ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಲಿಸ್ತಾನಿಗಳ ರಕ್ಷಣೆ, ಹತ್ಯೆ ಹೇಳಿಕೆ: ಭಾರತ–ಕೆನಡಾ ನಡುವೆ ಮೂಡಿದ ಬಿರುಕು

Published 21 ಸೆಪ್ಟೆಂಬರ್ 2023, 12:37 IST
Last Updated 21 ಸೆಪ್ಟೆಂಬರ್ 2023, 12:37 IST
ಅಕ್ಷರ ಗಾತ್ರ

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, ಇದೊಂದು ವಿವೇಚನೆ ಇಲ್ಲದ ಹೇಳಿಕೆ ಎಂದಿದೆ. ಉಭಯ ದೇಶಗಳ ನಾಯಕರ ಹೇಳಿಕೆಗಳು ಇದೀಗ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದೆ.

ಖಲಿಸ್ತಾನಿ ಭಾಷಣಕಾರ ಅಮ್ರಿತ್‌ಪಾಲ್‌ ಸಿಂಗ್ ವಿರುದ್ಧ ಪಂಜಾಬ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆ ನಂತರ ಕಳೆದ ಮಾರ್ಚ್‌ನಲ್ಲಿ ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎದುರು ಖಲಿಸ್ತಾನಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಸಚಿವಾಲಯ, ‘ಧೂತವಾಸ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಕೆನಡಾ ಸರ್ಕಾರ ಹೆಚ್ಚಿನ ಒತ್ತು ನೀಡುವ ವಿಶ್ವಾಸವಿದೆ’ ಎಂದಿತ್ತು.

ಆದರೆ ಅದಾದ ನಂತರ ಇದೇ ವಿಷಯವಾಗಿ ಎರಡೂ ರಾಷ್ಟ್ರಗಳ ನಾಯಕರ ನಡುವಿನ ಹೇಳಿಕೆಗಳು ಇದೀಗ ವಿಕೋಪಕ್ಕೆ ತೆರಳಿದ್ದು, ಕೆನಡಾ ನಾಗರಿಕರಿಗೆ ವಿಸಾ ನೀಡುವ ಪ್ರಕ್ರಿಯೆಯನ್ನು ಭಾರತ ಹಠಾತ್ ಸ್ಥಗಿತಗೊಳಿಸಿದೆ. ಇದರಿಂದ ನವದೆಹಲಿ ಹಾಗೂ ಒಟ್ಟಾವ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ.

ಕೆಲ ತಿಂಗಳ ಹಿಂದೆ ಖಲಿಸ್ತಾನಿ ಬೆಂಬಲಿಗರು ಇಂದಿರಾ ಗಾಂಧಿ ಹತ್ಯೆಯ ಟ್ಯಾಬ್ಲೊ ಪ್ರದರ್ಶಿಸಿದ್ದು ಉಭಯ ರಾಷ್ಟ್ರಗಳ ನಡುವಿನ ವೈಮನಸ್ಸು ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ‘ಇದೊಂದು ಮತಬ್ಯಾಂಕ್ ರಾಜಕಾರಣ. ಹೀಗಾಗಿ ಪ್ರತ್ಯೇಕತಾವಾದಿಗಳ ವಿರುದ್ಧ ಕೆನಡಾ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಆರೋಪಿಸಿದ್ದರು. 

ಅಹಿಂಸೆಯನ್ನೇ ಪ್ರತಿಪಾದಿಸುವ ತೀವ್ರವಾದಿಗಳಿಗೆ ಕೆನಡಾದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಇದು ಭಾರತ ಮತ್ತು ಕೆನಡಾ ನಡುವಿನ ಸಂಬಂಧ ವೃದ್ಧಿಗೆ ಧಕ್ಕೆಯಾಗಲಿದೆ’ ಎಂದಿದ್ದರು.

ಜೂನ್ 18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಬಳಿಯ ಗುರುದ್ವಾರ ಹತ್ತಿರ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್ ನಿಜ್ಜರ್‌ನನ್ನು ಮುಸುಕು ಹಾಕಿಕೊಂಡು ಬಂದ ಕೆಲವರು ಗುಂಡಿಟ್ಟು ಹತ್ಯೆಗೈದಿದ್ದರು. ಈ ಕುರಿತು ಕೆನಡಾದ ತನಿಖಾ ತಂಡ ತನಿಖೆ ಕೈಗೊಂಡಿತ್ತು. ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ.

ಹತ್ಯೆಯಾದ ಒಂದು ವಾರದ ನಂತರ ಖಲಿಸ್ತಾನಿ ಸಂಘಟನೆ ಒಂದು ಪ್ರಕಟಣೆ ಪ್ರದರ್ಶಿಸಿ, ಭಾರತೀಯ ರಾಯಭಾರ ಕಚೇರಿಯ ಆಯುಕ್ತ ಸಂಜಯ ಕುಮಾರ್ ವರ್ಮಾ ಹಾಗೂ ಕಾನ್ಸಲೇಟ್ ಜನರಲ್ ಅಪೂರ್ವಾ ಶ್ರೀವಾಸ್ತವ ಅವರೇ ಹೊಣೆಗಾರರು ಎಂದು ಆರೋಪಿಸಿತ್ತು. ಜತೆಗೆ ಪೋಸ್ಟರ್‌ ಸಿದ್ಧಪಡಿಸಿ ಈ ಇಬ್ಬರು ಅಧಿಕಾರಿಗಳೇ ಕೊಲೆಗಾರರು ಎಂದು ಮುದ್ರಿಸಿ ಹಂಚಿತ್ತು. ಇದು ಭಾರತವನ್ನು ಕೆರಳಿಸಿತ್ತು.

ಭಾರತದ ಆಕ್ರೋಶಕ್ಕೆ ಮಣಿದ ಕೆನಡಾ, ‘ರಾಜತಾಂತ್ರಿಕ ಅಧಿಕಾರಿಗಳ ಸುರಕ್ಷತೆಗೆ ಬದ್ಧ. ಜತೆಗೆ ಇಂಥ ರ‍್ಯಾಲಿಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದಿತ್ತು.

ತನ್ನ ನೆಲದಲ್ಲಿ ಖಲಿಸ್ತಾನಿಗಳ ಕೃತ್ಯ ಕುರಿತು ಕೆನಡಾದ ಮೃದು ನಡೆಯನ್ನು ಜಿ20 ಶೃಂಗ ಸಂದರ್ಭದಲ್ಲಿ ಭಾರತ ತನ್ನ ಸ್ಪಷ್ಟ ಸಂದೇಶದಲ್ಲಿ ಖಂಡಿಸಿತ್ತು. ವಿದೇಶಿ ನೆಲದಲ್ಲಿ ಭಾರತ ವಿರುದ್ಧದ ಕಾರ್ಯಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಸಂಘಟಿತ ಅಪರಾಧಗಳನ್ನು ನಡೆಸುವ, ಮಾದಕ ದ್ರವ್ಯಗಳ ಮಾರಾಟದಲ್ಲಿ ತೊಡಗಿರುವ ಹಾಗೂ ಮಾನವ ಕಳ್ಳ ಸಾಗಾಣಿಕೆಯಲ್ಲಿ ತೊಡಗಿರುವ ಸಂಘಟನೆಗಳು ಕೆನಡಾಕ್ಕೂ ಅಪಾಯಕಾರಿ. ಇಂಥ ಅಪಾಯಗಳನ್ನು ಎರಡೂ ದೇಶಗಳು ಸೇರಿ ನಿರ್ಮೂಲನೆ ಮಾಡುವ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಿ ಟ್ರೂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಟ್ರೂಡ್, ‘ತಮ್ಮ ಅಭಿಪ್ರಾಯಗಳನ್ನು ಹೇಳುವ ವಾಕ್‌ ಸ್ವಾತಂತ್ರ್ಯವನ್ನು ಕೆನಡಾ ಗೌರವಿಸುತ್ತದೆ. ಅದರಂತೆಯೇ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿಸುತ್ತದೆ. ದ್ವೇಷದ ಹೇಳಿಕೆ ಮತ್ತು ಅಹಿಂಸೆಯನ್ನು ಎಂದೂ ಬೆಂಬಲಿಸುವುದಿಲ್ಲ. ಇಂಥ ಕೃತ್ಯ ನಡೆಸುವ ಕೆಲವರ ನಡೆ ಇಡೀ ಕೆನಡಾದಂತೂ ಅಲ್ಲವೇ ಅಲ್ಲ. ಕಾನೂನಿನ ನಿಯಮಗಳನ್ನು ಗೌರವಿಸುವ ಕುರಿತು ಚರ್ಚಿಸಲಾಗಿದೆ. ಜತೆಗೆ ಉಭಯ ರಾಷ್ಟ್ರಗಳ ವಿದೇಶಾಂಗ ನೀತಿಗಳ ಕುರಿತು ಚರ್ಚಿಸಲಾಗಿದೆ’ ಎಂದಿದ್ದರು.

ಇದಾದ ಬೆನ್ನಲ್ಲೇ ಕೆನಡಾಗೆ ಮರಳಲು ಸಿದ್ಧವಾದ ಟ್ರೂಡ್‌ ವಿಮಾನ ತಾಂತ್ರಿಕ ದೋಷದಿಂದ ನಿಗದಿತ ದಿನ ಹಾರಟ ನಡೆಸಲು ಸಾಧ್ಯವಾಗಲಿಲ್ಲ. ಬೇರೊಂದು ವಿಮಾನ ನೀಡುವ ಭಾರತದ ಪ್ರಸ್ತಾವನೆಯನ್ನು ಕೆನಡಾ ತಿರಸ್ಕರಿಸಿತು. ನಿಗದಿತ ಸಮಯಕ್ಕಿಂತ 36 ಗಂಟೆಗಳ ನಂತರ ಕೆನಡಾ ವಿಮಾನದಲ್ಲೇ ಟ್ರೂಡ್ ಪ್ರಯಾಣಿಸಿದರು.

ನಿಜ್ಜರ್ ಕೊಲೆಗೆ ಸಂಬಂಧಿಸಿದಂತೆ ಕಳೆದ ಸೋಮವಾರ ಹೇಳಿಕೆಯೊಂದನ್ನು ನೀಡಿದ ಟ್ರೂಡ್, ‘ತನ್ನ ಪ್ರಜೆಯ ಹತ್ಯೆಯ ಹಿಂದೆ ಭಾರತದ ಏಜೆಂಟರ ಕೈವಾಡವಿದೆ. ತನ್ನ ಪ್ರಜೆಗಳನ್ನು ತನ್ನ ನೆಲದಲ್ಲಿ ವಿದೇಶಿ ವ್ಯಕ್ತಿಗಳು ಬಂದು ಕೊಲೆ ಮಾಡುವುದನ್ನು ಎಂದಿಗೂ ಸಹಿಸಲಾಗದು. ಇದು ದೇಶದ ಸಾರ್ವಭೌಮತ್ಯಕ್ಕೆ ಬಂದ ಕುತ್ತಾಗಿದೆ’ ಎಂದು ಗುಡುಗಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ್ದ ನವದೆಹಲಿ, ‘ಭಾರತ ಸರ್ಕಾರದ ಹಸ್ತಕ್ಷೇಪ ಕುರಿತು ಕೆನಡಾ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಮತ್ತು ವಿವೇಚನ ರಹಿತ ಹೇಳಿಕೆಯಾಗಿದೆ’ ಎಂದಿತ್ತು.

‘ಭಾರತದ ಸಾರ್ವಭೌಮತ್ವಕ್ಕೆ ಸದಾ ಅಪಾಯ ತಂದೊಡ್ಡುತ್ತಿರುವ ತೀವ್ರವಾದಿ ಖಲಿಸ್ತಾನಿಗಳಿಗೆ ನೆಲೆ ನೀಡಿರುವ ಕೆನಡಾದಲ್ಲಿರುವ ಇಂಥ ಪ್ರತ್ಯೇಕವಾದಿಗಳು ಸರ್ಕಾರದ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿವೆ. ಈ ವಿಷಯದಲ್ಲಿ ಭಾರತದ ಪ್ರಧಾನಿ ವಿರುದ್ಧ ಕೆನಡಾ ಪ್ರಧಾನಿ ಮಾಡಿರುವ ಆರೋಪಗಳನ್ನು ನವದೆಹಲಿ ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ನೆಲದ ಕಾನೂನಿನ ಕುರಿತು ಭಾರತ ಸದಾ ಬದ್ಧವಾಗಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.

ಭಾರತದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯನ್ನು ಕೆನಡಾ ಉಚ್ಛಾಟಿಸಿದಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಎರಡೂ ರಾಷ್ಟ್ರಗಳು ನಡುವಿನ ಪ್ರಯಾಣಿಕರಿಗೆ ಉಭಯ ದೇಶಗಳು ಮಾರ್ಗಸೂಚಿ ಪ್ರಕಟಿಸಿವೆ. ಜತೆಗೆ ಕೆನಡಾದಿಂದ ಭಾರತಕ್ಕೆ ಪ್ರಯಾಣಿಸುವವರಿಗೆ ವಿಸಾ ನೀಡುವ ಪ್ರಕ್ರಿಯೆಯನ್ನು ಭಾರತ ಗುರುವಾರ ಸ್ಥಗಿತಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT