 67
ದಿನ ನಡೆಯಲಿದೆ,

*ಮಾರ್ಚ್‌ 20 ರಂದು ಮುಂಬೈಯಲ್ಲಿ ಸಮಾರೋಪ

ಪ್ರತಿಪಾದನೆ ಏನು?

ಯಾತ್ರೆಯು ಪ್ರತಿಪಾದಿಸುವುದು ಏನು ಎಂಬುದನ್ನು ರಾಹುಲ್‌ ವಿವರಿಸಿದರು. ತಮ್ಮ ಮನದ ಮಾತುಗಳನ್ನು ಯಾತ್ರೆಯ ಸಂದರ್ಭದಲ್ಲಿ ಹೇಳಲು ಬಯಸುವುದಿಲ್ಲ ಎಂದರು. ಅದರ ಬದಲಿಗೆ, ಜನರ ಮನದ ಮಾತುಗಳನ್ನು ಆಲಿಸಲು ಮತ್ತು ಅವರ ಸಂಕಟಗಳನ್ನು ಅರ್ಥ ಮಾಡಿಕೊಳ್ಳಲು ಬಯಸುವುದಾಗಿ ಹೇಳಿದರು. ಹಿಂಸೆ, ದ್ವೇಷ ಮತ್ತು ಆರ್ಥಿಕ ಏಕಸ್ವಾಮ್ಯವು ಭಾರತವನ್ನು ಪ್ರತಿನಿಧಿಸುವುದಿಲ್ಲ ಎಂದರು. ಸೌಹಾರ್ದ, ಸಮಾನತೆ ಮತ್ತು ಭ್ರಾತೃತ್ವವು ಯಾತ್ರೆಗೆ ದಾರಿದೀಪಗಳಾಗಿ ಇರಲಿವೆ ಎಂದು ತಿಳಿಸಿದರು.

ಯುವಕರಿಗೆ ಉದ್ಯೋಗ ಕೊಡಿಸಲು, ಬಡವರು ಹಾಗೂ ಶ್ರೀಮಂತರ ನಡುವಿನ ಅಂತರವು ತಗ್ಗುವಂತೆ ಮಾಡಲು ಮತ್ತು ರೈತರಿಗೆ ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಲು, ಅಪರಾಧ ಕೃತ್ಯಗಳ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಲು, ಸರ್ಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಜೈಲುಪಾಲಾದವರಿಗೆ ನ್ಯಾಯ ಕೊಡಿಸಲು, ದಲಿತರು, ಆದಿವಾಸಿಗಳು ಮತ್ತು ದುರ್ಬಲ ವರ್ಗಗಳಿಗಾಗಿ ಈ ಯಾತ್ರೆ ಆಯೋಜಿಸಲಾಗಿದೆ ಎಂದು ಖರ್ಗೆ ಹೇಳಿದರು.

ಬಿಜೆಪಿಯ ರಾಜಕಾರಣ, ಬಿಜೆಪಿಯ ದ್ವೇಷ, ಆರ್‌ಎಸ್‌ಎಸ್‌ನ ದ್ವೇಷ, ಅವರ ದೃಷ್ಟಿಕೋನ... ಮಣಿಪುರವು ಈ ಸಿದ್ಧಾಂತದ ದ್ಯೋತಕವಾಗಿಬಿಟ್ಟಿದೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ನ್ಯಾಯ ಯಾತ್ರೆಯು ಒಂದು ಮೋಸ. ರಾಹುಲ್‌ ಮತ್ತು ಸೋನಿಯಾ ಅವರು ಜನರಿಗೆ ನ್ಯಾಯ ನೀಡಿಕೆ ಕುರಿತು ಮಾತನಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿರುವ ನಾಯಕರೇ ನ್ಯಾಯ ವಂಚಿತರು.
- ಅನುರಾಗ್‌ ಠಾಕೂರ್‌, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT