ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರವಾಗಿ ಕಾಂಗ್ರೆಸ್ ರಾಜಕೀಯ: ಬಿಜೆಪಿ ಕಿಡಿ

Published 22 ಜೂನ್ 2024, 4:45 IST
Last Updated 22 ಜೂನ್ 2024, 4:45 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರವನ್ನು ಕಾಂಗ್ರೆಸ್‌ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ದೇಶದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಕಿಡಿಕಾರಿದ್ದಾರೆ.

ಅತ್ಯಂತ ಹಿರಿಯ ಸಂಸದರನ್ನು ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಕೇರಳದ ಮಾವೇಲಿಕ್ಕರ ಕ್ಷೇತ್ರದಿಂದ 8 ಬಾರಿ ಚುನಾಯಿತರಾಗಿರುವ ಕಾಂಗ್ರೆಸ್‌ ಸಂಸದ ಕೋಡಿಕ್ಕುನ್ನಿಲ್‌ ಸುರೇಶ್‌ ಅವರನ್ನು ಕಡೆಗಣಿಸಿ, ಬಿಜೆಪಿಯ ಭರ್ತೃಹರಿ ಮಹ್ತಬ್‌ ಅವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ದಲಿತ ನಾಯಕನಿಗೆ ಇದ್ದ ಅವಕಾಶವನ್ನು ಬಿಜೆಪಿ ಕಸಿದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರದಲ್ಲಿ ಬಿಜೆಪಿ ನಾಯಕತ್ವವು ಸಂಸತ್ತಿನ ಸಂಪ್ರದಾಯವನ್ನು ಮುರಿದಿದೆ. ಸುರೇಶ್‌ ಅವರನ್ನು ನೇಮಕ ಮಾಡದ್ದಕ್ಕೆ ಸಂಘ ಪರಿವಾರದ ಮೇಲ್ಜಾತಿ ರಾಜಕಾರಣ ಕಾರಣವೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಿಜಿಜು, ರಾಷ್ಟ್ರಪತಿಯವರು 7 ಬಾರಿಯ ಸಂಸದ ಭರ್ತೃಹರಿ ಅವರನ್ನು ನೇಮಕ ಮಾಡುವ ಮುನ್ನ, ಹಿರಿಯ ಸಂಸದರಾದ ಸುರೇಶ್‌, ಸುದೀಪ್‌ ಬಂಡೋಪಾಧ್ಯಾಯ, ಫಗ್ಗನ್‌ ಸಿಂಗ್‌ ಕುಲಸ್ತೆ, ರಾಧಾ ಮೋಹನ್‌ ಸಿಂಗ್‌ ಮತ್ತು ಟಿ.ಆರ್‌. ಬಾಲು ಅವರೊಂದಿಗೆ ತಾವು ಮಾತನಾಡಿರುವುದಾಗಿ ತಿಳಿಸಿದ್ದಾರೆ.

'ಸರ್ಕಾರವು ಯಾವುದೇ ನಿಯಮವನ್ನು ಮೀರಿಲ್ಲ. ಸತತವಾಗಿ ಹೆಚ್ಚು ಸಲ ಗೆದ್ದವರನ್ನು ಈವರೆಗೆ ಆಯ್ಕೆ ಮಾಡುತ್ತಾ ಬರಲಾಗಿದೆ. ವಿರೇಂದ್ರ ಕುಮಾರ್, ಭರ್ತೃಹರಿ ಅವರು ಸತತವಾಗಿ 7 ಅವಧಿಗೆ ಜಯ ಸಾಧಿಸಿದ್ದಾರೆ. ಸುರೇಶ್‌ ಅವರು 2004 ಮತ್ತು 1998ರಲ್ಲಿ ಸಂಸತ್ತಿಗೆ ಆಯ್ಕೆಯಾಗಿರಲಿಲ್ಲ. ಇದು ಯಾವುದೇ ಒತ್ತಡದ ನಿರ್ಧಾರವಲ್ಲ, ಸಾಂವಿಧಾನಿಕ ನಿರ್ಧಾರ' ಎಂದು ವಿವರಿಸಿದ್ದಾರೆ.

ಕಾಂಗ್ರೆಸ್‌ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಆರೋಪಿಸಿರುವ ರಿಜಿಜು, 2004ರಲ್ಲಿ ಸೋಮನಾಥ್‌ ಚಟರ್ಜಿ ಅವರು ಅತ್ಯಂತ ಹಿರಿಯ ಸಂಸದರಾಗಿದ್ದರು. ಅವರು 10 ಸಲ ಸಂಸತ್‌ ಪ್ರವೇಶಿಸಿದ್ದರು. ಆದರೆ, ಅವರ ಬದಲು 8 ಸಲ ಸಂಸದರಾಗಿದ್ದ ಬಾಲಾಸಾಹೇಬ್‌ ವಿಖೆ ಪಾಟಿಲ್‌ ಅವರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು ಎಂದು ಸ್ಮರಿಸಿದ್ದಾರೆ. ಆಗ, ಜಾರ್ಜ್‌ ಫರ್ನಾಂಡಿಸ್‌ 9 ಸಲ ಮತ್ತು ಅಟಲ್‌ ಬಿಹಾರಿ ವಾಯಪೇಯಿ 10 ಅವಧಿಗೆ ಸಂಸದರಾಗಿದ್ದರು. ನಿರ್ಗಮಿತ ಪ್ರಧಾನಿಯಾಗಿದ್ದ ವಾಜಪೇಯಿ ಅಥವಾ ಫರ್ನಾಂಡಿಸ್‌ ಅವರನ್ನೇಕೆ ಕಾಂಗ್ರೆಸ್‌ ನೇಮಿಸಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT