ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Shakti Scheme| ಸಾರಿಗೆ ಸಂಸ್ಥೆಗಳಿಗೆ ವರಮಾನದ ‘ಶಕ್ತಿ’: ನಷ್ಟದ ಭಾರ ಇಳಿಸಿದ ಬಸ್‌ಗಳು!

ನಿತ್ಯ ಪ್ರಯಾಣಿಕರ ಸಂಖ್ಯೆಯಲ್ಲಿ ಸರಾಸರಿ 25 ಲಕ್ಷ ಹೆಚ್ಚಳ * ನಷ್ಟದ ಭಾರ ಇಳಿಸಿದ ತುಂಬಿದ ಬಸ್‌ಗಳು
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆ ಜಾರಿಗೆ ಬಂದ ಬಳಿಕ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ವರಮಾನದ ‘ಶಕ್ತಿ’ಯೂ ಹರಿದುಬರುತ್ತಿದೆ. ಸತತ ನಷ್ಟ ಅನುಭವಿಸುತ್ತಿದ್ದ ಈ ಸಂಸ್ಥೆಗಳು ಈಗ ‘ನಷ್ಟದ ಸುಳಿ’ಯಿಂದ ಹೊರಬಂದು ಆದಾಯ ಗಳಿಕೆಯ ಜಾಡು ಹಿಡಿಯುವ ಆಶಾವಾದದಲ್ಲಿವೆ.

‘ಶಕ್ತಿ’ ಯೋಜನೆಯನ್ನು ಜಾರಿಮಾಡಿದ ಮೇಲೆ ಪ್ರತಿದಿನ ಪ್ರಯಾಣಿಸುವವರ ಸಂಖ್ಯೆ ಸರಾಸರಿ 25 ಲಕ್ಷದಷ್ಟು ಜಾಸ್ತಿಯಾಗಿದೆ. ಉಚಿತ ಪ್ರಯಾಣದ ಕಾರಣದಿಂದಾಗಿ ಮಹಿಳೆಯರು ಖಾಸಗಿ ಬಸ್‌ ಬಿಟ್ಟು ಸಾರಿಗೆ ಸಂಸ್ಥೆಗಳ ಬಸ್‌ ಏರುತ್ತಿದ್ದಾರೆ. ಅವರೊಂದಿಗೆ ಕುಟುಂಬದ ಪುರುಷರೂ ಸಾರಿಗೆ ಸಂಸ್ಥೆಗಳ ಬಸ್‌ ಕಡೆಗೇ ಮುಖ ಮಾಡುತ್ತಿರುವುದರಿಂದ ವರಮಾನದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.

‘ಮೊದಲು ನಮ್ಮ ಬಸ್‌ಗಳು ಖಾಲಿ ಖಾಲಿಯಾಗಿ ಓಡಾಡುತ್ತಿದ್ದವು. ಇಪ್ಪತ್ತು ಸೀಟುಗಳೂ ತುಂಬುತ್ತಿರಲಿಲ್ಲ. ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಬಸ್‌ಗಳತ್ತ ಬರುತ್ತಿದ್ದರೆ, ಅವರ ಹಿಂದೆ ಅವರ ಕುಟುಂಬದ ಪುರುಷರೂ ಇದೇ ಬಸ್‌ಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ನಮ್ಮ ಬಸ್‌ಗಳೀಗ ಭರ್ತಿ ತುಂಬಿಕೊಂಡು ಓಡಾಡುತ್ತಿವೆ’ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ವಾಹಕ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದರು. 

ಕೆಎಸ್‌ಆರ್‌ಟಿಸಿಯೊಂದರ ಉದಾಹರಣೆಯನ್ನೇ ತೆಗೆದುಕೊಂಡರೆ ನಿತ್ಯದ ವರಮಾನದಲ್ಲಿ ಸರಾಸರಿ ₹ 1.56 ಕೋಟಿಯಷ್ಟು ಹೆಚ್ಚಳವಾಗಿದೆ. ಜೂನ್‌ 1ರಿಂದ ಜೂನ್‌ 10ರವರೆಗೆ ಪ್ರತಿದಿನ ಸರಾಸರಿ 24.45 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. ಜೂನ್‌ 11ರಿಂದ ಜೂನ್‌ 27ರವರೆಗೆ ಸರಾಸರಿ 31.82 ಲಕ್ಷ ಜನ ಸಂಚರಿಸಿದ್ದಾರೆ. ನಿತ್ಯದ ಆದಾಯ ₹ 9.95 ಕೋಟಿ ಇದ್ದಿದ್ದು, ₹ 11.51 ಕೋಟಿಗೆ ಜಿಗಿದಿದೆ.

ಬಿಎಂಟಿಸಿಯಲ್ಲಿ ಜೂನ್‌ ತಿಂಗಳಲ್ಲಿ 10ರವರೆಗೆ ದಿನಕ್ಕೆ ಸರಾಸರಿ 31.49 ಲಕ್ಷ ಜನ ಸಂಚರಿಸಿದ್ದರು. ನಿತ್ಯದ ಆದಾಯ ₹ 4.62 ಕೋಟಿ ಇತ್ತು. ಜೂನ್‌ 11ರಿಂದ ಪ್ರತಿದಿನ ಸರಾಸರಿ 38.34 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ₹ 5.18 ಕೋಟಿ ಆದಾಯ ಬರುತ್ತಿದೆ. ದಿನದ ಆದಾಯ ₹ 56 ಲಕ್ಷದಷ್ಟು ಹೆಚ್ಚಾಗಿದೆ.

ಮಹಿಳೆಯರಿಗಾಗಿ ಶಕ್ತಿ ಯೋಜನೆ ಅನುಷ್ಠಾನವಾದ ಬಳಿಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ನಿತ್ಯ ಸರಾಸರಿ ₹ 90 ಲಕ್ಷ ಆದಾಯ ಹೆಚ್ಚಾಗಿದೆ.

‘ಶಕ್ತಿ ಯೋಜನೆ ಜಾರಿಗೂ ಮುನ್ನ ಕೆಕೆಆರ್‌ಟಿಸಿಯ 6 ವಿಭಾಗಗಳ ಎಂಟು ಜಿಲ್ಲೆಗಳಲ್ಲಿ ನಿತ್ಯ ಸುಮಾರು 14 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಈಗ, ಅದು ಸುಮಾರು 16 ಲಕ್ಷಕ್ಕೆ ತಲುಪಿದೆ. ಬಸ್‌ಗಳ ಓಡಾಟದ ಅವಧಿಯನ್ನು ಹೆಚ್ಚಿಸಲಾಗಿದ್ದು, 22 ಸಾವಿರ ಟ್ರಿಪ್‌ಗಳನ್ನು 23 ಸಾವಿರಕ್ಕೆ ಹೆಚ್ಚಿಸಲಾಗಿದೆ. ಟ್ರಿಪ್‌ ಹೆಚ್ಚಿದಂತೆ ಸಾರಿಗೆಯ ಚಾಲಕರು ಮತ್ತು ನಿರ್ವಾಹಕರಿಗೆ ಭತ್ಯೆಯನ್ನೂ ಹೆಚ್ಚಿಸಲಾಗಿದೆ‘ ಎಂದು ಕೆಕೆಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ವಿ.ಎಚ್. ಸಂತೋಷಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಕ್ತಿ ಯೋಜನೆಯ ಜಾರಿಗೂ ಮುನ್ನ ಸಂಸ್ಥೆಗೆ ನಿತ್ಯ ಸರಾಸರಿ ₹ 4.90 ಕೋಟಿ ಆದಾಯ ಬರುತ್ತಿತ್ತು. ಈಗ ಅದು ₹ 5.77 ಕೋಟಿಗೆ ಏರಿಕೆಯಾಗಿದೆ’ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದಾಯ 17 ದಿನಗಳಲ್ಲಿ ₹ 110 ಕೋಟಿ ಮೀರಿದೆ. ಜೂನ್ 11ರಿಂದ 27ರ ವರೆಗಿನ ಅವಧಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ 2.14 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಅವರ ಪ್ರಯಾಣದ ವೆಚ್ಚ ₹ 54.39 ಕೋಟಿಯಾಗಿದೆ. ಆ ವೆಚ್ಚವನ್ನು ಸರ್ಕಾರ ಭರಿಸಲಿದೆ.

ಈ ಅವಧಿಯಲ್ಲೇ 1.88 ಕೋಟಿ ಪುರುಷರು ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅವರಿಂದ ₹ 56.27 ಕೋಟಿ ಆದಾಯ ಬಂದಿದೆ. ಪುರುಷರು, ಮಹಿಳೆಯರು ಸೇರಿ ಒಟ್ಟು 4.02 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಯೋಜನೆ ಜಾರಿಗೂ ಮುನ್ನ ಸಂಸ್ಥೆಗೆ ಪ್ರತಿದಿನ ₹ 4.75 ಕೋಟಿಯಿಂದ ₹ 5 ಕೋಟಿ ಆದಾಯ ಬರುತ್ತಿತ್ತು. ಯೋಜನೆ ಜಾರಿಯಾದ ಬಳಿಕ ಅದಾಯ ₹ 6.48 ಕೋಟಿ ತಲುಪಿದೆ. ಶೇ 30ರಷ್ಟು ಹೆಚ್ಚಳವಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಯೋಜನೆಗೂ ಮುನ್ನ ಪ್ರತಿದಿನ 18 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಅಂದಾಜು 6.80 ಲಕ್ಷದಿಂದ 7.60 ಲಕ್ಷ ಮಹಿಳೆಯರು ಇದ್ದರು. ಈಗ ಪ್ರತಿದಿನ ಸರಾಸರಿ 23.53 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಅವರಲ್ಲಿ ಮಹಿಳೆಯರ ಸಂಖ್ಯೆ 12.47 ಲಕ್ಷ (ಶೇ 55) ತಲುಪಿದೆ.

 ‘ಈ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರೂ ಅದನ್ನು ನಾವು ಆದಾಯವೆಂದು ಪರಿಗಣಿಸುತ್ತೇವೆ. ಅವರಿಗೆ ನೀಡಿರುವ ‘ಟಿಕೆಟ್‌’ ಮೊತ್ತವನ್ನು ಆಧರಿಸಿ ಸರ್ಕಾರ ನಮಗೆ ಮರುಪಾವತಿ ಮಾಡಲಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಹಾಗೂ ಪ್ರಯಾಣ ವೆಚ್ಚದ ವಿವರವನ್ನು ಪ್ರತಿ ತಿಂಗಳ ಅಂತ್ಯಕ್ಕೆ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ’ ಎಂದು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಭರತ್‌ ಎಸ್‌. ತಿಳಿಸಿದರು. 

ಮೊದಲೇ ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಗಳು ಕೊರೊನಾ ಕಾಲದಲ್ಲಿ ಇನ್ನಷ್ಟು ಸಂಕಷ್ಟವನ್ನು ಅನುಭವಿಸಿದ್ದವು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ಈ ನಾಲ್ಕು ಸಂಸ್ಥೆಗಳು ಸೇರಿ 2017–18ರಲ್ಲಿ ₹ 300 ಕೋಟಿ ನಷ್ಟದಲ್ಲಿದ್ದವು. ಕೋವಿಡ್‌ ಆವರಿಸಿದ ಮೇಲೆ ಎರಡು ವರ್ಷಗಳ ಕಾಲ ಭಾರಿ ನಷ್ಟ ಉಂಟಾಗಿತ್ತು. ಒಟ್ಟು ನಷ್ಟದ ಪ್ರಮಾಣ ₹ 4,000 ಕೋಟಿಗೆ ಏರಿತ್ತು. ಈ ನಷ್ಟವನ್ನು ಭರಿಸಲು ಸರ್ಕಾರ ಸುಮಾರು ₹ 3,000 ಕೋಟಿ ಅನುದಾನ ಒದಗಿಸಿತ್ತು. 

ರಾಮಲಿಂಗಾ ರೆಡ್ಡಿ 
ರಾಮಲಿಂಗಾ ರೆಡ್ಡಿ 
ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣದಿಂದ ಪ್ರಯಾಣ ಬೆಳೆಸಿದವರಿಗೆ ಕೈಬೀಸುತ್ತಿರುವ ಯುವತಿ. –ಪ್ರಜಾವಾಣಿ ಚಿತ್ರ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣದಿಂದ ಪ್ರಯಾಣ ಬೆಳೆಸಿದವರಿಗೆ ಕೈಬೀಸುತ್ತಿರುವ ಯುವತಿ. –ಪ್ರಜಾವಾಣಿ ಚಿತ್ರ ಸಾಂದರ್ಭಿಕ ಚಿತ್ರ

‘ಲಾಭ ನಷ್ಟಕ್ಕಿಂತ ಸೇವೆ ಮುಖ್ಯ’

ಆರೋಗ್ಯ ಶಿಕ್ಷಣ ಸಾರಿಗೆ ಸೇರಿದಂತೆ ಸಾರ್ವಜನಿಕ ಸೇವೆಯಲ್ಲಿರುವ ಯಾವುದೇ ಸಂಸ್ಥೆ ಲಾಭದ ದೃಷ್ಟಿಯಿಂದ ನಡೆಯುವುದಿಲ್ಲ. ಸೇವೆಯ ದೃಷ್ಟಿಯಲ್ಲಿ ನಡೆಯುತ್ತದೆ. ಸರ್ಕಾರವು ಲಾಭ ನಷ್ಟದ ಬಗ್ಗೆ ಹೆಚ್ಚು ಚಿಂತನೆ ನಡೆಸುವ ಬದಲು ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದರು. ರಾಜ್ಯದ 25000 ಹಳ್ಳಿಗಳಲ್ಲಿ 300 ಹಳ್ಳಿಗಳನ್ನು ಹೊರತುಪಡಿಸಿ ಮತ್ತೆಲ್ಲ ಕಡೆ ನಮ್ಮ ಸಾರಿಗೆ ಸಂಸ್ಥೆಗಳ ಬಸ್‌ಗಳು ಸಂಚರಿಸುತ್ತಿವೆ. ಒಂದು ಹಳ್ಳಿಯಲ್ಲಿ ಹತ್ತೇ ಪ್ರಯಾಣಿಕರಿದ್ದರೂ ಬಸ್‌ ಓಡಿಸಬೇಕಾಗುತ್ತದೆ. ಶೇ 40ರಷ್ಟು ಬಸ್‌ಗಳು ಈ ರೀತಿ ಸಂಚರಿಸುತ್ತಿದ್ದುದರಿಂದ ಸಹಜವಾಗಿಯೇ ಖರ್ಚಿಗಿಂತ ಕಡಿಮೆಯಾಗುತ್ತಿತ್ತು. ‘ಶಕ್ತಿ’ ಯೋಜನೆಯಿಂದ ಸಾರ್ವಜನಿಕರಿಗಷ್ಟೇ ಅಲ್ಲ ಸಾರಿಗೆಯ ನಾಲ್ಕೂ ಸಂಸ್ಥೆಗಳಿಗೂ ಒಳ್ಳೆಯದನ್ನು ಮಾಡಿದೆ. ಲಾಭ ಇಲ್ಲದೇ ಹೋದರೂ ನಷ್ಟವಿಲ್ಲದೇ ಸಂಸ್ಥೆಗಳು ಮುನ್ನಡೆಯಲಿವೆ ಎಂದು ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT