ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ ಪ್ರಧಾನಿಯಾಗಿ ನಾಲ್ಕನೇ ಅವಧಿಗೆ ಹಸೀನಾ ಆಯ್ಕೆ: ಅಭಿನಂದನೆ ಸಲ್ಲಿಸಿದ ಮೋದಿ

Published 8 ಜನವರಿ 2024, 13:42 IST
Last Updated 8 ಜನವರಿ 2024, 13:42 IST
ಅಕ್ಷರ ಗಾತ್ರ

ನವದೆಹಲಿ: ಪ್ರಮುಖ ವಿರೋಧ ಪಕ್ಷವಾದ ಬಿಎನ್‌ಪಿ ಮತ್ತು ಅದರ ಮಿತ್ರ ಪಕ್ಷಗಳ ಚುನಾವಣಾ ಬಹಿಷ್ಕಾರದ ನಡುವೆಯೂ ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷವು ಅಭೂತಪೂರ್ವ ಬಹುಮತವನ್ನು ಗಳಿಸಿದೆ. ಇದರೊಂದಿಗೆ ಪ್ರಧಾನಿ ಶೇಖ್‌ ಹಸೀನಾ ಅವರು ಸತತ ನಾಲ್ಕನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿಯಾಗಿ ಶೇಖ್‌ ಹಸೀನಾ ಅವರು ಆಯ್ಕೆಯಾಗಿರುವುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

‘ಸಂಸತ್‌ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕಾಗಿ ಶೇಖ್ ಹಸೀನಾ ಅವರನ್ನು ಅಭಿನಂದಿಸಿದ್ದೇನೆ. ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಅಲ್ಲಿನ ಜನರಿಗೂ ಧನ್ಯವಾದ ಸಲ್ಲಿಸುತ್ತೇನೆ. ಭಾರತ– ಬಾಂಗ್ಲಾದೇಶದ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ’ ಎಂದು ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಂಗ್ಲಾ ಸಂಸತ್‌ನ ಒಟ್ಟು 300 ಸ್ಥಾನಗಳ ಪೈಕಿ 299 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಈ ಪೈಕಿ ಹಸೀನಾ ನೇತೃತ್ವದ ಪಕ್ಷವು 223 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಬಾಂಗ್ಲಾದೇಶ್ ನ್ಯಾಷನಲಿಸ್ಟ್‌ ಪಕ್ಷವು (ಬಿಎನ್‌ಪಿ) ಕೇವಲ 11 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತೀವ್ರ ಹಿನ್ನಡೆ ಕಂಡಿದೆ. ಬಾಂಗ್ಲಾದೇಶ ಕಲ್ಯಾಣ್‌ ಪಕ್ಷ, ಜಾತಿಯಾ ಸಮಾಜತಾಂತ್ರಿಕ್‌ ದಳ ಮತ್ತು ದಿ ವರ್ಕರ್ಸ್‌ ಪಕ್ಷಗಳು ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದರೆ, ಪಕ್ಷೇತರ ಅಭ್ಯರ್ಥಿಗಳು 62 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

ಗೋಪಾಲ್‌ಗಂಜ್‌ –2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಸೀನಾ ಅವರು ಪ್ರಚಂಡ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸತತ ಎಂಟನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

ಮಾಜಿ ಪ್ರಧಾನಿ ಖಾಲೇದಾ ಜಿಯಾ ನೇತೃತ್ವದ ಬಿಎನ್‌ಪಿಯು ಚುನಾವಣೆಯನ್ನು ‘ನಕಲಿ’ ಎಂದು ಬಣ್ಣಿಸಿದೆ ಮತ್ತು ಮಂಗಳವಾರದಿಂದಲೇ ಶಾಂತಿಯುತ ಕಾರ್ಯಕ್ರಮಗಳ ಮೂಲಕ ಸರ್ಕಾರ ವಿರೋಧಿ ಚಳವಳಿಯನ್ನು ಮುಂದುವರಿಸುವುದಾಗಿ ಹೇಳಿದೆ.

ಈ ಬಾರಿ ಬಿಎನ್‌ಪಿ ಮತ್ತು ಇತರ 15 ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು.

ಚುನಾವಣೆಯಲ್ಲಿ ಶೇ 41.8ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT