ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಶೆ ಕಾರನ್ನು ಮೊಮ್ಮಗನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದ ತಾತ: ವರದಿ

Published 26 ಮೇ 2024, 10:24 IST
Last Updated 26 ಮೇ 2024, 10:24 IST
ಅಕ್ಷರ ಗಾತ್ರ

ಪುಣೆ: ನಗರದಲ್ಲಿ ಈಚೆಗೆ ಸಂಭವಿಸಿದ್ದ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಭಾಗಿಯಾಗಿದ್ದ 17 ವರ್ಷದ ಬಾಲಕನಿಗೆ ಆತನ ತಾತ ಹುಟ್ಟುಹಬ್ಬದ ಉಡುಗೊರೆಯಾಗಿ ಕಾರನ್ನು ನೀಡಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

ಇತ್ತೀಚೆಗೆ ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಪೋಶೆ ಕಾರು ಬೈಕಿಗೆ ಡಿಕ್ಕಿ ಹೊಡೆದು, ಮಧ್ಯಪ್ರದೇಶ ಮೂಲದ ಇಬ್ಬರು ಟೆಕಿಗಳು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಸಿಲುಕಿರುವ ಬಾಲಕನ ತಂದೆ ರಿಯಲ್‌ ಎಸ್ಟೇಟ್‌ ಉದ್ಯಮಿ ವಿಶಾಲ್‌ ಅಗರ್ವಾಲ್‌ ಮತ್ತು ಬಾಲಕನ ತಾತ ಸುರೇಂದ್ರ ಅಗರ್ವಾಲ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ಅಪಘಾತಕ್ಕೂ ಮುನ್ನ ಎರಡು ತಿಂಗಳ ಹಿಂದೆ ಸುರೇಂದ್ರ ಅಗರ್ವಾಲ್‌ ಅವರು ಪೋಶೆ ಕಾರಿನ ಫೋಟೊವನ್ನು ವ್ಯಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದು, ತನ್ನ ಮೊಮ್ಮಗನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದರು’ ಎಂದು ಬಾಲಕನ ಸ್ನೇಹಿತ ಅಮನ್ ವಾಧ್ವಾ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪೋಶೆ ಕಾರು ಅಪಘಾತ ಪ್ರಕರಣ ಸಂಬಂಧ ಕುಟುಂಬದ ಚಾಲಕನನ್ನು ಅಕ್ರಮವಾಗಿ ಕೂಡಿಟ್ಟು ಆತನಿಗೆ ಬೆದರಿಕೆವೊಡ್ಡಿದ ಆರೋಪದಡಿ ಸುರೇಂದ್ರ ಅಗರ್ವಾಲ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಪುಣೆಯ ನ್ಯಾಯಾಲಯವು ಅವರನ್ನು ಮೇ 28ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಬಾಲಕನ ತಂದೆ ವಿಶಾಲ್‌ ಅಗರ್ವಾಲ್‌ ಮತ್ತು ತಾತ ಸುರೇಂದ್ರ ಅಗರ್ವಾಲ್‌ ಅವರು ಕಾರು ಅಪಘಾತದ ಕಳಂಕವನ್ನು ತಮ್ಮ ಕುಟುಂಬದ ಚಾಲಕನಿಗೆ ಹೊರಿಸಲು, ಅದನ್ನು ಒಪ್ಪಿಕೊಂಡು ಬಂಧನಕ್ಕೆ ಒಳಗಾಗುವಂತೆ ಚಾಲಕನಿಗೆ ನಗದು ಮತ್ತು ಉಡುಗೊರೆಗಳ ಆಮಿಷವೊಡ್ಡಿದ್ದಾರೆ. ಚಾಲಕ, ಇದಕ್ಕೆ ಒಪ್ಪಿಕೊಳ್ಳದಿದ್ದಾಗ ಆತನಿಗೆ ಬೆದರಿಕೆ ಹಾಕಿದ್ದಾರೆ ಎಂದು ಪುಣೆ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ತಿಳಿಸಿದ್ದರು.

‘ಅಪಘಾತ ನಡೆದ ನಂತರ ಚಾಲಕ ಪೊಲೀಸ್‌ ಠಾಣೆಗೆ ಹಾಜರಾಗಿ, ಅಪಘಾತ ನಡೆದಾಗ ತಾನೇ ಚಾಲನೆ ಮಾಡುತ್ತಿದ್ದುದಾಗಿ ಹೇಳಿಕೆ ನೀಡಿದ್ದ. ಬಾಲಕನೇ ಕಾರು ಚಾಲನೆ ಮಾಡುತ್ತಿದ್ದ ಸಂಗತಿಯನ್ನು ಹೇಳಿಲ್ಲ. ಪ್ರಕರಣ ದಾಖಲಾಗಿರುವ ಯರವಾಡ ಪೊಲೀಸ್ ಠಾಣೆಯಿಂದ ಚಾಲಕ ಹೊರಟು ಹೋಗುತ್ತಿದ್ದಾಗ, ಆರೋಪಿಗಳಾದ ವಿಶಾಲ್‌ ಅಗರ್ವಾಲ್‌ ಮತ್ತು ಅವರ ತಂದೆ ಚಾಲಕನನ್ನು ಕಾರಿನಲ್ಲಿ ತಮ್ಮ ಬಂಗಲೆಯ ಆವರಣದಲ್ಲಿರುವ ಅವರ ಮನೆಗೆ ಕರೆದೊಯ್ದು, ಮೊಬೈಲ್‌ ಕಸಿದುಕೊಂಡು ಆತನನ್ನು ಅಲ್ಲಿಯೇ ಕೂಡಿಟ್ಟಿದ್ದರು. ಅವರ ನಿರ್ದೇಶನದಂತೆ ಪೊಲೀಸರಿಗೆ ಹೇಳಿಕೆ ನೀಡುವಂತೆಯೂ ಒತ್ತಡ ಹೇರಿದ್ದರು. ಚಾಲಕನ ಪತ್ನಿ ಮರುದಿನ ಅಗರ್ವಾಲ್‌ ಮನೆಗೆ ಹೋದಾಗ ಚಾಲಕನನ್ನು ಅಕ್ರಮ ಬಂಧನದಿಂದ ಬಿಡುಗಡೆ ಮಾಡಿದ್ದಾರೆ’ ಎಂದು ಅಮಿತೇಶ್‌ ಹೇಳಿದ್ದರು.

ಬಾಲಕನ ತಾತನನ್ನು ಪುಣೆ ಪೊಲೀಸರು 7 ದಿನಗಳ ಕಸ್ಟಡಿಗೆ ಕೋರಿದ್ದರು. ನ್ಯಾಯಾಲಯವು ಇದೇ 28ರವರೆಗೆ ಕಸ್ಟಡಿಗೆ ಒಪ್ಪಿಸಿದೆ. ಚಾಲಕ ಮತ್ತು ಆತನ ಕುಟುಂಬದವರಿಗೆ ರಕ್ಷಣೆ ಒದಗಿಸಲಾಗಿದೆ ಎಂದು ಹೇಳಿದ್ದರು.

ಚಾಲಕನನ್ನು ಅಕ್ರಮವಾಗಿ ಕೂಡಿಟ್ಟ ಮತ್ತು ಆತನಿಗೆ ಬೆದರಿಕೆಯೊಡ್ಡಿದ ಆರೋಪಗಳಿಗೆ ಸಂಬಂಧಿಸಿದಂತೆ ಬಾಲಕನ ತಾತ ಹಾಗೂ ತಂದೆ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ವಿರುದ್ಧ ಐಪಿಸಿ ಸೆಕ್ಷನ್ 365 ಮತ್ತು 368 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಮಿತೇಶ್‌ ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT